ಪೌರಾಯುಕ್ತೆಗೆ ನಿಂದನೆ ಕೇಸ್: ಕಾಂಗ್ರೆಸ್ ಮುಖಂಡ ರಾಜೀವ್ ಗೌಡ ರಕ್ಷಣೆಗೆ ನಿಂತಿದ್ದಾರಾ ಪ್ರಭಾವಿ ಸಚಿವ? ಬಲವಾಯ್ತು ಅನುಮಾನ
ಶಿಡ್ಲಘಟ್ಟ ಪೌರಾಯುಕ್ತೆಗೆ ನಿಂದಿಸಿದ ಆರೋಪದಡಿ ಕಾಂಗ್ರೆಸ್ ನಾಯಕ ರಾಜೀವ್ ಗೌಡಗೆ ಕರ್ನಾಟಕ ಹೈಕೋರ್ಟ್ ತಪರಾಕಿ ಹಾಕಿದರೂ ಇನ್ನೂ ಬಂಧನವಾಗಿಲ್ಲ. ಪ್ರಭಾವಿ ಸಚಿವರೊಬ್ಬರು ರಾಜೀವ್ ಗೌಡ ರಕ್ಷಣೆಗೆ ನಿಂತಿರುವ ಶಂಕೆ ವ್ಯಕ್ತವಾಗಿದೆ. ಇದರಿಂದ ಪೊಲೀಸರು ಅಸಹಾಯಕರಾಗಿದ್ದಾರೆ ಎನ್ನಲಾಗಿದೆ. ರಾಜೀವ್ ಗೌಡರನ್ನು ಪಕ್ಷದಿಂದ ಅಮಾನತು ಮಾಡಿದ್ದರೂ ಬಂಧನವಾಗದಿರುವುದು ರಾಜಕೀಯ ವಲಯದಲ್ಲಿ ಹಲವು ಪ್ರಶ್ನೆಗಳನ್ನು ಹುಟ್ಟುಹಾಕಿದೆ.

ಚಿಕ್ಕಬಳ್ಳಾಪುರ, ಜನವರಿ 24: ಶಿಡ್ಲಘಟ್ಟ ಪೌರಾಯುಕ್ತೆಗೆ ಅವಾಚ್ಯ ಶಬ್ದಗಳಿಂದ ನಿಂದಿಸಿ ಬೆದರಿಕೆ ಹಾಕಿದ್ದ ಪ್ರಕರಣ ಸಂಬಂಧ ಕಾಂಗ್ರೆಸ್ (Congress) ಮುಖಂಡ ರಾಜೀವ್ ಗೌಡಗೆ (Rajeev Gowda) ಕರ್ನಾಟಕ ಹೈಕೋರ್ಟ್ ಕೂಡ ಛೀಮಾರಿ ಹಾಕಿದೆ. ಇದರಿಂದ, ಪರೋಕ್ಷವಾಗಿ ಸರ್ಕಾರಕ್ಕೂ ಮುಖಭಂಗವಾಗಿದೆ. ಇಷ್ಟೆಲ್ಲಾ ಆದರೂ ರಾಜೀವ್ ಗೌಡ ಬಂಧನವಾಗಿಲ್ಲ. ಪ್ರಭಾವಿ ಸಚಿವರೊಬ್ಬರು ರಾಜೀವ್ ಗೌಡ ರಕ್ಷಣೆಗೆ ನಿಂತಿದ್ದಾರೆಯೇ ಎಂಬ ಅನುಮಾನ ಇದೀಗ ಬಲವಾಗಿದೆ. ಹಿರಿಯ ಮಂತ್ರಿಯೊಬ್ಬರು ರಾಜೀವ್ ಗೌಡ ಪತ್ನಿ ಸಹನಾ ಜೊತೆ ದೂರವಾಣಿ ಸಂಪರ್ಕದಲ್ಲಿದ್ದಾರೆ. ಅವರೇ ಬಂಧನದಿಂದ ತಪ್ಪಿಸಿಕೊಳ್ಳಲು ಬೇಕಾದ ಮಾರ್ಗದರ್ಶನ ಮಾಡುತ್ತಿದ್ದಾರೆ ಎಂಬ ವಿಚಾರ ಉನ್ನತ ಮೂಲಗಳಿಂದ ತಿಳಿದು ಬಂದಿದೆ.
ಪ್ರಭಾವಿ ಸಚಿವರ ಕಾರಣ ಪೊಲೀಸರು ಅಸಹಾಯಕರಾಗಿದ್ದಾರೆ. ಇದರಿಂದಾಗಿ ರಾಜೀವ್ ಗೌಡ ಬಂಧನ ಸಾಧ್ಯವಾಗುತ್ತಿಲ್ಲ ಎನ್ನಲಾಗಿದೆ.
ಬೆಂಗಳೂರು ಸೇರಿದಂತೆ ಕರ್ನಾಟಕದ ವಿವಿಧ ಭಾಗಗಳಲ್ಲಿ ಪೊಲೀಸರು ಶೋಧ ನಡೆಸಿದ್ದರು ಇನ್ನೂ ರಾಜೀವ್ ಗೌಡ ಬಂಧನ ವಾಗದಿರುವುದು, ಪ್ರಭಾವಿ ಸಚಿವರ ಹಸ್ತಕ್ಷೇಪದ ಕುರಿತ ಅನುಮಾನಗಳಿಗೆ ಪುಷ್ಟಿ ನೀಡಿದೆ.
ಶಿಡ್ಲಘಟ್ಟ ಪೊಲೀಸರಿಂದ ನಾಲ್ಕು ನೋಟಿಸ್ ಜಾರಿ
ಪೌರಾಯುಕ್ತೆಗೆ ನಿಂದಿಸಿರುವ ಪ್ರಕರಣದಲ್ಲಿ ರಾಜೀವ್ ಗೌಡ ವಿರುದ್ಧ ಶಿಡ್ಲಘಟ್ಟ ಪೊಲೀಸರು ನಾಲ್ಕು ನೋಟಿಸ್ ಜಾರಿ ಮಾಡಿದ್ದಾರೆ. ಆದರೆ, ಮನೆಗಳಿಗೆ ಬೀಗ ಜಡಿದು ರಾಜೀವ್ ಗೌಡ ತಲೆಮೆರೆಸಿಕೊಂಡಿದ್ದಾರೆ. ಅವರ ಪತ್ನಿ ಸಹನಾ ಕೂಡ ಮನೆಯಲ್ಲಿ ಇಲ್ಲವೆಂಬ ಮಾಹಿತಿ ಲಭ್ಯವಾಗಿದೆ.
ಮತ್ತೊಂದೆಡೆ ರಾಜೀವ್ ಗೌಡ ವಿಚಾರ ಚಿಕ್ಕಬಳ್ಳಾಪುರ, ಕೋಲಾರ ವ್ಯಾಪ್ತಿಯಲ್ಲಿ ಕಾಂಗ್ರೆಸ್‌ನ ಎರಡು ಬಣಗಳ ನಡುವೆ ಮುಸುಕಿನ ಗುದ್ದಾಟಕ್ಕೆ ಕಾರಣವಾಯಿತೇ ಎಂಬ ಪ್ರಶ್ನೆಯೂ ಮೂಡಿದೆ. ಒಬ್ಬರು ಪ್ರಭಾವಿ ಸಚಿವರು ರಾಜೀವ್ ಗೌಡ ರಕ್ಷಣೆಗೆ ನಿಂತಿದ್ದರೆ, ಮತ್ತೊಬ್ಬರು ಆತನ ವಿರುದ್ಧ ಕ್ರಮಕ್ಕೆ ಆಗ್ರಹಿಸಿದ್ದಾರೆ.
ಇದನ್ನೂ ಓದಿ: ಮಹಿಳಾಧಿಕಾರಿಗೆ ಧಮ್ಕಿ: ಕಾಂಗ್ರೆಸ್ ನಾಯಕನಿಗೆ ಶಾಕ್ ಮೇಲೆ ಶಾಕ್, ಕೋರ್ಟ್ ಬಳಿಕ ಪಕ್ಷದಿಂದ ಶಾಸ್ತಿ
ಸದ್ಯ ರಾಜೀವ್ ಗೌಡರನ್ನು ಕೆಪಿಸಿಸಿ ಶಿಸ್ತು ಪಾಲನಾ ಸಮಿತಿಯ ಶಿಫಾರಸಿನ ಮೇರೆಗೆ ಪಕ್ಷದಿಂದ ಅಮಾನತುಗೊಳಿಸಲಾಗಿದೆ. ಪ್ರಕರಣ ಸಂಬಂಧ ಆರೋಪಿ ರಾಜೀವ್ ಗೌಡಗೆ ಕೆಪಿಸಿಸಿ ಶೋಕಾಸ್ ನೋಟಿಸ್ ಜಾರಿ ಮಾಡಿತ್ತು. ಆದರೆ ಅದಕ್ಕೆ ಯಾವುದೇ ಉತ್ತರ, ಪ್ರತಿಕ್ರಿಯೆ ನೀಡಿರಲಿಲ್ಲ. ಇದರ ಬೆನ್ನಲ್ಲೇ ರಾಜೀವ್ ಗೌಡನನ್ನು ಪಕ್ಷದಿಂದ ಅಮಾನತು ಮಾಡುವಂತೆ ಕೆಪಿಸಿಸಿ ಕಾರ್ಯಾಧ್ಯಕ್ಷ ಚಂದ್ರಶೇಖರ್ ಕಾಂಗ್ರೆಸ್ ಶಿಸ್ತು ಸಮಿತಿ ಅಧ್ಯಕ್ಷರಿಗೆ ಶಿಫಾರಸು ಮಾಡಿದ್ದರು. ಸದ್ಯ ಇಷ್ಟೆಲ್ಲ ಆಗಿಯೂ ರಾಜೀವ್ ಗೌಡ ಬಂಧ ಆಗದಿರುವುದು, ಪ್ರಭಾವಿ ಸಚಿವರೊಬ್ಬರು ಆತನ ರಕ್ಷಣೆ ನಿಂತಿದ್ದಾರೆ ಎಂಬ ಅನುಮಾನಗಳಿಗೆ ಪುಷ್ಟಿ ನೀಡಿದೆ.
