ಚಿಕ್ಕಬಳ್ಳಾಪುರ: ಸೇವಂತಿ ಹೂವಿಗೆ ಭಾರೀ ಬೇಡಿಕೆ; ರೈತರ ಮೊಗದಲ್ಲಿ ಮಂದಹಾಸ

| Updated By: preethi shettigar

Updated on: Feb 18, 2022 | 9:45 AM

ಚಿಕ್ಕಬಳ್ಳಾಪುರ ಜಿಲ್ಲೆಯ ಮಣ್ಣಿನ ಗುಣಮಟ್ಟ ಹಾಗೂ ಹೇಳಿ ಮಾಡಿಸಿದ ವಾತಾವರಣಕ್ಕೆ ಇಲ್ಲಿ ಬೆಳೆಯುವ ಹೂಗಳು, ಬಣ್ಣ, ವಾಸನೆ ಗ್ರಾಹಕರನ್ನು ತನ್ನತ್ತ ಸೆಳೆಯುತ್ತದೆ. ಅದರಲ್ಲೂ ಐಶ್ವರ್ಯ ವೈಟ್, ಐಶ್ವರ್ಯ ಯಲ್ಲೋ ಎನ್ನುವ ಸೇವಂತಿ ತಳಿ ಕೆಜಿಗೆ 200 ರೂಪಾಯಿ ಮಾರಾಟವಾಗುತ್ತಿದೆ.

ಚಿಕ್ಕಬಳ್ಳಾಪುರ: ಸೇವಂತಿ ಹೂವಿಗೆ ಭಾರೀ ಬೇಡಿಕೆ; ರೈತರ ಮೊಗದಲ್ಲಿ ಮಂದಹಾಸ
ಸೇವಂತಿ ಹೂ
Follow us on

ಚಿಕ್ಕಬಳ್ಳಾಪುರ: ಸಿಲ್ಕ್, ಹೂವು, ಹಣ್ಣು, ತರಕಾರಿಗೆ ಖ್ಯಾತಿಯಾಗಿರುವ ಚಿಕ್ಕಬಳ್ಳಾಪುರ ಜಿಲ್ಲೆಯ ರೈತರು, ಕಳೆದ 2 ವರ್ಷಗಳಿಂದ ಕೊರೊನಾ ಸಂಕಷ್ಟಕ್ಕೆ ಸಿಲುಕಿ ಕೈಗೆ ಬಂದ ತುತ್ತು ಬಾಯಿಗೆ ಬರಲಿಲ್ಲವೆಂದು ಅಪಾರ ನಷ್ಟಕ್ಕೀಡಾಗಿದ್ದರು. ಏನೇ ಬೆಳೆದರೂ ಬೆಲೆ ಮಾತ್ರ ಸಿಗುತ್ತಿರಲಿಲ್ಲ. ಆದರೆ ಈಗ ಕೊರೊನಾ ಕಡಿಮೆಯಾಗಿ ಎಲ್ಲೆಡೆ ಶುಭ ಸಮಾರಂಭ, ಜಾತ್ರೆಗಳು(Fair) ನಡೆಯುತ್ತಿರುವ ಕಾರಣ ಈ ಭಾಗದ ರೈತರು(Farmers) ಬೆಳೆದಿರುವ ಸೇವಂತಿಗೆ(Chrysanthemum) ಭಾರಿ ಬೇಡಿಕೆ ಬಂದಿದೆ. ಇದು ರೈತರ ಮುಖದಲ್ಲಿ ಹೊಸ ಉತ್ಸಾಹ ತಂದಿದೆ.

ಚಿಕ್ಕಬಳ್ಳಾಪುರ ನಗರದ ಹೊರವಲಯದ ಅಗಲಗುರ್ಕಿ ಗ್ರಾಮದಲ್ಲಿ ಪ್ರಗತಿಪರ ರೈತ ರಾಮಾಂಜಿ, ಕಳೆದ 2 ವರ್ಷಗಳಿಂದ ಲಕ್ಷಾಂತರ ರೂಪಾಯಿ ಬಂಡವಾಳ ಹಾಕಿ ಹೂವು, ಹಣ್ಣು, ತರಕಾರಿ ಬೆಳೆದರೂ ಸೂಕ್ತ ಬೆಲೆ ಸಿಗದೇ ಸಾಲದ ಸುಳಿಗೆ ಸಿಲುಕಿದ್ದರು. ಆದರೆ ಈಗ ರಾಜ್ಯದಲ್ಲಿ ಕೊರೊನಾ ಸೋಂಕಿನ ಆರ್ಭಟ ಕಡಿಮೆಯಾದ ಕಾರಣ ಎಲ್ಲಿ ನೋಡಿದರೂ ಮದುವೆ, ಮುಂಜಿ, ಜಾತ್ರೆ ಸೇರಿದಂತೆ ಶುಭ ಸಮಾರಂಭಗಳು ನಡೆಯುತ್ತಿವೆ. ಇದರಿಂದ ರೈತ ರಾಮಾಂಜಿ ಬೆಳೆದ ಕೆಜಿ ಸೇವಂತಿಗೆ 200 ರೂಪಾಯಿ ಬೆಲೆ ಸಿಗುತ್ತಿದೆ. ಇದರಿಂದ ರೈತರ ಮೊಗದಲ್ಲಿ ಮಂದಹಾಸ ಮೂಡಿದೆ.

ಚಿಕ್ಕಬಳ್ಳಾಪುರ ಜಿಲ್ಲೆಯ ಮಣ್ಣಿನ ಗುಣಮಟ್ಟ ಹಾಗೂ ಹೇಳಿ ಮಾಡಿಸಿದ ವಾತಾವರಣಕ್ಕೆ ಇಲ್ಲಿ ಬೆಳೆಯುವ ಹೂಗಳು, ಬಣ್ಣ, ವಾಸನೆ ಗ್ರಾಹಕರನ್ನು ತನ್ನತ್ತ ಸೆಳೆಯುತ್ತದೆ. ಅದರಲ್ಲೂ ಐಶ್ವರ್ಯ ವೈಟ್, ಐಶ್ವರ್ಯ ಯಲ್ಲೋ ಎನ್ನುವ ಸೇವಂತಿ ತಳಿ ಕೆಜಿಗೆ 200 ರೂಪಾಯಿ ಮಾರಾಟವಾಗುತ್ತಿದೆ. ಚಾಕ್ಲೇಟ್ ಬ್ರೌನ್ ಸೇವಂತಿ ಕೆಜಿಗೆ 300 ರೂಪಾಯಿಗೆ ಮಾರಾಟವಾಗುತ್ತಿದೆ. ಮಾರಿಗೋಲ್ಡ್ ಸೇವಂತಿ ಕೆಜಿಗೆ 200 ರೂಪಾಯಿಗೆ ಮಾರಾಟವಾಗುತ್ತಿದೆ. ಸೆಂಟ್‍ವೈಟ್ ಸೇವಂತಿ ಕೆಜಿಗೆ 200 ರೂಪಾಯಿಗೆ ಮಾರಾಟವಾಗುತ್ತಿದೆ ಹಾಗೂ ಇನ್ನಿತರೆ ಹೂವುಗಳಿಗೆ ರೈತರು ಕೇಳಿದಷ್ಟು ಹಣ ನೀಡಿ ವರ್ತಕರು ಖರೀದಿ ಮಾಡುತ್ತಿದ್ದಾರೆ. ಇದರಿಂದ ಈಗ ಎಲ್ಲಿ ನೋಡಿದರೂ ಹೂವುಗಳ ಚಿತ್ತಾರವೇ ಕಾಣಿಸುತ್ತಿದೆ ಎಂದು ತೋಟದ ಉಸ್ತುವಾರಿ ಪ್ರಕಾಶ್ ಹೇಳಿದ್ದಾರೆ.

ಒಟ್ಟಿನಲ್ಲಿ ಕೊರೊನಾ ಸಂಕಷ್ಟ ಕಾಲದಲ್ಲಿ ನಷ್ಟಕ್ಕೊಳಗಾಗಿದ್ದ ರೈತರು, ಈಗ ಕೊರೊನಾ ಕಡಿಮೆಯಾಗಿ ಶುಭ ಸಮಾರಂಭಗಳು ನಡೆಯುತ್ತಿರುವ ಕಾರಣ ಕೈತುಂಬಾ ಹಣ ಎಣಿಸುತ್ತಿದ್ದಾರೆ. ಅದರಲ್ಲೂ ಹೂವು ಬೆಳೆಗಾರರಿಗಂತೂ ಪ್ರತಿದಿನ ಹಬ್ಬವೋ ಹಬ್ಬದಂತಾಗಿದೆ. ಉತ್ತಮ ಸೇವಂತಿ ಹೂವು ಬೇಕಾದರೆ ನೀವು ಚಿಕ್ಕಬಳ್ಳಾಪುರಕ್ಕೆ ಬನ್ನಿ ಎಂಬುವುದು ಇಲ್ಲಿನ ರೈತರ ಮಾತು.

ವರದಿ: ಭೀಮಪ್ಪ ಪಾಟೀಲ್

ಇದನ್ನೂ ಓದಿ:
ಕಾನನದ ಮಧ್ಯೆ ಪರಿಸರ ಸ್ನೇಹಿ ಸರ್ಕಾರಿ ಶಾಲೆ; ಪಾಠದ ಜತೆಗೆ ಹೂವು, ತರಕಾರಿ, ಔಷಧಿಗಳ ಬೆಳೆಗೆ ಹೆಚ್ಚು ಒತ್ತು

ಹಡಿಲು ಭೂಮಿಯಲ್ಲಿ ಚೆಂಡು ಹೂ ಬೆಳೆದು ಭರಪೂರ ಫಸಲು ಪಡೆದ ಕಾರ್ಕಳದ ರೈತ; ಲಾಕ್​ಡೌನ್​ನಿಂದ ಕಂಗಾಲು