ಬೆಂಗಳೂರಿನ 7 ಸ್ಥಳಗಳಲ್ಲಿ ಟ್ರೀ ಪಾರ್ಕ್, ದೇಶಿ ಮರಗಳ ರಕ್ಷಣೆಗೆ ಕ್ರಮ: ಮತ್ತೊಂದು ಮಹತ್ವದ ಯೋಜನೆಗೆ ಡಿಕೆ ಶಿವಕುಮಾರ್ ಚಿಂತನೆ
ದಿನೇ ದಿನೇ ಕಾಂಕ್ರೀಟ್ ಕಾಡಾಗುತ್ತಿರುವ ಬೆಂಗಳೂರಿನಲ್ಲಿ ಗಿಡ ಮರಗಳನ್ನು ಉಳಿಸಲು ಸರ್ಕಾರ ಮಹತ್ವದ ಹೆಜ್ಜೆ ಇಡಲು ಮುಂದಾಗಿದೆ. ಬೆಂಗಳೂರಿನ 7 ಕಡೆಗಳಲ್ಲಿ ಅರಣ್ಯ ಇಲಾಖೆಯ ವ್ಯಾಪ್ತಿಯಲ್ಲಿ ಟ್ರೀ ಪಾರ್ಕ್ ನಿರ್ಮಾಣಕ್ಕೆ ಚಿಂತನೆ ನಡೆಸಿದೆ. ಬೆಂಗಳೂರಿನ ಪಾರ್ಕ್ಗಳಲ್ಲಿ ಮೂರು ವಾರಗಳ ಕಾಲ ರೌಂಡ್ ಹಾಕಿದ್ದ ಡಿಸಿಎಂ ಡಿಕೆ ಶಿವಕುಮಾರ್, ರಾಜಧಾನಿಯ ಹಸಿರು ಉಳಿಸಲು ಟ್ರೀ ಪಾರ್ಕ್ ನಿರ್ಮಾಣಕ್ಕೆ ಚಿಂತನೆ ನಡೆಸಿದ್ದಾರೆ. ಟ್ರೀ ಪಾರ್ಕ್ ಹೇಗಿರಲಿದೆ, ಐಟಿಸಿಟಿಗೆ ಟ್ರೀ ಪಾರ್ಕ್ ನಿರ್ಮಾಣದಿಂದ ಪ್ರಯೋಜನ ಏನು? ಇಲ್ಲಿದೆ ಮಾಹಿತಿ.

ಬೆಂಗಳೂರು, ಅಕ್ಟೋಬರ್ 29: ಕಳೆದ ಮೂರು ವಾರಗಳಿಂದ ಬೆಂಗಳೂರಿನ (Bengaluru) ಉದ್ಯಾನವನಗಳಲ್ಲಿ ‘ಬೆಂಗಳೂರು ನಡಿಗೆ’ ಕಾರ್ಯಕ್ರಮ ನಡೆಸಿದ್ದ ಡಿಸಿಎಂ ಡಿಕೆ ಶಿವಕುಮಾರ್ (DK Shivakumar) , ಇದೀಗ ರಾಜಧಾನಿಯ ಶ್ವಾಸಕೋಶಗಳಂತಿರುವ ಪಾರ್ಕ್ಗಳ ಪುನಶ್ಚೇತನದ ಜೊತೆಗೆ ‘ಟ್ರೀ ಪಾರ್ಕ್’ಗಳನ್ನು ನಿರ್ಮಾಣ ಮಾಡಲು ಸಜ್ಜಾಗಿದ್ದಾರೆ. ಗಾರ್ಡನ್ ಸಿಟಿಯಲ್ಲಿ ದಿನೇ ದಿನೇ ಏರಿಕೆಯಾಗುತ್ತಿರುವ ವಾಹನಗಳಿಂದ ಆಗುತ್ತಿರುವ ವಾಯುಮಾಲಿನ್ಯ ನಿಯಂತ್ರಣದ ಜೊತೆಗೆ ದೇಶಿ ಮರಗಳನ್ನು ಉಳಿಸಿ ಬೆಳೆಸುವ ಬಗ್ಗೆ ಚಿಂತನೆ ನಡೆಸಿರುವ ಅವರು, ಬೆಂಗಳೂರಿನ ಏಳು ಕಡೆಗಳಲ್ಲಿ ಟ್ರೀ ಪಾರ್ಕ್ ನಿರ್ಮಾಣ ಮಾಡಲು ಅರಣ್ಯ ಇಲಾಖೆ ಅಧಿಕಾರಿಗಳ ಜೊತೆ ಚರ್ಚಿಸಲು ಮುಂದಾಗಿದ್ದಾರೆ.
ಟ್ರೀ ಪಾರ್ಕ್ಗಳ ಮೂಲಕ ರಾಜಧಾನಿಯ ಜನರಿಗೆ ದೇಶಿ ಮರಗಳ್ನು ಪರಿಚಯಿಸುವ ಉದ್ದೇಶ ಕೂಡ ಈ ಯೋಜನೆ ಹಿಂದಿದೆ. ಅದರ ಜತೆಗೆ, ಟ್ರೀ ಪಾರ್ಕ್ಗಳಲ್ಲಿ ವಾಕಿಂಗ್ ಪಾತ್ ನಿರ್ಮಿಸಿ ಜನರಿಗೆ ವಾಯುವಿಹಾರಕ್ಕೆ ಅನುಕೂಲ ಮಾಡಿಕೊಡುವುದಕ್ಕೂ ಚಿಂತನೆ ನಡೆದಿದೆ. ಏಳು ಕಡೆಗಳಲ್ಲಿ ಟ್ರೀ ಪಾರ್ಕ್ ನಿರ್ಮಾಣಕ್ಕೆ ಜಾಗ ಗುರುತಿಸುವ ಭರವಸೆ ನೀಡಿರುವ ಡಿಸಿಎಂ, ಅರಣ್ಯ ಇಲಾಖೆಯ ಜೊತೆ ಚರ್ಚಿಸಿ ಎಲ್ಲೆಲ್ಲಿ ನಿರ್ಮಾಣ ಮಾಡಬಹುದು ಅನ್ನೋ ಬಗ್ಗೆ ನಿರ್ಧಾರ ಕೈಗೊಳ್ಳಲಿದ್ದಾರೆ.
ಪರಿಸರ ಪ್ರಿಯರು, ಪರಿಸರ ತಜ್ಞರಿಂದ ಸ್ವಾಗತ
ಟ್ರೀ ಪಾರ್ಕ್ ನಿರ್ಮಾಣದಿಂದ ಹಲವು ಲಾಭಗಳಾಗಲಿವೆ ಎಂದು ತಜ್ಞರು ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ. ದೇಶಿ ಮರಗಳನ್ನು ಬೆಳೆಸುವುದರಿಂದ ಮರಗಳ ಸಂರಕ್ಷಣೆ ಜೊತೆಗೆ ರಾಜಧಾನಿಯ ವಾತಾವರಣ ಕೂಡ ಶುದ್ಧವಾಗಲಿದೆ ಎಂದು ಪರಿಸರತಜ್ಞ ಡಾ.ಕೇಶವಮೂರ್ತಿ ಅಭಿಪ್ರಾಯಪಟ್ಟಿದ್ದಾರೆ.
ಈಗಾಗಲೇ ಕೆಲವು ರಾಜ್ಯಗಳಲ್ಲಿ ಟ್ರೀ ಪಾರ್ಕ್ ನಿರ್ಮಾಣ ಮಾಡುವ ಮೂಲಕ ಮರಗಳನ್ನು ರಕ್ಷಿಸುವುದರ ಜೊತೆಗೆ ಪರಿಸರದ ಸಂರಕ್ಷಣೆ ಮಾಡಲಾಗುತ್ತಿದೆ. ಕಾಮಗಾರಿಗಳು, ಅಭಿವೃದ್ಧಿ ಚಟುವಟಿಕೆಗಳಿಂದಾಗಿ ಮರ ಗಿಡಗಳು ಮರೆಯಾಗುತ್ತಿರುವ ರಾಜಧಾನಿಯಲ್ಲಿ ಟ್ರೀ ಪಾರ್ಕ್ ನಿರ್ಮಾಣ ಆದರೆ ಹಲವಾರು ಪ್ರಯೋಜನಗಳಾಗಲಿವೆ.
ಟ್ರೀ ಪಾರ್ಕ್ ನಿರ್ಮಾಣದ ಅನುಕೂಲಗಳೇನು?
- ಟ್ರೀ ಪಾರ್ಕ್ನಿಂದ ವಾಯು ಗುಣಮಟ್ಟ ಸುಧಾರಣೆ
- ದೇಶಿ ಮರಗಳನ್ನ ಪೋಷಿಸುವುದರಿಂದ ವಾತಾವರಣ ಸಮತೋಲನ
- ಅಂತರ್ಜಲ ಮಟ್ಟ ಏರಿಕೆಯಲ್ಲೂ ಪಾತ್ರವಹಿಸಲಿರೋ ಟ್ರೀ ಪಾರ್ಕ್
- ವಾಯುವಿಹಾರಿಗಳಿಗೆ, ಪರಿಸರಪ್ರಿಯರಿಗೆ ಉತ್ತಮ ಸ್ಥಳಾವಕಾಶ
- ಮರಗಳ ಬಗ್ಗೆ ಅಧ್ಯಯನ ಮಾಡುವ ವಿದ್ಯಾರ್ಥಿಗಳಿಗೂ ಸಹಕಾರಿ
- ಅರಣ್ಯ ಇಲಾಖೆಗೆ ಸೇರಿದ ಜಾಗಗಳ ಸದ್ಬಳಕೆ ಸಾಧ್ಯ
ಅದೇನೆ ಇರಲಿ ಕಾಮಗಾರಿಗಳಿಗೆ ಎಂದು ನೂರಾರು ಮರಗಳು ಮರೆಯಾಗುತ್ತಿರುವ ಐಟಿಸಿಟಿಯಲ್ಲಿ ಇದೀಗ ಮರಗಳನ್ನು ಬೆಳೆಸಲು ಸರ್ಕಾರ ಸಜ್ಜಾಗಿದ್ದು, ಇದು ಪರಿಸರಪ್ರಿಯರಿಗೆ ಸಂತಸ ತಂದಿದೆ. ಇತ್ತ ರಾಜಧಾನಿಯ ವಾತಾವರಣ ಕೂಡ ಮರಗಳಿಂದಾಗಿ ಶುದ್ಧವಾಗಲಿದೆ. ಸದ್ಯ ಟ್ರೀ ಪಾರ್ಕ್ ನಿರ್ಮಾಣದ ಕನಸು ಬಿತ್ತಿರುವ ಸರ್ಕಾರ ಯಾವಾಗ ಅದರ ನಿರ್ಮಾಣಕ್ಕೆ ಮುಹೂರ್ತ ನಿಗದಿ ಮಾಡುತ್ತದೆ ಎಂಬುದನ್ನು ಕಾದುನೋಡಬೇಕಿದೆ.



