ಚಾಮರಾಜನಗರ, ಸೆ.26: ಮಹಿಷ ದಸರಾ ವಿಚಾರವಾಗಿ ಮಾಜಿ ಸಂಸದ ಪ್ರತಾಪ್ ಸಿಂಹ(Prathap Simha) ಬೆಂಕಿ ಹಚ್ಚುವ ಕೆಲಸ ಮಾಡುತ್ತಿದ್ದಾರೆ ಎಂದು ಚಾಮರಾಜನಗರ ದಲಿತ ಸಂಘಟನೆ ಮುಖಂಡರು ಆಕ್ರೋಶ ಹೊರಹಾಕಿದ್ದಾರೆ. ತಮ್ಮ ರಾಜಕೀಯ ಅಸ್ತಿತ್ವ ಉಳಿಸಿಕೊಳ್ಳಲು ಜನರನ್ನು ಎತ್ತಿಕಟ್ಟುವ ಕೆಲಸ ಮಾಡುತ್ತಿದ್ದಾರೆ. ಆ ಮೂಲಕ ಜನರನ್ನು ಭಾವನಾತ್ಮಕವಾಗಿ ಕೆರಳಿಸಿ, ಸಮಾಜದ ಶಾಂತಿ ಭಂಗ ಮಾಡುತ್ತಿರುವ ಪ್ರತಾಪ್ ಸಿಂಹರನ್ನು ಕೂಡಲೇ ಬಂಧಿಸಬೇಕು ಎಂದು ಆಗ್ರಹಿಸಿದರು.
ಇನ್ನು ಮಹಿಷ ದಸರಾ ಅಚರಣೆ ಬಗ್ಗೆ ಅಪಸ್ವರ ಎತ್ತದೆ ಹಾಲಿ ಸಂಸದ ಯಧುವೀರ್ ತಮ್ಮ ಘನತೆ ಉಳಿಸಿಕೊಂಡಿದ್ದಾರೆ. ಆದರೆ, ಮಾಜಿ ಸಂಸದ ಪ್ರತಾಪ್ ಸಿಂಹ ವಿವೇಚನಾರಹಿತವಾಗಿ ಮಾತನಾಡುತ್ತಿದ್ದಾರೆ. ಮಹಿಷಾಸುರ ಮೈಸೂರಿನ ಅಸ್ಮಿತೆಯ ಸಂಕೇತ ಮತ್ತು ಮೈಸೂರಿನ ಆದಿ ಪುರುಷ. ಈ ಹಿನ್ನಲೆ ಮಹಿಷ ದಸರೆ ಆಚರಣೆಗೆ ಚಾಮರಾಜನಗರ ಜಿಲ್ಲೆಯಿಂದ 5 ಸಾವಿರಕ್ಕೂ ಹೆಚ್ಚು ಮಂದಿ ತೆರಳುತ್ತೇವೆ ಎಂದು ದಲಿತ ಸಂಘಟನೆ ಒಕ್ಕೂಟದ ಮುಖಂಡರ ಹೇಳಿದ್ದಾರೆ.
ಇದನ್ನೂ ಓದಿ:ಮಹಿಷ ದಸರಾ ಆಚರಣೆಗೆ ಮುಂದಾಗಿರೋರಿಗೆ ಪ್ರತಾಪ್ ಸಿಂಹ ಓಪನ್ ಚಾಲೆಂಜ್!
ಇದೇ ಸೆ.23 ರಂದು ಮೈಸೂರಿನಲ್ಲಿ ಮಹಿಷ ದಸರಾ ಆಚರಣೆ ಕುರಿತು ಮಾತನಾಡಿದ್ದ ಪ್ರತಾಪ್ ಸಿಂಹ, ‘ಮಹಿಷ ದಸರಾಗೆ ಚಾಮುಂಡಿಬೆಟ್ಟ ಸೂಕ್ತ ಜಾಗವಲ್ಲ, ಮಹಿಷನ ಮೇಲೆ ನಂಬಿಕೆ ಇದ್ದರೆ ನೀವು ಮನೆಯಲ್ಲೇ ಪೂಜೆ ಮಾಡಿಕೊಳ್ಳಿ. ಮಹಿಷಾಸುರ, ಕಂಸ, ರಾವಣ ಯಾರನ್ನಾದರೂ ಮನೆಯಲ್ಲಿ ಆರಾಧಿಸಿ. ಆದರೆ, ಚಾಮುಂಡಿ ಬೆಟ್ಟದಲ್ಲಿ ಭಕ್ತರು ಅವಕಾಶ ಮಾಡಿಕೊಡಲ್ಲ. ಮನೆಗಳಲ್ಲಿ ಬೇಕಾದರೆ ಮಹಿಷನ ಫೋಟೋವನ್ನು ಇಟ್ಟುಕೊಳ್ಳಿ. ಮಹಿಷನ ರೀತಿ ಮಗು ಹುಟ್ಟಲಿ ಎಂದು ಪೂಜೆ ಮಾಡಿಕೊಳ್ಳಿ. ಆದರೆ, ಚಾಮುಂಡಿ ಬೆಟ್ಟದಲ್ಲಿ ನೀವು ಮಹಿಷ ದಸರಾ ಮಾಡುತ್ತೇವೆ ಅಂದರೆ ಚಾಮುಂಡಿ ಭಕ್ತರು ಅಂದೇ ಚಾಮುಂಡಿ ಬೆಟ್ಟ ಚಲೋ ಮಾಡುತ್ತೇವೆ. ಮಹಿಷ ಭಕ್ತರ ಕೈಮೇಲಾಗುತ್ತಾ, ಚಾಮುಂಡಿ ಭಕ್ತರ ಕೈಮೇಲಾಗುತ್ತಾ ನೋಡೋಣ ಎಂದು ಓಪನ್ ಚಾಲೆಂಜ್ ಮಾಡಿದ್ದರು.
ರಾಜ್ಯದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ