ಚಾಮರಾಜನಗರ: ಚಲಿಸುವ ಬೈಕ್ ಮೇಲೆ ರೊಮಾನ್ಸ್ ಮಾಡಿದ ಪ್ರಕರಣಕ್ಕೆ ಸಂಬಂಧಿಸಿದಂತೆ ಚಾಮರಾಚಾನಗರ ಸಂಚಾರಿ ಪೊಲೀಸ್ ಠಾಣೆಯಲ್ಲಿ ಪೊಲೀಸರು ಸ್ವಯಂಪ್ರೇರಿತ ದೂರು ದಾಖಲು ಮಾಡಿಕೊಂಡಿದ್ದು, ಬೈಕ್ ಹಾಗೂ ಯುವಕನನ್ನು ವಶಕ್ಕೆ ತೆಗೆದುಕೊಂಡಿದ್ದಾರೆ. ಅಜಾಗರೂಕ, ಹೆಲ್ಮೆಟ್ ರಹಿತ, ಅಪಾಯಕಾರಿ ಚಾಲನೆ ಮೂಲಕ ನಿಯಮಗಳನ್ನು ಉಲ್ಲಂಘಿಸಲಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ. ಚಲಿಸುವ ಬೈಕ್ ಮೇಲೆ ರಸ್ತೆಯಲ್ಲಿ ರೊಮಾನ್ಸ್ ಮಾಡಿದ ಪ್ರೇಮಿಗಳ ವಿಡಿಯೊಗೆ ಸಾರ್ವಜನಿಕರಿಂದ ಆಕ್ಷೇಪ ವ್ಯಕ್ತವಾಗಿತ್ತು. ಈ ಹಿನ್ನೆಲೆಯಲ್ಲಿ ಮೋಟಾರು ವಾಹನ ಕಾಯ್ದೆಯಡಿ ಪ್ರಕರಣ ದಾಖಲಿಸಿಕೊಂಡಿರುವ ಪೊಲೀಸರು ಎಚ್.ಡಿ.ಕೋಟೆ ಶಿವಪುರ ಗ್ರಾಮದ ಸ್ವಾಮಿ ವಿರುದ್ಧ ಪ್ರಕರಣ ದಾಖಲು ಮಾಡಿಕೊಂಡಿದ್ದಾರೆ. ವಿಚಾರಣೆ ವೇಳೆ ಯುವತಿ ಜೊತೆಗೆ ಜಾಲಿ ರೈಡ್ ಬಂದಿದ್ದಾಗಿ ಸ್ವಾಮಿ ಒಪ್ಪಿಕೊಂಡಿದ್ದಾರೆ.
ನಡುರಸ್ತೆಯಲ್ಲಿ ಇವರಿಬ್ಬರ ರೊಮಾನ್ಸ್ನ ವಿಡಿಯೊ ಭಾರಿ ವೈರಲ್ ಆಗಿತ್ತು. ಪೆಟ್ರೋಲ್ ಟ್ಯಾಂಕ್ ಮೇಲೆ ಯುವತಿಯನ್ನು ಕೂರಿಸಿಕೊಂಡು ರೈಡ್ ಮಾಡಿ ಯುವಕ ತನ್ನ ಪ್ರೀತಿ ಪ್ರದರ್ಶನ ಮಾಡಿದ್ದ. ಚಾಮರಾಜನಗರ ಜಿಲ್ಲೆಯ ಗುಂಡ್ಲುಪೇಟೆಯಲ್ಲಿ ನಡೆದಿರುವ ಘಟನೆ ಎನ್ನಲಾದ ಈ ವಿಡಿಯೊ ಸದ್ಯ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿತ್ತು. ಜನರು, ವಾಹನಗಳ ಸಂಚಾರವಿದ್ದರೂ ಯಾವುದಕ್ಕೂ ಕೇರ್ ಮಾಡದ ಈ ಜೋಡಿಗಳು ತಮ್ಮದೇ ಲೋಕದಲ್ಲಿ ಮುಳುಗಿದ್ದವು.
ರಸ್ತೆ ಬದಿ ನಿಲ್ಲಿಸಿದ್ದ ಕಾರಿಗೆ ಬೆಂಕಿ
ಬೆಂಗಳೂರು: ಶಿವಾಜಿನಗರ ಸಮೀಪ ರಸ್ತೆಬದಿ ನಿಲ್ಲಿಸಿದ್ದ ಕಾರೊಂದಕ್ಕೆ ದುಷ್ಕರ್ಮಿಗಳು ಬೆಂಕಿ ಹಚ್ಚಿದ್ದಾರೆ. ಶಿವಾಜಿನಗರದ ಕ್ವೀನ್ಸ್ ರಸ್ತೆಯಲ್ಲಿ ಮಧ್ಯರಾತ್ರಿ ಘಟನೆ ನಡೆದಿದೆ. ಕೆಟ್ಟು ನಿಂತಿದ್ದ ಕಾರಿಗೆ ದುಷ್ಕರ್ಮಿಗಳು ಬೆಂಕಿ ಹಚ್ಚಿರುವ ಶಂಕೆ ವ್ಯಕ್ತವಾಗಿದೆ. ಅಕ್ಕಪಕ್ಕ ವಾಹನಗಳು ಇಲ್ಲದಿದ್ದರಿಂದ ಹೆಚ್ಚಿನ ಅನಾಹುತ ತಪ್ಪಿದೆ. ಸ್ಥಳಕ್ಕೆ ಆಗಮಿಸಿದ ಅಗ್ನಿಶಾಮಕ ಸಿಬ್ಬಂದಿ ಬೆಂಕಿ ನಂದಿಸಿದರು. ಶಿವಾಜಿನಗರ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಪ್ರಕರಣ ನಡೆದಿದೆ. ಈ ಕಾರು ಹಲವು ದಿನಗಳಿಂದ ಬಳಕೆಯಾಗದೆ ಕೆಟ್ಟು ನಿಂತಿತ್ತು.
ಇದನ್ನೂ ಓದಿ: ಐಷಾರಾಮಿ ಕಾರಿನಲ್ಲಿ ತಡರಾತ್ರಿ ಜಾಲಿ ರೈಡ್ ಮಾಡುತ್ತಿದ್ದವರಿಂದ ಕ್ಯಾಬ್‌ಗೆ ಡಿಕ್ಕಿ, ಉದ್ಯಮಿ ಕರೀಮ್ ಮೆವಾನಿ ಮಗ ಜವೇರ್ ವಶಕ್ಕೆ