
ಚಿಕ್ಕಬಳ್ಳಾಪುರ, (ಮಾರ್ಚ್ 05): ಈಕೆಯ ಹೆಸರು ವಿನುತ. ಇನ್ನು ಈಗ ತಾನೇ 24 ವರ್ಷ ವಯಸ್ಸು. ಬೆಂಗಳೂರು ಗ್ರಾಮಾಂತರ ಜಿಲ್ಲೆ, ದೇವನಹಳ್ಳಿ ಮೂಲದ ಈಕೆಯನ್ನು ಚಿಕ್ಕಬಳ್ಳಾಪುರ ತಾಲ್ಲೂಕಿನ ಗಂಗರೇಕಾಲುವೆ ನಿವಾಸಿ ಅಡುಗೆಭಟ್ಟ ಸತೀಶ್ ಎನ್ನುವವರಿಗೆ ಕೊಟ್ಟು ಮದುವೆ ಮಾಡಲಾಗಿತ್ತು. ದಂಪತಿಗೆ ಒಂದು ಗಂಡು ಮಗುವಿದೆ. ಆದರೆ ಫೆಬ್ರವರಿ-28 ರಂದು ರಾತ್ರಿ ಮನೆಯಲ್ಲಿ ಗಂಡ ಇಲ್ಲದೆ ಸಮಯದಲ್ಲಿ ವಿನುತ ಮನೆಯ ಬೆಡ್ ರೂಂನಲ್ಲಿ ಶವವಾಗಿದ್ದಾಳೆ. ನೇಣು ಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡಂತೆ ಕಂಡುಬಂದಿದೆ. ಇದರಿಂದ ಮೃತಳ ತಂದೆ-ತಾಯಿ, ಗಂಡ ಸತೀಶ್ ಆಕೆಯ ಪ್ರಿಯಕರ ಬಾಲರಾಜು ಮೇಲೆ ಅನುಮಾನ ವ್ಯಕ್ತಪಡಿಸಿ ದೂರು ನೀಡಿದ್ದಾರೆ.
ವಿನುತಾಗೆ ಈಗಾಗಲೇ ಮದುವೆಯಾಗಿದ್ದು ಮಗು ಸಹ ಇದೆ. ಆದರೂ ಸಹ ವಿನುತಾ ಗ್ರಾಮದ ಯುವಕನೋರ್ವನ ಜೊತೆ ಅನೈತಿಕ ಸಂಬಂಧ ಇಟ್ಟುಕೊಂಡಿದ್ದಳು ಎನ್ನಲಾಗಿದೆ. ಹೀಗಾಗಿ ಫೆಬ್ರವರಿ 28 ರಂದು ರಾತ್ರಿ ವಿನುತ ತನ್ನ ಪ್ರಿಯಕರ ಬಾಲರಾಜುಗೆ ಹಲವು ಬಾರಿ ಕರೆ ಮಾಡಿ, ಮನೆಗೆ ಬರುವಂತೆ ಹೇಳಿದ್ದಾಳಂತೆ. ಆದರೆ ಬಾಲರಾಜು ಎಲ್ಲಿ ಇದ್ದನೋ ಗೊತ್ತಿಲ್ಲ. ಸಕಾಲಕ್ಕೆ ವಿನುತಾಳ ಮನೆಗೆ ಹೋಗಿಲ್ಲ. ಇದರಿಂದ ಮನನೊಂದ ವಿನುತಾ ಆತ್ಮಹತ್ಯೆಗೆ ಶರಣಾಗಿರಬಹದು ಎನ್ನುವ ಶಂಕೆ ವ್ಯಕ್ತವಾಗಿದೆ. ಇನ್ನು ಸ್ವತಃ ಮೃತಳ ಮಗ ಪೊಲೀಸರಿಗೆ ತನ್ನ ತಾಯಿ ನೇಣು ಬಿಗಿದುಕೊಂಡಿರುವ ಬಗ್ಗೆ ತಿಳಿಸಿದ್ದಾನೆ.
ಇತ್ತ ಗಂಡ-ಮಗುವಿದ್ದರೆ, ಬೇರೊಬ್ಬನ ಸಹವಾಸ ಮಾಡಿ ಗೃಹಿಣಿ ಸಾವಿನ ಮನೆ ಸೇರಿದ್ದಾಳೆ. ಅತ್ತ ಆಕೆಯ ಪೋಷಕರು, ಆಕೆಯ ಗಂಡ ಹಾಗೂ ಪ್ರಿಯಕರ ಮೇಲೆ ಅನುಮಾನ ವ್ಯಕ್ತಪಡಿಸಿ ದೂರು ನೀಡಿದ್ದಾರೆ. ಈ ಬಗ್ಗೆ ಚಿಕ್ಕಬಳ್ಳಾಪುರ ಗ್ರಾಮಾಂತರ ಪೊಲೀಸರು ಪ್ರಕರಣ ದಾಖಲು ಮಾಡಿಕೊಂಡು ತನಿಖೆ ಕೈಗೊಂಡಿದ್ದಾರೆ.
ರಾಜ್ಯದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ.