
ಚಿಕ್ಕಬಳ್ಳಾಪುರ, (ಜನವರಿ 24): ಬ್ಯಾನರ್ ವಿಚಾರಕ್ಕೆ ಶಿಡ್ಲಘಟ್ಟ (Shidlaghatta) ನಗರಸಭೆ ಪೌರಾಯುಕ್ತೆ ಅಮೃತಾ ಅವರಿಗೆ ಕರೆ ಮಾಡಿ ಬೆದರಿಕೆ ಹಾಕಿ ಪ್ರಕರಣಕ್ಕೆ ಸಂಬಂಧಿಸಿದಂತೆ ರಾಜೀವ್ ಗೌಡನ (Rajeev Gowda) ಜಾಮೀನು ಅರ್ಜಿ ವಜಾಗೊಂಡಿದೆ. ನಿರೀಕ್ಷಣಾ ಜಾಮೀನು ಕೋರಿ ರಾಜೀವ್ ಗೌಡ ಸಲ್ಲಿಸಿದ್ದ ಅರ್ಜಿಯನ್ನು ಚಿಕ್ಕಬಳ್ಳಾಪುರ (Chikkaballapur) 2ನೇ ಹೆಚ್ಚುವರಿ ಸೆಷನ್ಸ್ ಕೋರ್ಟ್ ವಜಾ ಮಾಡಿ ಆದೇಶ ಹೊರಡಿಸಿದೆ.
ಬ್ಯಾನರ್ ತೆರವು ಮಾಡಿದ್ದಕ್ಕೆ ರಾಜೀವ್ ಗೌಡ, ಶಿಡ್ಲಘಟ್ಟ ನಗರಸಬೆ ಆಯುಕ್ತೆ ಅಮೃತಾ ಅವರಿಗೆ ಕರೆ ಮಾಡಿ ಅವಾಚ್ಯ ಶಬ್ಧಗಳಿಂದ ನಿಂದನೆ ಮಾಡಿದ್ದ. ಅಲ್ಲದೇ ಬೆದರಿಕೆ ಸಹ ಹಾಕಿದ್ದು, ಈ ಸಂಬಂಧ ಅಮೃತಾ ಪೊಲೀಸರಿಗೆ ದೂರು ನೀಡಿದ್ದರು. ಈ ಪ್ರಕರಣ ಸಂಬಂಧ ಜಮೀನಿಗಾಗಿ ರಾಜೀವ್ ಗೌಡ ಚಿಕ್ಕಬಳ್ಳಾಪುರ 2ನೇ ಹೆಚ್ಚುವರಿ ಸೆಷನ್ಸ್ ಕೋರ್ಟ್ ಅರ್ಜಿ ಸಲ್ಲಿಸಿದ್ದು, ಆರೋಪಿ ರಾಜೀವ್ ಗೌಡ ಪರ ವಕೀಲ ವಿವೇಕ್ ಸುಬ್ಬಾರೆಡ್ಡಿ ವಾದ ಮಂಡಿಸಿದ್ದರೆ, ದೂರುದಾರೆ ಪರ ಪಿಪಿ ಸುಮತಿಶಾಂತಾ ಮೇರಿ ವಾದ ಮಂಡಿಸಿದ್ದರು. ಎರಡು ಕಡೆಯಿಂದ ವಾದ ಪ್ರತಿವಾದ ಆಲಿಸಿದ್ದ ಕೋರ್ಟ್, ಆದೇಶವನ್ನು ಇಂದಿಗೆ ಕಾಯ್ದಿರಿಸಿತ್ತು.
ಪೌರಾಯುಕ್ತೆಗೆ ನಿಂದಿಸಿರುವ ಪ್ರಕರಣದಲ್ಲಿ ರಾಜೀವ್ ಗೌಡ ವಿರುದ್ಧ ಶಿಡ್ಲಘಟ್ಟ ಪೊಲೀಸರು ನಾಲ್ಕು ನೋಟಿಸ್ ಜಾರಿ ಮಾಡಿದ್ದಾರೆ. ಆದರೆ, ಮನೆಗಳಿಗೆ ಬೀಗ ಜಡಿದು ರಾಜೀವ್ ಗೌಡ ತಲೆಮೆರೆಸಿಕೊಂಡಿದ್ದಾರೆ. ಅವರ ಪತ್ನಿ ಸಹನಾ ಕೂಡ ಮನೆಯಲ್ಲಿ ಇಲ್ಲವೆಂಬ ಮಾಹಿತಿ ಲಭ್ಯವಾಗಿದೆ. ಪ್ರಕರಣ ದಾಖಲಾಗುತ್ತಿದ್ದಂತೆಯೇ ರಾಜೀವ್ ಗೌಡ ತಲೆಮರೆಸಿಕೊಂಡಿದ್ದು, ಪೊಲೀಸರು ಶೋಧ ಕಾರ್ಯ ನಡೆಸುತ್ತಿದ್ದರೂ ಸಹ ಸುಳಿವು ಸಿಕ್ಕಿಲ್ಲ.
ಇನ್ನು ಪ್ರಕರಣ ರದ್ದುಕೋರಿ ರಾಜೀವ್ ಗೌಡ ಸಲ್ಲಿಸಿದ್ದ ಅರ್ಜಿ ಸಹ ಹೈಕೋರ್ಟ್ನಲ್ಲಿ ವಜಾಗೊಂಡಿದೆ. ಒಮ್ಮೆ ಮಾತನಾಡಿದರೆ ವಾಪಸ್ ಪಡೆಯಲು ಆಗುವುದಿಲ್ಲ. ನಿಯಂತ್ರಣವಿಲ್ಲದ ನಾಲಿಗೆಯೇ ಎಲ್ಲವನ್ನೂ ಹಾಳುಮಾಡಬಲ್ಲದು. ನೀವು ಕ್ಷಮೆ ಕೇಳಿದರೂ ಒಡೆದಿರುವುದು ಒಂದಾಗುವುದಿಲ್ಲ ಎಂದು ಹೈಕೋರ್ಟ್ ತರಾಟೆ ತೆಗೆದುಕೊಂಡಿತ್ತು.
ಹೌದು…ರಾಜೀವ್ ಗೌಡನ ಬಂಧನ ವಿಚಾರದಲ್ಲಿ ಪೊಲೀಸರ ಮೇಲೆ ಅನುಮಾನಗಳು ವ್ಯಕ್ತವಾಗಿವೆ. ದೂರು ದಾಖಲಾಗಿ ಹಲವು ದಿನಗಳು ಕಳೆದರೂ ಸಹ ಇದುವರೆಗೂ ರಾಜೀವ್ ಗೌಡನ ಬಂಧನವಾಗಿಲ್ಲ. ಪ್ರಭಾವಿ ಸಚಿವರೇ ರಾಜೀವ್ ಗೌಡನ ಬೆನ್ನಿಗೆ ನಿಂತಿದ್ದಾರೆ ಎನ್ನಲಾಗಿದ್ದು, ಪೊಲೀಸರು ಸಹ ನೆಪ ಮಾತ್ರಕ್ಕೆ ಹುಡುಕಾಟದ ನಾಟಕ ಮಾಡುತ್ತಿದ್ದಾರೆ ಎನ್ನುವ ಆರೋಪಗಳು ಸಹ ಕೇಳಿಬಂದಿವೆ.
ಶಿಡ್ಲಘಟ್ಟದ ಕೋಟೆ ವೃತ್ತದಲ್ಲಿ ರಸ್ತೆಗೆ ಅಡ್ಡವಾಗಿ ಕಟ್ಟಿದ್ದ ಬ್ಯಾನರ್ ತೆರವುಗೊಳಿಸಿದ್ದರಿಂದ ಸಿಟ್ಟಾಗಿದ್ದ ರಾಜೀವ್ ಗೌಡ ಪೌರಾಯುಕ್ತೆ ಅಮೃತ ಗೌಡಗೆ ದೂರವಾಣಿ ಕರೆ ಮಾಡಿ ಅವಾಚ್ಯ ಶಬ್ದಗಳಿಂದ ಮತ್ತು ಅಶ್ಲೀಲವಾಗಿ ನಿಂದಿಸಿದ್ದರು. ಈ ವಿಚಾರವಾಗಿ ಅಮೃತ ಗೌಡ ಮೇಲಧಿಕಾರಿಗಳಿಗೆ ದೂರು ನೀಡಿದ್ದರು. ನಂತರ, ಪೊಲೀಸರಿಗೂ ದೂರು ನೀಡಿದ್ದರು. ಈ ವಿಚಾರ ನಂತರ ತೀವ್ರ ಸ್ವರೂಪ ಪಡೆದುಕೊಂಡಿತ್ತು.
Published On - 5:36 pm, Sat, 24 January 26