‘ಭಾರತ್ ಜೋಡೋ’ ಯಾತ್ರೆ ಸ್ವಾಗತಿಸಿ ಕಾಂಗ್ರೆಸ್ ಕಾರ್ಯಕರ್ತರು ಹಾಕಿದ್ದ ಫ್ಲೆಕ್ಸ್ ಹರಿದ ಕಿಡಿಗೇಡಿಗಳು
ನಾಳೆ ಗುಂಡ್ಲುಪೇಟೆಗೆ ‘ಭಾರತ್ ಜೋಡೋ’ ರ‍್ಯಾಲಿ ಆಗಮಿಸಲಿದ್ದು, ಈ ಹಿನ್ನಲೆ ಯಾತ್ರೆ ಸ್ವಾಗತಿಸಿ ಕಾಂಗ್ರೆಸ್ ಕಾರ್ಯಕರ್ತರು ಹಾಕಿದ್ದ ಫ್ಲೆಕ್ಸ್ಗಳನ್ನು ಕಿಡಿಗೇಡಿಗಳು ಹರಿದು ಹಾಕಿದ್ದಾರೆ.
ಚಾಮರಾಜನಗರ: ನಾಳೆ ಗುಂಡ್ಲುಪೇಟೆಗೆ ‘ಭಾರತ್ ಜೋಡೋ’ ರ‍್ಯಾಲಿ ಆಗಮಿಸಲಿದೆ. ಈ ಹಿನ್ನಲೆ ಗುಂಡ್ಲುಪೇಟೆ ಪಟ್ಟಣದಾದ್ಯಂತ ರಾರಾಜಿಸುತ್ತಿರುವ ರಾಹುಲ್ ಗಾಂಧಿ ಫ್ಲೇಕ್ಸ್ ರಾರಾಜಿಸುತ್ತಿವೆ. ಗುಂಡ್ಲುಪೇಟೆ ಮೂಲಕ ರಾಜ್ಯಕ್ಕೆ ನಾಳೆ ಯಾತ್ರೆ ಎಂಟ್ರಿ ಕೊಡಲಿದ್ದು, ರಸ್ತೆಯ ಉದ್ದಕ್ಕೂ ಬ್ಯಾನರ್, ಬಂಟಿಂಗ್ಸ್ ಅಳವಡಿಕೆ ಮಾಡಲಾಗಿದೆ. ಪಟ್ಟಣದ ಬಹುತೇಕ ರಸ್ತೆಗಳು ಪ್ಲೆಕ್ಸ್ಗಳಿಂದ ತುಂಬಿ ಹೋಗಿವೆ. ಈ ನಡುವೆ ‘ಭಾರತ್ ಜೋಡೋ’ ಯಾತ್ರೆ ಸ್ವಾಗತಿಸಿ ಕಾಂಗ್ರೆಸ್ ಕಾರ್ಯಕರ್ತರು ಹಾಕಿದ್ದ ಫ್ಲೆಕ್ಸ್ಗಳನ್ನು ಕಿಡಿಗೇಡಿಗಳು ಹರಿದು ಹಾಕಿದ್ದಾರೆ. ರಾಹುಲ್ ಗಾಂಧಿ, ಸಿದ್ದರಾಮಯ್ಯ, ಡಿ.ಕೆ.ಶಿವಕುಮಾರ್ ಸೇರಿದಂತೆ ಅನೇಕ ಗಣ್ಯರ ಭಾವಚಿತ್ರ ಇರುವ ಪ್ಲೆಕ್ಸ್ಗಳನ್ನು ಹರಿದು ಹಾಕಿದ್ದಾರೆ. ಫ್ಲೆಕ್ಸ್ ಹರಿದಿದ್ದಕ್ಕೆ ಕೆಪಿಸಿಸಿ ಅಧ್ಯಕ್ಷ ಡಿ.ಕೆ ಶಿವಕುಮಾರ ಗರಂ ಆಗಿದ್ದು, ಫ್ಲೆಕ್ಸ್ ಹರಿದು ಹಾಕೋದು ಒಳ್ಳೆಯ ಕೆಲಸ ಅಂದುಕೊಂಡಿದ್ದಾರೆ. ಚುಚ್ಚಿದರು, ಗುಂಡಿಕ್ಕಿದರೂ ಕಾಂಗ್ರೆಸ್ಸಿಗರು ಹೆದರುವುದಿಲ್ಲ. ನಾವು ಮನಸ್ಸು ಮಾಡಿದರೆ ಅವರು ಕಾರ್ಯಕ್ರಮ ಮಾಡಲು ಆಗಲ್ಲ. ಕಾಂಗ್ರೆಸ್ಸಿಗರು ಅವರಿಗಿಂತ ಬಹಳ ಚೆನ್ನಾಗಿ ಪಾಠ ಕಲಿತಿದ್ದಾರೆ. ಸಿಎಂ ಹಾಗೂ ಅವರ ಕಾರ್ಯಕರ್ತರಿಗೆ ಎಚ್ಚರಿಕೆ ನೀಡುತ್ತಿದ್ದೇನೆ. ಫ್ಲೆಕ್ಸ್ ಹರಿದು ಹೇಡಿಗಳಂತೆ ಹೋಗೋದು ನಿಮಗೆ ಶೋಭೆತರಲ್ಲ ಎಂದು ಮೈಸೂರಿನಲ್ಲಿ ಡಿ.ಕೆ.ಶಿವಕುಮಾರ್ ವಾಗ್ದಾಳಿ ಮಾಡಿದರು.
ಫ್ಲೆಕ್ಸ್ ಹಾಕೋರು ಅನುಮತಿ ಪಡೆದು ಹಾಕಬೇಕು ಎಂದ ಸಿಎಂ
ಸಿಎಂ ಬಸವರಾಜ ಬೊಮ್ಮಾಯಿ ಹಾವೇರಿಯಲ್ಲಿ ಮಾಧ್ಯಮದವರೊಂದಿಗೆ ಮಾತನಾಡಿದ್ದು, ಯಾರೇ ಫ್ಲೆಕ್ಸ್ ಹಾಕಬೇಕೆಂದರೆ ಅನುಮತಿಯನ್ನ ಪಡೆಯಬೇಕು. ಯಾವುದೇ ಪಕ್ಷದ ಫ್ಲೆಕ್ಸ್ ಹರಿಯೋ ಅವಶ್ಯಕತೆ ನಮಗಿಲ್ಲ. PFI ಬ್ಯಾನ್ ಎಲೆಕ್ಷನ್ ಗಿಮಿಕ್ ಎಂಬ ಹರಿಪ್ರಸಾದ್ ಹೇಳಿಕೆ ಪ್ರತಿಕ್ರಿಯಿಸಿದ ಅವರು ಬಿ.ಕೆ.ಹರಿಪ್ರಸಾದ್ಗೆ ವ್ಯಾಖ್ಯಾನ ಮಾಡಲು ಆಗೋದಿಲ್ಲ. ಪಿಎಫ್ಐ ಬ್ಯಾನ್ಗೆ ಕಾಂಗ್ರೆಸ್ನವರೂ ಒತ್ತಾಯ ಮಾಡಿದ್ರು. ಈಗ ಎಲೆಕ್ಷನ್ ಗಿಮಿಕ್ ಅಂತಿರೋದು ಎಷ್ಟು ಸರಿ ಎಂದರು.
ಕರ್ನಾಟಕದಲ್ಲಿ ಭಾರತ್ ಜೋಡೋ ಯಾತ್ರೆ ಎಲ್ಲೆಲ್ಲಿ?
ಮೊದಲ ಹಂತದ ರೂಟ್ ಮ್ಯಾಪ್
ತಮಿಳುನಾಡು ರಾಜ್ಯದಿಂದ ಗುಂಡ್ಲುಪೇಟೆ ಮೂಲಕ ಕರ್ನಾಟಕ ರಾಜ್ಯಕ್ಕೆ ಪ್ರವೇಶ ಮಾಡಲಿದೆ. ಗುಂಡ್ಲುಪೇಟೆ, ನಂಜನಗೂಡು, ಮೈಸೂರು, ಮಂಡ್ಯ ಜಿಲ್ಲೆಯ ಪಾಂಡವಪುರ ತಾಲೂಕಿನ ಮೇಲುಕೋಟೆಗೆ ಸಂಚಾರ ಮಾಡಲಿದೆ. ನಂತರ ಮೇಲುಕೋಟೆಯಿಂದ ರಂಗನಾಥಪುರದ ಮೂಲಕ ಚಿತ್ರದುರ್ಗ ಜಿಲ್ಲೆಯ ಪ್ರವೇಶ ಮಾಡಲಾಗುತ್ತದೆ. ರಂಗನಾಥಪುರದಿಂದ ತುಮಕೂರಿನ ತುರುವೇಕೆರೆ ನಂತರ ಇಲ್ಲಿಂದ ಚಿಕ್ಕನಾಯಕನಹಳ್ಳಿ ಹುಳಿಯಾರ್ ಮೂಲಕ ಚಿತ್ರದುರ್ಗ ಹಿರಿಯೂರುಗೆ ಪಾದಯಾತ್ರೆ ತೆರಳಲಿದೆ. ಹಿರಿಯೂರಿನಿಂದ ಚಳ್ಳಕೇರೆಗೆ, ಚಳ್ಳಕೆರೆಯಿಂದ ರಾಯಪುರಕ್ಕೆ ಯಾತ್ರೆ ತೆರಳಲಿದ್ದು, ಅಲ್ಲಿಂದ ಆಂಧ್ರ ಪ್ರವೇಶವನ್ನು ಪಾದಯಾತ್ರೆ ಪ್ರವೇಶಿಸಲಿದೆ.
ಎರಡನೇ ಹಂತದ ರೂಟ್ ಮ್ಯಾಪ್
ಹೀರೆಹಾಳ್ ನಿಂದ ಓಬಾಳಪುರ ಮೂಲಕ ರಾಜ್ಯಕ್ಕೆ ಪ್ರವೇಶ ಮಾಡಲಾಗುತ್ತದೆ. ಹಲಕುಂಡಿ, ಬಳ್ಳಾರಿಯಲ್ಲಿ ಭಾರತ್ ಜೋಡೋ ಯಾತ್ರೆ ಸಂಚಾರ ಆರಂಭಗೊಂಡು ಅಲ್ಲಿಂದ ಅಲುರ್ ಮೂಲಕ ಆಂಧ್ರ ಪ್ರವೇಶ ಮಾಡಲಿದೆ.
ಮೂರನೇ ಹಂತದ ರೂಟ್ ಮ್ಯಾಪ್
ಮಾಧವರಂ ಮೂಲಕ ರಾಯಚೂರಿನ ಗಿಲ್ಲೆಸೂಗೂರು ಮೂಲಕ ಪಾದಯಾತ್ರೆ ತಂಡ ಪ್ರವೇಶ ಮಾಡಲಿದೆ. ಗಿಲ್ಲೆಸೂಗೂರು ನಿಂದ ಯರೇಗಾರಕ್ಕೆ ಪಾದಯಾತ್ರೆ ಸಂಚರಿಸಲಿದೆ. ಯರೇಗಾರ ಮೂಲಕ ರಾಯಚೂರು, ರಾಯಚೂರಿನಿಂದ ದೇವಸೂಗೂರುಗೆ ಭಾರತ್ ಜೋಡೋ ಯಾತ್ರೆ ತೆರಳಲಿದೆ. ದೇವಸೂಗೂರಿನಿಂದ ವಿಕಾರಬಾದ್ ಮೂಲಕ ತೆಲಂಗಾಣಕ್ಕೆ ಪ್ರವೇಶ ಮಾಡಲಿದೆ.
ರಾಜ್ಯದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ.