ಚಾಮರಾಜನಗರ: ವಿಶ್ವವನ್ನೇ ಕಾಡಿದ್ದ ಕೊರೊನಾ (Coronavirus) ಸದ್ಯ ಮಾಯವಾಗಿದೆ ನಿಜ. ಆದ್ರೆ ಕೊರೊನಾ ಬಳಿಕವೂ ಸಂಕಷ್ಟ ಮಾತ್ರ ತಪ್ಪಿಲ್ಲ. ಕೊರೊನಾ ಬಳಿಕ ಮಲೆ ಮಾದಪ್ಪನ(Male Mahadeshwara) ಆದಾಯ ದ್ವಿಗುಣವಾಗಿದೆ. ಎಂಟೇ ತಿಂಗಳಲ್ಲಿ 70 ಕೋಟಿ ಆದಾಯ ಬಂದಿದೆ. ಅಷ್ಟಕ್ಕೂ ಮಲೆಮಹದೇಶ್ವರನಿಗೆ ಭಕ್ತರ ಸಂಖ್ಯೆ ಹೆಚ್ಚಾಗಿದ್ದು, ಕೋಟಿ ಕೋಟಿ ಆದಾಯವೇ ಹರಿದು ಬರ್ತಿದೆ.
ಗಡಿ ಜಿಲ್ಲೆ ಚಾಮರಾಜನಗರದ (Chamarajanagara) ಹನೂರು ತಾಲೂಕಿನ ಬೆಟ್ಟದ ಮೇಲೆ ನೆಲೆಸಿರೋ ಭಕ್ತರ ಆರಾಧ್ಯದೈವ ಮಲೆ ಮಾದಪ್ಪನಿಗೆ ಲಕ್ಷಾಂತರ ಭಕ್ತರಿದ್ದಾರೆ . ಕರ್ನಾಟಕ ಮಾತ್ರವಲ್ಲದೆ ತಮಿಳುನಾಡಿನಿಂದಲೂ ಲಕ್ಷ ಲಕ್ಷ ಸಂಖ್ಯೆಯಲ್ಲಿ ಭಕ್ತರು ಬರ್ತಾರೆ. ವಿಷ್ಯ ಅಂದ್ರೆ ಇದೇ ಮಾದಪ್ಪ ಈಗ ಕೋಟ್ಯಾಧಿಪತಿಯಾಗಿದ್ದಾನೆ. ಅದರಲ್ಲೂ ಕೊರೊನಾ ಬಳಿಕ ಎಲರೂ ಸಂಕಷ್ಟಕ್ಕೆ ಜಾರಿದ್ರೆ ಮಾದಪ್ಪನ ಆದಾಯ ಮಾತ್ರ ದ್ವಿಗುಣವಾಗಿದೆ.
ಮಲೆ ಮಹದೇಶ್ವರ ಸನ್ನಿಧಿ ಕರ್ನಾಟಕದ ಎರಡನೇ ಶ್ರೀಮಂತ ಕ್ಷೇತ್ರ ಎನಿಸಿಕೊಂಡಿದ್ದು, ಕ್ಷೇತ್ರಕ್ಕೆ ಬರುವ ಆದಾಯ ಕೊರೊನಾ ನಂತರ ಶೇಕಡಾ 30 ರಿಂದ 40 ರಷ್ಟು ಹೆಚ್ಚಾಗಿದೆ. ಸದ್ಯ ದೇವಾಲಯಕ್ಕೆ ಮಾರ್ಚ್ ನಿಂದ ಈ ವರೆಗೆ 70 ಕೋಟಿ ರೂ. ಆದಾಯ ಬಂದಿದ್ದು, ಮುಂದಿನ ಮಾರ್ಚ್ ವರೆಗೆ 80 ಕೋಟಿ ದಾಟುವ ನಿರೀಕ್ಷೆ ಇದೆ. ಇದು ಇಷ್ಟು ವರ್ಷದಲ್ಲೇ ಅತಿ ಹೆಚ್ಚು ಆದಾಯ ಎನಿಸಿಕೊಂಡಿದೆ.
ಅಷ್ಟಕ್ಕೂ ದೇವಾಲಯಕ್ಕೆ ಪ್ರಮುಖವಾಗಿ ಬರುವಂತ ಆದಾಯ ಅಂದ್ರೆ ಹುಂಡಿ ಹಣ. ಸದ್ಯ ಬಂದಿರೋ ಆದಾಯದ ಪೈಕಿ 20 ಕೋಟಿಯಷ್ಟು ಹಣ ಹುಂಡಿ ಕಾಣಿಕೆಯಲ್ಲಿ ಬಂದರೆ, ಚಿನ್ನದ ರಥ ಹಾಗೂ ಇತರೆ ಸೇವೆಯಿಂದ 15 ಕೋಟಿಯಷ್ಟು ಆದಾಯ ಬಂದಿದೆ. ದೇವಾಲಯ ಪ್ರಸಾದ ಹಾಗೂ ಬಾಡಿಗೆ ರೂಪದಲ್ಲಿ 10 ಕೋಟಿಗೂ ಹೆಚ್ಚು ಹಣ ಸಂದಾಯವಾಗಿದೆ . ಇನ್ನು ದೇವಾಲಯ ಹೆಸರಿನಲ್ಲಿ ಬ್ಯಾಂಕ್ ನಲ್ಲಿರುವ ಠೇವಣಿಗೆ ಬಡ್ಡಿ ರೂಪದಲ್ಲಿ 10 ಕೋಟಿಯಷ್ಟು ಆದಾಯ ಬಂದಿದೆ . ಹೀಗೆ ಆರ್ಥಿಕ ವರ್ಷದಲ್ಲಿ ಈ ವರಗೆ ಸುಮಾರು 70 ಕೋಟಿ ರೂಪಾಯಿಯಷ್ಟು ಆದಾಯ ಬಂದಿದೆ.
ಒಟ್ಟಿನಲ್ಲಿ ಕೊರೊನಾ ಬಳಿಕ ಸಂಕಷ್ಟಕ್ಕೆ ಸಿಲುಕಿರೋ ಜನ ಮಾದಪ್ಪನ ಮೊರೆ ಹೋಗ್ತಿದ್ದಾರೆ. ಇದಕ್ಕೆ ಸಾಕ್ಷಿಯೇ ಕೊರೊನಾ ಬಳಿಕ ಹೆಚ್ಚಾಗಿರೋ ಭಕ್ತರ ಸಂಖ್ಯೆ. ಇದೇ ಭಕ್ತರಿಂದ ಎಂಟೇ ತಿಂಗಳಲ್ಲಿ 70 ಕೋಟಿ ಆದಾಯ ಬಂದಿದ್ದು, ಮುಂದಿನ ಮಾರ್ಚ್ ವೇಳೆಗೆ ಇದು 80 ಕೋಟಿ ದಾಟೋ ನಿರೀಕ್ಷೆ ಇದೆ .
ವರದಿ: ದಿಲೀಪ್ ಚೌಡಹಳ್ಳಿ ಟಿವಿ9, ಚಾಮರಾಜನಗರ.
ಇನ್ನಷ್ಟು ಸುದ್ದಿಗಾಗಿ ಇಲ್ಲಿ ಕ್ಲಿಕ್ಕಿಸಿ
Published On - 8:54 pm, Thu, 17 November 22