ಚಾಮರಾಜನಗರ, ನವೆಂಬರ್ 20: ಚಾಮರಾಜನಗರ (Chamarajanagar) ಜಿಲ್ಲೆಯಲ್ಲಿ ಹೊಸ ಹುಲಿ ಸಫಾರಿ ಜೋನ್ (Tiger Safari Zone) ಆರಂಭಿಸಲು ಕರ್ನಾಟಕ ಸರ್ಕಾರ ಮುಂದಾಗಿರುವುದಾಗಿ ವರದಿಯಾಗಿದೆ. ಬಂಡೀಪುರ ಮತ್ತು ನಾಗರಹೊಳೆಗೆ ಹೊಂದಿಕೊಂಡಂತೆ ಹೊಸ ಸಫಾರಿ ಜೋನ್ ಇರಲಿದೆ. ಇದರಿಂದ ಹಳೆ ಮೈಸೂರು ಭಾಗದ ಪ್ರವಾಸೋದ್ಯಮಕ್ಕೆ ಉತ್ತೇಜನ ದೊರೆಯಲಿದೆ. ಚಾಮರಾಜನಗರ ಜಿಲ್ಲೆಯ ಮಲೆ ಮಹದೇಶ್ವರ ಬೆಟ್ಟ (ಎಂಎಂ ಹಿಲ್ಸ್) ವನ್ಯಜೀವಿ ವಿಭಾಗದ ಪಿಜಿ ಪಾಳ್ಯ ಶ್ರೇಣಿಯ ಲೊಕ್ಕನಹಳ್ಳಿಯಿಂದ 18 ಕಿಮೀ ಸಫಾರಿ ವ್ಯಾಪಿಸಿರಲಿದ್ದು, ದಟ್ಟಾರಣ್ಯದ ಮೂಲಕ ಸಾಗಲಿದೆ.
ಈ ಸಫಾರಿ ಮಾರ್ಗದಲ್ಲಿ ಪ್ರವಾಸಿಗರು ಕಾಡು ಪ್ರಾಣಿಗಳನ್ನು ಮತ್ತು ಶಿಲಾಯುಗದ ರಚನೆಗಳ ಅವಶೇಷಗಳನ್ನು ಸಹ ಕಾಣಬಹುದಾಗಿದೆ.
ಮಲೆ ಮಹದೇಶ್ವರ ವನ್ಯಜೀವಿ ವಿಭಾಗದ ಉಪ ಸಂರಕ್ಷಣಾಧಿಕಾರಿ ಸಂತೋಷ್ ಕುಮಾರ್ ಪ್ರಕಾರ, ಡಿಸೆಂಬರ್ ಮೊದಲ ವಾರದಲ್ಲಿ ಒಂದೇ ವಾಹನದೊಂದಿಗೆ ಈ ಸಫಾರಿ ಪ್ರಾರಂಭಿಸಲು ಇಲಾಖೆ ಸಜ್ಜಾಗಿದೆ. ನಾವು ಎರಡು ತಿಂಗಳ ಕಾಲ ಸಫಾರಿಗೆ ಅನುಮತಿಯನ್ನು ಪಡೆದಿದ್ದೇವೆ. ಈ ಸಮಯದಲ್ಲಿ ನಾವು ವನ್ಯಜೀವಿ ಪ್ರದೇಶದಲ್ಲಿನ ಸಾಧ್ಯೆತಗಳ ಬಗ್ಗೆ ಅನ್ವೇಷಿಸುತ್ತೇವೆ ಎಂದು ಕುಮಾರ್ ಹೇಳಿರುವುದಾಗಿ ‘ಟೈಮ್ಸ್ ಆಫ್ ಇಂಡಿಯಾ’ ವರದಿ ಮಾಡಿದೆ.
ಹೊಸ ಮಾರ್ಗವು ಆನೆ ಕಾರಿಡಾರ್‌ಗೆ ಸಮಾನಾಂತರವಾಗಿ ಸಾಗುವುದರಿಂದ ಪ್ರವಾಸಿಗರಿಗೆ ಕಾಡಾನೆಗಳು ಕೂಡ ಕಂಡುಬರುವ ಸಾಧ್ಯತೆ ಇದೆ. ಈ ಪ್ರದೇಶದಲ್ಲಿ ಹುಲಿಗಳು, ಜಿಂಕೆಗಳು, ಚಿರತೆಗಳು, ಕಾಟಿ, ಭಾರತೀಯ ಮೊಲ ಮತ್ತು ವಿವಿಧ ಪಕ್ಷಿ ಪ್ರಭೇದಗಳನ್ನು ಸಹ ಕಾಣಬಹುದು ಎಂದು ಸಂತೋಷ್ ಕುಮಾರ್ ವಿವರಿಸಿದ್ದಾರೆ. ಈ ಮಾರ್ಗವು ಕೆಲವು ಶಿಲಾಯುಗದ ರಚನೆಗಳು, ಸಮಾಧಿ ಸ್ಥಳಗಳಗಳನ್ನು ಹೊಂದಿದೆ.
ಇದನ್ನೂ ಓದಿ: ಕೈದಿಗಳಿಗೆ ಕಾರಾಗೃಹದಲ್ಲಿ ಕಂಪ್ಯೂಟರ್ ಶಿಕ್ಷಣ; ವಿನೂತನ ಪ್ರಯತ್ನಕ್ಕೆ ಮುಂದಾದ ಚಾಮರಾಜನಗರ ಜಿಲ್ಲಾ ಕಾರಾಗೃಹ
ಸ್ಥಳೀಯ ಪ್ರವಾಸೋದ್ಯಮಿಗಳ ಪ್ರಕಾರ, ಈ ಹೊಸ ಸಫಾರಿಯು ಕೊಳ್ಳೇಗಾಲ ಪ್ರವಾಸಿ ಸರ್ಕ್ಯೂಟ್ನಿಂದ ಪ್ರಾರಂಭವಾಗುವ ನಿರೀಕ್ಷೆ ಇದ್ದು, ಒಂದು ದಿನದ ಒಳಗಾಗಿ ಮುಗಿಸಬಹುದಾಗಿದೆ. ಈ ಸಫಾರಿ ಪಾಯಿಂಟ್ ದೊಂಡೇನಲಿಂಗ್ ಟಿಬೆಟನ್ ಕ್ಯಾಂಪ್, ಭರಚುಕ್ಕಿ ಜಲಪಾತ ಮತ್ತು ಗುಂಡಾಲ್ ಅಣೆಕಟ್ಟೆಗಳಿಗೆ ಸಮೀಪದಲ್ಲಿದೆ. ಇವು ಕೂಡ ಪ್ರಸಿದ್ಧ ಪ್ರವಾಸಿ ತಾಣಗಳಾಗಿವೆ.
ನೂತನ ಸಫಾರಿಯು ಕೊಳ್ಳೇಗಾಲ ಸುತ್ತಮುತ್ತಲಿನ ಪ್ರವಾಸಿ ಚಟುವಟಿಕೆಗಳನ್ನು ಉತ್ತೇಜಿಸಲು ಸಹಾಯ ಮಾಡಲಿದೆ ಎಂದು ಸಂತೋಷ್ ಕುಮಾರ್ ವಿವರಿಸಿದ್ದಾರೆ.
ರಾಜ್ಯದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ