Mining Royalty: ಚಿಕ್ಕಬಳ್ಳಾಪುರದಲ್ಲಿ ಗಣಿಧಣಿಗಳ ಅಡ್ಡದಾರಿ ರಾಜಧನ ವಂಚಿಸಿ ಕಲ್ಲಿನ ಉತ್ಪನ್ನಗಳ ಸಾಗಾಟ, ಹೇಳೊರಿಲ್ಲ-ಕೇಳೋರಿಲ್ಲ!
ಪ್ರತಿ ಟಿಪ್ಪರ್‌ನಲ್ಲಿ 10-15 ಟನ್ ಸಾಮಾಗ್ರಿಗೆ ರಾಜಧನ ಕಟ್ಟದೇ ಗಣಿಧಣಿಗಳು ಕಳ್ಳಾಟವಾಡುತ್ತಿದ್ದಾರೆ. ಇನ್ನು ಚಿಕ್ಕಬಳ್ಳಾಪುರ ತಾಲ್ಲೂಕಿನ ಚದಲಪುರ ಗೇಟ್‌ನಲ್ಲಿ ನಿರ್ಮಾಣ ಮಾಡಿರುವ ಖನಿಜ ಚೆಕ್‌ಪೋಸ್ಟ್ನಲ್ಲಿ ಗಣಿ ಕುಳಗಳ ಕಳ್ಳಾಟ ಬಯಲಾಗಿದೆ. ಕೇವಲ ಅರ್ಧ ಗಂಟೆಯಲ್ಲಿ 15 ಟಿಪ್ಪರ್‌ಗಳ ದಾಖಲೆ ಗಮನಿಸಿದಾಗ 8 ಟಿಪ್ಪರ್‌ಗಳ ಕಳ್ಳಾಟ ಬಟಾಬಯಲಾಗಿದೆ.
ಕಲ್ಲು, ಕ್ವಾರಿ, ಕ್ರಷರ್ ಸೇರಿದಂತೆ ಗ್ರಾನೈಟ್ ಗಣಿಗಾರಿಕೆಗೆ ಆ ಜಿಲ್ಲೆ ತುಂಬಾ ಫೇಮಸ್. ಆ ಜಿಲ್ಲೆ ರಾಜಧಾನಿ ಬೆಂಗಳೂರಿಗೆ ಕೂಗಳತೆಯ ದೂರದಲ್ಲಿರುವ ಕಾರಣ ಅಲ್ಲಿಯ ಕಲ್ಲು, ಎಂ. ಸ್ಯಾಂಡ್, ಗ್ರಾನೈಟ್‌ಗೆ ತುಂಬಾ ಡಿಮ್ಯಾಂಡ್ ಇದೆ. ಇದರಿಂದ ಸರ್ಕಾರದ ಬೊಕ್ಕಸಕ್ಕೆ ಕಟ್ಟಬೇಕಿದ್ದ ರಾಜಧನ ವಂಚಿಸಿ, ಅಲ್ಲಿಯ ಗಣಿಧಣಿಗಳು ಹಗಲು-ರಾತ್ರಿ ಕಲ್ಲಿನ ಉತ್ಪನ್ನಗಳನ್ನು ಬೆಂಗಳೂರಿಗೆ ಸಾಗಿಸುತ್ತಿದ್ದಾರೆ. ಈ ಕುರಿತು ಒಂದು ವರದಿ.
ಚಿಕ್ಕಬಳ್ಳಾಪುರ ಜಿಲ್ಲೆಯಲ್ಲಿ ಹೇರಳವಾಗಿ ಸಿಗುವ ಕಲ್ಲು, ಕ್ವಾರಿ ಹಾಗೂ ಗ್ರಾನೈಟ್ ಸಾಮಾಗ್ರಿಗಳಿಗೆ ಬೆಂಗಳೂರಿನಲ್ಲಿ ಸಿಕ್ಕಾಪಟ್ಟೆ ಡಿಮ್ಯಾಂಡ್ ಇದೆ. ಇದರಿಂದ ಚಿಕ್ಕಬಳ್ಳಾಪುರ ತಾಲ್ಲೂಕು ಒಂದರಲ್ಲೇ ನಾಯಿಕೊಡೆಗಳ ಹಾಗೆ ಕಲ್ಲು ಕ್ವಾರಿ, ಕ್ರಷರ್, ಗ್ರಾನೈಟ್ ಕ್ವಾರಿಗಳಿವೆ. ಮತ್ತೊಂದಡೆ ಇಲ್ಲಿ ಉತ್ಪಾದಿಸುವ ಕಲ್ಲಿನ ಸಾಮಾಗ್ರಿಗಳನ್ನು ಬೆಂಗಳೂರಿಗೆ ಸಾಗಾಟ ಮಾಡಲಾಗುತ್ತಿದೆ.
ಆದರೆ ನ್ಯಾಯಯುತವಾಗಿ ಸರ್ಕಾರಕ್ಕೆ ಕಟ್ಟಬೇಕಾಗಿರುವ ರಾಜಧನವನ್ನು ವಂಚಿಸಿ ಅಕ್ರಮವಾಗಿ ಕಲ್ಲಿನ ಉತ್ಪನ್ನಗಳನ್ನು ಬೆಂಗಳೂರಿಗೆ ಸಾಗಾಟ ಮಾಡಲಾಗುತ್ತಿದೆ. ಟಿಪ್ಪರ್ ಒಂದಕ್ಕೆ 20 ಟನ್ ಪರ್ಮಿಟ್ ಪಡೆದು, 20 ಟನ್ ಸಾಮಾಗ್ರಿಗೆ ರಾಯಲ್ಟಿ ಕಟ್ಟಿ, ಅದೇ ಟಿಪ್ಪರ್‌ನಲ್ಲಿ 30-35 ಟನ್ ಸಾಮಾಗ್ರಿಗಳನ್ನು ಸಾಗಿಸುತ್ತಿದ್ದಾರೆ. ಇದರಿಂದ ಪ್ರತಿ ಟಿಪ್ಪರ್‌ನಲ್ಲಿ 10-15 ಟನ್ ಸಾಮಾಗ್ರಿಗೆ ರಾಜಧನ ಕಟ್ಟದೇ ಗಣಿಧಣಿಗಳು ಕಳ್ಳಾಟವಾಡುತ್ತಿದ್ದಾರೆ. ಇನ್ನು ಚಿಕ್ಕಬಳ್ಳಾಪುರ ತಾಲ್ಲೂಕಿನ ಚದಲಪುರ ಗೇಟ್‌ನಲ್ಲಿ ನಿರ್ಮಾಣ ಮಾಡಿರುವ ಖನಿಜ ಚೆಕ್‌ಪೋಸ್ಟ್ನಲ್ಲಿ ಗಣಿ ಕುಳಗಳ ಕಳ್ಳಾಟ ಬಯಲಾಗಿದೆ. (ವರದಿ: ಭೀಮಪ್ಪ ಪಾಟೀಲ, ಟಿವಿ 9, ಚಿಕ್ಕಬಳ್ಳಾಪುರ)
ಚಿಕ್ಕಬಳ್ಳಾಪುರ ತಾಲ್ಲೂಕಿನ ಯಲಗಲಹಳ್ಳಿ ಸೇಪರ್ ಜೋನ್, ಕಣಿವೇ ನಾರಾಯಣಪುರ ಸೇಪರ್ ಜೋನ್‌ನಲ್ಲಿರುವ ಕ್ರಷರ್‌ಗಳಿಂದ ಜಲ್ಲಿಕಲ್ಲು, ಎಂ-ಸ್ಯಾಂಡ್, ಕಚ್ಚಾಕಲ್ಲು ಬೆಂಗಳೂರಿಗೆ ರವಾನೆಯಾಗುತ್ತಿದೆ. ಗಣಿಧಣಿಗಳ ಕಳ್ಳಾಟದ ಮಾಹಿತಿಯನ್ನರಿತ ಟಿವಿ 9 ಹಾಗೂ ಗಣಿ ಮತ್ತು ಭೂವಿಜ್ಞಾನ ಇಲಾಖೆಯ ಅಧಿಕಾರಿ ಚೇತನ್ ಮತ್ತು ತಂಡ ಟಿಪ್ಪರ್‌ಗಳ ದಾಖಲೆಗಳ ಪರಿಶೀಲನೆ ನಡೆಸಿದಾಗ ರಾಜಧನ ವಂಚನೆ ಬಯಲಾಗಿದೆ.
ಕೇವಲ ಅರ್ಧ ಗಂಟೆಯಲ್ಲಿ 15 ಟಿಪ್ಪರ್‌ಗಳ ದಾಖಲೆ ಗಮನಿಸಿದಾಗ 8 ಟಿಪ್ಪರ್‌ಗಳ ಕಳ್ಳಾಟ ಬಟಾಬಯಲಾಗಿದೆ. ಕಣಿವೇ ನಾರಾಯಣಪುರ ಸೇಫರ್ ಜೋನ್‌ನಲ್ಲಿರುವ ಇಎಸ್ಪಿ ಎಂಟರ್‌ಪ್ರೈಸೆಸ್ ಕ್ರಷರ್‌ನ ಕೆಎ-43 ಎ-0195, ಕೆಎ-43 ಎ-0194 ಟಿಪ್ಪರ್‌ಗಳಲ್ಲಿ ತಲಾ 20 ಟನ್‌ಗೆ ರಾಜಧನ ಪಾವತಿಸಿ ತಲಾ 30 ಟನ್ ಸಾಗಾಟ ಮಾಡುವುದು ಪತ್ತೆಯಾಗಿದೆ. ಯಲಗಲಹಳ್ಳಿ ಸೇಫರ್ ಜೋನ್‌ನಿಂದ ಹೊರಟಿದ್ದ ಹನುಮಾನ್ ಕ್ರಷರ್‌ನ ಕೆಎ-52 ಬಿ-2907 ಟಿಪ್ಪರ್‌ನಲ್ಲಿ 20 ಟನ್‌ಗೆ ರಾಜಧನ ಪಾವತಿಸಿ 30 ಟನ್ ಸಾಗಾಟ ಮಾಡುವುದು ಪತ್ತೆಯಾಗಿದೆ.
ಯಲಗಲಹಳ್ಳಿ ಬಾಲಾಜಿ ಸ್ಟೋನ್ ಕ್ರಷರ್‌ನ ಕ್ರಷರ್‌ನ ಕೆಎ-50 7299 ಟಿಪ್ಪರ್‌ನಲ್ಲಿ 25 ಟನ್‌ಗೆ ರಾಜಧನ ಪಾವತಿಸಿ 28 ಟನ್ ಸಾಗಾಟ ಮಾಡುವುದು ಪತ್ತೆಯಾಗಿದೆ. ಯಲಗಲಹಳ್ಳಿಯ ಶ್ರೀನಿಧಿ ಕ್ರಷರ್‌ನ ಕೆಎ-50 ಎ-6919 ಟಿಪ್ಪರ್‌ಗೆ ಸೂಕ್ತ ದಾಖಲೆಗಳಿಲ್ಲ. ಇನ್ನು ಬ್ರಹ್ಮವರ್ಷಿಣಿ ಕ್ರಷರ್‌ನ ಕೆಎ-40 ಬಿ-2169 ಟಿಪ್ಪರ್‌ಗೆ ಸೂಕ್ತ ದಾಖಲೆಗಳೇ ಇಲ್ಲ. ಯಲಗಲಹಳ್ಳಿಯ ಸುಮುಖ ಕ್ರಷರ್‌ನ ಕೆಎ-40 ಎ-9289 ಟಿಪ್ಪರ್‌ಗೂ ಸಹಾ ಸೂಕ್ತ ದಾಖಲೆಗಳಿಲ್ಲ. ಇದರಿಂದ ಗಣಿ ಮತ್ತು ಭೂವಿಜ್ಞಾನ ಇಲಾಖೆಯ ವಿಜ್ಞಾನಿ ಚೇತನ್ 8 ಟಿಪ್ಪರ್‌ಗಳನ್ನು ವಶಕ್ಕೆ ಪಡೆದು ದಂಡ ಪಾವತಿಗೆ ಸೂಚಿಸಿದ್ದಾರೆ.
ಚಿಕ್ಕಬಳ್ಳಾಪುರದಿಂದ ಬೆಂಗಳೂರಿಗೆ ಕಲ್ಲು ಹಾಗೂ ಕಲ್ಲಿನ ಉತ್ಪನ್ನಗಳನ್ನು ಸಾಗಾಟ ಮಾಡುವಾಗ ರಾಜಧನ ವಂಚನೆಯ ಬಗ್ಗೆ ಕಳೆದ ಅಧಿವೇಶನದಲ್ಲಿ ಶಾಸಕ ಕೃಷ್ಣ ಭೈರೇಗೌಡ ಎಳೆಎಳೆಯಾಗಿ ವಿವರಿಸಿ ಕ್ರಮಕ್ಕೆ ಆಗ್ರಹಿಸಿದ್ದರು. ಇದರಿಂದ ಅಧಿಕಾರಿಗಳು ಚೆಕ್‌ಪೋಸ್ಟ್ ಹಾಕಿ ಪರಿಶೀಲನೆ ಮುಂದುವರೆಸಿದ್ದಾರೆ. ಅಧಿಕಾರಿಗಳು ಚಾಪೆ ಕೆಳಗೆ ದೂರಿದರೆ ಗಣಿ ಕುಳಗಳು ರಂಗೋಲಿಯ ಕೆಳಗೆ ನುಗ್ಗಿ, ಸರ್ಕಾರಕ್ಕೆ ಪ್ರತಿದಿನ ಲಕ್ಷಾಂತರ ರೂಪಾಯಿಗಳ ರಾಜಧನ ವಂಚನೆ ಮಾಡುತ್ತಿದ್ದಾರೆ.