ಚಾಮರಾಜನಗರ ಆಕ್ಸಿಜನ್ ದುರಂತ: ಪರಿಹಾರ ಸಿಗದೆ ಹೋದ್ರೆ ನಮ್ಮ ಸಾವಿಗೆ ಕಾರಣರಾಗುವಿರಿ, ಸರ್ಕಾರಕ್ಕೆ ಸಂತ್ರಸ್ತರ ಎಚ್ಚರಿಕೆ

| Updated By: ಆಯೇಷಾ ಬಾನು

Updated on: Jan 17, 2024 | 2:00 PM

ಚಾಮರಾಜನಗರ ಜಿಲ್ಲೆಯ ಆಸ್ಪತ್ರೆಯಲ್ಲಿ ಆಮ್ಲಜನಕ ಕೊರತೆಯಿಂದಾಗಿ ಸುಮಾರು 24ಕ್ಕೂ ಹೆಚ್ಚು ಜನರು ಮೃತಪಟ್ಟಿದ್ದರು. ಈ ಪ್ರಕರಣಕ್ಕೆ ಸಂಬಂಧಿಸಿದಂತೆ ಸರ್ಕಾರ ನಮ್ಮ ಗಂಡಂದಿರ ಸಾವಿಗೆ ಕಾರಣ ಆಯ್ತು, ಈ ಸರ್ಕಾರ ನಮ್ಮ ಸಾವಿಗೆ ಕಾರಣ ಆಗೋದು ಬೇಡ ಎಂದು ಆಕ್ಸಿಜನ್ ದುರಂತದಲ್ಲಿ ಸಾವನ್ನಪ್ಪಿದ ಕುಟುಂಬಸ್ಥರು ಕಣ್ಣೀರಿಟ್ಟಿದ್ದಾರೆ. ಆಕ್ಸಿಜನ್ ದುರಂತ ಸಂಭವಿಸಿ ಮೂರು ವರ್ಷ ಕಳೆದರೂ ಸಂತ್ರಸ್ತರ ಕುಟುಂಬಸ್ಥರಿಗೆ ನ್ಯಾಯ ಸಿಕ್ಕಿಲ್ಲ.

ಚಾಮರಾಜನಗರ ಆಕ್ಸಿಜನ್ ದುರಂತ: ಪರಿಹಾರ ಸಿಗದೆ ಹೋದ್ರೆ ನಮ್ಮ ಸಾವಿಗೆ ಕಾರಣರಾಗುವಿರಿ, ಸರ್ಕಾರಕ್ಕೆ ಸಂತ್ರಸ್ತರ ಎಚ್ಚರಿಕೆ
ಸಾಂದರ್ಭಿಕ ಚಿತ್ರ
Follow us on

ಚಾಮರಾಜನಗರ, ಜ.17: 2021ರ ಮೇ 2ರಂದು ಚಾಮರಾಜನಗರ ಜಿಲ್ಲೆಯ ಆಸ್ಪತ್ರೆಯಲ್ಲಿ ಆಮ್ಲಜನಕ ಕೊರತೆಯಿಂದಾಗಿ ಸುಮಾರು 24ಕ್ಕೂ ಹೆಚ್ಚು ಜನರು ಮೃತಪಟ್ಟಿದ್ದರು (Chamarajanagar Oxygen Shortage). ಕೋವಿಡ್ ಸೇರಿದಂತೆ ವಿವಿಧ ಆರೋಗ್ಯ ಸಮಸ್ಯೆಗಳಿಂದ ಚಿಕಿತ್ಸೆ ಪಡೆದುಕೊಳ್ಳುತ್ತಿದ್ದ ಐಸಿಯುನಲ್ಲಿ ಇದ್ದ ರೋಗಿಗಳು ಆಕ್ಸಿಜನ್‌ ಇಲ್ಲದೆ ಪ್ರಾಣ ಕಳೆದುಕೊಂಡಿದ್ದರು. ಈ ಘಟನೆ ಭಾರೀ ಚರ್ಚೆಗೆ ಕಾರಣವಾಗಿತ್ತು. ರಾಜಕಾರಣಿಗಳು ತಮ್ಮ ಬೇಳೆ ಬೇಯಿಸಿಕೊಳ್ಳಲು ನೆರವಿನ ಡ್ರಾಮ ಮಾಡಿದ್ದರು, ಈ ಪ್ರಕರಣವನ್ನು ಚುನಾವಣೆಗೆ ಅಸ್ತ್ರವಾಗಿ ಉಪಯೋಗಿಸಿಕೊಂಡಿದ್ದರು. ಆದರೆ ಈಗ ಘಟನೆ ನಡೆದು ಮೂರು ವರ್ಷ ಕಳೆದರೂ ಸಂತ್ರಸ್ತರಿಗೆ ಪರಿಹಾರ ಸಿಕ್ಕಿಲ್ಲ. ಸರ್ಕಾರಗಳು ಬದಲಾದರೂ ಸಂತ್ರಸ್ತರ ಕಣ್ಣೀರೊರೆಸುವ ಕೈಗಳು ಮುಂದೆ ಬಂದಿಲ್ಲ. ಹೀಗಾಗಿ ಪರಿಹಾರ ಸಿಗದೆ ಹೋದ್ರೆ ನಮ್ಮ ಸಾವಿಗೆ ನೀವು ಕಾರಣ ಆಗ್ಬೇಡಿ ಎಂದು ಸಂತ್ರಸ್ತರು ಎಚ್ಚರಿಕೆ ನೀಡಿದ್ದಾರೆ.

ಹೋದ ಸರ್ಕಾರ ನಮ್ಮ ಗಂಡಂದಿರ ಸಾವಿಗೆ ಕಾರಣ ಆಯ್ತು, ಈ ಸರ್ಕಾರ ನಮ್ಮ ಸಾವಿಗೆ ಕಾರಣ ಆಗೋದು ಬೇಡ ಎಂದು ಆಕ್ಸಿಜನ್ ದುರಂತದಲ್ಲಿ ಸಾವನ್ನಪ್ಪಿದ ಕುಟುಂಬಸ್ಥರು ಕಣ್ಣೀರಿಟ್ಟಿದ್ದಾರೆ. ಆಕ್ಸಿಜನ್ ದುರಂತ ಸಂಭವಿಸಿ ಮೂರು ವರ್ಷ ಕಳೆದರೂ ಸಂತ್ರಸ್ತರ ಕುಟುಂಬಸ್ಥರಿಗೆ ನ್ಯಾಯ ಸಿಕ್ಕಿಲ್ಲ. ಇತ್ತ ಸೂಕ್ತ ಪರಿಹಾರ, ಸರ್ಕಾರಿ ನೌಕರಿ ಕೂಡ ಸಿಕ್ಕಿಲ್ಲ. ಸಂತ್ರಸ್ತ ಕುಟುಂಬಸ್ಥರ ಜೀವನ ಅಡ್ಡಕತ್ತರಿಗೆ ಸಿಲುಕಿದಂತಾಗಿದೆ. ಕಚೇರಿಗೆ ತಿರುಗಿ ತಿರುಗಿ ಜನಪ್ರತಿನಿಧಿಗಳ ಮನೆ ಸುತ್ತಿ ಚಪ್ಪಲಿ ಸವಿತೇ ಹೊರತೆ ನ್ಯಾಯ ಮಾತ್ರ ಇನ್ನೂ ಸಿಕ್ಕಿಲ್ಲ ಎಂದು ಸಂತ್ರಸ್ತರು ಅಳಲು ತೋಡಿಕೊಂಡಿದ್ದಾರೆ.

ಇದನ್ನೂ ಓದಿ: ಚಾಮರಾಜನಗರದ ಆಕ್ಸಿಜನ್​ ದುರಂತದ ಬಗ್ಗೆ ಮರುತನಿಖೆ: ದಿನೇಶ್​ ಗುಂಡೂರಾವ್

ಆಕ್ಸಿಜನ್ ದುರಂತದಲ್ಲಿ 24ಕ್ಕೂ ಹೆಚ್ಚು ಮಂದಿ ಸಾವನ್ನಪ್ಪಿದ್ರು. ಈ ವೇಳೆ ಈ ಹಿಂದಿನ ಬಿಜೆಪಿ ಸರ್ಕಾರ ಮೃತರ ಕುಟುಂಬಸ್ಥರಿಗೆ ಸೂಕ್ತ ಪರಿಹಾರದ ಜೊತೆ ಸರ್ಕಾರಿ ನೌಕರಿ ನೀಡುವ ಭರವಸೆ ನೀಡಿತ್ತು. ಕಳೆದ ಭಾರಿ ವಿಧಾನಸಭಾ ಚುನಾವಣಾ ಪ್ರಚಾರದ ವೇಳೆ ಸ್ವತಃ ರಾಹುಲ್ ಗಾಂಧಿ ಸಹ ಸಂತ್ರಸ್ತರಿಗೆ ಸರ್ಕಾರಿ ನೌಕರಿ ನೀಡುವ ಭರವಸೆ ನೀಡಿದ್ರು. ಸರ್ಕಾರ ಬದಲಾದ್ರು ಇನ್ನು ಪರಿಹಾರ ಸಿಗದೆ ಸಂತ್ರಸ್ತ ಕುಟುಂಬಸ್ಥರು ಪರಿತಪ್ಪಿಸುತ್ತಿದ್ದಾರೆ. ಎಲ್ಲೇ ಜನತಾ ದರ್ಶನ ನಡೆದ್ರೂ ಅಲ್ಲಿಗೆ ಹೋಗಿ ಮನವಿ ಮಾಡಿ ಸುಸ್ತಾಗಿದ್ದಾರೆ. ಪರಿಹಾರ ಸಿಗದೆ ಹೋದ್ರೆ ನಮ್ಮ ಸಾವಿಗೆ ನೀವು ಕಾರಣ ಆಗ್ಬೇಡಿ ಎಂದು ಎಚ್ಚರಿಕೆ ನೀಡಿದ್ದಾರೆ. ಗಂಡ ಸಾವನ್ನಪ್ಪಿದ ಬಳಿಕ ತಂದೆ ಮನೆಯಲ್ಲಿ ಆಶ್ರಯ ಪಡೆದಿದ್ದೇವೆ. ಊಟ, ಬಟ್ಟೆಗೂ ಭಾರಿ ಸಮಸ್ಯೆಯಾಗಿದ್ದು ಆದಷ್ಟು ಬೇಗ ನಮಗೆ ಪರಿಹಾರ ನೀಡಿ ಎಂದು ಸಂತ್ರಸ್ತ ಕುಟುಂಬಸ್ಥರು ಮನವಿ ಮಾಡಿದ್ದಾರೆ.

ರಾಜ್ಯದ ಪ್ರಮುಖ ಸುದ್ದಿಗಳನ್ನು ಓದಲು ಇದರ ಮೇಲೆ ಕ್ಲಿಕ್ ಮಾಡಿ