ಬಸ್ ಲೇಟಾಗತ್ತೆ ಅಂತಾ ಸುಮೋ ಗಾಡಿ ಹತ್ತಿದ್ದೇ ಬಂತು, ಅದು ಯಮ ಧರ್ಮರಾಯನ ವಾಹನವಾಗಿತ್ತು! ಏನೆಲ್ಲಾ ನಡೆಯಿತು ಅಲ್ಲಿ? ಸಮಗ್ರ ಚಿತ್ರಣ ಇಲ್ಲಿದೆ
chikkaballapur accident 13 killed: ಟಾಟಾ ಸುಮೋ ಚಾಲಕ ನರಸಿಂಹಪ್ಪ ಅನಧಿಕೃತವಾಗಿ ಗೋರೆಂಟ್ಲದಿಂದ ಬೆಂಗಳೂರಿಗೆ ಪ್ರಯಾಣಿಕರನ್ನು ಸಾಗಿಸುತ್ತಿದ್ದ. ಮಧ್ಯ ರಾತ್ರಿ 2 ಗಂಟೆಗೆ ಒಂದು ಟ್ರಿಪ್ ಮಾಡಿ, 2ನೇ ಟ್ರಿಪ್‍ನಲ್ಲಿ ಪ್ರಯಾಣಿಕರನ್ನು ಕರೆದುಕೊಂಡು ಬೆಂಗಳೂರಿಗೆ ಹೊರಟಿದ್ದ. ನಿದ್ದೆಯ ಮೊಂಪರೋ, ದಟ್ಟ ಮಂಜಿನ ಸಮಸ್ಯೆಯೋ, ಅತಿವೇಗದಿಂದಾಗಿ ವಾಹನದ ಮೇಲೆ ನಿಯಂತ್ರಣ ತಪ್ಪಿತೋ ಅಂತೂ ಎದುರಿಗೆ ರದ್ತೆ ಬದಿ ನಿಂತಿದ್ದ ಲಾರಿಯತ್ತ ತನ್ನ ವಾಹನ ನುಗ್ಗಿಸಿಬಿಟ್ಟಿದ್ದಾನೆ.
ದಸರಾ ಹಬ್ಬಕ್ಕೆ ಊರಿಗೆ ಹೋಗಿದ್ದ ಅವರೆಲ್ಲಾ ಹಬ್ಬ ಮುಗಿಸಿಕೊಂಡು ಸಂತೋಷವಾಗಿ ರಾಜಧಾನಿ ಬೆಂಗಳೂರಿನತ್ತ ಹೆಜ್ಜೆ ಹಾಕಿದ್ದರು. ಬಸ್ಸುಗಳಲ್ಲಿ ಪ್ರಯಾಣ ಮಾಡಿದರೆ ಕೆಲಸಕ್ಕೆ ವಿಳಂಬವಾಗುತ್ತದೆಂದು ದಾರಿಯಲ್ಲಿ ಬಂದ ಟಾಟಾ ಸುಮೋ ಹತ್ತಿದ್ದರು. ಆದರೆ ರಸ್ತೆ ಬದಿ ನಿಂತಿದ್ದ ಲಾರಿಯೊಂದಕ್ಕೆ ಆ ಟಾಟಾ ಸುಮೋ ಡಿಕ್ಕಿ ಹೊಡೆದ ಪರಿಣಾಮ ಟಾಟಾ ಸುಮೋದಲ್ಲಿದ್ದ ಎಲ್ಲಾ 13 ಜನರು ಸ್ಥಳದಲ್ಲೇ ಮೃತಪಟ್ಟಿದ್ದಾರೆ. ಅಷ್ಟಕ್ಕೂ ಅದು ಎಲ್ಲಿ ಅಂತೀರಾ ಈ ವರದಿ ನೋಡಿ.
ತಂದೆ-ತಾಯಿ ಕಳೆದುಕೊಂಡ ಮಗನ ಆಕ್ರಂದನ, ಮಗಳು-ಮೊಮ್ಮಗನನ್ನು ಕಳೆದುಕೊಂಡು ಅರ್ಜಿಯ ಅರ್ತ ನಾದ, ಗಂಡನನ್ನು ಕಳೆದುಕೊಂಡು ನವವಿವಾಹಿತೆಯ ಗೋಳಾಟ ಇಂತಹ ಮನಕಲುಕುವ ದೃಶ್ಯಗಳು ಕಂಡುಬಂದಿದ್ದು ಚಿಕ್ಕಬಳ್ಳಾಪುರ ಜಿಲ್ಲಾ ಸರ್ಕಾರಿ ಆಸ್ಪತ್ರೆಯ ಬಳಿ. ಹೌದು ಆಂದ್ರದ ಗೋರೆಂಟ್ಲದಿಂದ ಹೊರಟಿದ್ದ ಎಪಿ02 ಸಿಹೆಚ್ 1021 ನೋಂದಣಿ ಸಂಖ್ಯೆಯ ಟಾಟಾ ಸುಮೋ ದಾರಿ ಮಧ್ಯೆ ಸಿಕ್ಕ ಪ್ರಯಾಣಿಕರನ್ನು ಹತ್ತಿಸಿಕೊಂಡು ಬೆಂಗಳೂರಿನತ್ತ ಹೊರಟಿತ್ತು. ಆದರೆ ರಾಷ್ಟ್ರಿಯ ಹೆದ್ದಾರಿ-44 ರಲ್ಲಿ, ಚಿಕ್ಕಬಳ್ಳಾಪುರದಿಂದ ಸ್ವಲ್ಪ ದೂರದಲ್ಲಿ ರಸ್ತೆ ಬದಿ ನಿಂತಿದ್ದ ಎನ್‍ಎಲ್ 01 ಕ್ಯೂ1954 ನೋಂದಣಿಯ ಸಂಖ್ಯೆಯ ಲಾರಿಗೆ ಟಾಟಾ ಸುಮೋ ಅತಿವೇಗದಿಂದ ಬಂದು ಡಿಕ್ಕಿ ಹೊಡೆದಿದೆ. ಡಿಕ್ಕಿ ಹೊಡೆದ ರಭಸಕ್ಕೆ ಟಾಟಾ ಸುಮೋದಲ್ಲಿದ್ದ ಚಾಲಕ ಸೇರಿ 13 ಜನ ಮೃತಪಟ್ಟಿದ್ದಾರೆ ಎಂದು ಚಿಕ್ಕಬಳ್ಳಾಪುರ ಎಸ್ಪಿ ಡಿ.ಎಲ್. ನಾಗೇಶ್ ಹೇಳಿದ್ದಾರೆ.
ದೊಡ್ಡಬಳ್ಳಾಪುರ ನಿವಾಸಿ ಅರುಣ, ಆಕೆಯ 6 ವರ್ಷದ ಮಗ ಋತ್ವಿಕ್, ಬೆಂಗಳೂರಿನ ಕಾಮಾಕ್ಷಿಪಾಳ್ಯದ ವೆಂಕಟರಮಣ ಹಾಗೂ ಸುಬ್ಬಮ್ಮ ದಂಪತಿ, ಬೆಂಗಳೂರಿನ ಹೊಂಗಸಂದ್ರ ನಿವಾಸಿಗಳಾದ ಬೆಲ್ಲಾಳ ವೆಂಕಟಾದ್ರಿ ಹಾಗೂ ಲಕ್ಷ್ಮೀ ದಂಪತಿ, ಆಂದ್ರದ ಪೆನುಗೊಂಡ ಮೂಲದ ತಾಯಿ ಶಾಂತಮ್ಮ, ಮಗ ರಾಜವರ್ಧನ್, ಆಂದ್ರದ ನಾರಾಯಣಪ್ಪ, ಗೋರೆಂಟ್ಲದ ಪೆರಿಮಿಳಿ ಪವನ್‍ಕುಮಾರ್, ಚಿಲಮತ್ತೂರು ಮೂಲದ ವಿದ್ಯಾರ್ಥಿ ಗಣೇಶ್, ಗೋರೆಂಟ್ಲ ಮೂಲದ ನರಸಿಂಹಮೂರ್ತಿ ಸೇರಿದಂತೆ ಟಾಟಾ ಸುಮೋ ಚಾಲಕ ನರಸಿಂಹಪ್ಪ ಸ್ಥಳದಲ್ಲಿ ಮೃತಪಟ್ಟಿದ್ದಾನೆ.
ಸುದ್ದಿ ತಿಳಿಯುತ್ತಿದ್ದಂತೆ ಚಿಕ್ಕಬಳ್ಳಾಪುರ ವಿಧಾನಸಭಾ ಕ್ಷೇತ್ರದ ಶಾಸಕ ಪ್ರದೀಪ್ ಈಶ್ವರ್ ಚಿಕ್ಕಬಳ್ಳಾಪುರ ಜಿಲ್ಲಾಸ್ಪತ್ರೆಯ ಬಳಿ ಆಗಮಿಸಿ ಮೃತರ ಕುಟುಂಬಸ್ಥರಿಗೆ ಸಾಂತ್ವನ ಹೇಳಿ ಸರ್ಕಾರದ ವತಿಯಿಂದ ಮೃತರ ಕುಟುಂಬಕ್ಕೆ 2 ಲಕ್ಷ ರೂಪಾಯಿ ಪರಿಹಾರ ಘೋಷಣೆ ಮಾಡಿರುವುದಾಗಿ ತಿಳಿಸಿದರು.
ಇನ್ನು ಅಪಘಾತದಲ್ಲಿ ತಾಯಿ ಸುಬ್ಬಮ್ಮ, ತಂದೆ ವೆಂಕಟರಮಣನನ್ನು ಕಳೆದುಕೊಂಡ ಅವರ ಮಗ ರಾಜಶೇಖರ್, ದೊಡ್ಡಬಳ್ಳಾಪುರದ ಅರುಣ ಹಾಗೂ ಆಕೆಯ ಮಗನ ಸಂಬಂಧಿಕರ ಗೋಳಾಟ, ತಾಯಿ ಶಾಂತಮ್ಮ, ಮಗ ರಾಜವರ್ಧನ್ ಸಂಬಂಧಿಕರ ಆಕ್ರಂದನ, ನವವಿವಾಹಿತ ಪೆರಿಮಿಳಿ ಪವನ್‍ಕುಮಾರ್ ಪತ್ನಿಯ ಅರ್ತನಾದ, ವೆಂಕಟಾದ್ರಿ ಹಾಗೂ ಲಕ್ಷ್ಮೀ ದಂಪತಿಯ ಸಂಬಂಧಿಕರ ಆಕ್ರಂದನ ಮನಕಲಕುವಂತಿತ್ತು.
Also Read: ಮಂಜು ಮುಸುಕಿದ ಮಬ್ಬು ರಸ್ತೆಯಲ್ಲಿ ಭೀಕರ ಅಪಘಾತ, ಮೃತ ನತದೃಷ್ಟರ ವಿಳಾಸ-ವಿವರಗಳು ಇಲ್ಲಿವೆ
ಟಾಟಾ ಸುಮೋ ಚಾಲಕ ನರಸಿಂಹಪ್ಪ ಅನಧಿಕೃತವಾಗಿ ಗೋರೆಂಟ್ಲದಿಂದ ಬೆಂಗಳೂರಿಗೆ ಪ್ರಯಾಣಿಕರನ್ನು ಸಾಗಿಸುತ್ತಿದ್ದ. ಮಧ್ಯ ರಾತ್ರಿ 2 ಗಂಟೆಗೆ ಒಂದು ಟ್ರಿಪ್ ಮಾಡಿ, 2ನೇ ಟ್ರಿಪ್‍ನಲ್ಲಿ ಪ್ರಯಾಣಿಕರನ್ನು ಕರೆದುಕೊಂಡು ಬೆಂಗಳೂರಿಗೆ ಹೊರಟಿದ್ದ. ನಿದ್ದೆಯ ಮೊಂಪರೋ, ದಟ್ಟ ಮಂಜಿನ ಸಮಸ್ಯೆಯೋ, ಅತಿವೇಗದಿಂದಾಗಿ ವಾಹನದ ಮೇಲೆ ನಿಯಂತ್ರಣ ತಪ್ಪಿತೋ ಅಂತೂ ಎದುರಿಗೆ ರಸ್ತೆ ಬದಿ ನಿಂತಿದ್ದ ಲಾರಿಯತ್ತ ತನ್ನ ವಾಹನ ನುಗ್ಗಿಸಿಬಿಟ್ಟಿದ್ದಾನೆ. ಆದರೆ ನಂಬಿ ಬಂದ ಜೀವಾಳುಗಳನ್ನು ನಡುರಸ್ತೆಯಲ್ಲೇ ಬಲಿ ನೀಡಿದ್ದಾನೆ. ಚಿಕ್ಕಬಳ್ಳಾಪುರ ಗ್ರಾಮಾಂತರ ಠಾಣೆಯ ಪೊಲೀಸರು ಎರಡೂ ವಾಹನಗಳ ಮೇಲೆ ದೂರು ದಾಖಲಿಸಿಕೊಂಡು ಒಟ್ಟಾರೆ ತನಿಖೆ ಕೈಗೊಂಡಿದ್ದಾರೆ.
ಅಪರಾಧ ಸುದ್ದಿಗಳನ್ನು ಓದಲು ಇದರ ಮೇಲೆ ಕ್ಲಿಕ್ ಮಾಡಿ