ಸಿದ್ದರಾಮೋತ್ಸವ ನಂತರ ಮುನಿಸು ಮರೆತು ಒಟ್ಟಾಗಿ ರ್‍ಯಾಲಿ ನಡೆಸಿದ ಸಿದ್ದರಾಮಯ್ಯ ಮತ್ತು ಡಿಕೆಶಿ
ಸಿದ್ದರಾಮೋತ್ಸವದ ನಂತರ ತಮ್ಮೊಳಗಿನ ಮುನಿಸು ಮರೆತು ಒಂದಾದಂತೆ ಕಾಣಿಸುವ ಸಿದ್ದರಾಮಯ್ಯ ಮತ್ತು ಡಿ.ಕೆ.ಶಿವಕುಮಾರ್ ಅವರು, ಚಿಕ್ಕಬಳ್ಳಾಪುರದಲ್ಲಿ ನಡೆದ ಸ್ವಾತಂತ್ರ್ಯದ ಅಮೃತ ಮಹೋತ್ಸವದ ಪ್ರಯುಕ್ತ ಆಯೋಜಿಸಿದ್ದ ಮೆರವಣಿಗೆಯಲ್ಲಿ ಜೊತೆಯಾಗಿ ಪಾಲ್ಗೊಂಡರು.
ಚಿಕ್ಕಬಳ್ಳಾಪುರ: ಸಿದ್ದರಾಮಯ್ಯ ಅವರ 75ನೇ ವರ್ಷದ ಜನ್ಮದಿನದ ಪ್ರಯುಕ್ತ ನಡೆದ ಸಿದ್ದರಾಮೋತ್ಸವ ಕಾರ್ಯಕ್ರಮದ ನಂತರ ಸಿದ್ದರಾಮಯ್ಯ (Siddaramaiah) ಮತ್ತು ಕೆಪಿಸಿಸಿ ಅಧ್ಯಕ್ಷ ಡಿ.ಕೆ.ಶಿವಕುಮಾರ್ (D.K.shivakumar) ಅವರು ತಮ್ಮೊಳಗಿನ ಮುನಿಸು ಮರೆತು ಒಂದಾದಂತೆ ಕಾಣುತ್ತಿದೆ. ಅಲ್ಲದೆ, ಚಿಕ್ಕಬಳ್ಳಾಪುರ ಜಿಲ್ಲೆಯ ಚಿಂತಾಮಣಿಯಲ್ಲಿ ಆಯೋಜಿಸಿದ್ದ ಸ್ವಾತಂತ್ರ್ಯ ಅಮೃತ ಮಹೋತ್ಸವದ ರ್‍ಯಾಲಿಯನ್ನು ಸಿದ್ದರಾಮಯ್ಯ ಮತ್ತು ಡಿ.ಕೆ ಶಿವಕುಮಾರ್ ಅವರು ಜೊತೆಯಾಗಿ ನಡೆಸಿದರು. ಕೈವಾರ ಕ್ರಾಸ್ನಿಂದ ಚಿಂತಾಮಣಿವರೆಗೂ ಮಾಜಿ ಶಾಸಕ ಡಾ.ಎಂ.ಸಿ.ಸುಧಾಕರ್ ನೇತೃತ್ವದಲ್ಲಿ ಮೆರವಣಿಗೆ ನಡೆಸಲಾಗಿದ್ದು, ಇದಕ್ಕೂ ಮೊದಲು ಬೈಕ್ ರ್‍ಯಾಲಿ ನಡೆಸಲಾಯಿತು.
ಸ್ವಾತಂತ್ರ್ಯೋತ್ಸವದ ಅಮೃತ ಮಹೋತ್ಸವ ಪ್ರಯುಕ್ತ ಆಯೋಜಿಸದ್ದ ಮೆರವಣಿಗೆಯಲ್ಲಿ ಪಾಲ್ಗೊಳ್ಳಲು ಚಿಂತಾಮಣಿ ತಾಲೂಕಿನ ಎಚ್.ಕ್ರಾಸ್ ಬಳಿ ಆಗಮಿಸಿದ ಸಿದ್ದರಾಮಯ್ಯ ಮತ್ತು ಡಿ.ಕೆ.ಶಿವಕುಮಾರ್ ಅವರನ್ನು ಕಾರ್ಯಕರ್ತರು ಸೇಬಿನ ಹಾರ ಹಾಕಿ ಅದ್ದೂರಿಯಾಗಿ ಸ್ವಾಗತ ಕೋರಿದರು. ಈ ವೇಳೆ ಹಾರದಲ್ಲಿದ್ದ ಸೇಬು ಹಣ್ಣನ್ನು ಡಿ.ಕೆ.ಶಿವಕುಮಾರ್ ಅವರು ಕಿತ್ತು ತಿಂದಿದರು.
ಬಿಜೆಪಿ ವಿರುದ್ಧ ವಾಗ್ದಾಳಿ ನಡೆಸಿದ ಸಿದ್ದು
ರಾಜ್ಯ ಬಿಜೆಪಿ ಸರ್ಕಾರದ ಸಾಧನೆ ಶೂನ್ಯವಾಗಿದ್ದು, ರಾಜ್ಯದಲ್ಲಿ ಕೋಮು ಸಂಘರ್ಷ ಬಿತ್ತುವ ಕೆಲಸ ನಡೆಸಲಾಗುತ್ತಿದೆ ಎಂದು ಸಿದ್ದರಾಮಯ್ಯ ಅವರು ವಾಗ್ದಾಳಿ ನಡೆಸಿದ್ದಾರೆ. ಎಚ್.ಕ್ರಾಸ್ ಬಳಿ ಮಾತನಾಡಿದ ಅವರು, ರಾಜ್ಯದಲ್ಲಿ ಪ್ರವಾಹ ಬಂದಿದ್ದು, ಜನ ಸಾಮಾನ್ಯರು ಸಂಕಷ್ಟಕ್ಕೆ ಸಿಲುಕಿದ್ದಾರೆ. ಪರಿಹಾರ ನೀಡಲು ರಾಜ್ಯ ಸರ್ಕಾರಕ್ಕೆ ಆಗಿಲ್ಲ. ದೇವರು ಧರ್ಮ ಜಾತಿ ಅಂತ ಹೇಳಿಕೊಂಡು ತಿರುಗಾಡುತ್ತಿದ್ದಾರೆ. ರಾಜ್ಯದಲ್ಲಿ ಮುಂದಿನ ವರ್ಷ ವಿಧಾನಸಭೆ ಚುನಾವಣೆ ನಡೆಯಲಿದ್ದು, ಈ ನಿಟ್ಟಿನಲ್ಲಿ ಮತ ವಿಭಜನೆ ಮಾಡುವ ಗುರಿಯನ್ನು ಬಿಜೆಪಿ ಇಟ್ಟುಕೊಂಡಿದೆ. ಇದಕ್ಕಾಗಿ ರಾಜ್ಯದಲ್ಲಿ ಕೋಮು ಸಂಘರ್ಷ ಬಿತ್ತುತ್ತಿದ್ದಾರೆ. ರೈತರು, ಬಡವರ ಸಮಸ್ಯೆಗಳಿಗೆ ಉತ್ತರ ಕೊಡಲು ಆಗಿಲ್ಲ ಎಂದು ವಾಗ್ದಾಳಿ ನಡೆಸಿದರು.
ನನ್ನ ಡೇಟ್ ಆಫ್ ಬರ್ತ್ ನನ್ನ ತಂದೆ-ತಾಯಿಗೆ ಗೊತ್ತು
ಸಿದ್ದರಾಮಯ್ಯ ಅವರ ವಯಸ್ಸು ಗೂಗಲ್ ಸೇರಿದಂತೆ ಇತ್ಯಾದಿ ದಾಖಲೆಗಳಲ್ಲಿ 73 ವರ್ಷ ಎಂದು ತೋರಿಸುತ್ತಿದೆ. ಇದನ್ನೇ ಮುಂದಿಟ್ಟುಕೊಂಡು ಬಿಜೆಪಿ ನಾಯಕರು ಸಿದ್ದರಾಮಯ್ಯ ಮತ್ತು ಇವರ 75ನೇ ವರ್ಷದ ಜನ್ಮದಿನದ ಪ್ರಯುಕ್ತ ನಡೆಸಿದ ಸಿದ್ದರಾಮೋತ್ಸವವನ್ನ ಟೀಕಿಸಿದ್ದರು. ಇದಕ್ಕೆ ಪ್ರತಿಕ್ರಿಯಿಸಿದ ಸಿದ್ದರಾಮಯ್ಯ, ನನ್ನ ಜನ್ಮ ದಿನಾಂಕದ ಬಗ್ಗೆ ಬಿಜೆಪಿಯವರಿಗೆ ಏನು ಗೊತ್ತು? ನನ್ನ ಜನ್ಮದಿನ ನನ್ನ ತಂದೆ ಮತ್ತು ತಾಯಿ ಹಾಗೂ ನನಗೆ ಗೊತ್ತು. ನನ್ನ ಜನ್ಮದಿನೋತ್ಸವ ಜಯಭೇರಿ ನೋಡಿ ಬಿಜೆಪಿ ಹೆದರಿದೆ ಎಂದರು.
ಮತ್ತಷ್ಟು ರಾಜ್ಯದ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ
Published On - 12:23 pm, Sat, 6 August 22