
ಚಿಕ್ಕಬಳ್ಳಾಪುರ, ಜನವರಿ 15: ಶಿಡ್ಲಘಟ್ಟ ನಗರಸಭೆ ಪೌರಾಯುಕ್ತೆಗೆ ಅವಾಚ್ಯ ಶಬ್ದಗಳಿಂದ ಮತ್ತು ಅಶ್ಲೀಲ ಪದಗಳನ್ನು ಬಳಸಿ ನಿಂದಿಸಿರುವ ಕಾಂಗ್ರೆಸ್ (Congress) ಮುಖಂಡ ರಾಜೀವ್ ಗೌಡಗೆ (Rajeev Gowda) ಈಗ ಎರಡೆರಡು ಸಂಕಷ್ಟ ಎದುರಾಗಿದೆ. ರಾಜೀವ್ ಗೌಡ ವಿರುದ್ಧ ಪೌರಾಯುಕ್ತ ಅಮೃತ ಗೌಡ ಈಗಾಗಲೇ ಪೊಲೀಸರಿಗೆ ದೂರು ನೀಡಿದ್ದಾರೆ. ಮತ್ತೊಂದೆಡೆ, ಇದೀಗ ಜೆಡಿಎಸ್ ಮುಖಂಡರು ಕೂಡ ದೂರು ನೀಡಿದ್ದಾರೆ. ಸ್ಥಳೀಯ ಜೆಡಿಎಸ್ ಶಾಸಕ ಬಿಎಂ ರವಿಕುಮಾರ್ ವಿರುದ್ಧವೂ ರಾಜೀವ್ ಗೌಡ ಅವಾಚ್ಯ ಪದಗಳಿಂದ ನಿಂದಿಸಿದ್ದಾರೆ ಎಂದು ಜೆಡಿಎಸ್ ವತಿಯಿಂದ ದೂರು ನೀಡಲಾಗಿದೆ. ಇವುಗಳನ್ನು ಆಧರಿಸಿ ಸದ್ಯ 2 ಎಫ್‌ಐಆರ್‌ಗಳು ದಾಖಲಾಗಿವೆ.
ಪ್ರಕರಣ ತೀವ್ರ ಸ್ವರೂಪ ಪಡೆದುಕೊಳ್ಳುತ್ತಿದ್ದಂತೆಯೇ ಕೆಪಿಸಿಸಿ ಅಧ್ಯಕ್ಷರರೂ ಆಗಿರುವ ಉಪಮುಖ್ಯಮಂತ್ರಿಯ ಡಿಕೆ ಶಿವಕುಮಾರ್ ಪ್ರತಿಕ್ರಿಯಿಸಿ, ಕಾನೂನು ತನ್ನ ಕ್ರಮ ಕೈಗೊಳ್ಳಲಿದೆ ಎಂದಿದ್ದರು. ಎಲ್ಲ ಬೆಳವಣಿಗೆಗಳ ಬೆನ್ನಲ್ಲೇ, ಆರೋಪಿ ರಾಜೀವ್ ಗೌಡ ಬಂಧನ ಭೀತಿಯಿಂದ ತಲೆಮರೆಸಿಕೊಂಡಿದ್ದಾರೆ. ಫೋನ್ ಸಹ ಸ್ವಿಚ್ ಆಫ್ ಮಾಡಿಕೊಂಡಿದ್ದಾರೆ.
ರಾಜೀವ್ ಗೌಡರನ್ನು ಬಂಧಿಸಿ ವಿಚಾರಣೆ ನಡೆಸುವಂತೆ ವಿಪಕ್ಷಗಳು, ಪುರಸಭೆ ನೌಕರರು, ಸಿಬ್ಬಂದಿ ಹಾಗೂ ಸಾರ್ವಜನಿಕರಿಂದ ತೀವ್ರ ಆಗ್ರಹ ವ್ಯಕ್ತವಾಗಿತ್ತು.
ರಾಜೀವ್ ಗೌಡ ವಿರುದ್ಧ ಇದೀಗ ಮತ್ತೊಂದು ಆರೋಪ ಕೇಳಿ ಬಂದಿದೆ. ಶಿಡ್ಲಘಟ್ಟ ಕ್ಷೇತ್ರದಲ್ಲಿ ಜೆಡಿಎಸ್ ಶಾಸಕರು ಇದ್ದಾರೆ. ಹೀಗಾಗಿ ದರ್ಬಾರ್ ನಡೆಸಲು ರಾಜೀವ್ ಗೌಡ ಯತ್ನಿಸುತ್ತಿದ್ದಾರೆ. ಯಾರೇ ಅಧಿಕಾರಿಗಳು ಬಂದರೂ ತಮ್ಮ ಸಮ್ಮತಿ ಪಡೆಯುವಂತೆ ಒತ್ತಡ ಹೇರುತ್ತಿದ್ದರು. ವಿವಿಧ ಇಲಾಖೆಗಳಲ್ಲಿ ತಮ್ಮದೇ ಮಾತು ನಡೆಯಬೇಕು ಎಂದು ಒತ್ತಡ ಹೇಳುತ್ತಿದ್ದರು ಎಂಬ ಆರೋಪಗಳು ಕೂಡ ಈಗ ಕೇಳಿ ಬಂದಿವೆ.
ಶಿಡ್ಲಘಟ್ಟದ ಕೋಟೆ ವೃತ್ತದಲ್ಲಿ ರಸ್ತೆಗೆ ಅಡ್ಡವಾಗಿ ಕಟ್ಟಿದ್ದ ಬ್ಯಾನರ್ ತೆರವುಗೊಳಿಸಿದ್ದರಿಂದ ಸಿಟ್ಟಾಗಿದ್ದ ರಾಜೀವ್ ಗೌಡ ಪೌರಾಯುಕ್ತೆ ಅಮೃತ ಗೌಡಗೆ ದೂರವಾಣಿ ಕರೆ ಮಾಡಿ ಅವಾಚ್ಯ ಶಬ್ದಗಳಿಂದ ಮತ್ತು ಅಶ್ಲೀಲವಾಗಿ ನಿಂದಿಸಿದ್ದಾರು. ಈ ವಿಚಾರವಾಗಿ ಅಮೃತ ಗೌಡ ಮೇಲಧಿಕಾರಿಗಳಿಗೆ ದೂರು ನೀಡಿದ್ದರು. ನಂತರ, ಪೊಲೀಸರಿಗೂ ದೂರು ನೀಡಿದ್ದರು. ಈ ವಿಚಾರ ನಂತರ ತೀವ್ರ ಸ್ವರೂಪ ಪಡೆದುಕೊಂಡಿತ್ತು.
ಇದನ್ನೂ ಓದಿ: ಬಳ್ಳಾರಿ ಬೆನ್ನಲ್ಲೇ ಚಿಕ್ಕಬಳ್ಳಾಪುರದಲ್ಲೂ ಬ್ಯಾನರ್ ಗಲಾಟೆ: ಕಾಂಗ್ರೆಸ್ ನಾಯಕನ ಅಶ್ಲೀಲ ನಿಂದನೆಗೆ ಕಣ್ಣೀರು ಹಾಕಿದ ಪೌರಾಯುಕ್ತೆ
ರಾಜೀವ್ ಗೌಡ ವಿರುದ್ಧ ಶಿಡ್ಲಘಟ್ಟ ನಗರಸಭೆ ಸಿಬ್ಬಂದಿ ಪ್ರತಿಭಟನೆ ನಡೆಸಿದ್ದರು. ಪ್ರತಿಪಕ್ಷಗಳು ಕೂಡ ರಾಜೀವ್ ಗೌಡ ಬಂಧನಕ್ಕೆ ಆಗ್ರಹಿಸಿದ್ದವು.