ಚಾಮರಾಜನಗರ: ಐದು ವರ್ಷಗಳ ನಂತರ ಚಾಮರಾಜೇಶ್ವರ ರಥೋತ್ಸವ (Chamarajeshwara Rathotsava) ನಡೆಯುತ್ತಿದ್ದು, ರಥೋತ್ಸವಕ್ಕೆ ಮೈಸೂರಿನ ರಾಜವಂಶಸ್ಥ ಯದುವೀರ್ ಒಡೆಯರ್ ಚಾಲನೆ ನೀಡಿದರು. ಆಷಾಡ ಮಾಸದ ಕನ್ಯಾ ಲಗ್ನದಲ್ಲಿ ರಥೋತ್ಸವ ಆರಂಭವಾಗಿದೆ. ಕಿಡಿಗೇಡಿ ರಥಕ್ಕೆ ಬೆಂಕಿ ಹಚ್ಚಿದ್ದರಿಂದ ರಥ ಸುಟ್ಟುಹೋಗಿದ್ದು, ಕಳೆದ ಐದು ವರ್ಷಳಿಂದ ರಥೋತ್ಸವ ನಿಂತುಹೋಗಿತ್ತು. ಇದೀಗ ನೂತನವಾಗಿ ರಥ ನಿರ್ಮಾಣವಾಗಿದೆ. ಇನ್ನೂ ಈ ರಥೋತ್ಸವದಲ್ಲಿ ನವದಂಪತಿಗಳ ಭಾಗಿಯಾಗುವುದು ವಿಶೇಷ. ರಥಕ್ಕೆ ಹಣ್ಣು, ಜವನ ಎಸೆದರೆ ಇಷ್ಟಾರ್ಥ ಸಿದ್ದಿಯಾಗುತ್ತೆ ಎಂಬ ನಂಬಿಕೆ ಇದೆ. ಪ್ರತಿ ವರ್ಷ ಆಷಾಡ ಮಾಸದಲ್ಲಿ ರಥೋತ್ಸವ ನಡೆಯುತ್ತದೆ. ತಿಂಗಳಲ್ಲ, ವಾರವಲ್ಲ ಐದು ವರ್ಷದ ಬಳಿಕ ದೇವಾಲಯದಲ್ಲಿ ರಾಜಕಳೆ ಮರುಕಳಿಸಿದೆ. ಚಾಮರಾಜನಗರದ ಆರಾಧ್ಯ ದೈವ ಆಗಿರೋ ಚಾಮರಾಜೇಶ್ವರ ದೇಗುಲದಲ್ಲಿ ಐದು ವರ್ಷದ ಹಿಂದೆ ರಥಕ್ಕೆ ಬೆಂಕಿ ಬಿದ್ದು, ಧಾರ್ಮಿಕ ಕಾರ್ಯಗಳೆಲ್ಲ ರದ್ದಾಗಿದ್ದವು. ಸದ್ಯ 1.20 ಕೋಟಿ ವೆಚ್ಚದಲ್ಲಿ ಬ್ರಹ್ಮರಥ ಸಿದ್ಧಪಡಿಸಲಾಗಿದೆ.
ಘಟನೆ ಏನು?
2017ರಲ್ಲಿ ಕಿಡಿಗೇಡಿಯೊಬ್ಬ ರಥಕ್ಕೆ ಬೆಂಕಿ ಹಚ್ಚಿದ್ದರಿಂದ ಅಂದಿನಿಂದ ಜಾತ್ರೆಯನ್ನು ಸ್ಥಗಿತಗೊಳಿಸಲಾಗಿತ್ತು. ರಥಕ್ಕೆ ಬೆಂಕಿ ಬಿದ್ದಿರುವುದು ಅಪಶಕುನವಾದ್ದರಿಂದ ಹೊಸ ರಥ ನಿರ್ಮಾಣವಾಗುವರೆಗು ಜಾತ್ರೆ, ಹಾಗೂ ದೇವಾಲಯದಲ್ಲಿ ಧಾರ್ಮಿಕ ಕಾರ್ಯ ನಡೆಸದಂತೆ ತೀರ್ಮಾನ ಮಾಡಲಾಗಿತ್ತು. ನಂತರ ಶಾಸಕ ಪುಟ್ಟರಂಗಶೆಟ್ಟಿ ಹಾಗೂ ಆಗಮಿಕರ ಪ್ರಯತ್ನದ ಫಲವಾಗಿ 1.20 ಕೋಟಿ ರೂ.ವೆಚ್ಚದಲ್ಲಿ ನೂತನ ಬ್ರಹ್ಮ ರಥ ಸಜ್ಜುಗೊಂಡಿದೆ.
ಇದನ್ನೂ ಓದಿ; ಮಹದೇಶ್ವರ ಬೆಟ್ಟ: ದಟ್ಟಾರಣ್ಯದಲ್ಲಿ ಬೆಳಗಿನ ಜಾವದವರೆಗೂ ಗರ್ಭಿಣಿಯ ಹೊತ್ತು ಆಸ್ಪತ್ರೆಗೆ ಕರೆ ತಂದ ಗ್ರಾಮಸ್ಥರು
ಆಷಾಢಮಾಸದಲ್ಲಿ ರಥೋತ್ಸವ:
ಸಾಮಾನ್ಯವಾಗಿ ಆಷಾಢಮಾಸದಲ್ಲಿ ಶುಭ ಕಾರ್ಯ ನಡೆಯಲ್ಲ. ಆದರೆ ಇಲ್ಲಿ ಮಾತ್ರ ಬ್ರಹ್ಮರಥೋತ್ಸವ ನಡೆಯುತ್ತೆ. ಹೀಗಾಗಿ, ಈ ಸಲದ ರಥೋತ್ಸವಕ್ಕೆ ಯಾವುದೇ ತೊಡಕು ಆಗಬಾರದೆಂದು, ಶುದ್ದಿ ಕಾರ್ಯ, ಪೂಜಾ ಕೈಂಕರ್ಯಗಳು ನೆರವೇರಿಸಲಾಗಿದೆ. ಕುಂಭಾಭಿಷೇಕದ ಮೂಲಕ 20 ಸಾವಿರ ಜನರಿಗೆ ಪ್ರಸಾದ ವಿತರಣೆ ಮಾಡಲಾಯಿತು. ಇನ್ನೂ 25 ವರ್ಷಗಳ ಬಳಿಕ ನಡೆದ ಕುಂಭಾಭಿಷೇಕ ಕಣ್ತುಂಬಿಕೊಂಡು ಭಕ್ತರು ಸಂತಸಗೊಂಡ್ರು. 5 ವರ್ಷಗಳ ಬಳಿಕ ಅದ್ಧೂರಿ ರಥೋತ್ಸವಕ್ಕೆ ಚಾಮರಾಜೇಶ್ವರನ ಸನ್ನಿಧಿ ಸಜ್ಜಾಗಿದೆ. ಜಿಲ್ಲೆಯ ಜನರಲ್ಲಿ ಇದು ಸಂತಸ ತಂದಿದ್ದು, ಮತ್ತೆ ದೇಗುಲದತ್ತ ಹೆಜ್ಜೆ ಹಾಕಿದರು.