ರಾಮನಗರ: ಸರ್ಕಾರಿ ಆಸ್ಪತ್ರೆಗಳು ಎಂದರೆ ಸಾಕು, ಮೂಗು ಮುರಿಯುವವರೇ ಹೆಚ್ಚು. ಆದರೆ ಅದಕ್ಕೆ ಅಪವಾದವೆಂಬಂತೆ ರಾಮನಗರ ಜಿಲ್ಲೆಯಲ್ಲಿನ ಪ್ರಾಥಮಿಕ ಆರೋಗ್ಯ ಕೇಂದ್ರ ತಲೆ ಎತ್ತಿನಿಂತಿದೆ. ಯಾವ ಖಾಸಗಿ ಆಸ್ಪತ್ರೆಗೂ ಕಡಿಮೆ ಇಲ್ಲದ ರೀತಿಯಲ್ಲಿ ಇಲ್ಲಿ ವ್ಯವಸ್ಥೆ ಕಲ್ಪಿಸಲಾಗಿದ್ದು, ಸ್ವಚ್ಛತೆ ಮತ್ತು ಚಿಕಿತ್ಸೆಯಿಂದಲೇ ಜನರ ಮೆಚ್ಚುಗೆ ಪಡೆದಿದೆ. ಚನ್ನಪಟ್ಟಣ ತಾಲೂಕಿನ ಇಗ್ಗಲೂರು ಗ್ರಾಮದ ಸರ್ಕಾರಿ ಪ್ರಾಥಮಿಕ ಆರೋಗ್ಯ ಕೇಂದ್ರದ ಪ್ರತಿ ಕೊಠಡಿಯನ್ನು ನಿತ್ಯವೂ ಸ್ವಚ್ಛಗೊಳಿಸಲಾಗುತ್ತಿದ್ದು, ಪ್ರತಿ ಕೊಠಡಿಗಳಿಗೂ ಸ್ಕ್ರೀನ್ ಹಾಕಲಾಗಿದೆ. ಇದು ಆಸ್ಪತ್ರೆಗೆ ಮತ್ತಷ್ಟು ಮೆರಗು ನೀಡಿದ್ದು, ಚಿಕಿತ್ಸೆಗೆ ಬರುವ ಜನರಿಗೆ ಹೊಸ ಭರವಸೆ ಮೂಡಿಸಿದೆ.
ಇಗ್ಗಲೂರು ಗ್ರಾಮದ ಪ್ರಾಥಮಿಕ ಆರೋಗ್ಯ ಕೇಂದ್ರ 2017ರಲ್ಲಿ ನೂತನವಾಗಿ ಆರಂಭವಾಗಿದ್ದು, ಅಂದಿನಿಂದ ಇಲ್ಲಿಯವರೆಗೂ ಆಸ್ಪತ್ರೆಯಲ್ಲಿ ಸಾಕಷ್ಟು ಶುಚಿತ್ವ ಕಾಪಾಡಿಕೊಂಡು ಬರಲಾಗಿದೆ. ಹೀಗಾಗಿ ಆಸ್ಪತ್ರೆಗೆ ಕಾಯಕಲ್ಪ ಪ್ರಶಸ್ತಿ ಕೂಡ ಲಭಿಸಿದೆ. ಇನ್ನು ಆಸ್ಪತ್ರೆ ಪ್ರಾರಂಭವಾಗುವುದಕ್ಕೂ ಮೊದಲು ಗ್ರಾಮಸ್ಥರು ಪ್ರತಿಯೊಂದು ಚಿಕಿತ್ಸೆಗೆ ತಾಲೂಕು ಕೇಂದ್ರ ಚನ್ನಪಟ್ಟಣಕ್ಕೆ ಬಂದು ಚಿಕಿತ್ಸೆ ಪಡೆಯುಬೇಕಿತ್ತು. ಆದರೆ ಇದೀಗ ಅದು ತಪ್ಪಿದೆ.
ಆಸ್ಪತ್ರೆಯಲ್ಲಿ ತಜ್ಞ ವೈದ್ಯರು ಸೇರಿದಂತೆ ಉತ್ತಮ ರೀತಿಯ ಸಿಬ್ಬಂಧಿಗಳು ಇದ್ದಾರೆ. ಹೀಗಾಗಿ ಎಲ್ಲ ರೀತಿಯ ಚಿಕಿತ್ಸೆ ಆಸ್ಪತ್ರೆಯಲ್ಲಿ ಸಿಗುತ್ತಿದೆ. ರಕ್ತ ಪರೀಕ್ಷೆ ಸೇರಿದಂತೆ ಅನೇಕ ಪರೀಕ್ಷೆಗಳು ಇಲ್ಲಿಯೇ ಮಾಡಲಾಗುತ್ತಿದ್ದು,
ಸಾರ್ವಜನಿಕರಿಗೆ ಗಡಿಗ್ರಾಮದಿಂದ ತಾಲೂಕು ಕೇಂದ್ರಕ್ಕೆ ಹೆಚ್ಚಿನ ಚಿಕಿತ್ಸೆಗಾಗಿ ಅಲೆಯುವುದು ತಪ್ಪಿದೆ ಎಂದು ಆಸ್ಪತ್ರೆ ವೈದ್ಯಾಧಿಕಾರಿ ಡಾ. ಪ್ರದೀಪ್ ಕುಮಾರ್ ತಿಳಿಸಿದ್ದಾರೆ.
ಈ ಸರ್ಕಾರಿ ಆಸ್ಪತ್ರೆಯಲ್ಲಿ ಉತ್ತಮ ರೀತಿಯ ಚಿಕಿತ್ಸೆ ಸಿಗುತ್ತಿರುವುದರಿಂದ ಚನ್ನಪಟ್ಟಣ ತಾಲೂಕಿನ ಹಲವು ಗ್ರಾಮಗಳು ಸೇರಿದಂತೆ, ಮಂಡ್ಯ ಜಿಲ್ಲೆಯ ಮಳವಳ್ಳಿ ಹಾಗೂ ಮದ್ದೂರು ತಾಲೂಕಿನ ಹಲವು ಹಳ್ಳಿಗಳ ಗ್ರಾಮಸ್ಥರು ಕೂಡ ಇದೇ ಪ್ರಾಥಮಿಕ ಆರೋಗ್ಯ ಕೇಂದ್ರಕ್ಕೆ ಬಂದು ಚಿಕಿತ್ಸೆ ಪಡೆಯುತ್ತಾರೆ. ಜತೆಗೆ ಆಸ್ಪತ್ರೆಯಲ್ಲಿ ಸಿಗುತ್ತಿರುವ
ಉತ್ತಮ ಚಿಕಿತ್ಸೆ ಹಾಗೂ ಸ್ವಚ್ಚತೆ ಬಗ್ಗೆ ಗ್ರಾಮಸ್ಥರು ಕೂಡ ಮೆಚ್ಚುಗೆ ವ್ಯಕ್ತಪಡಿಸುತ್ತಿದ್ದಾರೆ.
ಗಡಿಗ್ರಾಮದಲ್ಲಿ ಇರುವ ಇಗ್ಗಲೂರಿನ ಪ್ರಾಥಮಿಕ ಆರೋಗ್ಯ ಕೇಂದ್ರ, ರೋಗಿಗಳಿಗೆ ಉತ್ತಮ ರೀತಿಯ ಚಿಕಿತ್ಸೆ, ಸೌಲಭ್ಯಗಳನ್ನ ನೀಡುವ ಮೂಲಕ ಗ್ರಾಮಸ್ಥರಿಗೆ ಅನುಕೂಲವಾಗಿದೆ. ಇದೇ ರೀತಿ ಎಲ್ಲ ಸರ್ಕಾರಿ ಆಸ್ಪತ್ರೆಗಳಲ್ಲಿ ಚಿಕಿತ್ಸೆ ಸಿಕ್ಕರೇ, ಜನರು ಖಾಸಗಿ ಆಸ್ಪತ್ರೆಗಳಿಗೆ ಅಲೆಯುವುದು ತಪ್ಪಲಿದೆ ಎಂದು ಸ್ಥಳೀಯರಾದ ನಾಗರಾಜ್ ಅಭಿಪ್ರಾಯಪಟ್ಟಿದ್ದಾರೆ.
ಹಾಸನ ಜಿಲ್ಲೆಯ ಐದು ಆಸ್ಪತ್ರೆಗಳಿಗೆ ಒಬ್ಬರೇ ವೈದ್ಯ; ನೂರಾರು ರೋಗಿಗಳ ಆರೈಕೆಯಲ್ಲಿ ನಿರತರಾಗಿರುವ ಡಾ.ಮಧುಸೂಧನ್