
ಚಿಕ್ಕಬಳ್ಳಾಪುರ, ಸೆಪ್ಟೆಂಬರ್ 4: ಭಾರತ ರತ್ನ ಸರ್ಎಂ ವಿಶ್ವೇಶ್ವರಯ್ಯ (Sir M Visvesvaraya) ಪ್ರಾಥಮಿಕ ಶಿಕ್ಷಣ ಪಡೆದ ಚಿಕ್ಕಬಳ್ಳಾಪುರ ನಗರದ ಕಂದವಾರ ಸರ್ಕಾರಿ ಶಾಲೆ (Government School) ಇತ್ತೀಚೆಗೆ ಸೂಕ್ತ ನಿರ್ವಹಣೆ ಹಾಗೂ ಮೂಲಸೌಕರ್ಯಗಳಿಲ್ಲದೆ ಶಿಥಿಲಗೊಂಡಿತ್ತು. ಶಿಕ್ಷಣ ಇಲಾಖೆಯ ನಿರ್ಲಕ್ಷ್ಯ ಹಾಗೂ ಉದಾಸೀನದಿಂದ ಬರಗೆಟ್ಟಿತ್ತು. ಇದನ್ನು ಗಮನಿಸಿದ ಖ್ಯಾತ ತೆಲುಗು ನಟ, ಆಂಧ್ರ ಪ್ರದೇಶ ಉಪಮುಖ್ಯಮಂತ್ರಿ ಪವನ್ ಕಲ್ಯಾಣ್ (Pavan Kalyan) ಅಭಿಮಾನಿಗಳು, ಪವನ್ ಕಲ್ಯಾಣ್ರ ಹುಟ್ಟು ಹಬ್ಬದ ಪ್ರಯುಕ್ತ ಸದರಿ ಶಾಲೆಯನ್ನು ನವೀಕರಣ ಮಾಡಿದ್ದಾರೆ. ಶಾಲೆಯ ಆವರಣ, ಕಟ್ಟಡಗಳ ಸುತ್ತಮುತ್ತ ಸೇರಿದಂತೆ ಕೊಠಡಿಗಳ ಸ್ವಚ್ಛತೆ, ನವೀಕರಣ ಮಾಡಿಸುವುದರ ಮೂಲಕ ಇತರರಿಗೆ ಮಾದರಿಯಾಗಿದ್ದಾರೆ.
ಭಾರತ ರತ್ನ ಸರ್.ಎಂ. ವಿಶ್ವೇಶ್ವರಯ್ಯನವರ ಪ್ರೇರಣೆಯಿಂದ ಕೆಲವರು ದೊಡ್ಡ ದೊಡ್ಡ ಉದ್ಯಮಿಗಳು, ಖ್ಯಾತ ಇಂಜಿನಿಯರ್ಗಳಾಗಿ ರೂಪುಗೊಂಡಿದ್ದಾರೆ. ಯುವ ಪೀಳಿಗೆಗೆ ವಿಶ್ವೇಶ್ವರಯ್ಯನವರ ಮೌಲ್ಯಗಳನ್ನು ಪರಿಚಯ ಮಾಡಲು ಅವರು ವಿದ್ಯಾಭ್ಯಾಸ ಮಾಡಿದ ಶಾಲೆಯನ್ನು ಮ್ಯೂಸಿಯಂ ಆಗಿ ಪರಿವರ್ತಿಸಬೇಕಿತ್ತು. ಅದನ್ನು ಮಾಡವುದು ಹಾಗಿರಲಿ, ಶಾಲಾ ಶಿಕ್ಷಣ ಇಲಾಖೆ ಕನಿಷ್ಠ ನಿರ್ವಾಹಣೆಯನ್ನೂ ಮಾಡುತ್ತಿಲ್ಲ ಎಂದು ಆರೋಪಿಸಿರುವ ಸ್ಥಳೀಯರು, ಪವನ್ ಕಲ್ಯಾಣ್ ಅಭಿಮಾನಿಗಳು ನವೀಕರಣ ಕಾರ್ಯ ಮಾಡಿದ್ದಕ್ಕೆ ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ.
ವಿಶ್ವೇಶ್ವರಯ್ಯನವರು ವಿದ್ಯಾಭ್ಯಾಸ ಮಾಡಿದ್ದ ಈ ಶಾಲೆ ಈಗ ಎರಡು ತಿಂಗಳ ಹಿಂದೆ ಸಂಪೂರ್ಣ ಶಿಥಿಲಾವಸ್ಥೆಯಲ್ಲಿತ್ತು. ಹೆಂಚುಗಳು ಇಲ್ಲದೆ, ಕಟ್ಟಡವೂ ಶಿಥಿಲಾವಸ್ಥೆಗೆ ಬಂದು ತರಗತಿಗೆ ಹೆಜ್ಜೆ ಇಡಲಾಗದ ಪರಿಸ್ಥಿತಿ ಇತ್ತು. ಆಗ ಕರ್ನಾಟಕ ರೈತ ಜನಸೇನಾದ ಸಂಸ್ಥಾಪಕ ಅಧ್ಯಕ್ಷರಾದ ಸುಷ್ಮಾ ಶ್ರೀನಿವಾಸ್ ಹಾಗೂ ಧನಗೋಪಾಲ್ ಅವರು ಶ್ರದ್ಧಾ ಭಕ್ತಿಯಿಂದ ನವೀಕರಣ ಕಾರ್ಯ ಮಾಡಿ ಮಾದರಿಯಾಗಿದ್ದಾರೆ ಎಂದು ನೀರಾವರಿ ಹೋರಾಟಗಾರ ಆಂಜನೇಯ ರೆಡ್ಡಿ ಹೇಳಿದ್ದಾರೆ. ಸರಿಯಾದ ನಿರ್ವಹಣೆ ಇಲ್ಲದಿರುವುದೇ ಸರ್ಕಾರಿ ಶಾಲೆಗಳು ಮುಚ್ಚಲು ಕಾರಣ ಎಂದು ಅವರು ಆರೋಪಿಸಿದ್ದು, ಇಂಥ ದುಃಸ್ಥಿತಿ ಸರ್ಕಾರಿ ಶಾಲೆಗಳಿಗೆ ಬರಬಾರದು ಎಂದಿದ್ದಾರೆ.
ಇದನ್ನೂ ಓದಿ: ನಂದಿಗಿರಿಧಾಮ ಪ್ರವಾಸ ಹೋಗ್ತೀರಾ? ಈ ವಿಚಾರ ತಿಳಿದಿರಲೇಬೇಕು: ಇಲ್ಲಾಂದ್ರೆ ಅಪಾಯ ಕಟ್ಟಿಟ್ಟ ಬುತ್ತಿ
ಖ್ಯಾತ ತೆಲುಗು ನಟರೂ ಆಗಿರುವ ಆಂಧ್ರ ಡಿಸಿಎಂ ಪವನ್ ಕಲ್ಯಾಣ್ ಅಭಿಮಾನಿಗಳು, ಭಾರತ ರತ್ನ ಸರ್.ಎಂ. ವಿಶ್ವೇಶ್ವರಯ್ಯನವರು ವಿದ್ಯಾಭ್ಯಾಸ ಮಾಡಿದ ಸರ್ಕಾರಿ ಶಾಲೆಯನ್ನು ನವೀಕರಣ ಮಾಡಿದ್ದು ಇತರರಿಗೆ ಮಾದರಿಯಾಗಿದೆ.