ರೆಮ್​ಡಿಸಿವಿರ್, ಆಕ್ಸಿಜನ್ ಸಿಲಿಂಡರ್ ನೀಡುವುದಾಗಿ ವಂಚನೆ; ಅಪರಿಚಿತ ಸಂಖ್ಯೆಗೆ ಹಣ ಕಳಿಸುವ ಮುನ್ನ ಎಚ್ಚರ

| Updated By: ganapathi bhat

Updated on: Aug 21, 2021 | 10:16 AM

ರೆಮ್​ಡಿಸಿವಿರ್ ಅಗತ್ಯವಿರುವವರ ಮೊಬೈಲ್​ಗೆ ಮೆಸೇಜ್ ಮಾಡುತ್ತಾರೆ. ಅಡ್ವಾನ್ಸ್ ಹಣ ನೀಡಿದರೆ ರೆಮ್​ಡಿಸಿವಿರ್​ ನೀಡುವುದಾಗಿ ಮೆಸೇಜ್ ಮಾಡಿ ಬಳಿಕ ಮೋಸ ಮಾಡಿದ್ದಾರೆ.

ರೆಮ್​ಡಿಸಿವಿರ್, ಆಕ್ಸಿಜನ್ ಸಿಲಿಂಡರ್ ನೀಡುವುದಾಗಿ ವಂಚನೆ; ಅಪರಿಚಿತ ಸಂಖ್ಯೆಗೆ ಹಣ ಕಳಿಸುವ ಮುನ್ನ ಎಚ್ಚರ
ಸಾಂದರ್ಭಿಕ ಚಿತ್ರ
Follow us on

ಬೆಂಗಳೂರು: ಕೊರೊನಾ ಸಂಕಷ್ಟದ ನಡುವೆಯೂ ಸೈಬರ್​ ಕಳ್ಳರು ದುಷ್ಕೃತ್ಯ ಮಾಡುವಲ್ಲಿ ಹಿಂದುಳಿದಿಲ್ಲ. ರೆಮ್​ಡಿಸಿವಿರ್​ ಇಂಜೆಕ್ಷನ್​ ಕೊರತೆಯೇ ವಂಚಕರ ಬ್ರಹ್ಮಾಸ್ತ್ರವಾಗಿದೆ. ಔಷಧಿಯ ಅಭಾವವನ್ನು ತಮ್ಮ ಲಾಭಕ್ಕಾಗಿ ಖದೀಮರು ಬಳಸಿಕೊಳ್ಳುತ್ತಿದ್ದಾರೆ. ತಮ್ಮ ಬಳಿ ರೆಮ್​ಡಿಸಿವಿರ್​ ಇರುವುದಾಗಿ ವಾಟ್ಸಾಪ್​ ಮೆಸೇಜ್ ಮಾಡುವ ಕಳ್ಳರು ಮೋಸ ಮಾಡಿದ್ದಾರೆ.

ರೆಮ್​ಡಿಸಿವಿರ್ ಅಗತ್ಯವಿರುವವರ ಮೊಬೈಲ್​ಗೆ ಮೆಸೇಜ್ ಮಾಡುತ್ತಾರೆ. ಅಡ್ವಾನ್ಸ್ ಹಣ ನೀಡಿದರೆ ರೆಮ್​ಡಿಸಿವಿರ್​ ನೀಡುವುದಾಗಿ ಮೆಸೇಜ್ ಮಾಡಿ ಬಳಿಕ ಮೋಸ ಮಾಡಿದ್ದಾರೆ. ಅದನ್ನು ನಂಬಿ ಹಣ ವರ್ಗಾವಣೆ ಮಾಡಿದವರಿಗೆ ವಂಚನೆ ಮಾಡಿದ್ದಾರೆ. ಹಣ ಕಳೆದುಕೊಂಡವರಿಂದ ಬೆಂಗಳೂರು ಪೊಲೀಸರಿಗೆ ದೂರು ನೀಡಲಾಗಿದೆ. ಬೆಂಗಳೂರು ನಗರ ಪೊಲೀಸ್​ ಟ್ವಿಟರ್​ನಲ್ಲಿ ದೂರು ದಾಖಲಾಗಿದೆ. ಮುಂಜಾಗ್ರತೆ ವಹಿಸುವಂತೆ ನಗರ ಪೊಲೀಸರು ಎಚ್ಚರಿಕೆ ನೀಡಿದ್ದಾರೆ.

ಕೊರೊನಾ ಸಂಕಷ್ಟದ ನಡುವೆ ಸೈಬರ್​ ಕಳ್ಳರ ಕೈಚಳಕ ಆಕ್ಸಿಜನ್ ಸಿಲಿಂಡರ್​ ವಿಚಾರದಲ್ಲೂ ಮುಂದುವರಿದಿದೆ. ಖದೀಮರು ಆಕ್ಸಿಜನ್ ಸಿಲಿಂಡರ್ ನೀಡುವುದಾಗಿ ನಂಬಿಸಿ ವ್ಯಕ್ತಿಗೆ ವಂಚನೆ ಮಾಡಿದ್ದಾರೆ. ಹೆಚ್‌ಎಸ್‌ಆರ್ ಲೇಔಟ್‌ ನಿವಾಸಿ ನೀಲ್‌ಜೈನ್‌ಗೆ ವಂಚನೆ ಮಾಡಲಾಗಿದೆ. ಪೇಟಿಯಂನಲ್ಲಿ ಹಂತಹಂತವಾಗಿ $47,635 ವರ್ಗಾವಣೆ ಮಾಡಿಸಿಕೊಂಡಿದ್ದ ಕಳ್ಳರು ವಂಚನೆ ಮಾಡಿದ್ದಾರೆ. ವಾಟ್ಸಾಪ್‌ ಗ್ರೂಪ್‌ನಲ್ಲಿ ನಂಬರ್ ಶೇರ್‌ ಮಾಡಿ ವಂಚನೆ ಮಾಡಲಾಗಿದ್ದು, ವೈಟ್‌ಫೀಲ್ಡ್‌ ಸಿಇಎನ್‌ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ಕರ್ನಾಟಕ ಕೊರೊನಾ ವರದಿ
ಕರ್ನಾಟಕ ರಾಜ್ಯದಲ್ಲಿ ಕಳೆದ 24 ಗಂಟೆಗಳಲ್ಲಿ 31,531 ಜನರಿಗೆ ಕೊವಿಡ್ ಸೋಂಕು ಪತ್ತೆಯಾಗಿದೆ. 403 ಜನರು ನಿಧನರಾಗಿದ್ದಾರೆ. ಬೆಂಗಳೂರು ನಗರ ಜಿಲ್ಲೆಯಲ್ಲಿ ಇದೇ ಅವಧಿಯಲ್ಲಿ 8,344 ಜನರಿಗೆ ಸೋಂಕು ಪತ್ತೆಯಾಗಿದ್ದು ಗಮನಾರ್ಹ ಪ್ರಮಾಣದಲ್ಲಿ ಇಳಿಕೆಯಾಗಿದೆ. ಆದರೆ ಬೆಂಗಳೂರು ಒಂದರಲ್ಲೇ 143 ಜನರು ಕೊವಿಡ್​ನಿಂದ  ನಿಧನರಾಗಿದ್ದಾರೆ. ಇಂದು ಮೃತಪಟ್ಟವರನ್ನೂ ಸೇರಿಸಿ ರಾಜ್ಯದಲ್ಲಿ ಕೊರೊನಾ ಸೋಂಕಿತರ ಸಂಖ್ಯೆ 22,03,462ಕ್ಕೆ ಏರಿಕೆಯಾಗಿದ್ದು, ಸೋಂಕಿತರ ಪೈಕಿ 15,81,457 ಜನ ಗುಣಮುಖರಾಗಿ ಡಿಸ್ಚಾರ್ಜ್ ಆಗಿದ್ದಾರೆ. ರಾಜ್ಯದಲ್ಲಿ ಕೊವಿಡ್​ನಿಂದ ಮೃತಪಟ್ಟವರ ಸಂಖ್ಯೆ 21,837 ಕ್ಕೆ ಏರಿಕೆಯಾಗಿದೆ.

ಅತ್ಯಂತ ಪ್ರಮುಖವಾಗಿ ಉಲ್ಲೇಖಿಸಲೇಬೇಕಾದ ಸಂಗತಿಯೆಂದರೆ ರಾಜ್ಯದಲ್ಲಿ ಕಳೆದ 24 ಗಂಟೆಗಳಲ್ಲಿ 36,475 ಜನರು ಕೊವಿಡ್ ಮುಕ್ತರಾಗಿ ಆಸ್ಪತ್ರೆಗಳಿಂದ ಮನೆಗೆ ಹಿಂತಿರುಗಿದ್ದಾರೆ.

ಯಾವ ಜಿಲ್ಲೆಯಲ್ಲಿ ಎಷ್ಟು?
ಬಾಗಲಕೋಟೆ 431, ಬಳ್ಳಾರಿ 1,729, ಬೆಳಗಾವಿ 1,762, ಬೆಂಗಳೂರು ಗ್ರಾಮಾಂತರ 1,082, ಬೆಂಗಳೂರು ನಗರ 8,344, ಬೀದರ್ 129, ಚಾಮರಾಜನಗರ 440, ಚಿಕ್ಕಬಳ್ಳಾಪುರ 55, ಚಿಕ್ಕಮಗಳೂರು 963, ಚಿತ್ರದುರ್ಗ 640, ದಕ್ಷಿಣ ಕನ್ನಡ 957, ದಾವಣಗೆರೆ 1155, ಧಾರವಾಡ 937, ಗದಗ 453, ಹಾಸನ 1,182, ಹಾವೇರಿ 184, ಕಲಬುರಗಿ 645, ಕೊಡಗು 191, ಕೋಲಾರ 569, ಕೊಪ್ಪಳ 617, ಮಂಡ್ಯ 709, ಮೈಸೂರು 1,811, ರಾಯಚೂರು 464, ರಾಮನಗರ 403, ಶಿವಮೊಗ್ಗ 643, ತುಮಕೂರು 2,138, ಉಡುಪಿ 745, ಉತ್ತರ ಕನ್ನಡ 1,087, ವಿಜಯಪುರ 330, ಯಾದಗಿರಿ ಜಿಲ್ಲೆಯಲ್ಲಿ 233 ಕೊರೊನಾ ಪ್ರಕರಣ ಪತ್ತೆಯಾಗಿದೆ.

ಇದನ್ನೂ ಓದಿ: ಕೊವಿಡ್ ಭಯ; ಕೊರೊನಾ ಸೋಂಕಿತ ಶಿಕ್ಷಕ ಕಾವೇರಿ ನದಿಗೆ ಹಾರಿ ಆತ್ಮಹತ್ಯೆ

ತಂದೆ ಕೊರೊನಾಗೆ ಬಲಿ, ತಾಯಿಗೆ ಮತ್ತೊಂದು ಕಡೆ ಚಿಕಿತ್ಸೆ; ಆಸ್ಪತ್ರೆ ಸಿಬ್ಬಂದಿಗಳಿಂದ ಹುಟ್ಟುಹಬ್ಬ ಆಚರಿಸಿಕೊಂಡ ಬಾಲಕ

Published On - 10:14 pm, Sun, 16 May 21