ಬೃಹತ್ ಮೆರವಣಿಗೆಯೊಂದಿಗೆ ಸಾಗಲಿರುವ ಚಾಮರಾಜಪೇಟೆ ಗಣೇಶ; ಅದ್ದೂರಿ ಮೆರವಣಿಗೆಗೆ ಸಕಲ ಸಿದ್ಧತೆ
ಚಾಮರಾಜಪೇಟೆ ಮೈದಾನದ ಪಕ್ಕದಲ್ಲಿ ಕೂರಿಸಿದ್ದ ಗಣೇಶನ ವಿಗ್ರಹದ ವಿಸರ್ಜನೆ ಇಂದು ನಡೆಯಲಿದ್ದು, ಅದ್ದೂರಿ ಹಾಗೂ ಬೃಹತ್ ಮೆರವಣಿಗೆ ನಡೆಸಲು ಗಣೇಶೋತ್ಸವ ಸಮಿತಿ ನಿರ್ಧರಿಸಿದೆ.
ಬೆಂಗಳೂರು: ಚಾಮರಾಜಪೇಟೆ ಮೈದಾನದಲ್ಲಿ ಯಥಾಸ್ಥಿತಿ ಕಾಯ್ದುಕೊಳ್ಳುವಂತೆ ಕೋರ್ಟ್ ಸೂಚಿಸಿದ ಪರಿಣಾಮ ಹಿಂದೂ ಸಂಘಟನೆಗಳು, ಗಣೇಶೋತ್ಸವ ಸಮಿತಿ ಮೈದಾನದ ಬಳಿ ಗಣೇಶನ ಮೂರ್ತಿಯನ್ನು ಕೂರಿಸಿದ್ದರು. ಅದರಂತೆ ಇಂದು ಅದ್ದೂರಿ ಮೆರವಣಿ ಮೂಲಕ ವಿಸರ್ಜನೆ ಕಾರ್ಯಕ್ರಮ ನಡೆಯಲಿದೆ. ಇದಕ್ಕಾಗಿ ಬೆಂಗಳೂರು ಗಣೇಶೋತ್ಸವ ಸಮಿತಿಯು ಸಕಲ ಸಿದ್ಧತೆ ನಡೆಸಿಕೊಂಡಿದ್ದು, ಪಾದರಾಯನಪುರದಿಂದ ಮೆರವಣಿಗೆ ಆರಂಭಿಸಲು ಸಮಿತಿ ನಿರ್ಧಾರಿಸಲಾಗಿದೆ.
ವಿರೋಧದ ನಡುವೆಯೂ ಮೈದಾನದ ಎದುರು 2ನೇ ಮುಖ್ಯರಸ್ತೆಯಲ್ಲಿರುವ ಅಯ್ಯಪ್ಪ ದೇಗುಲ ಬಳಿ ಗಣಪತಿಯನ್ನು ಪ್ರತಿಷ್ಠಾಪನೆ ಮಾಡಲಾಗಿತ್ತು. ಇದೀಗ ವಿಸರ್ಜನೆಗೆ ಸಿದ್ಧತೆ ನಡೆಸಲಾಗಿದ್ದು, ಮೆರವಣಿಗೆ ನಡೆಸಲು ಗೃಹ ಸಚಿವರ ಅನುಮತಿ ಸಿಕ್ಕಿದೆ ಎಂದು ಬೆಂಗಳೂರು ಗಣೇಶೋತ್ಸವ ಸಮಿತಿ ಹೇಳಿಕೊಳ್ಳುತ್ತಿದೆ. ಅದರಂತೆ ಸ್ಥಳೀಯ ಪೊಲೀಸರ ವಿರೋಧದ ಮೆರವಣಿಗೆ ನಡೆಯಲಿದೆ. ಈ ವೇಳೆ ಭಾರೀ ಹೈಡ್ರಾಮಾ ನಡೆಯುವ ಸಾಧ್ಯತೆಯೂ ಇದೆ. ಪಾದರಾಯನಪುರದಿಂದ 40ಕ್ಕೂ ಹೆಚ್ಚು ಗಣೇಶ ಮೂರ್ತಿಗಳ ಮೆರವಣಿಗೆ ನಡೆಸಲು ಯೋಜನೆ ಹಾಕಿಕೊಳ್ಳಲಾಗಿದ್ದು, ಚಾಮರಾಜಪೇಟೆ ಮತ್ತು ಪಾದರಾಯನಪುರದಿಂದ ಏಕಕಾಲಕ್ಕೆ ಮೆರವಣಿಗೆ ಆರಂಭಗೊಳ್ಳಲಿದೆ. ಕಳೆದ 7 ದಿನಗಳಿಂದ ಗಣೇಶನ್ನು ಕೂರಿಸಿ ಪೂಜೆ ಪುನಸ್ಕಾರಗಳನ್ನು ನಡೆಸಿಕೊಂಡು ಬರಲಾಗಿದ್ದು, ಮಧ್ಯಾಹ್ನ 12 ಗಂಟೆಯಿಂದ ಮೆರವಣಿಗೆ ಆರಂಭಗೊಳ್ಳಲಿದೆ.
ಮೆರವಣಿಗೆ ಯಾವ ಮಾರ್ಗದಲ್ಲಿ ಸಾಗಲಿದೆ?
ಚಾಮರಾಜಪೇಟೆಯಲ್ಲಿ ಪ್ರತಿಷ್ಠಾಪನೆ ಮಾಡಿದ ಎಲ್ಲ ಗಣೇಶ ಮೂರ್ತಿಗಳನ್ನು ಮುಖ್ಯ ಬೀದಿಗಳಲ್ಲಿ ಮೆರವಣಿಗೆ ನಡೆಸಿ ಬಳಿಕ ವಿಸರ್ಜನೆ ನಡೆಸಲಾಗುತ್ತಿದೆ. ಮುಖ್ಯ ಬೀದಿಗಳಲ್ಲಿ ಮೆರವಣಿಗೆ ನಡೆದ ನಂತರ ಚಾಮರಾಜಪೇಟೆಯ ಗಣೇಶ ಮೂರ್ತಿಗಳು ಮೈಸೂರು ಬ್ಯಾಂಕ್ ಸರ್ಕಲ್ ಬಳಿ ಸೇರಲಿದೆ. ಅಲ್ಲದೆ ಪಾದರಾಯನಪುರದಿಂದ ಹೊರಟ ಮೆರವಣಿಗೆಯು ಮಧ್ಯಾಹ್ನ 2 ಗಂಟೆಗೆ ಇದೇ ವೃತ್ತದ ಬಳಿ ಬಂದು ಒಟ್ಟು ಸೇರಲಿದೆ. ಬಿನ್ನಿಪೇಟೆಯ ಮೂರ್ತಿಗಳು ಸಹ ಮೈಸೂರು ಸರ್ಕಲ್ಗೆ ಬಂದು ಸೇರಲಿದ್ದು, ನಂತರ ಒಟ್ಟಾಗಿ ಅಲ್ಲಿಂದ ಮಧ್ಯಾಹ್ನ 2:30 ಬೃಹತ್ ಮೆರವಣಿಗೆ ಆರಂಭಗೊಳ್ಳಲಿದೆ. ನಂತರ 40ಕ್ಕೂ ಹೆಚ್ಚು ಗಣೇಶ ಮೆರವಣಿಗೆಯು ಟೌನ್ ಹಾಲ್ ಮುಂದೆ ಜಮಾಯಿಸಲಿದೆ.
ಮತ್ತಷ್ಟು ಬೆಂಗಳೂರು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ