
ಚಾಮರಾಜನಗರ, ಅಕ್ಟೋಬರ್ 30: ಗಡಿನಾಡು ಚಾಮರಾಜನಗರಕ್ಕೆ (Chamarajanagar) ಹುಲಿಗಳ ನಾಡು ಎಂಬ ಬಿರುದು ಕೂಡ ಇದೆ. ಇಂತಹ ಬಂಡೀಪುರ ಸಫಾರಿಗೆ ಮೈ ಮನ ಸೋಲದವರೇ ಇಲ್ಲ. ರಾಜ್ಯ ಹೊರ ರಾಜ್ಯಗಳಿಂದ ಪ್ರವಾಸಿಗರು ಭೇಟಿ ನೀಡುತ್ತಾರೆ. ಅಷ್ಟೇ ಯಾಕೆ, ಖುದ್ದು ಪ್ರಧಾನಿ ನರೇಂದ್ರ ಮೋದಿ ಕೂಡ ಇಲ್ಲಿ ಸಫಾರಿ ಮಾಡಿ ಖುಷಿ ಪಟ್ಟಿದ್ದಾರೆ. ಇಂತಹ ಬಂಡೀಪುರ ಸಫಾರಿ ಕೇಂದ್ರವೀಗ ಕುಡುಕರ ಅಡ್ಡೆಯಾಗಿದೆ. ಮೇಲುಕಾಮನಹಳ್ಳಿ ಬಳಿ ಇರುವ ಸಫಾರಿ ಕೇಂದ್ರ ಹಾಗೂ ಡಿಸಿಎಫ್ ಪ್ರಭಾಕರನ್ ಅವರ ಕಚೇರಿಯ ಆವರಣದ ಸುತ್ತಮುತ್ತ ನೂರಾರು ಮದ್ಯದ ಖಾಲಿ ಬಾಟಲ್ ಪತ್ತೆಯಾಗಿದ್ದು, ಪರಿಸರವಾದಿಗಳು ಹಾಗೂ ರೈತರ ಆಕ್ರೋಶಕ್ಕೆ ಕಾರಣವಾಗಿದೆ.
ಸಾಮಾನ್ಯವಾಗಿ ಮೇಲುಕಾಮನಹಳ್ಳಿಯ ಡಿಸಿಎಫ್ ಕಚೇರಿ ಬಳಿ ಸಾಮಾನ್ಯರ ಪ್ರವೇಶವಿಲ್ಲ. ಬ್ಯಾರಿಕೇಡ್ ಹಾಕಿ ಸಾರ್ವಜನಿಕರ ಪ್ರವೇಶ ನಿರ್ಬಂಧಿಸಲಾಗಿದೆ. ಆದರೆ ಇಲ್ಲೇ ಕೆಲಸ ಮಾಡುವ ಸಫಾರಿ ವಾಹನದ ಚಾಲಕರು, ಅರಣ್ಯ ಸಿಬ್ಬಂದಿಯೇ ಮದ್ಯ ಸೇವಿಸಿ ಬಾಟಲಿಗಳನ್ನು ಬೇಕಾಬಿಟ್ಟಿಯಾಗಿ ಬಿಸಾಡಿದ್ದಾರೆ. ಬಂಡಿಪುರದಲ್ಲಿ ಪರಿಸರ ಉಳಿಸಿ ಪ್ಲಾಸ್ಟಿಕ್ ಮುಕ್ತರನ್ನಾಗಿ ಮಾಡುತ್ತೇವೆಂದು ಭಾಷಣ ಮಾಡುವ ಅರಣ್ಯ ಸಚಿವ ಈಶ್ವರ್ ಖಂಡ್ರೆ ಹಾಗೂ ಬಂಡೀಪುರ ಟೈಗರ್ ಫಾರೆಸ್ಟ್ ಡಿಸಿಎಫ್ ಇದಕ್ಕೆ ಸೂಕ್ತ ಉತ್ತರ ನೀಡಬೇಕಾಗಿದೆ ಎಂದು ಪರಿಸರ ಪ್ರಿಯರು ಆಗ್ರಹಿಸಿದ್ದಾರೆ.
ದೇಶ ಹಾಗೂ ವಿದೇಶಗಳಲ್ಲಿ ತನ್ನದೇ ಆದ ಛಾಪು ಮೂಡಿಸಿರುವ ಬಂಡೀಪುರ ಟೈಗರ್ ರಿಸರ್ವ್ ಫಾರೆಸ್ಟ್, ಅರಣ್ಯ ಇಲಾಖೆ ನಿರ್ಲಕ್ಷ್ಯದಿಂದ ಈ ರೀತಿ ಕುಡುಕರ ಅಡ್ಡೆಯಾಗಿ ಬದಲಾಗಿದ್ದು ಮಾತ್ರ ನಿಜಕ್ಕೂ ದುರಂತವೇ ಸರಿ ಎಂದು ಪರಿಸರವಾದಿ ರಘು ವಿಷಾದ ವ್ಯಕ್ತಪಡಿಸಿದ್ದಾರೆ.
ಇದನ್ನೂ ಓದಿ: ಬೆಂಗಳೂರಿನ 7 ಸ್ಥಳಗಳಲ್ಲಿ ಟ್ರೀ ಪಾರ್ಕ್, ದೇಶಿ ಮರಗಳ ರಕ್ಷಣೆಗೆ ಕ್ರಮ: ಮತ್ತೊಂದು ಮಹತ್ವದ ಯೋಜನೆಗೆ ಡಿಕೆ ಶಿವಕುಮಾರ್ ಚಿಂತನೆ
ಮಾತೆತ್ತಿದರೆ ಜನ ಸಾಮಾನ್ಯರ ಮೇಲೆ ಕೇಸ್ ದಾಖಲಿಸಿ ದಂಡಾಸ್ತ್ರ ಪ್ರಯೋಗಿಸುವ ಅರಣ್ಯ ಸಿಬ್ಬಂದಿಯ ಈ ದ್ವಂದ್ವ ನೀತಿಗೆ ಫುಲ್ ಸ್ಟಾಪ್ ಹಾಕಬೇಕಿದೆ. ತಪ್ಪಿತಸ್ಥರ ವಿರುದ್ಧ ಕಾನೂನು ಕ್ರಮ ಆಗಲೇಬೇಕಿದೆ ಎಂದು ಪರಿಸರವಾದಿಗಳು ಆಗ್ರಹಿಸಿದ್ದಾರೆ.
Published On - 7:50 am, Thu, 30 October 25