ಮುಜರಾಯಿ ಇಲಾಖೆ ಹಾಗೂ ಟ್ರಸ್ಟಿಗಳ ನಡುವಿನ ಮುಸುಕಿನ ಗುದ್ದಾಟ; ಶ್ರೀ ಉರುಕಾತೇಶ್ವರಿ ಅಮ್ಮನವರ ದೇವಸ್ಥಾನಕ್ಕೆ ಬೀಗ

| Updated By: ಆಯೇಷಾ ಬಾನು

Updated on: Feb 07, 2024 | 3:02 PM

ಅಪ್ಪ ಅಮ್ಮನ ಜಗಳದಲ್ಲಿ ಕೂಸು ಬಡವಾಯ್ತು ಎಂಬಂತೆ ಮುಜರಾಯಿ ಇಲಾಖೆ ಹಾಗೂ ಟ್ರಸ್ಟಿಗಳ ನಡುವಿನ ಮುಸುಕಿನ ಗುದ್ದಾಟಕ್ಕೆ ಉಮ್ಮತ್ತೂರು ಗ್ರಾಮಸ್ಥರು ತಾಯಿಯ ದರ್ಶನದಿಂದ ವಂಚಿತರಾಗಿದ್ದಾರೆ. ಭಕ್ತರು ದೇವಸ್ಥಾನ ಮುಚ್ಚಿದ್ದರಿಂದ ಬಾಗಿಲ ಮುಂದೆ ನಿಂತು ದೇವಿಗೆ ಪೂಜೆ ಸಲ್ಲಿಸಿ ಬೇಸರದಿಂದಲೇ ಹಿಂದಿರುಗುತ್ತಿದ್ದಾರೆ.

ಮುಜರಾಯಿ ಇಲಾಖೆ ಹಾಗೂ ಟ್ರಸ್ಟಿಗಳ ನಡುವಿನ ಮುಸುಕಿನ ಗುದ್ದಾಟ; ಶ್ರೀ ಉರುಕಾತೇಶ್ವರಿ ಅಮ್ಮನವರ ದೇವಸ್ಥಾನಕ್ಕೆ ಬೀಗ
ಶ್ರೀ ಉರುಕಾತೇಶ್ವರಿ ಅಮ್ಮನವರ ದೇವಸ್ಥಾನ
Follow us on

ಚಾಮರಾಜನಗರ, ಫೆ.07: ಮುಜರಾಯಿ ಇಲಾಖೆ ಹಾಗೂ ಟ್ರಸ್ಟಿಗಳ ನಡುವಿನ ಮುಸುಕಿನ ಗುದ್ದಾಟಕ್ಕೆ ದೇವಾಲಯಕ್ಕೆ ಬೀಗ ಬಿದ್ದಿದ್ದು ಭಕ್ತರಿಗಿಲ್ಲ ದೇವಿಯ ದರ್ಶನ ಇಲ್ಲದಂತಾಗಿದೆ. ಚಾಮರಾಜನಗರ ತಾಲೂಕಿನ ಉಮ್ಮತ್ತೂರಿನಲ್ಲಿರುವ ಶ್ರೀ ಉರುಕಾತೇಶ್ವರಿ ಅಮ್ಮನವರ (Urukatheshwari Ammanavar) ದೇವಸ್ಥಾನದ ಕೀಯನ್ನು ಮುಜರಾಯಿ ಇಲಾಖೆಗೆ ನೀಡುವಂತೆ ನ್ಯಾಯಾಲಯ ಅದೇಶ ನೀಡಿದೆ. ಈ ಹಿನ್ನೆಲೆಯಲ್ಲಿ ಮುಜರಾಯಿ ಇಲಾಖೆ ದೇವಸ್ಥಾನದ ಬಾಗಿಲ ಬೀಗ ತೆಗೆದಿಲ್ಲ. ಈ ಕಾರಣ ಭಕ್ತರು ದೇವಿಯ ದರ್ಶನ ಇಲ್ಲದೇ ಹೊರಗಿನಿಂದಲೇ ಪೂಜೆ ಸಲ್ಲಿಸಿ ಹೊರಡುವಂತಾಗಿದೆ. ಅಪ್ಪ ಅಮ್ಮನ ಜಗಳದಲ್ಲಿ ಕೂಸು ಬಡವಾಯ್ತು ಎಂಬಂತೆ ಮುಜರಾಯಿ ಇಲಾಖೆ ಹಾಗೂ ಟ್ರಸ್ಟಿಗಳ ನಡುವಿನ ಮುಸುಕಿನ ಗುದ್ದಾಟಕ್ಕೆ ಉಮ್ಮತ್ತೂರು ಗ್ರಾಮಸ್ಥರು ತಾಯಿಯ ದರ್ಶನದಿಂದ ವಂಚಿತರಾಗಿದ್ದಾರೆ.

ಗ್ರಾಮಸ್ಥರೆಲ್ಲ ಸೇರಿಕೊಂಡು ಉಮ್ಮತ್ತೂರು ಶ್ರೀ ಉರುಕಾತೇಶ್ವರಿ ಅಮ್ಮನ ದೇವಸ್ಥಾನದ ಟ್ರಸ್ಟ್ ಮಾಡಿದ್ದರು. ಆದರೆ ಟ್ರಸ್ಟ್​ನಿಂದ ದೇವಸ್ಥಾನದ ಕಾಣಿಕೆ ಹಣ ದುರುಪಯೋಗ ಆಗುತ್ತಿದೆ ಎಂಬ ಆರೋಪ ಕೇಳಿ ಬಂದಿದ್ದು ಈ ದೇವಸ್ಥಾನ ಮುಜರಾಯಿ ಇಲಾಖೆಗೆ ಸೇರಬೇಕೆಂಬ ಕೂಗು ಕೇಳಿ ಬಂದಿತ್ತು. ಸರ್ಕಾರ ಕೂಡ ಮಧ್ಯೆ ಪ್ರವೇಶಿಸಿ ದೇವಸ್ಥಾನ ಮುಜರಾಯಿ ಇಲಾಖೆಗೆ ಸೇರುವಂತೆ ನ್ಯಾಯಾಲಯದ ಮೊರೆ ಹೋಗಿತ್ತು. ಕೊನೆಗೆ ನ್ಯಾಯಾಲಯದ ಆದೇಶದಂತೆ 2022 ರಲ್ಲಿ ದೇವಸ್ಥಾನ ಮುಜರಾಯಿ ಇಲಾಖೆ ವಶಕ್ಕೆ ನೀಡಲಾಯಿತು. ಇದನ್ನು ಪ್ರಶ್ನಿಸಿ ಟ್ರಸ್ಟ್ ಸದಸ್ಯರು ಹೈಕೋರ್ಟ್ ಮೆಟ್ಟಿಲೇರಿದ್ದರು. ಇದೀಗ ದೇವಸ್ಥಾನದ ಹಣಕಾಸು ಸೇರಿದಂತೆ ಸಮಗ್ರ ಆಡಳಿತವನ್ನು ಟ್ರಸ್ಟ್‌ಗೆ ವಹಿಸುವಂತೆ ಹೈಕೋರ್ಟ್ ಆದೇಶ ನೀಡಿದೆ. ಈ ಆದೇಶವನ್ನು ಮರುಪರಿಶೀಲಿಸುವಂತೆ ಗ್ರಾಮದ ಮತ್ತೊಂದು ಗುಂಪು ಮೇಲ್ಮನವಿ ಸಲ್ಲಿಸಲು ಸಿದ್ದತೆ ಮಾಡಿಕೊಂಡಿದೆ. ಈ ಮುಸುಕಿನ ಗುದ್ದಾಟದಲ್ಲಿ ದೇವಸ್ಥಾನಕ್ಕೆ ಬೀಗ ಹಾಕಲಾಗಿದೆ. ದೇವಾಲಯದ ಬಳಿ ಮುಂಜಾಗ್ರತಾ ಕ್ರಮವಾಗಿ ಗ್ರಾಮದಲ್ಲಿ ಬಿಗಿ ಪೊಲೀಸ್ ಬಂದೋಬಸ್ತ್ ಕೈಗೊಳ್ಳಲಾಗಿದೆ.

ಇದನ್ನೂ ಓದಿ: ₹ 65 ಕೋಟಿ ವಂಚನೆ ಪ್ರಕರಣ: ಸಂಸತ್ ಭವನದಲ್ಲಿ ದೋಷವಿದೆ ಎಂದು ಹೇಳಿದ್ದ ವಾಸ್ತು ತಜ್ಞ ಬಂಧನ

ಮುಚ್ಚಿದ ಬಾಗಿಲಿಗೆ ಪೂಜೆ ಸಲ್ಲಿಸಿ ಬೇಸರದಿಂದ ಹೋರಟ ಭಕ್ತರು

ಸಹಸ್ರಾರು ಭಕ್ತರ ಹೊಂದಿರುವ ಆರಾಧ್ಯ ದೇವತೆ ಉರುಕಾತೇಶ್ವರಿ ದರ್ಶನಕ್ಕೆ ರಾಜ್ಯ, ಹೊರ ರಾಜ್ಯದಿಂದ ಲಕ್ಷಾಂತರ ಮಂದಿ ಭೇಟಿ ನೀಡುತ್ತಿದ್ದಾರೆ. ಪ್ರತಿ ತಿಂಗಳು ಮೊದಲ ಮಂಗಳವಾರ ಪೂಜೆ ಸಲ್ಲಿಸಲು ಆಗಮಿಸಿದ್ದ ಭಕ್ತರು ದೇವಸ್ಥಾನ ಮುಚ್ಚಿದ್ದರಿಂದ ಬಾಗಿಲ ಮುಂದೆ ನಿಂತು ದೇವಿಗೆ ಪೂಜೆ ಸಲ್ಲಿಸಿ ಬೇಸರದಿಂದಲೇ ಹಿಂದಿರುಗುತ್ತಿದ್ದಾರೆ.

ರಾಜ್ಯದ ಪ್ರಮುಖ ಸುದ್ದಿಗಳನ್ನು ಓದಲು ಇದರ ಮೇಲೆ ಕ್ಲಿಕ್ ಮಾಡಿ

Published On - 2:31 pm, Wed, 7 February 24