ಗುಡಿಬಂಡೆ ಪಟ್ಟಣ ಪಂಚಾಯಿತಿಯಲ್ಲಿ ಭ್ರಷ್ಟಾಚಾರ ಆರೋಪ; ಧರಣಿ ನಡೆಸಿದ ಕೌನ್ಸಿಲರ್ಗಳು
ಗುಡಿಬಂಡೆ ಪಟ್ಟಣ ಪಂಚಾಯಿತಿಯಲ್ಲಿ ವ್ಯಾಪಕ ಭ್ರಷ್ಟಾಚಾರ ನಡೆದಿದೆ ಎಂದು ಆರೊಪಿಸಿ ಸ್ವತಃ ಪಟ್ಟಣ ಪಂಚಾಯಿತಿಯ ಸದಸ್ಯರುಗಳೆ ತಮ್ಮ ಕಛೇರಿಯ ವಿರುದ್ದ ಪ್ರತಿಭಟನೆ ನಡೆಸಿದ ಘಟನೆ ನಡೆದಿದೆ. ಅಷ್ಟಕ್ಕೂ ಏನಿದು ಅಂತೀರಾ? ಇಲ್ಲಿದೆ ನೋಡಿ.
ಚಿಕ್ಕಬಳ್ಳಾಪುರ, ಆ.6: ಜಿಲ್ಲೆಯ ಗುಡಿಬಂಡೆ ಪಟ್ಟಣ(Gudibande Town)ಅಭಿವೃದ್ದಿಗೆ ಪೂರಕವಾಗಬೇಕಿದ್ದ ಈ ಪಟ್ಟಣ ಪಂಚಾಯಿತಿ ಈಗ ಭ್ರಷ್ಟಾಚಾರದ ಗೂಡಾಗಿದೆಯಂತೆ. ಹೌದು, ಸ್ವತಃ ಈ ಪಟ್ಟಣ ಪಂಚಾಯಿತಿ(Pattana Panchayati)ಯ ಸದಸ್ಯರುಗಳೆ, ತಮ್ಮ ಕಛೇರಿಯ ವಿರುದ್ದ ಭ್ರಷ್ಟಾಚಾರ ಆರೋಪ ಮಾಡಿ ದಾಖಲೆಗಳನ್ನು ಹಿಡಿದು ಅಧಿಕಾರಿಗಳ ವಿರುದ್ದ ಕ್ರಮಕ್ಕೆ ಆಗ್ರಹಿಸಿ ಧರಣಿ ಪ್ರತಿಭಟನೆ ನಡೆಸಿದ ಘಟನೆ ನಡೆದಿದೆ. ಬೀದಿ ದೀಪಗಳ ವಾರ್ಷಿಕ ನಿರ್ವಹಣೆಗೆಂದು ಕ್ರಾಂತಿ ಎಲೆಕ್ಟ್ರಿಕಲ್ಸ್ ಸಂಸ್ಥೆಗೆ 3.46 ಲಕ್ಷ ರೂಪಾಯಿಗೆ ಟೆಂಡರ್ ನೀಡಿದೆ. ಆದರೆ, ಕೇವಲ 6 ತಿಂಗಳುಗಳಿಗೆ 3.29 ಲಕ್ಷ ಹಣವನ್ನ ಬಿಲ್ ಮಾಡಿದ್ದಾರಂತೆ.
ಅಷ್ಟೇ ಅಲ್ಲದೆ ಮೂರು ವರ್ಷದಲ್ಲಿ ಬರೋಬ್ಬರಿ 37.45 ಲಕ್ಷ ರೂಪಾಯಿ ಹಣವನ್ನ ಅಕ್ರಮವಾಗಿ ಡ್ರಾ ಮಾಡಿದ್ದಾರೆ ಎಂದು ಸದಸ್ಯರುಗಳು ಆರೋಪ ಮಾಡಿದ್ದಾರೆ. ಇನ್ನು ಪಟ್ಟಣ ಪಂಚಾಯಿತಿ ಅಧಿಕಾರಿಗಳು ಹಾಗೂ ಗುತ್ತಿಗೆದಾರರು ಶಾಮೀಲಾಗಿ ಸಾರ್ವಜನಿಕ ಸರ್ಕಾರಿ ಹಣವನ್ನ ದುರುಪಯೋಗಪಡಿಸಿ ಕೊಂಡಿದ್ದಾರಂತೆ. ಈ ಕುರಿತು ಅಕ್ರಮ ಮಾಡಿದವರ ಮೇಲೆ ಕ್ರಮ ಕೈಗೊಳ್ಳಲು ಅಧಿಕಾರಿಗಳಿಗೆ ದೂರು ನೀಡಿದ್ರೂ ಕ್ರಮ ಕೈಗೊಂಡಿಲ್ಲವಂತೆ ಎಂದು ಸದಸ್ಯರು ಆರೋಪಿಸುತ್ತಿದ್ದಾರೆ.
ಅಧಿಕಾರಿಗಳು ತನಿಖೆ ನಡೆಸುತ್ತಿದ್ದಾರೆಂದ ಪಟ್ಟಣ ಪಂಚಾಯತಿ ಮುಖ್ಯಾಧಿಕಾರಿ
ಇನ್ನು ಈ ಆರೋಪ ಸಂಬಂಧಿಸಿ ಸ್ವತಃ ಪಟ್ಟಣ ಪಂಚಾಯತಿ ಮುಖ್ಯಾಧಿಕಾರಿ ಸಬಾ ಶೀರಿನ್ ಪ್ರತಿಕ್ರಿಯಿಸಿದ್ದು, ಈ ಬಗ್ಗೆ ಹಿರಿಯ ಅಧಿಕಾರಿಗಳು ತನಿಖೆ ನಡೆಸುತ್ತಿದ್ದಾರೆ, ಕ್ರಮ ಕೈಗೊಳ್ಳುತ್ತಾರೆ ಎಂದರು. ಒಟ್ಟಿನಲ್ಲಿ ರಾಜ್ಯದಲ್ಲಿ ಅತಿ ಹಿಂದೂಳಿದ ತಾಲೂಕು ಎನ್ನುವ ಹಣೆ ಪಟ್ಟಿ ಕಟ್ಟಿಕೊಂಡಿರುವ ಗುಡಿಬಂಡೆಯಲ್ಲಿ, ಪಟ್ಟಣ ಪಂಚಾಯಿತಿಯೂ ಭ್ರಷ್ಟಾಚಾರದ ಗೂಡಾಗಿರುವುದು ವಿಪರ್ಯಾಸ.
ಇನ್ನಷ್ಟು ರಾಜ್ಯ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ