
ಚಾಮರಾಜನಗರ, (ಆಗಸ್ಟ್ 12): ಜಿಲ್ಲೆಯ ಮಲೆ ಮಹದೇಶ್ವರ ವನ್ಯಧಾಮದಲ್ಲಿ (Malai Mahadeshwara Wildlife Sanctuary) 5 ಹುಲಿಗಳ (Tigers) ಸಾವು ಪ್ರಕರಣ ಸಾಕಷ್ಟು ಸಂಚಲನ ಸೃಷ್ಟಿಸಿತ್ತು. ಈ ಪ್ರಕರಣ ರಾಷ್ಟ್ರ ಮಟ್ಟದಲ್ಲಿ ಭಾರೀ ಸುದ್ದಿಯಾಗಿತ್ತು. ಈ ಘಟನೆ ಮಾಸುವ ಮುನ್ನವೇ ಅದೇ ಚಾಮರಾಜನಗರ (chamarajanagar) ಜಿಲ್ಲೆಯಲ್ಲಿ ಮತ್ತೆರಡು ಹುಲಿ ಮರಿಗಳು ಸಾವನ್ನಪ್ಪಿರುವುದು ಬೆಳಕಿಗೆ ಬಂದಿದೆ. ಕಾವೇರಿ ವನ್ಯಧಾಮದ ಹೊಳೆಮೂರ್ದಟ್ಟಿ ಗಸ್ತಿನ ಕಿರುಬನಕಲ್ಲುಗುಡ್ಡ ಬಳಿ ಎರಡು ಹುಲಿ ಮರಿಗಳ ಸಾವನ್ನಪ್ಪಿದ್ದು, ಹಸಿವಿನಿಂದ ನಿತ್ರಾಣಗೊಂಡು ಮರಿಗಳು ಮೃತಪಟ್ಟಿರುವ ಸಾಧ್ಯತೆಗಳಿವೆ ಎಂದು ಶಂಕಿಸಲಾಗಿದೆ.
ಚಾಮರಾಜನಗರ ಜಿಲ್ಲೆಯ ಹನೂರು ತಾಲೂಕು ವ್ಯಾಪ್ತಿಯ ಹೊಳೆಮೂರ್ದಟ್ಟಿ ಗಸ್ತಿನ ಕಿರುಬನಕಲ್ಲುಗುಡ್ಡ ಬಳಿ 10 ದಿನದ ಹಿಂದೆಯೇ 1 ಹೆಣ್ಣು, 1 ಗಂಡು ಹುಲಿ ಮರಿ ಸಾವನ್ನಪ್ಪಿರುವುದು ಈಗ ಬೆಳಕಿಗೆ ಬಂದಿದೆ. ಸಿಬ್ಬಂದಿ ಗಸ್ತಿನ ವೇಳೆ ಹುಲಿ ಮರಿ ಮೃತಪಟ್ಟಿರುವುದು ಕಂಡುಬಂದಿದೆ. ತಾಯಿಯಿಂದ ಮರಿಗಳು ಬೇರ್ಪಟ್ಟು ಹಸಿವಿನಿಂದ ನಿತ್ರಾಣಗೊಂಡು ಮೃತಪಟ್ಟಿವೆ ಎಂದು ಹೇಳಲಾಗುತ್ತಿದೆ. ಎರಡು ಮೂರು ದಿನಗಳ ವ್ಯತ್ಯಾಸದಲ್ಲಿ ಹುಲಿ ಮರಿಗಳ ಸಾವನ್ನಪ್ಪಿವೆ ಎನ್ನಲಾಗಿದೆ.
ಅರಣ್ಯ ಸಿಬ್ಬಂದಿ ಗಸ್ತಿನ ವೇಳೆ ಹುಲಿ ಮರಿಗಳ ಕಳೇಬರ ಪತ್ತೆಯಾಗಿದೆ. ಅಂದಹಾಗೆ ಈ ಹುಲಿಮರಿಗಳು ಕೇವಲ 15 ದಿನಗಳ ಹಿಂದೆ ಜನಸಿದ್ದವಾಗಿವೆ. ಸದ್ಯ, ಹುಲಿ ಮರಿಗಳ ಮರಣೋತ್ತರ ಪರೀಕ್ಷೆ ಮಾಡಲಾಗಿದ್ದು, ತಾಯಿಯಿಂದ ಬೇರ್ಪಟ್ಟ ಹಿನ್ನೆಲೆ ಹಾಲಿಲ್ಲದ ಹಸಿನಿಂದ ಬಳಲಿ ಮೃತಪಟ್ಟಿವೆ ಎಂದು ಅರಣ್ಯಾಧಿಕಾರಿಗಳು ಮಾಹಿತಿ ನೀಡಿದ್ದಾರೆ.
ಇದೇ ಜೂನ್ 26ರಂದು ಮಲೆಮಹದೇಶ್ವರ ವನ್ಯಜೀವಿ ವಿಭಾಗದ ಹೂಗ್ಯಂ ವನ್ಯಜೀವಿ ವಲಯದ ಮೀಣ್ಯಂ ಬಳಿ ಐದು ಹುಲಿಗಳು ವಿಷಪ್ರಾಷನದಿಂದ ಮೃತಪಟ್ಟಿದ್ದವು. ಈ ಸಂಬಂಧ ಈಗಾಗಲೇ ಕೆಲವರನ್ನು ಅರೆಸ್ಟ್ ಮಾಡಿ ಜೈಲಿಗೆ ಕಳುಹಿಸಲಾಗಿದೆ. ಈ ಆಘಾರಕಾರಿ ಘಟನೆ ಬೆನ್ನಲ್ಲೇ ಇದೀಗ ಮತ್ತೆರಡು ಹುಲಿ ಮರಿಗಳು ಸಾವನ್ನಪ್ಪಿದ್ದು ಪ್ರಾಣಿಪ್ರಿಯರು ಆಘಾತ ವ್ಯಕ್ತಪಡಿಸಿದ್ದಾರೆ.