
ಬೆಂಗಳೂರು, ಅಕ್ಟೋಬರ್ 30: ಸಿಎಂ ಸಿದ್ದರಾಮಯ್ಯ (Siddaramaiah) ಕ್ಷೇತ್ರ ವರುಣಾದಲ್ಲಿ ಚೆಸ್ಕಾಂ (CHESCOM) ಅಧಿಕಾರಿಗಳು ಗೂಂಡಾವರ್ತನೆ ತೋರಿದ್ದಾರೆ ಎಂಬ ಆರೋಪ ಕೇಳಿಬಂದಿದೆ. ನಂಜನಗೂಡು ತಾಲೂಕಿನ ಚಿಕ್ಕಹೊಮ್ಮದಲ್ಲಿ, ಕರೆಂಟ್ ಬಿಲ್ ಕಟ್ಟಿಲ್ಲವೆಂದು ಚೆಸ್ಕಾಂ ಅಧಿಕಾರಿಗಳು 80 ವರ್ಷದ ಅಂಧ ವೃದ್ಧೆಯನ್ನು ತಳ್ಳಾಡಿ ದೌರ್ಜನ್ಯ ಎಸಗಿದ್ದಾರೆ ಎಂದು ಸ್ಥಳೀಯರು ಆರೋಪಿಸಿದ್ದಾರೆ. ಈ ಘಟನೆ ಬಗ್ಗೆ ಸ್ಥಳೀಯರು ಆಕ್ರೋಶ ವ್ಯಕ್ತಪಡಿಸಿದ್ದಾರೆ.
ಮಹದೇವಮ್ಮ ಎಂಬ 80 ವರ್ಷದ ಅಂಧ ವೃದ್ಧೆಯ ಮನೆಗೆ ಚೆಸ್ಕಾಂ ಸಿಬ್ಬಂದಿ ಬಂದು 5,000 ರೂ. ಕರೆಂಟ್ ಬಿಲ್ ಪಾವತಿಸಲು ಒತ್ತಾಯಿಸಿದ್ದಾರೆ. ಈ ವೇಳೆ, ತಾವು ಭಾಗ್ಯಜ್ಯೋತಿ ಯೋಜನೆಯಡಿ ಉಚಿತ ವಿದ್ಯುತ್ ಪಡೆಯುತ್ತಿರುವುದಾಗಿಯೂ, ತಪ್ಪು ಬಿಲ್ ಬಂದಿದ್ದು, ಅದನ್ನು ಕಟ್ಟಲು ಸಾಧ್ಯವಿಲ್ಲವೆಂದು ಅವರು ತಿಳಿಸಿದ್ದರು. ಆದರೂ ಸಿಬ್ಬಂದಿ ಬಲವಂತವಾಗಿ ಫ್ಯೂಸ್ ಮತ್ತು ಮೀಟರ್ ಬೋರ್ಡ್ ತೆಗೆದುಹಾಕಲು ಯತ್ನಿಸಿದ್ದಾರೆ. ಈ ವೇಳೆ ವೃದ್ಧೆ ಮಹದೇವಮ್ಮ ವಿರೋಧ ವ್ಯಕ್ತಪಡಿಸಿದಾಗ, ‘ನಮ್ಮ ಕರ್ತವ್ಯಕ್ಕೆ ಅಡ್ಡಿಯಾಗುತ್ತಿದ್ದೀಯಾ’ ಎಂದು ಸಿಬ್ಬಂದಿ ಕೋಪಗೊಂಡು ತಳ್ಳಿದ್ದಾರೆ ಎನ್ನಲಾಗಿದೆ.
ಇದನ್ನೂ ಓದಿ: ಬಂಡೀಪುರ ಸಫಾರಿ ಪಾಯಿಂಟ್ ಆಯ್ತು ಕುಡುಕರ ಅಡ್ಡೆ: ಡಿಸಿಎಫ್ ಕಚೇರಿ ಆವರಣದಲ್ಲೇ ನೂರಾರು ಮದ್ಯದ ಬಾಟಲಿಗಳು!
ಈ ಘಟನೆ ವೇಳೆ ಅಂಧ ವೃದ್ಧೆ ಕೆಳಗೆ ಬಿದ್ದು ಗಾಯಗೊಂಡಿದ್ದಾರೆ. ಅವರನ್ನು ತಕ್ಷಣ ಚಾಮರಾಜನಗರ ಸಿಮ್ಸ್ ಆಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ ನೀಡಲಾಗಿದೆ. ಚಿಕಿತ್ಸೆ ಬಳಿಕ ಮಹದೇವಮ್ಮ ಅವರನ್ನು ಡಿಸ್ಚಾರ್ಜ್ ಮಾಡಲಾಗಿದೆ.
ಅಂಧ ವೃದ್ಧೆಯ ಮೇಲೆ ದೌರ್ಜನ್ಯ ಎಸಗಿದ ಚೆಸ್ಕಾಂ ಅಧಿಕಾರಿಗಳ ವಿರುದ್ಧ ಕಠಿಣ ಕ್ರಮ ಕೈಗೊಳ್ಳುವಂತೆ ಸ್ಥಳೀಯರು ಆಗ್ರಹ ವ್ಯಕ್ತಪಡಿಸಿದ್ದಾರೆ.
Published On - 11:45 am, Thu, 30 October 25