ಚಿಕ್ಕಬಳ್ಳಾಪುರ, ಅಕ್ಟೋಬರ್ 14: ನಂದಿ ಬೆಟ್ಟ (Nandi Hills) ಪ್ರವಾಸಿಗರ ನೆಚ್ಚಿನ ತಾಣವಾಗಿದೆ. ವೀಕೆಂಡ್ ಬಂದರೆ ಸಾಕು ಬೆಂಗಳೂರು (Bengaluru) ಮಂದಿ ನಂದಿ ಬೆಟ್ಟಕ್ಕೆ ಹೋಗಿ, ಪ್ರಕೃತಿಯ ಸೊಬಗನ್ನು ಆನಂದಿಸಿ ಬರುತ್ತಾರೆ. ಪ್ರವಾಸಿ ಮತ್ತು ಐತಿಹಾಸಿಕ ತಾಣವಾದ ನಂದಿ ಬೆಟ್ಟಕ್ಕೆ ಅಪಾಯ ಬಂದೊದಗಿದೆ. ಇಲ್ಲಿನ ಕಲ್ಲುಗಣಿಗಾರಿಕೆ, ಕೈಗಾರಿಕಾ ಚಟುವಟಿಕೆಗಳು ಮತ್ತು ಸರ್ಕಾರದಿಂದ ನಿರ್ಮಾಣವಾಗುತ್ತಿರುವ ರೂಪ್ ವೇ ಕಾಮಗಾರಿಯಿಂದ ನಂದಿ ಬೆಟ್ಟ ಕುಸಿಯುವ ಸಾಧ್ಯತೆ ಇದೆ ಎಂದು ಪರಿಸರವಾದಿಗಳು, ಭೂ ವಿಜ್ಞಾನಿಗಳು ಆತಂಕ ವ್ಯಕ್ತಪಡಿಸಿದ್ದಾರೆ.
ಬೆಟ್ಟದ ಸುತ್ತಮುತ್ತ ರೆಸಾರ್ಟ್ಸ್ ವಿಲ್ಲಾ, ಹೋಟೆಲ್ಸ್, ಕ್ರಷರ್, ರೂಪ್ ವೇ ನಿರ್ಮಾಣ ಮತ್ತು ಹಲವು ವಾಣಿಜ್ಯ ಚಟುವಟಿಕೆಗಳಿಂದ ಬೆಟ್ಟಕ್ಕೆ ಅಪಾಯ ಎದುರಾಗಿದೆ. ಜೊತೆಗೆ ನಂದಿ ಬೆಟ್ಟದಲ್ಲಿ ಡ್ರಗ್ಸ್, ಗಾಂಜಾ ಸೇರಿದಂತೆ ಅನೈತಿಕ ಚಟುವಟಿಕೆಗಳು ನಡೆಯುತ್ತಿದ್ದು, ಇವುಗಳಿಗೂ ಬ್ರೇಕ್ ಹಾಕಿ. ಈಗಾಗಲೇ ಬೆಟ್ಟದ ಒಂದು ಭಾಗದಲ್ಲಿ ಕುಸಿತವಾಗಿದೆ. ಹೀಗಾಗಿ ಇವುಗಳನ್ನು ಕೂಡಲೆ ನಿಲ್ಲಿಸಬೇಕೆಂದು ಪರಿಸರವಾದಿ ಯಲ್ಲಪ್ಪ ರೆಡ್ಡಿ ಸೇರಿದಂತೆ ಹಲವು ಹೋರಾಟಗಾರರು ಸರಕಾರಕ್ಕೆ ಮನವಿ ಸಲ್ಲಿಸಿದ್ದಾರೆ.
ಇದನ್ನೂ ಓದಿ: ಚಿಕ್ಕಬಳ್ಳಾಪುರದ ನಂದಿ ಗಿರಿಧಾಮದಲ್ಲಿ ಪ್ಯಾರಾಗ್ಲೈಡಿಂಗ್ ಆರಂಭ
ಪರಿಸರವಾದಿಗಳಾದ ಯಲ್ಲಪ್ಪ ರೆಡ್ಡಿ, ಆರ್.ಚಂದ್ರು, ರಾಜೇಂದ್ರ ಸಿಂಗ್ ಬಾಬು ಸೇರಿದಂತೆ ಹಲವರು ತಮ್ಮ ವಿಶ್ವ ಮಾನವ ಹಕ್ಕುಗಳ ಸೇವಾ ಪ್ರತಿಷ್ಠಾನದ ವತಿಯಿಂದ “ಸೇವ್ ನಂದಿಹಿಲ್ಸ್ ಅಭಿಯಾನ” ಹೋರಾಟ ಶುರು ಮಾಡಿದ್ದಾರೆ. ಸೇವ್ ನಂದಿ ಹಿಲ್ಸ್ ಕ್ಯಾಂಪೇನ್ಗೆ ಸ್ಥಳೀಯರು ಸಾಥ್ ನೀಡಿದ್ದಾರೆ.
ನಮಗೆ ರೋಪ್ ವೇ ಬೇಡ, ಯಥಾಸ್ಥಿತಿ ಉಳಿಸಿಕೊಡಿ ಸಾಕು. ಕಳೆದ ವರ್ಷ ಇಲ್ಲಿ ಬೆಟ್ಟ ಕುಸಿದಿದೆ. ರಿಯಲ್ ಎಸ್ಟೇಟ್ ದಂಧೆ, ರಾಜಕಾರಣಿಗಳ ಹಣ ದಾಹಕ್ಕೆ ಬೆಟ್ಟ ಬಲಿ ಕೊಡಬೇಡಿ ಎಂದು ಹೋರಾಟಗಾರರು ಮನವಿ ಮಾಡಿದ್ದಾರೆ.
“ಕಲ್ಲುಗಣಿಗಾರಿಕೆಯಿಂದ ಹೆಚ್ಚಿನ ಹಾನಿಯಾಗುತ್ತಿದೆ. ಯಂತ್ರೋಪಕರಣಗಳ ಬಳಕೆಯಿಂದ ಬೆಟ್ಟಕ್ಕೆ ಅಪಾಯ ಎದುರಾಗಲಿದೆ. ಮತ್ತು ವಾಯು ಮತ್ತು ನೀರಿನ ಮಾಲಿನ್ಯ, ಮಣ್ಣಿನ ಸವೆತ, ಭೂಕುಸಿತ ಸಂಭವಿಸುವ ಸಾಧ್ಯತೆ ಇದೆ” ಎಂದು ಯುನಿವರ್ಸಲ್ ಹ್ಯೂಮನ್ ರೈಟ್ಸ್ ಸರ್ವೀಸ್ ಫೌಂಡೇಶನ್ ಎನ್ಜಿಒ ಎಚ್ಚರಿಸಿದೆ.
ರಾಜ್ಯದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ