ಇ.ಡಿ ಹೆಸರಲ್ಲಿ ಚಿನ್ನದ ವ್ಯಾಪಾರಿ ದರೋಡೆ ಕೇಸ್: ಆರೋಪಿಗಳಿಗೆ ಖಾಕಿ ಶಾಕ್, ನಾಲ್ವರು ಅರೆಸ್ಟ್
ಇ.ಡಿ ಅಧಿಕಾರಿಗಳ ಸೋಗಿನಲ್ಲಿ ಹುಬ್ಬಳ್ಳಿಯಲ್ಲಿ ಚಿನ್ನದ ವ್ಯಾಪಾರಿಯೊಬ್ಬರಿಂದ 3 ಕೋಟಿಗೂ ಹೆಚ್ಚು ಮೌಲ್ಯದ ಚಿನ್ನಾಭರಣ ದೋಚಿದ್ದ ಪ್ರಕರಣದಲ್ಲಿ ಪೊಲೀಸರು ಆರೋಪಿಗಳಿಗೆ ಶಾಕ್ ಕೊಟ್ಟಿದ್ದು, ನಾಲ್ವರನ್ನು ಬಂಧಿಸಿದ್ದಾರೆ. ಮುಂಬೈ ಮತ್ತು ಗುಜರಾತ್ ಮೂಲದ ಆರೋಪಿಗಳಿಂದ ಚಿನ್ನಾಭರಣ, ನಗದು ಮತ್ತು ಮೊಬೈಲ್ ಫೋನ್ಗಳನ್ನು ವಶಕ್ಕೆ ಪಡೆಯಲಾಗಿದೆ.

ಹುಬ್ಬಳ್ಳಿ, ಡಿಸೆಂಬರ್ 02: ಇ.ಡಿ ಹೆಸರಲ್ಲಿ ಚಿನ್ನದ ವ್ಯಾಪಾರಿಯ ದರೋಡೆ ಪ್ರಕರಣ ಸಂಬಂಧ 4 ಜನ ಆರೋಪಿಗಳನ್ನ ಸಿಸಿಬಿ ಪೊಲೀಸರು ಬಂಧಿಸಿದ್ದಾರೆ. ಮುಂಬೈನ ಅಂಕುಶ ಕದಂ, ಚಂದ್ರಶೇಖರ, ವಿಲಾಸ ಮೋಹಿತೆ ಹಾಗೂ ಗುಜರಾತ್ನ ವಡೋದರಾದ ಜಿಜ್ಞೇಶ್ ಕುಮಾರ್ ಬಂಧಿತ ಆರೋಪಿಗಳಾಗಿದ್ದಾರೆ. ಬಂಧಿತರಿಂದ 6,65,284 ರೂ. ಬೆಲೆಬಾಳುವ 56.26 ಗ್ರಾಂ ಚಿನ್ನದ ಒಡವೆಗಳು, 60 ಸಾವಿರ ರೂ. ನಗದು ಮತ್ತು 7 ಮೊಬೈಲ್ ಫೋನ್ಗಳನ್ನು ಜಪ್ತಿ ಮಾಡಲಾಗಿದೆ.
ಇ.ಡಿ ಅಧಿಕಾರಿಗಳ ಸೋಗಿನಲ್ಲಿ ಚಿನ್ನಾಭರಣ ಅಂಗಡಿಗಳಿಗೆ ಆಭರಣ ಪೂರೈಸುವ ವ್ಯವಹಾರ ಮಾಡುವ ಕೇರಳದ ವ್ಯಾಪಾರಿ ಸುದೀನ್ ಎಂ.ಆರ್. ಅವರನ್ನು ಹೆದರಿಸಿ, ಬರೋಬ್ಬರಿ 3 ಕೋಟಿ ರೂ. ಹೆಚ್ಚಿನ ಮೌಲ್ಯದ ಚಿನ್ನಾಭರಣ ದೋಚಿ ಗ್ಯಾಂಗ್ ಒಂದು ಪರಾರಿಯಾಗಿತ್ತು. ಹುಬ್ಬಳ್ಳಿಯ ಚೆನ್ನಮ್ಮ ವೃತ್ತಕ್ಕೆ ಹೊಂದಿಕೊಂಡಿರುವ ನೀಲಿಜನ್ ರಸ್ತೆಯಲ್ಲಿ ಘಟನೆ ನಡೆದಿತ್ತು. ನ. 15 ರಂದು ಮಂಗಳೂರಿನಿಂದ ಬೆಳಗಾವಿಗೆ ಕೆಲಸಗಾರ ವಿವೇಕ್ ಜೊತೆ ಬಂದಿದ್ದ ಸುದೀನ್ ಅವರ ಬಳಿ ಇದ್ದ ಚೈನ್, ಬ್ರಾಸ್ಲೈಟ್, ಉಂಗುರ, ಕಿವಿಯೋಲೆ, ನೆಕ್ಲೆಸ್, ಲಾಕೆಟ್, ಬಳೆ ಸೇರಿ ಒಟ್ಟು 3.2 ಕೋಟಿ ರೂ. ಮೌಲ್ಯದ ಆಭರಣಗಳನ್ನು ಖದೀಮರು ದೋಚಿದ್ದರು.
ಇದನ್ನೂ ಓದಿ: ಇಡಿ ಅಧಿಕಾರಿ ಸೋಗಿನಲ್ಲಿ ಬಂದು 3 ಕೋಟಿ ರೂ ಹೆಚ್ಚು ಮೌಲ್ಯದ ಚಿನ್ನಾಭರಣ ಲೂಟಿ
ಇ.ಡಿ ಅಧಿಕಾರಿಗಳು ಎಂದು ಹಿಂದಿಯಲ್ಲಿ ಮಾತನಾಡಿದ್ದ ಆರೋಪಿಗಳು, ಗುರುತಿನ ಪತ್ರ ತೋರಿಸಿ ವಿಚಾರಣೆಗೆ ಕಚೇರಿಗೆ ಬನ್ನಿ ಎಂದು ಕಾರಿನಲ್ಲಿ ಕರೆದುಕೊಂಡು ಹೋಗಿದ್ದರು. ಚಿನ್ನಾಭರಣಗಳನ್ನು ಅಕ್ರಮವಾಗಿ ಸಾಗಾಟ ಮಾಡುತ್ತಿರುವುದು ತಿಳಿದು ಬಂದಿದೆ ಎಂದು ಸುದೀನ್ರನ್ನು ಬೆದರಿಸಿತ್ತು. ಅಲ್ಲದೆ, ಅವರ ಮೊಬೈಲ್ ಫೋನ್ ಪಡೆದು ಸಿಮ್ ತೆಗೆದಿದ್ದ ಆರೋಪಿಗಳು, ನಂತರ ಅವರ ಮೇಲೆ ಹಲ್ಲೆ ನಡೆಸಿ ಚಿನ್ನಾಭರಣವಿದ್ದ ಬ್ಯಾಗ್ ಕಿತ್ತುಕೊಂಡಿದ್ದರು. ಬೆಳಗಾವಿಯ ಕಿತ್ತೂರು ಸಮೀಪ ಕೆಲಸಗಾರ ವಿವೇಕ್ರನ್ನ ಕಾರಂದ ಇಳಿಸಿದ್ದ ಗ್ಯಾಂಗ್, ಸುದೀನ್ರನ್ನು ಎಂ.ಕೆ. ಹುಬ್ಬಳ್ಳಿ ರಸ್ತೆಯ ಮಾರ್ಗ ಮಧ್ಯೆ ಬಿಟ್ಟಿತ್ತು. ಬಳಿಕ ನಗದು ಹಾಗೂ ಚಿನ್ನಾಭರಣಗಳ ಜೊತೆ ಎಸ್ಕೇಪ್ ಆಗಿತ್ತು. ಈ ಬಗ್ಗೆ ಉಪನಗರ ಪೊಲೀಸ್ ಠಾಣೆಯಲ್ಲಿ ಮೊದಲು ಪ್ರಕರಣ ದಾಕಲಾಗಿದ್ದು, ಬಳಿಕ ಸಿಸಿಬಿಗೆ ಕೇಸ್ ವಹಿಸಲಾಗಿತ್ತು.
ಮತ್ತಷ್ಟು ಸುದ್ದಿ ಓದಲು ಇಲ್ಲಿ ಕ್ಲಿಕ್ ಮಾಡಿ.
Published On - 3:09 pm, Tue, 2 December 25



