ಚಿಕ್ಕಬಳ್ಳಾಪುರದಲ್ಲಿ KSRTC ಬಸ್ಗೆ ನುಗ್ಗಿ ಬ್ಯಾಗ್ ಕದ್ದು ಎಸ್ಕೇಪ್: ಕಳುವಾಗಿದ್ದು ಅರ್ಧಕೋಟಿ ಹಣ!
ಕೆಎಸ್‌ಆರ್‌ಟಿಸಿ ಬಸ್‌ನಲ್ಲಿ ಸಾಗಿಸುತ್ತಿದ್ದ 55 ಲಕ್ಷ ರೂಪಾಯಿ ನಗದು ಕಳ್ಳತನವಾಗಿರುವ ಘಟನೆ ಚಿಕ್ಕಬಳ್ಳಾಪುರದಲ್ಲಿ ನಡೆದಿದೆ. ಉದ್ಯಮಿಯೊಬ್ಬರು ಮನೆಯ ಮಾರಾಟದಿಂದ ಬಂದ ಹಣವನ್ನು ಬಸ್‌ನಲ್ಲಿ ಕೊಂಡೊಯ್ಯುತ್ತಿದ್ದಾಗ ಕಳ್ಳರು ದೋಚಿ ಪರಾರಿಯಾಗಿದ್ದಾರೆ. ನಕಲಿ ನಂಬರ್ ಪ್ಲೇಟ್ ಕಾರು ಬಳಸಿ ಕೃತ್ಯ ಎಸಗಲಾಗಿದೆ. ಪೊಲೀಸರು ಆರೋಪಿಗಾಗಿ ತನಿಖೆ ನಡೆಸುತ್ತಿದ್ದು, ಇದು ರಾಜ್ಯದಲ್ಲಿ ನಡೆದ ಮತ್ತೊಂದು ದೊಡ್ಡ ನಗದು ಕಳ್ಳತನ ಪ್ರಕರಣವಾಗಿದೆ.

ಚಿಕ್ಕಬಳ್ಳಾಪುರ, ಡಿಸೆಂಬರ್ 19: ಬೆಂಗಳೂರಲ್ಲಿ ಎಟಿಂಗೆ ಹಣ ಸಾಗಿಸುತ್ತಿದ್ದ ವಾಹನವನ್ನು ಹಾಡಹಗಲೇ ತಡೆದು ಕೋಟ್ಯಾಂತರ ರೂಪಾಯಿ ದರೋಡೆ ಪ್ರಕರಣ ಮಾಸುವ ಮುನ್ನವೇ ರಾಜ್ಯದಲ್ಲಿ ಮತ್ತೊಂದು ಘಟನೆ ನಡೆದಿದೆ. ಚಿಕ್ಕಬಳ್ಳಾಪುರ ತಾಲೂಕಿನ ಅರೂರು ಬಳಿ ಕೆಎಸ್‌ಆರ್‌ಟಿಸಿ ಬಸ್‌ನಲ್ಲಿ ಸಾಗಿಸುತ್ತಿದ್ದ 55 ಲಕ್ಷ ನಗದನ್ನು ಕದ್ದು ಕಳ್ಳರು ಎಸ್ಕೇಪ್ ಆಗಿದ್ದಾರೆ. ಕಳುವಾದ ಹಣ ಉದ್ಯಮಿಯೋರ್ವರಿಗೆ ಸೇರಿದ್ದು ಎನ್ನಲಾಗಿದೆ.
ಬೆಂಗಳೂರಿನಿಂದ ಹೈದರಾಬಾದ್ಗೆ ಹೊರಟಿದ್ದ ಕೆಎಸ್‌ಆರ್‌ಟಿಸಿ ಬಸ್ ಅನ್ನು ನಿನ್ನೆ ರಾತ್ರಿ ಚಿಕ್ಕಬಳ್ಳಾಪುರ ತಾಲೂಕಿನ ಅರೂರು ಬಳಿ ಪ್ರಯಾಣಿಕರ ಊಟಕ್ಕೆಂದು ಕೆಎ 57 ಎಫ್-3911 ಸಂಖ್ಯೆಯ ಬಸ್ ನಿಲ್ಲಿಸಲಾಗಿತ್ತು. ಊಟಕ್ಕೆಂದು ಕೆಳಗೆ ಇಳಿದು ಬರೋವಷ್ಟರಲ್ಲಿ ಸೀಟ್ನಲ್ಲಿ ಇಟ್ಟಿದ್ದ ಹಣದ ಬ್ಯಾಗ್ ನಾಪತ್ತೆಯಾಗಿದೆ. ಕಳುವಾದ ಹಣ ಹೈದರಾಬಾದ್ ಮೂಲದ ಉದ್ಯಮಿ ಕೆ.ವೆಂಕಟೇಶ್ವರ ರಾವ್ಗೆ ಸೇರಿದ್ದು, ಬೆಂಗಳೂರಿನಲ್ಲಿದ್ದ ಮನೆ ಮಾರಾಟದಿಂದ ಬಂದಿದ್ದ ನಗದನ್ನು ಅವರು ಕೊಂಡೊಯ್ಯುತ್ತಿದ್ದರು ಎನ್ನಲಾಗಿದೆ.
ಇದನ್ನೂ ಓದಿ:
ಕ್ಷಣಮಾತ್ರದಲ್ಲಿ ಹಣಕದ್ದು ಎಸ್ಕೇಪ್
ಟಾಟಾ ಇಂಡಿಕಾ ಕಾರಿನಲ್ಲಿ ಬಂದಿದ್ದ ವ್ಯಕ್ತಿ ಹಣ ದೋಚಿದ್ದಾನೆ ಎಂದು ಬಸ್ನಲ್ಲಿದ್ದ ಇತರ ಪ್ರಯಾಣಿಕರು ಮಾಹಿತಿ ನೀಡಿದ್ದಾರೆ. ಕಾರಿನಿಂದ ಇಳಿದು ನೇರವಾಗಿ ಬಸ್ನೊಳಗೆ ನುಗ್ಗಿದ್ದ ವ್ಯಕ್ತಿ ಸೀಟ್ ನಂ.4ರಲ್ಲಿದ್ದ ಬ್ಯಾಗ್ ತೆಗೆದುಕೊಂಡು ಹೋಗಿದ್ದಾನೆ. ಈ ಬಗ್ಗೆ ಪೆರೇಸಂದ್ರ ಠಾಣೆಗೆ ಉದ್ಯಮಿ ಕೆ.ವೆಂಕಟೇಶ್ವರ ರಾವ್ ದೂರು ನೀಡಿದ್ದು, ಆರೋಪಿಗಾಗಿ ಪೊಲೀಸರು ಹುಡುಕಾಟ ನಡೆಸುತ್ತಿದ್ದಾರೆ. ಕಾರಿಗೆ ನಕಲಿ ನಂಬರ್ ಪ್ಲೇಟ್ ಬಳಸಿ ಆರೋಪಿ ಪರಾರಿಯಾಗಿದ್ದಾನೆ ಎನ್ನಲಾಗಿದೆ.
ಮತ್ತಷ್ಟು ಸುದ್ದಿ ಓದಲು ಇಲ್ಲಿ ಕ್ಲಿಕ್ ಮಾಡಿ.
Published On - 7:59 am, Fri, 19 December 25




