ಗೌರಿಬಿದನೂರು: 20 ಲಕ್ಷ ಲಂಚ ಪಡೆಯುತ್ತಿದ್ದಾಗ ನಗರಸಭೆ ಅಧ್ಯಕ್ಷೆಯ ಗಂಡ, ಇಬ್ಬರು ಸದಸ್ಯರು ಲೋಕಾಯುಕ್ತ ಬಲೆಗೆ
Gauribidanur Town Municipal Council: ಚಿಕ್ಕಬಳ್ಳಾಪುರ ಜಿಲ್ಲೆಯ ಗೌರಿಬಿದನೂರು ನಗರಸಭೆ ಅಧ್ಯಕ್ಷೆ ರೂಪಾ ಅವರ ಪತಿ (husband) ಅನಂತರಾಜು ಹಾಗೂ ನಗರಸಭಾ ಸದಸ್ಯರಾದ ಮಂಜುನಾಥ್ ಮತ್ತು ಗೋಪಿ ಲೋಕಾಯಕ್ತ ಬಲೆಗೆ ಬಿದ್ದವರು.
ಚಿಕ್ಕಬಳ್ಳಾಪುರ: ನಗರಸಭೆ ಅಧ್ಯಕ್ಷೆಯ ಗಂಡ ಹಾಗೂ ಇಬ್ಬರು ನಗರಸಭಾ ಸದಸ್ಯರು ಲೋಕಾಯುಕ್ತ ಬಲೆಗೆ ಸಿಲುಕಿದ್ದಾರೆ. ಚಿಕ್ಕಬಳ್ಳಾಪುರ ಜಿಲ್ಲೆಯ ಗೌರಿಬಿದನೂರು ನಗರಸಭೆ (Gauribidanur Town Municipal Council) ಅಧ್ಯಕ್ಷೆ ರೂಪಾ ಅವರ ಪತಿ (husband) ಅನಂತರಾಜು ಹಾಗೂ ನಗರಸಭಾ ಸದಸ್ಯರಾದ ಮಂಜುನಾಥ್ ಮತ್ತು ಗೋಪಿ ಲೋಕಾಯಕ್ತ ಬಲೆಗೆ ಬಿದ್ದವರು. ಲೇಔಟ್ ಅನುಮೋದನೆಗೆ ಬಡಾವಣೆ ಮಾಲೀಕರಿಂದ 20 ಲಕ್ಷ ರೂಪಾಯಿ ಲಂಚ (bribe) ಪಡೆಯುತ್ತಿದ್ದಾಗ ಲೋಕಾಯುಕ್ತರ (lokayukta) ದಾಳಿ ನಡೆಸಿದ್ದರು. ರಾಜಾನುಕುಂಟೆಯ ರೆಸಾರ್ಟ್ಸ್ ನಲ್ಲಿ ಲಂಚ ಪಡೆಯುವಾಗ ಚಿಕ್ಕಬಳ್ಳಾಪುರ ಲೋಕಾಯುಕ್ತ ಎಸ್ಪಿ ಪವನ್ ನೆಜ್ಜೂರು ನೇತೃತ್ವದಲ್ಲಿ ಅಧಿಕಾರಿಗಳು ದಾಳಿ ನಡೆಸಿದ್ದಾರೆ. ಮೂವರನ್ನೂ ವಶಕ್ಕೆ ಪಡೆದ ಲೋಕಾಯುಕ್ತ ಪೊಲೀಸರು ವಿಚಾರಣೆ ನಡೆಸುತ್ತಿದ್ದಾರೆ.
ಲೋಕಾಯುಕ್ತ ಪತ್ರಿಕಾ ಪ್ರಕಟಣೆ ಸಾರಾಂಶ ಹೀಗಿದೆ:
ದೂರುದಾರರಾದ ಮಂಜುನಾಥ ರವರು ಭೂಮಿಯನ್ನು ರೈತರಿಂದ ಖರೀದಿಸಿ, ಭೂಪರಿವರ್ತನೆ ಕಾರ್ಯಗಳನ್ನು ಕೈಗೊಂಡ ಬಡಾವಣೆಯನ್ನು ವೃದ್ಧಿಸಿ ನಿವೇಶನಗಳನ್ನಾಗಿ ಮಾರುವ ವೃತ್ತಿಯನ್ನು ಮಾಡಿಕೊಂಡಿದ್ದು, ತಮ್ಮ 8 ಎಕರೆ ಪ್ರದೇಶದಲ್ಲಿ ರಚಿಸಿದ್ದ ಬಡಾವಣೆಯಲ್ಲಿ ಸುಮಾರು133 ನಿವೇಶನಗಳನ್ನು ಮಾಡಿರುತ್ತಾರೆ. ಸದರಿ 133 ನಿವೇಶನಗಳಿಗೆ ಖಾತೆ ವಿತರಿಸಲು ಗೌರಿಬಿದನೂರು ನಗರಸಭೆ ಕಾರ್ಯಾಲಯವನ್ನು ಸಂಪರ್ಕ ಮಾಡಿದ್ದರು.
ಗೌರಿದನೂರು ನಗರಸಭೆಯ ಅಧ್ಯಕ್ಷರಾದ ಶ್ರೀಮತಿ ರೂಪಾರವರ ಪತಿಯಾದ ಶ್ರೀ ಆನಂದರು (1ನೇ ಅಪಾದಿತ), ಶ್ರೀ ಗೋಪಿನಾಥ್, ನಗರಸಭಾ ಸದಸ್ಯ (2ನೇ ಅಪಾದಿತ), ಶ್ರೀ, ಮೈಲಾರಿ, ಹಿಂದಿನ ನಗರಸಭಾ ಸದಸ್ಯರು ಹಾಗೂ ಪ್ರಸ್ತುತ ನಗರಸಭಾ ಸದಸ್ಯರಾಗಿರುವವರ ಪತಿ (3ನೇ ಅಪಾದಿತ) ಹಾಗೂ ಶ್ರೀ, ಮಂಜುನಾಥ್, ಪ್ರಸ್ತುತ ನಗರಸಭಾ ಸದಸ್ಯರಾಗಿರುವವರ ಸಹಿ (1ನೇ ಅಪಾದಿತ) ರವರುಗಳು ಪ್ರತಿ ಎಕರೆಗೆ ಐದು ಲಕ್ಷ ರೂಪಾಯಿಯಂತೆ, 8 ಎಕರೆಗೆ ಒಟ್ಟು 40 ಲಕ್ಷ ರೂಪಾಯಿಗಳನ್ನು ಲಂಚಕ್ಕಾಗಿ ಒತ್ತಾಯಿಸಿ, ಈ ದಿನ ಅಂದರೆ ದಿನಾಂಕ: 17.12.2022ರಂದು 20 ಲಕ್ಷ ರೂಪಾಯಿಗಳ ಲಂಚದ ಹಣವನ್ನ ದೂರುದಾರರಿಂದ ಸ್ವೀಕರಿಸುವ ಸಂದರ್ಭದಲ್ಲಿ ಅವರುಗಳನ್ನು ಟ್ರ್ಯಾಪ್ ಮಾಡಲಾಗಿದ್ದು, ಅಪಾದಿತರುಗಳನ್ನು ದಸ್ತಗಿರಿ ಮಾಡಿ ತನಿಖೆ ಮುಂದುವರೆಸಲಾಗಿದೆ.
ಗೌರವಾನ್ವಿತ ಲೋಕಾಯುಕ್ತರವರಾದ ನ್ಯಾಯಮೂರ್ತಿ ಶ್ರೀ ಬಿ ಎಸ್ ಪಾಟೀಲ್‌ರವರ ಸೂಚನೆಯಂತೆ ಶ್ರೀಯುತ ಪ್ರಶಾಂತ್ ಕುಮಾರ್ ಠಾಕೂರ್, ಐಪಿಎಸ್, ಅಪರ ಪೊಲೀಸ್ ಮಹಾನಿರ್ದೇಶಕರು ಹಾಗೂ ಶ್ರೀ. ಪವನ್ ನೆಜ್ಜೂರ್, ಐಪಿಎಸ್, ಅಧೀಕ್ಷಕರು, ಕರ್ನಾಟಕ ಲೋಕಾಯುಕ್ತ, ಚಿತ್ರದುರ್ಗರವರ ಮಾರ್ಗದರ್ಶನದಲ್ಲಿ ಶ್ರೀ. ಭೂತೇಗೌಡ,ಡಿವೈಎಸ್‌ಪಿರವರ ನೇತೃತ್ವದ ತಂಡ ಟ್ರ್ಯಾಪ್ ಪ್ರಕ್ರಿಯೆಯನ್ನು ಜರುಗಿಸಿರುತ್ತಾರೆ.
ಗ್ರಾಮ ಆಡಳಿತ ಅಧಿಕಾರಿಗಳ ಅನಧಿಕೃತ ಕಚೇರಿಗಳ ಮೇಲೆ ದಾಳಿ
ಮಂಡ್ಯ ಜಿಲ್ಲೆಯ ನಾಗಮಂಗಲದಲ್ಲಿ ತಹಶೀಲ್ದಾರ್ ದಿಢೀರ್ ದಾಳಿ ನಡೆಸಿದ್ದಾರೆ. ಗ್ರಾಮ ಆಡಳಿತ ಕಂದಾಯ ನಿರೀಕ್ಷಕರ ಅನಧಿಕೃತ ಕಚೇರಿಗಳ ಮೇಲೆ ರೇಡ್ ಮಾಡಲಾಗಿದ್ದು ಮಂಡ್ಯದ ನಾಗಮಂಗಲ ಟೌನ್ ನಲ್ಲಿ ಅನಧಿಕೃತ ಕಚೇರಿ ಹೊಂದಿದ್ದ 10ಕ್ಕೂ ಹೆಚ್ಚು ಅಧಿಕಾರಿಗಳಿಗೆ ಕ್ಲಾಸ್ ತೆಗೆದುಕೊಳ್ಳಲಾಗಿದೆ. ಕೇಂದ್ರಸ್ಥಾನದಲ್ಲಿ ಕರ್ತವ್ಯ ನಿರ್ವಹಿಸದೆ ಅನಧಿಕೃತವಾಗಿ ಕಚೇರಿ ಮಾಡಿಕೊಂಡಿದ್ದ ಅಧಿಕಾರಿಗಳಿಗೆ ತಹಶೀಲ್ದಾರ್ ನಂದೀಶ್ ತರಾಟೆಗೆ ತೆಗೆದುಕೊಂಡಿದ್ದಾರೆ. ಕೇಂದ್ರಸ್ಥಾನದಲ್ಲಿ ಕೆಲಸ ಮಾಡದೇ ಸಾರ್ವಜನಿಕರನ್ನ ಅಲೆಸುತ್ತಿದ್ದ ಗ್ರಾಮಲೆಕ್ಕಿಗ ಹಾಗೂ ಕಂದಾಯ ನಿರೀಕ್ಷಕ ಅಧಿಕಾರಿಗಳ ಮೈಗಳ್ಳತನದ ಬಗ್ಗೆ ಮಾಹಿತಿ ಪಡೆದ ನಾಗಮಂಗಲ ತಹಸಿಲ್ದಾರ್ ನಂದೀಶ್ ದಿಢೀರ್ ದಾಳಿ ನಡೆಸಿ ಅಧಿಕಾರಿಗಳಿಗೆ ಬಿಸಿ ಮುಟ್ಟಿಸಿದ್ದಾರೆ.
ರಾಜ್ಯದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ
Published On - 4:01 pm, Sat, 17 December 22