ಚನ್ನಪಟ್ಟಣ, ಸಂಡೂರು ಬೈ ಎಲೆಕ್ಷನ್​: ಸಿಪಿ ಯೋಗೇಶ್ವರ್‌, ಅನ್ನಪೂರ್ಣ ತುಕಾರಾಂಗೆ ಕಾಂಗ್ರೆಸ್​ ಟಿಕೆಟ್‌

| Updated By: Ganapathi Sharma

Updated on: Oct 24, 2024 | 6:47 AM

ಚನ್ನಪಟ್ಟಣ ಉಪ ಚುನಾವಣೆಗೆ ಅಚ್ಚರಿಯ ಅಭ್ಯರ್ಥಿಯನ್ನು ಘೋಷಣೆ ಮಾಡುವುದಾಗಿ ಹೇಳಿದ್ದ ಕಾಂಗ್ರೆಸ್ ಹಾಗೆಯೇ ಮಾಡಿದೆ. ಮತ್ತೊಂದೆಡೆ, ಸಂಡೂರು ಕ್ಷೇತ್ರದಿಂದ ಸಂಸದ ತುಕಾರಾಂ ಅವರ ಪತ್ನಿ ಇ ಅನ್ನಪೂರ್ಣಗೆ ಟಿಕೆಟ್ ಘೋಷಿಸಿದ್ದು, ಶಿಗ್ಗಾಂವಿ ಕ್ಷೇತ್ರದ ಟಿಕೆಟ್ ಗೊಂದಲ ಮುಂದುವರಿದಿದೆ.

ಚನ್ನಪಟ್ಟಣ, ಸಂಡೂರು ಬೈ ಎಲೆಕ್ಷನ್​: ಸಿಪಿ ಯೋಗೇಶ್ವರ್‌, ಅನ್ನಪೂರ್ಣ ತುಕಾರಾಂಗೆ ಕಾಂಗ್ರೆಸ್​ ಟಿಕೆಟ್‌
ಚನ್ನಪಟ್ಟಣ, ಸಂಡೂರು ಬೈ ಎಲೆಕ್ಷನ್​: ಸಿಪಿ ಯೋಗೇಶ್ವರ್‌, ಅನ್ನಪೂರ್ಣ ತುಕಾರಾಂಗೆ ಕಾಂಗ್ರೆಸ್​ ಟಿಕೆಟ್‌
Follow us on

ಬೆಂಗಳೂರು, ಅಕ್ಟೋಬರ್ 24: ಚನ್ನಪಟ್ಟಣ ಉಪಚುನಾವಣೆ ಅಖಾಡದಲ್ಲಿ ಬುಧವಾರ ಮಹತ್ವದ ಬೆಳವಣಿಗೆಯಾಗಿದ್ದು, ಮಾಜಿ ಸಚಿವ ಹಾಗೂ ಐದು ಬಾರಿ ಶಾಸಕರಾಗಿದ್ದ ಸಿಪಿ ಯೋಗೇಶ್ವರ್ ಬಿಜೆಪಿಗೆ ರಾಜೀನಾಮೆ ನೀಡಿ ಕಾಂಗ್ರೆಸ್ ಸೇರಿದ್ದಾರೆ. ಸಂಜೆಯ ವೇಳೆಗೆ, ಎಐಸಿಸಿ ಚನ್ನಪಟ್ಟಣದಿಂದ ಅವರ ಉಮೇದುವಾರಿಕೆಯನ್ನು ಘೋಷಿಸಿದೆ. ಮತ್ತೊಂದೆಡೆ, ಬಳ್ಳಾರಿಯ ಸಂಸದ ಇ. ತುಕಾರಾಂ ಅವರ ಪತ್ನಿ ಇ ಅನ್ನಪೂರ್ಣ ಅವರು ಸಂಡೂರು (ಎಸ್‌ಟಿ) ಕ್ಷೇತ್ರದಿಂದ ಸ್ಪರ್ಧಿಸಲಿದ್ದಾರೆ ಎಂದು ಘೋಷಣೆ ಮಾಡಲಾಗಿದೆ.

ಅನ್ನಪೂರ್ಣಗೆ ಮೊದಲ ಚುನಾವಣೆ

ಅನ್ನಪೂರ್ಣ ಅವರು ಮೊದಲ ಬಾರಿಗೆ ಚುನಾವಣೆ ಸ್ಪರ್ಧಿಸುತ್ತಿದ್ದಾರೆ. ಯೋಗೇಶ್ವರ್ ಆರನೇ ಬಾರಿಗೆ ವಿಧಾನಸಭೆ ಪ್ರವೇಶಿಸಲು ಸ್ಪರ್ಧಿಸಿದ್ದಾರೆ. ಯೋಗೇಶ್ವರ್ ಅವರು ಇಂದು ನಾಮಪತ್ರ ಸಲ್ಲಿಸಲಿದ್ದಾರೆ.

ಶಿಗ್ಗಾಂವಿ ಕ್ಷೇತ್ರದ ಅಭ್ಯರ್ಥಿಯನ್ನು ಕಾಂಗ್ರೆಸ್ ಇನ್ನೂ ಘೋಷಣೆ ಮಾಡಿಲ್ಲ. ನಾಮಪತ್ರ ಸಲ್ಲಿಸಲು ಅಕ್ಟೋಬರ್ 25 ಕೊನೆಯ ದಿನವಾಗಿದೆ. ಈ ಕ್ಷೇತ್ರದಲ್ಲಿ ವೀರಶೈವ ಲಿಂಗಾಯತ ಮತ್ತು ಮುಸ್ಲಿಂ ಮುಖಂಡರು ಆಯಾ ಸಮುದಾಯಕ್ಕೆ ಸೇರಿದ ಅಭ್ಯರ್ಥಿಗೆ ಟಿಕೆಟ್ ನೀಡಬೇಕೆಂಬ ಬೇಡಿಕೆ ಇಟ್ಟಿದ್ದು ಆಯ್ಕೆ ಕಗ್ಗಂಟಾಗಿದೆ. ಇಂದು ಅಭ್ಯರ್ಥಿಯನ್ನು ಘೋಷಿಸುವ ನಿರೀಕ್ಷೆಯಿದೆ.

ಶಿಗ್ಗಾಂವಿ, ಸಂಡೂರು, ಮತ್ತು ಚನ್ನಪಟ್ಟಣ ವಿಧಾನಸಭೆ ಕ್ಷೇತ್ರಗಳು ಮಾಜಿ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ, ತುಕಾರಾಂ ಮತ್ತು ಜೆಡಿಎಸ್ ನಾಯಕ ಹೆಚ್​​ಡಿ ಕುಮಾರಸ್ವಾಮಿ ಲೋಕಸಭೆ ಚುನಾವಣೆಗೆ ಸ್ಪರ್ಧಿಸಲು ರಾಜೀನಾಮೆ ನೀಡಿದ್ದರಿಂದ ತೆರವಾದ ಕ್ಷೇತ್ರಗಳಾಗಿವೆ.

ನವೆಂಬರ್ 13 ರಂದು ಚುನಾವಣೆ ನಡೆಯಲಿದ್ದು, ನವೆಂಬರ್ 23 ರಂದು ಫಲಿತಾಂಶ ಪ್ರಕಟವಾಗಲಿದೆ.

ಇದನ್ನೂ ಓದಿ: ವರ್ಣರಂಜಿತ ರಾಜಕಾರಣಿ: 3 ಪಕ್ಷ ಬದಲಿಸಿರುವ ಯೋಗೇಶ್ವರ್ ರಾಜಕೀಯ ಹಾದಿ ಇಲ್ಲಿದೆ

ಯೋಗೇಶ್ವರ್ ಆಪರೇಷನ್​: ಕಾಂಗ್ರೆಸ್ ಸಕ್ಸಸ್

ಅತ್ತ ಬಿಜೆಪಿ-ಜೆಡಿಎಸ್​​ನಲ್ಲಿ ಚನ್ನಪಟ್ಟಣ ಟಿಕೆಟ್ ಗೊಂದಲ ಮುಂದುವರಿಯುತ್ತಿದ್ದಂತೆಯೇ ಕಾಂಗ್ರೆಸ್​​ನಲ್ಲಿ ತೆರೆ ಹಿಂದಿನ ತಂತ್ರಗಾರಿಕೆ ನಡೆಯುತ್ತಿತ್ತು. ಅದು ಯಾವಾಗ ಸಫಲ ಆಯಿತೋ, ಯೋಗೇಶ್ವರ್ ಆಪರೇಷನ್ ಪ್ರಸ್ತಾಪ ಮುಂದೆ ಬಂತು. ಕಳೆದ ಮೂರ್ನಾಲ್ಕು ದಿನಗಳಿಂದ ಸೈಲೆಂಟ್ ಆಗಿಯೇ ನಡೆಯುತ್ತಿದ್ದ ಈ ಕಾರ್ಯಾಚರಣೆ ಬುಧವಾರ ಬೇರೆಯದ್ದೇ ಸ್ವರೂಪ‌ ಪಡೆಯಿತು. ಅದರಂತೆ ಮೈಸೂರಲ್ಲೇ ಇದ್ದ ಸಿಎಂ ಸಿದ್ದರಾಮಯ್ಯ, ಏಕದಂ ಬೆಂಗಳೂರಿಗೆ ಬಂದರು. ತಡರಾತ್ರಿವರೆಗೂ ಕಾವೇರಿ ನಿವಾಸದಲ್ಲಿ ಆಪ್ತ ಸಚಿವರ ಜೊತೆ ಮಹತ್ವದ ಚರ್ಚೆ ನಡೆಸಿದರು. ಅದರಂತೆ ಬುಧವಾರ ಬೆಳಗ್ಗೆಯೇ ಡಿಸಿಎಂ ಡಿಕೆ ಶಿವಕುಮಾರ್ ನಿವಾಸದಲ್ಲಿ ಸಿಪಿ ಯೋಗೇಶ್ವರ್ ಪ್ರತ್ಯಕ್ಷರಾದರು. ಒಟ್ಟಿಗೆ ಮನೆಯಿಂದ ಹೊರಬಂದು ಒಂದೇ ಕಾರಲ್ಲಿ ಸಿಎಂ ಸಿದ್ದರಾಮಯ್ಯ ನಿವಾಸಕ್ಕೆ ಹೋದರು. ಅಲ್ಲಿ ಸಿಎಂ ಜೊತೆ ಮುಖಾಮುಖಿ ಭೇಟಿಯಾಗಿ ಪಕ್ಷ ಸೇರ್ಪಡೆ ಕುರಿತು ಚರ್ಚೆ ನಡೆಸಿದರು. ನಂತರ ಮಹತ್ವದ ಬೆಳವಣಿಗೆ ನಡೆದೇ ಬಿಟ್ಟಿತು.

ರಾಜ್ಯದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್​ ಮಾಡಿ

Published On - 11:17 pm, Wed, 23 October 24