ಚಾಮರಾಜನಗರ: ದಲಿತ ಮಹಿಳೆ ನೀರು ಕುಡಿದ ಟ್ಯಾಂಕ್ ಖಾಲಿ ಮಾಡಿಸಿ, ಗೋಮೂತ್ರ ಸಿಂಪಡನೆ ವಿಡಿಯೊ ವೈರಲ್

| Updated By: ಆಯೇಷಾ ಬಾನು

Updated on: Nov 20, 2022 | 12:44 PM

ತೊಂಬೆಯಲ್ಲಿನ ನೀರನ್ನು ದಲಿತ ಮಹಿಳೆ ಕುಡಿದ ಕಾರಣಕ್ಕೆ ನೀರು ಸಂಪೂರ್ಣ ಖಾಲಿ ಮಾಡಿ ತೊಂಬೆಗೆ ಗೋಮೂತ್ರ ಸಿಂಪಡಿಸಲಾಗಿದೆ ಎಂಬ ಬರಹ ಜಾಲತಾಣದಲ್ಲಿ ವೈರಲ್ ಆಗಿದೆ.

ಚಾಮರಾಜನಗರ: ದಲಿತ ಮಹಿಳೆ ನೀರು ಕುಡಿದ ಟ್ಯಾಂಕ್ ಖಾಲಿ ಮಾಡಿಸಿ, ಗೋಮೂತ್ರ ಸಿಂಪಡನೆ ವಿಡಿಯೊ ವೈರಲ್
ದಲಿತ ಮಹಿಳೆ ನೀರು ಕುಡಿದ ಟ್ಯಾಂಕ್ ಖಾಲಿ ಮಾಡಿಸಿ, ಗೋಮೂತ್ರ ಸಿಂಪಡನೆ ವಿಡಿಯೊ ವೈರಲ್
Follow us on

ಚಾಮರಾಜನಗರ: ಜಿಲ್ಲೆಯಲ್ಲಿ ಅಸ್ಪೃಶ್ಯತೆ ಆಚರಣೆ ಇನ್ನೂ ಜೀವಂತವಿದೆ. ದಲಿತ ಮಹಿಳೆಯೊಬ್ಬರು ನೀರು ಕುಡಿದಿದ್ದಕ್ಕೆ ತೊಂಬೆಯಲ್ಲಿನ(ಟ್ಯಾಂಕ್) ನೀರು ಖಾಲಿ ಮಾಡಲಾಗಿದೆ. ಚಾಮರಾಜನಗರ ತಾಲೂಕಿನ ಹೆಗ್ಗೊಠಾರ ಗ್ರಾಮದಲ್ಲಿ ನಡೆದಿದೆ‌ ಎನ್ನಲಾದ ವಿಡಿಯೋ ಸದ್ಯ ವೈರಲ್ ಆಗಿದೆ.

ಗ್ರಾಮದ ವೀರಶೈವ ಬೀದಿಯಲ್ಲಿ ತೊಂಬೆಯಲ್ಲಿನ ನೀರನ್ನು ದಲಿತ ಮಹಿಳೆ ಕುಡಿದಿದ್ದರು. ಈ ಕಾರಣಕ್ಕೆ ನೀರು ಸಂಪೂರ್ಣ ಖಾಲಿ ಮಾಡಿ ತೊಂಬೆಗೆ ಗೋಮೂತ್ರ ಸಿಂಪಡಿಸಲಾಗಿದೆ ಎಂಬ ಬರಹ ಜಾಲತಾಣದಲ್ಲಿ ವೈರಲ್ ಆಗಿದೆ. ವಿಡಿಯೋ ಆಧಾರದ ಮೇಲೆ ತಹಶೀಲ್ದಾರ್ ಪರಿಶೀಲನೆಗೆ ಮುಂದಾಗಿದ್ದಾರೆ. ಗ್ರಾಮಕ್ಕೆ ಆರ್​​ಐ, ವಿಎ ಕಳುಹಿಸಿ ವರದಿ ತರಿಸಿಕೊಂಡಿದ್ದಾರೆ. ಸಮಾಜ ಕಲ್ಯಾಣ ಅಧಿಕಾರಿಗಳು ಇಂದು ಗ್ರಾಮಕ್ಕೆ ಭೇಟಿ ನೀಡಲಿದ್ದಾರೆ. ಅಧಿಕಾರಿಗಳ ವರದಿ ಬಳಿಕ ಮುಂದಿನ ಕ್ರಮ ಕೈಗೊಳ್ಳಲಾಗುವುದು. ಘಟನೆ ನಿಜವಾಗಿದ್ದರೆ ತಪ್ಪಿತಸ್ಥರ ವಿರುದ್ಧ FIR ದಾಖಲಿಸಲಾಗುತ್ತೆ ಎಂದು ಟಿವಿ9ಗೆ ಚಾಮರಾಜನಗರ ತಹಶೀಲ್ದಾರ್ ಬಸವರಾಜ್ ಮಾಹಿತಿ ನೀಡಿದ್ದಾರೆ.

ಸಮಾಜದಲ್ಲಿ ಇಂತಹ ಘಟನೆಗಳು ಆಗಬಾರದು

ಇನ್ನು ಈ ಘಟನೆ ಸಂಬಂಧ ಚಾಮರಾಜನಗರ ಜಿಲ್ಲಾ ಉಸ್ತುವಾರಿ ಸಚಿವ ವಿ.ಸೋಮಣ್ಣ ಪ್ರತಿಕ್ರಿಯೆ ನೀಡಿದ್ದಾರೆ. ಗ್ರಾಮಕ್ಕೆ ಸಮಾಜ ಕಲ್ಯಾಣಾಧಿಕಾರಿಗಳನ್ನು ಕಳುಹಿಸಿ ವಾಸ್ತಾವಾಂಶ ವರದಿ ನೀಡಲು ಸೂಚಿಸಿದ್ದೇನೆ. ವರದಿ ಬಂದ ಬಳಿಕ ಮುಂದಿನ ಕ್ರಮ ಕೈಗೊಳ್ಳಲಾಗುವುದು. ಸಮಾಜದಲ್ಲಿ ಇಂತಹ ಘಟನೆಗಳು ಆಗಬಾರದು. ಇದು ನೋವಿನ ಸಂಗತಿ. ಎಲ್ಲರೂ ಒಂದೇ ತಕ್ಕಡಿಯಲ್ಲಿ ಬದುಕಬೇಕಾಗಿದೆ ಎಂದರು.

ಹುಲ್ಲೆಮನೆ ಕುಂದೂರು ಗ್ರಾಮದಲ್ಲಿ ಕಾಡಾನೆ ದಾಳಿಗೆ ಮಹಿಳೆ ಬಲಿ

ಚಿಕ್ಕಮಗಳೂರು ಜಿಲ್ಲೆ ಮೂಡಿಗೆರೆ ತಾಲೂಕಿನ ಹುಲ್ಲೆಮನೆ ಕುಂದೂರು ಗ್ರಾಮದಲ್ಲಿ ಕಾಡಾನೆ ದಾಳಿಗೆ ಶೋಭಾ(45) ಸ್ಥಳದಲ್ಲೇ ಮೃತಪಟ್ಟಿದ್ದಾರೆ. ಗದ್ದೆಯಲ್ಲಿ ಹುಲ್ಲುಕೊಯ್ಯಲು ತೆರಳಿದ್ದಾಗ ಘಟನೆ ನಡೆದಿತ್ತು. ಮೂಡಿಗೆರೆ ತಾಲೂಕಿನಲ್ಲಿ ಕಾಡಾನೆ ದಾಳಿಗೆ 3 ತಿಂಗಳಲ್ಲಿ ಮೂವರು ಬಲಿಯಾಗಿದ್ದಾರೆ. ಕಾಡಾನೆ ಸೆರೆ ಹಿಡಿಯದ ಅರಣ್ಯ ಇಲಾಖೆ ವಿರುದ್ಧ ಸ್ಥಳೀಯರು ಆಕ್ರೋಶ ಹೊರ ಹಾಕಿದ್ದಾರೆ.

ಇದನ್ನೂ ಓದಿ: ಮಂಗಳೂರು: ಕಂಕನಾಡಿ ಬಳಿ ಚಲಿಸುತ್ತಿದ್ದ ಆಟೊ ನಿಗೂಢ ಸ್ಪೋಟ: ಪ್ರಯಾಣಿಕನ ಹೇಳಿಕೆಯಿಂದ ಹೆಚ್ಚಾದ ಅನುಮಾನ

ಕೌಟುಂಬಿಕ ಕಲಹ; ಮಹಿಳೆ ಆತ್ಮಹತ್ಯೆ

ಕಲಬುರಗಿ: ನಗರದ ಕೋಟನೂರ್.ಡಿ ಬಡಾವಣೆಯ ಮನೆಯಲ್ಲಿ ಫ್ಯಾನ್​ಗೆ ನೇಣು ಬಿಗಿದುಕೊಂಡು ಗಂಗಮ್ಮ(34) ಆತ್ಮಹತ್ಯೆ ಮಾಡಿಕೊಂಡಿದ್ದಾರೆ. ಕೌಟುಂಬಿಕ ಕಲಹ ಹಿನ್ನೆಲೆ ಆತ್ಮಹತ್ಯೆ ಮಾಡಿಕೊಂಡಿರುವ ಶಂಕೆ ವ್ಯಕ್ತವಾಗಿದೆ. ವಿಶ್ವವಿದ್ಯಾಲಯ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ಜಿಲ್ಲಾಧಿಕಾರಿ ಕಚೇರಿ ಆವರಣದಲ್ಲಿ ಕಾಣಿಸಿಕೊಂಡ ಹಾವು

ಉತ್ತರ ಕನ್ನಡ ಜಿಲ್ಲೆ ಕಾರವಾರದ ಜಿಲ್ಲಾಧಿಕಾರಿ ಕಚೇರಿ ಹಿಂಭಾಗದ ಕ್ವಾರ್ಟರ್ಸ್‌ನಲ್ಲಿ ಹಾವು ಕಾಣಿಸಿಕೊಂಡಿದೆ. ಅಂದಾಜು 4 ಅಡಿ ಉದ್ದದ ಕೆರೆ ಹಾವು ಕಂಡು ಜನ ಆತಂಕಗೊಂಡಿದ್ದು ಅರಣ್ಯ ಸಿಬ್ಬಂದಿಗೆ ಮಾಹಿತಿ ನೀಡಿದ್ದಾರೆ. ಅರಣ್ಯ ಸಿಬ್ಬಂದಿ ಗೋಪಾಲ್ ಅವರು ಕೆರೆ ಹಾವು ರಕ್ಷಣೆ ಮಾಡಿ ಕಾಡಿಗೆ ಬಿಟ್ಟಿದ್ದಾರೆ.

ಆತ್ಮಹತ್ಯೆ ಸಹಾಯವಾಣಿ

ಕಾರಣ ಯಾವುದೇ ಇರಲಿ, ಆತ್ಮಹತ್ಯೆಯ ನಿರ್ಧಾರ ಬೇಡ. ಆತ್ಮಹತ್ಯೆಯ ಭಾವನೆಗಳು ಮನಸ್ಸಿನಲ್ಲಿ ಸುಳಿಯುತ್ತಿದ್ದರೆ ನಿಮ್ಮ ಆಪ್ತರೊಂದಿಗೆ ಮಾತನಾಡಿ. ಸಾಧ್ಯವಾಗದಿದ್ದರೆ ಆತ್ಮಹತ್ಯೆ ಸಹಾಯವಾಣಿಗೆ ಕರೆ ಮಾಡಿ. ಸಹಾಯವಾಣಿ ಸಂಖ್ಯೆ – 9152987821

Published On - 10:14 am, Sun, 20 November 22