ನಾಗಮಲೆಗೆ ಹೋಗುವ ಭಕ್ತರಿಗೆ ಶಾಕ್​​​! ಟ್ರಕ್ಕಿಂಗ್​ಗೆ ನಿರ್ಬಂಧ ವಿಧಿಸಿದ ಅರಣ್ಯ ಇಲಾಖೆ

| Updated By: ಕಿರಣ್ ಹನುಮಂತ್​ ಮಾದಾರ್

Updated on: Feb 27, 2024 | 6:57 PM

ಅದು ದಟ್ಟ ಕಾನನದ ನಡುವೆ ಇರುವ ಆಧ್ಯಾತ್ಮಿಕ ಕ್ಷೇತ್ರ. ಭಕ್ತರು ತಮ್ಮ ಆರಾಧ್ಯ ದೇವರ ದರ್ಶನ ಮಾಡಲು ಕಾಲ್ನಡಿಗೆಯಲ್ಲಿ ಬೆಟ್ಟಗುಡ್ಡ ಹತ್ತಿಯೇ ಅಲ್ಲಿಗೆ ತೆರಳಬೇಕು. ತಲ-ತಲಾಂತರಗಳಿಂದ ಯಾವುದೇ ನಿರ್ಬಂಧ ಇಲ್ಲದೆ ದೇವರ ದರ್ಶನ ಪಡೆಯುತ್ತಿದ್ದ ಭಕ್ತರಿಗೆ ಇದೀಗ ಅರಣ್ಯ ಇಲಾಖೆ ಟ್ರಕ್ಕಿಂಗ್ ನಿಷೇಧ ಹೆಸರಿನಲ್ಲಿ ನಿರ್ಬಂಧ ಹೇರುವ ಮೂಲಕ ಲಕ್ಷಾಂತರ ಭಕ್ತರ ಭಾವನೆಗಳಿಗೆ ಧಕ್ಕೆ ತಂದಿದೆ ಎಂಬ ಆರೋಪ ಕೇಳಿ ಬಂದಿದೆ.

ನಾಗಮಲೆಗೆ ಹೋಗುವ ಭಕ್ತರಿಗೆ ಶಾಕ್​​​! ಟ್ರಕ್ಕಿಂಗ್​ಗೆ ನಿರ್ಬಂಧ ವಿಧಿಸಿದ ಅರಣ್ಯ ಇಲಾಖೆ
ನಾಗಮಲೆ ಟ್ರಕ್ಕಿಂಗ್​ ಬಂದ್​
Follow us on

ಚಾಮರಾಜನಗರ, ಫೆ.27:  77 ಮಲೆಗಳನ್ನು ಹೊಂದಿರುವ ಮಹದೇಶ್ವರ ಬೆಟ್ಟದಲ್ಲಿ ನಾಗಮಲೆ(Nagamale)ಯು ಒಂದು. ಮಹದೇಶ್ವರ, ಈಗಿರುವ ನಡುಮಲೆಯಿಂದ ತೆರಳಿ ನಾಗಮಲೆಯಲ್ಲಿ ತಪಸ್ಸು ಮಾಡಿ ಇಲ್ಲಿಯೇ ನೆಲೆಸಿದ್ದಾನೆ ಎಂಬ ಪುರಾಣವಿದೆ. ತಪಸ್ಸು ಮಾಡುವಾಗ ಹಾವೊಂದು ಹೆಡೆ ಬಿಚ್ಚಿ ನೆರಳು ನೀಡಿತ್ತೆಂದು ಭಕ್ತರ ನಂಬಿಕೆಯಾಗಿದ್ದು, ಇದಕ್ಕೆ ಪೂರಕವಾಗಿ ಇಲ್ಲಿ ಹಾವಿನ ಹೆಡೆ ಆಕಾರದ ಬೃಹತ್ ಬಂಡೆ ಇದೆ. ಅದರಂತೆ ಭಕ್ತರ ಪಾಲಿನ ಧಾರ್ಮಿಕ ಕ್ಷೇತ್ರವಾಗಿರುವ ನಾಗಮಲೆ, ಒಂದು ರೀತಿಯಲ್ಲಿ ಚಾರಣ ಪ್ರದೇಶವೂ ಹೌದು. ಮಹದೇಶ್ವರ ಬೆಟ್ಟದಿಂದ 15 ಕಿಲೋಮೀಟರ್ ದೂರ ಇರುವ ನಾಗಮಲೆಗೆ ಕಾಲ್ನಡಿಗೆಯಲ್ಲೇ ಬೆಟ್ಟವನ್ನು ಹತ್ತಿ, ಇಳಿದು ಹೋಗಬೇಕು. ಮಹದೇಶ್ವರ ಬೆಟ್ಟಕ್ಕೆ ಬರುವ ಭಕ್ತರು ನಾಗಮಲೆಗು ಹೋಗುವುದು ವಾಡಿಕೆ. ದೇವರ ದರ್ಶನ ಪಡೆಯಲು ಭಕ್ತರು ನಾಗಮಲೆಗೆ ತೆರಳುತ್ತಾರೆಯೇ ಹೊರತು ಯಾರೂ ಸಹ ಟ್ರಕ್ಕಿಂಗ್ ಹೆಸರಿನಲ್ಲಿ ಹೋಗುವುದಿಲ್ಲ. ಆದರೆ, ಅರಣ್ಯ ಇಲಾಖೆ ಇಲ್ಲಿ ಚಾರಣ ನಿಷೇಧಿಸಿರುವುದರಿಂದ ನಾಗಮಲೆಯಲ್ಲಿ ನೆಲೆಸಿರುವ ಮಹದೇಶ್ವರನ ದರ್ಶನಕ್ಕೆ ಬ್ರೇಕ್ ಬಿದ್ದಿದೆ.

ಇನ್ನು ಚಾರಣ ನಿಷೇಧದಿಂದ ತೊಳಸೀಕೆರೆ, ಪಡಿಸಲನತ್ತ, ಇಂಡಿಗನತ್ತ, ನಾಗಮಲೆ ಗ್ರಾಮಸ್ಥರ ಸಂಕಷ್ಟಕ್ಕೆ ಕಾರಣವಾಗಿದೆ. ನಾಗಮಲೆ ಹೋಗುವ ಭಕ್ತರನ್ನ ನಂಬಿ ಅಂಗಡಿ, ಮುಗ್ಗಟ್ಟು ಹಾಗೂ ಜೀಪ್​ಗಳನ್ನು ತಂದಿದ್ದಾರೆ. ಮಹದೇಶ್ವರ ಬೆಟ್ಟದಿಂದ ಜೀಪ್ ಗಳ ಮೂಲಕ ನಾಗಮಲೆಯತ್ತ ಜನರನ್ನು ಕರೆದುಕೊಂಡು ಹೋಗುತ್ತಿದ್ದರು.ಇದೀಗ ಅವರ ಉದ್ಯೋಗ ಕಿತ್ತುಕೊಳ್ಳುವ ಜೊತೆಗೆ ಜನರ ಬದುಕನ್ನು ಮೂರಾಬಟ್ಟೆ ಮಾಡುವ ಕೆಲಸಕ್ಕೆ ಅರಣ್ಯ ಇಲಾಖೆ ಕೈ ಹಾಕಿದೆ. ಬರುವ ಭಕ್ತಾಧಿಗಳನ್ನು ನಂಬಿ ಜೀವನ ಮಾಡುತ್ತಿದ್ದೇವೂ, ಇದೀಗ ಮುಂದೇನು ಎಂದು ದಿಕ್ಕೆ ತೋಚದಂತಾಗಿದೆ ಎಂದು ಆಕ್ರೋಶ ಹೊರ ಹಾಕುತ್ತಿದ್ದಾರೆ.

ಇದನ್ನೂ ಓದಿ:ಸದ್ಯಕ್ಕೆ ಚಾರಣಿಗರಿಗೆ ಕುಮಾರಪರ್ವತ ಬಂದ್​; ಆದೇಶ ಉಲ್ಲಂಘಿಸಿದ್ರೆ ಅರಣ್ಯ ಇಲಾಖೆ ಕಠಿಣ ಕ್ರಮದ ಎಚ್ಚರಿಕೆ

ಸದ್ಯಕ್ಕೆ ನಾಗಮಲೆಗೆ ಅರಣ್ಯ ಇಲಾಖೆ ನಿರ್ಬಂಧ ವಿಧಿಸಿದ್ದು, ಭಕ್ತರು ಹಾಗೂ ಸ್ಥಳೀಯರ ಆಕ್ರೋಶಕ್ಕೆ ಕಾರಣವಾಗಿದೆ. ಚಾರಣಿಗರ ಮೇಲೆ ನಿಗಾಯಿಡಲೂ ಒಂದು ಬುಕ್ಕಿಂಗ್ ಆ್ಯಪ್ ತರಲೂ ಅರಣ್ಯ ಇಲಾಖೆ ಪ್ಲ್ಯಾನ್ ಮಾಡಿದೆ. ಆದ್ರೆ, ಸ್ಥಳೀಯ ಕುಟುಂಬಗಳ ಉದ್ಯೋಗಕ್ಕೆ ಕತ್ತರಿ ಹಾಕಿ ಬದುಕು ಮೂರಾಬಟ್ಟೆ ಮಾಡಲೂ ಹೊರಟಿದೆ. ಇನ್ನಾದರೂ ಎಚ್ಚೆತ್ತು ಅರಣ್ಯ ಇಲಾಖೆ, ಸ್ಥಳೀಯರ ಹಾಗೂ ಭಕ್ತರ ಪರ ನಿಲ್ಲುತ್ತಾ ಎನ್ನುವುದನ್ನು ಕಾದು ನೋಡಬೇಕಾಗಿದೆ.

ರಾಜ್ಯದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ