Chikkaballapur Granite: ಅಯೋಧ್ಯೆ ಶ್ರೀ ರಾಮ ಮಂದಿರಕ್ಕೆ ಚಿಕ್ಕಬಳ್ಳಾಪುರ ಕಲ್ಲು ಬಂಡೆಗಳ ಬಳಕೆ! ಏನಿದರ ಸಾಮರ್ಥ್ಯ, ಗುಣವಿಶೇಷ?
Ayodhya Shri Ram Mandir: ಶ್ರೀರಾಮ ಮಂದಿರ ನಿರ್ಮಾಣ ಕಾಮಗಾರಿಗೆ ನಮ್ಮದೇ ರಾಜ್ಯದ ಚಿಕ್ಕಬಳ್ಳಾಪುರ ತಾಲ್ಲೂಕಿನ ಗುವ್ವಲಕಾನಹಳ್ಳಿ ಗ್ರಾಮದ ಬಳಿ ಇರುವ ಕಲ್ಲುಕ್ವಾರಿಯಿಂದ ಗ್ರಾನೈಟ್ ದಿಂಡುಗಳನ್ನು ಸಾಗಿಸಲಾಗುತ್ತಿದೆ. ಚಿಕ್ಕಬಳ್ಳಾಪುರ ಹಾಗೂ ದೇವನಹಳ್ಳಿ ಮೂಲದ 4 ಗ್ರಾನೈಟ್ ಕಂಪನಿಗಳಿಗೆ ದಿಂಡುಗಳನ್ನು ಸಾಗಿಸಲು ಉಪಗುತ್ತಿಗೆ ನೀಡಲಾಗಿದೆ.
ಅಯೋಧ್ಯೆಯ ಶ್ರೀ ರಾಮ ಮಂದಿರದ ಹೆಸರು ಕೇಳಿದರೆ ಹಿಂದೂಗಳಲ್ಲಿ ಅದೇನೋ ಒಂಥರಾ ರೋಮಾಂಚನ ಉಂಟಾಗುತ್ತದೆ. ಇನ್ನು ಅಯೋದ್ಯೆಯಲ್ಲಿ ನಿರ್ಮಾಣವಾಗುತ್ತಿರುವ ಶ್ರೀರಾಮ ಮಂದಿರಕ್ಕೆ (Shri Ram Mandir Ayodhya) ನಮ್ಮದೇ ರಾಜ್ಯದ ಆ ಜಿಲ್ಲೆಯ ಗ್ರಾನೈಟ್ ದಿಂಡುಗಳನ್ನು (Chikkaballapur Granite) ಬಳಸಲಾಗುತ್ತಿದೆ. ಇನ್ನು ಆ ಗ್ರಾನೈಟ್ ದಿಂಡುಗಳು ಭೂಕಂಪ ಪ್ರತಿರೋಧ ಸಾಮಾರ್ಥ್ಯ ಹೊಂದಿದ್ದು, ಬೆಂಕಿ ಹಾಗೂ ನೀರು ನಿರೋಧಕ ಗುಣಗಳನ್ನೂ ಹೊಂದಿದೆಯಂತೆ. ಇನ್ನು ಆ ಗ್ರಾನೈಟ್‌ನ ಅಲಂಕಾರ ಶ್ರೀರಾಮ ಮಂದಿರ ನಿರ್ಮಾಣಕ್ಕೆ ಹೇಳಿ ಮಾಡಿಸಿದಂತಿದೆ. ಈ ಕುರಿತು ಒಂದು ವರದಿ.
ವಿಶಿಷ್ಟ ಹಾಗೂ ಪೌರಾಣಿಕ ಮಾದರಿಯಲ್ಲಿ ಅಯೋಧ್ಯೆಯಲ್ಲಿ ನಿರ್ಮಾಣವಾಗುತ್ತಿರುವ ಶ್ರೀರಾಮ ಮಂದಿರ ನಿರ್ಮಾಣ ಕಾಮಗಾರಿ ಈಗಾಗಲೇ ವಿಶ್ವದಾದ್ಯಂತ ಗಮನ ಸೆಳೆದಿದೆ. ಇನ್ನು ಇದೇ ಶ್ರೀರಾಮ ಮಂದಿರ ನಿರ್ಮಾಣ ಕಾಮಗಾರಿಗೆ ನಮ್ಮದೇ ರಾಜ್ಯದ ಚಿಕ್ಕಬಳ್ಳಾಪುರ ತಾಲ್ಲೂಕಿನ ಗುವ್ವಲಕಾನಹಳ್ಳಿ ಗ್ರಾಮದ ಬಳಿ ಇರುವ ಕಲ್ಲುಕ್ವಾರಿಯಿಂದ ಗ್ರಾನೈಟ್ ದಿಂಡುಗಳನ್ನು ಸಾಗಿಸಲಾಗುತ್ತಿದೆ.
ಚಿಕ್ಕಬಳ್ಳಾಪುರ ಹಾಗೂ ದೇವನಹಳ್ಳಿ ಮೂಲದ 4 ಗ್ರಾನೈಟ್ ಕಂಪನಿಗಳಿಗೆ ದಿಂಡುಗಳನ್ನು ಸಾಗಿಸಲು ಉಪಗುತ್ತಿಗೆ ನೀಡಲಾಗಿದೆ. ಇದರಿಂದ 17 ಸಾವಿರ ದಿಂಡುಗಳನ್ನು ಅಚ್ಚುಕಟ್ಟಾಗಿ ಕಟ್ಟಿಂಗ್, ಪಾಲಿಶ್ ಮಾಡಿ ಎಕ್ಸ್ಪೋರ್ಟ್ ಮಾಡಲಾಗುತ್ತಿದೆ. 3 ಅಡಿ ದಪ್ಪ, 5 ಅಡಿ ಉದ್ದ, 2 ಅಡಿ ಅಗಲದ ದಿಂಡುಗಳನ್ನು ತಯಾರಿಸಿ ಅಯೋಧ್ಯೆಯ ಶ್ರೀರಾಮ ಮಂದಿರ ನಿರ್ಮಾಣಕ್ಕೆ ರವಾನಿಸುತ್ತಿದ್ದಾರೆ. ಆದರೆ ಈಗ ಸುದ್ಧಿಯಾಗಿರುವುದು ಚಿಕ್ಕಬಳ್ಳಾಪುರದ ಕಲ್ಲಿನ ವೈಶಿಷ್ಟ್ಯ.
17 ಸಾವಿರ ಗ್ರಾನೈಟ್ ದಿಂಡುಗಳಿಗೆ ಆದೇಶ- ಶ್ರೀರಾಮನ ಹೆಸರಿನಲ್ಲಿ ಕರಗುತ್ತಿದೆ ಗುವ್ವಲಕಾನಹಳ್ಳಿ ಬಂಡೆ
ಚಿಕ್ಕಬಳ್ಳಾಪುರ ತಾಲ್ಲೂಕಿನ ಗುವ್ವಲಕಾನಹಳ್ಳಿ ಬಳಿ ಗ್ರೇ ಗ್ರಾನೈಟ್ ಬೆಟ್ಟವೇ ಇದೆ. ಈ ಬೆಟ್ಟದಲ್ಲಿ 16 ಅಲಂಕಾರಿಕ ಶಿಲೆ ಗಣಿಗಾರಿಕೆಗಳಿಗೆ ಅವಕಾಶ ನೀಡಲಾಗಿದೆ. ಇಲ್ಲಿರುವ ಕಲ್ಲಿಗೆ ನೀರು ಹಾಗೂ ಬೆಂಕಿ ನಿರೋಧಕ ಸಾಮಾರ್ಥ್ಯವಿದೆಯಂತೆ. ಇನ್ನು ಭೂಕಂಪನ ಪ್ರತಿರೋಧ ಸಾಮಾರ್ಥ್ಯವಿದೆಯಂತೆ. ನ್ಯಾಷನಲ್ ಇನ್ಸ್ಟಿಟ್ಯೂಟ್ ಆಫ್ ರಾಕ್ ಮೆಕಾನಿಕ್ಸ್, ಐಐಟಿ ದೆಹಲಿ, ಕಲ್ಕತ್ತ, ಮದ್ರಾಸ್ ಸಂಸ್ಥೆಗಳು ಇಲ್ಲಿಯ ಕಲ್ಲನ್ನು ಪರಿವೀಕ್ಷಣೆ ನಡೆಸಿ ವರದಿ ನೀಡಿದ್ದಾರಂತೆ. (ವರದಿ: ಭೀಮಪ್ಪ ಪಾಟೀಲ, ಟಿವಿ 9, ಚಿಕ್ಕಬಳ್ಳಾಪುರ)
ದೇಶದಲ್ಲಿರುವ ಕಲ್ಲು ಗಣಿಗಾರಿಕೆಗಳಲ್ಲೇ ಗುವ್ವಲಕಾನಹಳ್ಳಿ ಬಂಡೆ ವಿಶಿಷ್ಟ ಸಾಂದ್ರತೆ ಹೊಂದಿದೆಯಂತೆ. ಇದರಿಂದ ಅಯೋಧ್ಯೆ ಕಾಮಗಾರಿ ನಿರ್ವಹಿಸುತ್ತಿರುವ ಎಲ್ & ಟಿ ಗುತ್ತಿಗೆ ಸಂಸ್ಥೆ ಚಿಕ್ಕಬಳ್ಳಾಪುರದ ಗುವ್ವಲಕಾನಹಳ್ಳಿ ಬಂಡೆಯಲ್ಲಿ ಸಿಗುವ ಗ್ರಾನೈಟ್ ದಿಂಡುಗಳನ್ನೇ ಸರಬರಾಜು ಮಾಡುವಂತೆ ಸೂಚಿಸಿದೆ. ಇದರಿಂದ ಚಿಕ್ಕಬಳ್ಳಾಪುರದ ಬಂಡೆಗಳನ್ನು ದೇವನಹಳ್ಳಿ ತಾಲ್ಲೂಕಿನ ಸಾದಹಳ್ಳಿ ಹಾಗೂ ಸುತ್ತಮುತ್ತ ಸಾಗಿಸಿ ಅಲ್ಲಿರುವ ಗ್ರಾನೈಟ್ ಕಂಪನಿಗಳಲ್ಲಿ ಕಟ್ಟಿಂಗ್, ಪಾಲಿಶ್ ಮಾಡಿ ಅಯೋಧ್ಯೆಗೆ ರವಾನಿಸುತ್ತಿದ್ದಾರೆ ಎನ್ನುತ್ತಾರೆ ಗ್ರಾನೈಟ್ ರವಾನಿಸುತ್ತಿರುವ ಶ್ರೀನಾಥ್ ಐಯ್ಯರ್.
ಇನ್ನು ಇಲ್ಲಿಯ ಬಂಡೆಗಳಲ್ಲಿ ಗಟ್ಟಿತನ, ಸುಂದರ ಪದರು, ಬಿಳಿ-ಕಪ್ಪು ಮಿಶ್ರಿತ ವಿನ್ಯಾಸ ಶ್ರೀರಾಮ ಮಂದಿರಕ್ಕೆ ಹೇಳಿ ಮಾಡಿಸಿದಂತಿದೆ. ವೈಜ್ಞಾನಿಕವಾಗಿ ಈ ಬಂಡೆಗಳಿಗೆ ವೈಶಿಷ್ಟ್ಯ ಇರುವ ಕಾರಣ ಈಗ ಗುವ್ವಲಕಾನಹಳ್ಳಿ ಬಂಡೆ ದೇಶದಲ್ಲಿ ಹೆಸರುವಾಸಿಯಾಗಿದೆ. ಇತ್ತೀಚಿಗೆ ಚಿಕ್ಕಬಳ್ಳಾಪುರಕ್ಕೆ ಭೇಟಿ ನೀಡಿದ್ದ ಆರ್.ಎಸ್.ಎಸ್ ಮುಖಂಡ ಕಲ್ಲಡ್ಕ ಪ್ರಭಾಕರ್ ಭಟ್ ಸಾದಹಳ್ಳಿ ಬಳಿ ಇರುವ ಗ್ರಾನೈಟ್ ಕಂಪನಿಗಳಿಗೆ ಭೇಟಿ ನೀಡಿ ಗ್ರಾನೈಟ್ ದಿಂಡುಗಳ ವೀಕ್ಷಣೆ ಮಾಡಿದರು.
ಹಗಲು ರಾತ್ರಿ ನಡೆಯುತ್ತಿದೆ ಗಣಿಗಾರಿಕೆ
ಅಯೋಧ್ಯೆಯಲ್ಲಿ ನಿರ್ಮಾಣವಾಗುತ್ತಿರುವ ಶ್ರೀರಾಮ ಮಂದಿರಕ್ಕೆ ನಮ್ಮದೇ ರಾಜ್ಯದ ಚಿಕ್ಕಬಳ್ಳಾಪುರದ ಕಲ್ಲು ಬಂಡೆಗಳು ರವಾನೆಯಾಗುತ್ತಿರುವುದು ಹೆಮ್ಮೆಯ ಸಂಗತಿ. ಆದರೆ ಶ್ರೀರಾಮನ ಹೆಸರಿನಲ್ಲಿ ಹಗಲು-ರಾತ್ರಿ ಕಲ್ಲು, ಕ್ವಾರಿ, ಗ್ರಾನೈಟ್ ದಂದೆ ಜೋರಾಗಿದ್ದು, ಗುವ್ವಲಕಾನಹಳ್ಳಿ ಬಂಡೆ ದಿನೇದಿನೇ ತನ್ನ ಅಸ್ತಿತ್ವ ಕಳೆದುಕೊಳ್ಳುತ್ತಿದೆ!