ಚಾಮರಾಜನಗರ, ಜು.17: ಗಡಿ ಜಿಲ್ಲೆ ಚಾಮರಾಜನಗರ(Chamarajanagara)ದಿಂದ ನೆರೆಯ ತಮಿಳುನಾಡಿನ ಮೆಟ್ಟುಪಾಳ್ಯಂಗೆ ರೈಲು ಮಾರ್ಗ ಹಲವು ದಶಕಗಳ ಕನಸಾಗಿತ್ತು. ಆದರೆ, ಈ ರೈಲು ಮಾರ್ಗದಿಂದ ಸಾಕಷ್ಟು ಅರಣ್ಯನಾಶವಾಗಲಿದೆ, ವನ್ಯಜೀವಿಗಳಿಗೆ ಕಂಟಕವಾಗಲಿದೆ ಎಂಬ ಕಾರಣದಿಂದ ಅದು ರದ್ದಾಯಿತು. ಆದರೆ, ಅದರ ಬದಲು ಅಂದಿನ ಪ್ರದಾನಿ ಎಚ್.ಡಿ.ದೇವೇಗೌಡ(HD Deve Gowda) ಅವರು ಚಾಮರಾಜನಗರದಿಂದ ರಾಜಧಾನಿ ಬೆಂಗಳೂರಿಗೆ ಸಂಪರ್ಕ ಕಲ್ಪಿಸುವ ಕೊಳ್ಳೇಗಾಲ, ಮಳವಳ್ಳಿ, ಕನಕಪುರ ಮಾರ್ಗದ ಚಾಮರಾಜನಗರ ಹೆಜ್ಜಾಲ ರೈಲು ಯೋಜನೆಯನ್ನು ಘೋಷಿಸಿದ್ದರು. ಆದರೆ, ಈ ಯೋಜನೆಯು ಸಹ ನೆನಗುದಿಗೆ ಬೀಳುತ್ತಲೆ ಬಂದಿದ್ದು, ಇದೀಗ ಮರುಜೀವ ಬಂದಿದೆ.
ಕಳೆದ ವರ್ಷ ರೈಲ್ವೆ ಇಲಾಖೆ ತನ್ನ ಹೊಸ ರೈಲು ಮಾರ್ಗಗಳಿಗೆ ಒಪ್ಪಿಗೆ ಸೂಚಿಸಿರುವ ಪಟ್ಟಿಯಲ್ಲಿ ಚಾಮರಾಜನಗರ ಹೆಜ್ಜಾಲ ಮಾರ್ಗವೂ ಇದೆ. 141 ಕಿಲೋ ಮೀಟರ್ ಅಂತರವಿರುವ ಈ ಮಾರ್ಗದ ನಕ್ಷೆಯನ್ನು ಸಹ ರೈಲ್ವೆ ಇಲಾಖೆ ತನ್ನ ವೆಬ್ಸೈಟ್ನಲ್ಲಿ ಪ್ರಕಟಿಸಿತ್ತು. ಇತ್ತೀಚೆಗೆ ಕೇಂದ್ರ ಸಚಿವ ಹೆಚ್.ಡಿ.ಕುಮಾರಸ್ವಾಮಿ ಅವರು ಕೇಂದ್ರ ರೈಲ್ವೆ ಸಚಿವರನ್ನು ಭೇಟಿಯಾಗಿ ಈ ರೈಲು ಯೋಜನೆಯನ್ನು ಪ್ರಾರಂಭಿಸುವಂತೆ ಮನವಿ ಮಾಡಿದ್ದಾರೆ. ಇದರ ಜೊತೆಗೆ ವಿ.ಸೋಮಣ್ಣ ಅವರು ರೈಲ್ವೆ ಖಾತೆ ರಾಜ್ಯ ಸಚಿವರೂ ಆಗಿರುವುದರಿಂದ ಕೇಂದ್ರದ ಬಜೆಟ್ನಲ್ಲಿ ಈ ರೈಲು ಯೋಜನೆಗೆ ಹಸಿರುನಿಶಾನೆ ದೊರೆಯಬಹುದೆಂದು ಸಾರ್ವಜನಿಕರಲ್ಲಿ ಆಶಾಭಾವನೆ ಮೂಡಿಸಿದೆ.
ಇದನ್ನೂ ಓದಿ:ಬೆಂಗಳೂರು ಉಪನಗರ ರೈಲ್ವೆ ಯೋಜನೆ: 699 ಮರ ಕಡಿಯುವುದಕ್ಕೆ ಕರ್ನಾಟಕ ಹೈಕೋರ್ಟ್ ತಡೆ
ಈ ರೈಲು ಮಾರ್ಗದ ಅನುಷ್ಠಾನಕ್ಕೆ 1700 ಎಕರೆ ಭೂಮಿ ಅಗತ್ಯವಾಗಿದ್ದು, ರೈಲ್ವೇ ಇಲಾಖೆ 2016ರಲ್ಲೇ ರಾಜ್ಯ ಸರ್ಕಾರಕ್ಕೆ ಪ್ರಸ್ತಾವನೆ ಸಲ್ಲಿಸಿದೆ. ರಾಜ್ಯ ಸರ್ಕಾರವೇ ಭೂಸ್ವಾಧೀನ ಪಡಿಸಿಕೊಟ್ಟು, ಇದಕ್ಕಾಗಿ ಬೇಕಾಗುವ 1500 ಕೋಟಿ ರೂ. ಅನುದಾನವನ್ನು ಸಹ ಭರಿಸಬೇಕು. ಈ ನಿಟ್ಟಿನಲ್ಲಿ ಎಲ್ಲಾ ಪ್ರಯತ್ನಗಳನ್ನು ಮಾಡುವುದಾಗಿ ಕೊಳ್ಳೇಗಾಲ ಸೇರಿದಂತೆ ಚಾಮರಾಜನಗರ ಜಿಲ್ಲಾ ಶಾಸಕರ ಮಾತಾಗಿದೆ.
ಚಾಮರಾಜನಗರ ಜಿಲ್ಲೆಯಲ್ಲಿ ಹೊಸ ಕೈಗಾರಿಕೆಗಳು ಒಂದಾದ ಮೇಲೆ ಒಂದರಂತೆ ತಲೆ ಎತ್ತುತ್ತಿವೆ. ಜೊತೆಗೆ ಕೈಗಾರಿಕಾ ಪ್ರದೇಶವೂ ವಿಸ್ತರಣೆಯಾಗುತ್ತಿದೆ. ಚಾಮರಾಜನಗರ-ಹೆಜ್ಜಾಲ ರೈಲು ಮಾರ್ಗ ಅನುಷ್ಠಾನಗೊಂಡಲ್ಲಿ ಚಾಮರಾಜನಗರವು ರಾಜಧಾನಿ ಬೆಂಗಳೂರಿಗೆ ಇನ್ನಷ್ಟು ಹತ್ತಿರವಾಗಲಿದೆ. ಕೈಗಾರಿಕೆಗಳ ಅಭಿವೃದ್ಧಿಗೂ ಇದು ಸಹಕಾರಿಯಾಗಲಿದೆ. ಜೊತೆಗೆ ಕೊಳ್ಳೇಗಾಲ, ಮಳವಳ್ಳಿ, ಕನಕಪುರ ಜನತೆಗೂ ಇದರಿಂದ ಅನುಕೂಲವಾಗಲಿದೆ.
ರಾಜ್ಯದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ