ಕೆರೆ ಕೋಡಿ ಹರಿಯುತ್ತಿರುವ ವಿಡಿಯೋ ತೆಗೆದುಕೊಳ್ಳಲು ಹೋಗಿ ಯುವತಿ ಕೆರೆ ಪಾಲು
ಗಂಗಾನಹಳ್ಳಿ ಕೆರೆ ಕೋಡಿ ಹರಿಯುತ್ತಿರುವ ವಿಚಾರ ತಿಳಿದು ಸ್ನೇಹಿತೆ ಜೊತೆ ಕೆರೆ ಬಳಿ ತೆರಳಿದ್ದಳು. ಈ ವೇಳೆ ಜೊತೆಯಲ್ಲಿದ್ದ ಯುವತಿಗೆ ವಿಡಿಯೋ ಮಾಡಲು ಹೇಳಿ ಮೊಬೈಲ್ ನೀಡಿ ಕೆರೆಯ ಅಂಚಿನ ದಿಂಡಿನ ಮೇಲೆ ತೆರಳಿದ್ದಳು.
ಚಿಕ್ಕಬಳ್ಳಾಪುರ: ಮೊಬೈಲ್ ನಲ್ಲಿ ಫೋಟೋ ತೆಗೆದುಕೊಳ್ಳಲು ಹೋಗಿ ಬಿ.ಎಡ್ ವಿದ್ಯಾರ್ಥಿನಿಯೊರ್ವಳು ಕೆರೆ ಪಾಲು ಆಗಿರುವ ದುರ್ಘಟನೆ ನಡೆದಿದೆ. ಚಿಕ್ಕಬಳ್ಳಾಪುರ ಜಿಲ್ಲೆ ಗುಡಿಬಂಡೆ ತಾಲೂಕಿನ ಗಂಗಾನಹಳ್ಳಿ ಗ್ರಾಮದ ಬಳಿ ಯುವತಿ ಕೆರೆಗೆ ಬಿದ್ದಿದ್ದಾಳೆ. ಮೂಲತಃ ಚಿಕ್ಕಬಳ್ಳಾಪುರ ಜಿಲ್ಲೆ ಶಿಡ್ಲಘಟ್ಟ ತಾಲೂಕಿನ ಗಾಜಿಲುವಾರುಪಲ್ಲಿ ಗ್ರಾಮದ ನಿವಾಸಿ ಎಂ.ಎ ಪದವೀಧರೆ 22 ವರ್ಷದ ಅಮೃತಾ ಮೃತ ದುರ್ದೈವಿ.
ಜಂಬಿಗೆಮರದಹಳ್ಳಿಯ ನೆಂಟರ ಮನೆಯ ಗೃಹಪ್ರವೇಶದ ಕಾರ್ಯಕ್ರಮ ನಿಮಿತ್ತ ಗ್ರಾಮಕ್ಕೆ ಆಗಮಿಸಿದ್ದ ಅಮೃತಾ, ಗಂಗಾನಹಳ್ಳಿ ಕೆರೆ ಕೋಡಿ ಹರಿಯುತ್ತಿರುವ ವಿಚಾರ ತಿಳಿದು ಸ್ನೇಹಿತೆ ಜೊತೆ ಕೆರೆ ಬಳಿ ತೆರಳಿದ್ದಳು. ಈ ವೇಳೆ ಜೊತೆಯಲ್ಲಿದ್ದ ಯುವತಿಗೆ ವಿಡಿಯೋ ಮಾಡಲು ಹೇಳಿ ಮೊಬೈಲ್ ನೀಡಿ ಕೆರೆಯ ಅಂಚಿನ ದಿಂಡಿನ ಮೇಲೆ ತೆರಳಿದ್ದಳು. ಆದ್ರೆ ಈ ವೇಳೆ ಆಕಸ್ಮಿಕವಾಗಿ ಕಾಲು ಜಾರಿ ಕೆರೆಗೆ ಅಮೃತಾ ಉರುಳಿಬಿದ್ದು ಸಾವನ್ನಪ್ಪಿದ್ದಾಳೆ.
ಇನ್ನೂ ಸುದ್ದಿ ತಿಳಿಯುತ್ತಿದ್ದಂತೆ ಗುಡಿಬಂಡೆ ಠಾಣೆ ಪೊಲೀಸರು ಸ್ಥಳಕ್ಕೆ ಭೇಟಿ ನೀಡಿದ್ದು ಮೃತದೇಹವನ್ನು ಗುಡಿಬಂಡೆ ಸರ್ಕಾರಿ ಆಸ್ಪತ್ರೆಯ ಶವಾಗಾರಕ್ಕೆ ರವಾನಿಸಿದ್ದಾರೆ. ಇನ್ನೂ ಕೆರೆಯ ನೀರಲ್ಲಿ ಅಮೃತಾ ಬಿದ್ದ ಘಟನೆಯನ್ನು ಸ್ನೇಹಿತೆ ಅಕ್ಷತಾ, ತೋಟದಲ್ಲಿದ್ದ ಗ್ರಾಮಸ್ಥರಿಗೆ ತಿಳಿಸಿದ್ದಾಳೆ. ಸ್ಥಳಕ್ಕೆ ಬಂದ ಗ್ರಾಮಸ್ಥರು ಅಮೃತಾಳ ಶವವನ್ನು ಮೇಲೆ ಎತ್ತಿದ್ದಾರೆ.
ನೀರಿನಲ್ಲಿ ಮುಳುಗಿ ಸಾವನ್ನಪ್ಪಿದವರ ಮೃತದೇಹದ ಮೇಲೆ ಅರ್ಧ ಗಂಟೆಯೊಳಗೆ ಉಪ್ಪು ಹಾಕಿ ಮಲಗಿಸಿದ್ರೆ ಅವರು ಬದುಕ್ತಾರೆ ಎಂಬ ಸಾಮಾಜಿಕ ಜಾಲತಾಣದಲ್ಲಿ ಹರಿದಾಡುತ್ತಿದ್ದ ಸುಳ್ಳು ಸಂದೇಶದಂತೆ, ಪಾಪ ಬದುಕಿಸಬೇಕು ಅಂತ ಉಪ್ಪು ಸುರಿದು ಬದುಕಿಸಲು ಸಹ ಗ್ರಾಮಸ್ಥರು ಪ್ರಯತ್ನಿಸಿದ್ರು ಅಮೃತಾ ಬದುಕಿ ಬರಲಿಲ್ಲ. ಕೈಯಲ್ಲಿ ಮೊಬೈಲ್ ಇದ್ರೆ ಸಾಕು ಕೆಲವು ಯುವತಿಯರು ಪ್ರಪಂಚವನ್ನೇ ಮರೆತು ಹೋಗುತ್ತಾರೆ. ಸೆಲ್ಫಿ ವೀಡಿಯೋ ಮಾಡುವಾಗ ಎಚ್ಚರ ತಪ್ಪಿದರೆ ಈ ಪ್ರಪಂಚವನ್ನೇ ಬಿಟ್ಟುಹೋಗಬೇಕಾಗುತ್ತದೆ.
ವರದಿ: ಭೀಮಪ್ಪ ಪಾಟೀಲ್, ಟಿವಿ9 ಚಿಕ್ಕಬಳ್ಳಾಪುರ
Published On - 9:32 pm, Sun, 11 September 22