87 ಕೀ.ಮೀ. ಸೈಕಲ್ ಜಾಥ ನಡೆಸಿ ಹುತಾತ್ಮರಿಗೆ ನಮನ ಸಲ್ಲಿಸಿದ ಬಿಜೆಪಿ ಶಾಸಕ ಸುರೇಶಕುಮಾರ್
ಮಾಜಿ ಸಚಿವರಾದ ಸುರೇಶಕುಮಾರ್ ಸೈಕಲ್ ಜಾಥ ಮಾಡುವುದು ಸರ್ವೆ ಸಾಮಾನ್ಯ. ಆದ್ರೆ ಇಂದು ಕೆಲವೇ ಗಂಟೆಗಳಲ್ಲಿ 87ಕೀ.ಮೀ. ಸೈಕಲ್ ಜಾಥ ನಡೆಸಿದ್ದಾರೆ.
ಚಿಕ್ಕಬಳ್ಳಾಪುರ: ಬೆಂಗಳೂರಿನ ರಾಜಾಜಿನಗರ ವಿಧಾನಸಭಾ ಕ್ಷೇತ್ರದ ಬಿಜೆಪಿ ಶಾಸಕ, ಮಾಜಿ ಸಚಿವರಾದ ಸುರೇಶಕುಮಾರ್(S Suresh Kumar) ಸೈಕಲ್ ಜಾಥ ಮಾಡುವುದು ಸರ್ವೆ ಸಾಮಾನ್ಯ. ಆದ್ರೆ ಇಂದು ಕೆಲವೇ ಗಂಟೆಗಳಲ್ಲಿ 87ಕೀ.ಮೀ. ಸೈಕಲ್ ಜಾಥ(Cycle Jatha) ನಡೆಸಿದ್ದಾರೆ. ಚಿಕ್ಕಬಳ್ಳಾಪುರ ಜಿಲ್ಲೆ ಗೌರಿಬಿದನೂರು ತಾಲೂಕಿನ ಸ್ವಾತಂತ್ರ್ಯ ಸೇನಾನಿಗಳ ಹುತಾತ್ಮ ಸ್ಥಳ ವಿಧುರಾಶ್ವತ್ಥದ ವೀರಸೌಧಕ್ಕೆ ಭೇಟಿ ನೀಡಿ, ಸ್ವತಃ ಬಿಜೆಪಿ ಕಾರ್ಯಕರ್ತರೆ ಆಶ್ಚರ್ಯಗೊಳ್ಳುವಂತೆ ಮಾಡಿದ್ರು.
ಇನ್ನೂ ಸುರೇಶಕುಮಾರ್ ಬೆಳಿಗ್ಗೆ 6 ಗಂಟೆಗೆ ಮನೆ ಬಿಟ್ಟು ಸೈಕಲ್ ನಲ್ಲೇ ಹೆಬ್ಬಾಳ, ಯಲಹಂಕ, ದೊಡ್ಡಬಳ್ಳಾಪುರದ ಮಾರ್ಗವಾಗಿ ಗೌರಿಬಿದನೂರು ನಗರಕ್ಕೆ ಆಗಮಿಸಿ, ನಂತರ ವಿಧುರಾಶ್ವತ್ಥಕ್ಕೆ ಭೇಟಿ ನೀಡಿದ್ರು. ಜನ ಸಾಮಾನ್ಯರಂತಿದ್ದ ಸುರೇಶಕುಮಾರ್ ಗೆ ಅಲ್ಲಲ್ಲಿ ದಾರಿ ಮದ್ಯೆ ಬಿಜೆಪಿ ಮುಖಂಡರು ಕಾರ್ಯಕರ್ತರು ಸಂತೋಷದಿಂದ ಬರಮಾಡಿಕೊಂಡು ಸನ್ಮಾನ ಮಾಡಿ ಎಳನೀರು ತಿಂಡಿ ನೀಡಿ ಗೌರವಿಸಿದ್ರು. ಇನ್ನು ಮಧ್ಯಾಹ್ನ ಒಂದು ಗಂಟೆಗೆ ವಿಧುರಾಶ್ವತ್ಥಕ್ಕೆ ಭೇಟಿ ನೀಡಿದ ಸುರೇಶಕುಮಾರ್, ಮೊದಲು ಕ್ಷೇತ್ರದ ವಿಧುರಾಶ್ವತ್ಥ ನಾರಾಯಣಸ್ವಾಮಿ ದೇವರ ದೇವಸ್ಥಾನಕ್ಕೆ ಭೇಟಿ ನೀಡಿ, ಪೂಜೆ ಸಲ್ಲಿಸಿದ ನಂತರ ಧ್ವಜ ಸತ್ಯಾಗ್ರಹ ಸಂದರ್ಭದಲ್ಲಿ ನಡೆದ ಗೋಲಿಬಾರ್ ನಲ್ಲಿ ಹುತಾತ್ಮರಾದವರ ವೀರಗಲ್ಲು ವೀರಸೌಧಕ್ಕೆ ನಮಿಸಿ, ಕೆಲಕಾಲ ವೀರಸೌಧದ ಬಳಿಯೇ ವಿಶ್ರಾಂತಿ ಪಡೆದು ನಂತರ ವೀರಸೌಧದ ಗ್ಯಾಲರಿಯಲ್ಲಿ ಇರುವ ಸ್ವಾತಂತ್ರ್ಯ ಸಂಗ್ರಾಮದ ಫೋಟೋ ಗ್ಯಾಲರಿ ವಿಕ್ಷಣೆ ಮಾಡಿದ್ರು. ಆದ್ರೆ ಸುರೇಶಕುಮಾರ್ ರವರ ಸೈಕಲ್ ಜಾಥ ನೋಡಿ ಸ್ವತಃ ಬಿಜೆಪಿ ಮುಖಂಡರುಗಳು ಆಶ್ಚರ್ಯ ವ್ಯಕ್ತಪಡಿಸಿದ್ರು.
ಬ್ರಿಟೀಷರೆ ಭಾರತ್ ಬಿಟ್ಟು ತೊಲಗಿ ಅಂತ ಅಂದು ಕ್ವೀಟ್ ಇಂಡಿಯಾ ಚಳುವಳಿ ನಡೆಸಿದ ಸ್ಮರಣಾರ್ಥ ಇಂದು ಕ್ವೀಟ್ ಇಂಡಿಯಾ ದಿನ, ಮತ್ತೊಂದೆಡೆ ಸ್ವಾತಂತ್ರ್ಯದ ಅಮೃತ ಮಹೋತ್ಸವ ಪ್ರಯುಕ್ತ ಎಲ್ಲಡೆ ತಿರಂಗಯಾತ್ರೆ ನಡೆಯುತ್ತಿದೆ. ಮತ್ತೊಂದೆಡೆ ಮಾಜಿ ಸಚಿವರು ಹಾಗೂ ಶಾಸಕರು ಆಗಿರುವ ಸುರೇಶಕುಮಾರ್ ನಡೆಸಿದ ಸೈಕಲ್ ಜಾಥ, ಯುವಕರನ್ನೆ ನಾಚಿಸುವಂತಿತ್ತು.
ವರದಿ: ಭೀಮಪ್ಪ ಪಾಟೀಲ್, ಟಿವಿ9 ಚಿಕ್ಕಬಳ್ಳಾಪುರ
Published On - 8:04 pm, Tue, 9 August 22