ಜಕ್ಕಲಮಡಗು ಜಲಾಶಯದ ಕಟ್ಟೆಯಲ್ಲಿ ಬಿರುಕು, ಆತಂಕದಲ್ಲಿ ಜನ!
ಅಲ್ಲೊಂದು ಕುಡಿಯುವ ನೀರಿನ ಜಲಾಶಯವಿದೆ. ಆ ಜಲಾಶಯವನ್ನು ನಂಬಿಕೊಂಡು ಎರಡು ಅವಳಿ ನಗರಗಳ ಜನ ನೆಮ್ಮದಿಯಾಗಿ ನೀರು ಕುಡಿಯುತ್ತಿದ್ದಾರೆ. ಆದ್ರೆ, ಈಗ ಅದೇ ಜಲಾಶಯದ ಕಟ್ಟೆಯಲ್ಲಿ ಬಿರುಕು ಕಾಣಿಸಿಕೊಂಡಿದ್ದು, ಅಲ್ಲಿಯ ಜನರ ಆತಂಕಕ್ಕೆ ಕಾರಣವಾಗಿದೆ. ಈ ಹಿನ್ನಲೆ ಇಂದು(ಜೂ.12) ವಿಜ್ಞಾನಿಗಳ ತಂಡ ಅಲ್ಲಿಗೆ ಭೇಟಿ ನೀಡಿ ಪರಿಶೀಲನೆ ನಡೆಸಿದೆ. ಅಷ್ಟಕ್ಕೂ ಅದ್ಯಾವ ಜಲಾಶಯ? ಅಲ್ಲಿ ಆಗಿರುವುದಾದ್ರು ಏನ್ ಅಂತೀರಾ? ಈ ಸ್ಟೋರಿ ಓದಿ.
ಚಿಕ್ಕಬಳ್ಳಾಪುರ, ಜೂ.12: ಜಕ್ಕಲಮಡಗು ಜಲಾಶಯ(Jakkalamadagu Dam), ಚಿಕ್ಕಬಳ್ಳಾಪುರ(Chikkaballapur) ತಾಲೂಕಿನ ಜಕ್ಕಲಮಡಗು ಗ್ರಾಮದ ಬಳಿ ಈ ಜಲಾಶಯವಿದೆ. ಇದೇ ಜಲಾಶಯದ ನೀರನ್ನು ಬೆಂಗಳೂರು ಗ್ರಾಮಾಂತರ ಜಿಲ್ಲೆಯ ದೊಡ್ಡಬಳ್ಳಾಫುರ ನಗರ ಹಾಗೂ ಚಿಕ್ಕಬಳ್ಳಾಪುರ ನಗರದ ಜನ ಕುಡಿಯುತ್ತಿದ್ದಾರೆ. ಅವಳಿ ಜಿಲ್ಲೆಗಳ ಜನರಿಗೆ ಜಕ್ಕಲಮಡಗು ವರದಾನವಾಗಿದ್ದು, ಪ್ರಸ್ತುತ ಜಲಾಶಯದಲ್ಲಿ 16 ಮೀಟರ್ ಎತ್ತರದಷ್ಟು ನೀರಿದೆ. ಆದ್ರೆ, ಇದೆ ಜಲಾಶಯದ ಕಟ್ಟೆಯ ಮೇಲ್ಮೈ 50 ಮೀಟರ್ನಷ್ಟು ದೂರ ಬಿರುಕು ಕಾಣಿಸಿಕೊಂಡಿದ್ದು, ನಗರಸಭೆ ಅಧಿಕಾರಿಗಳು, ನಗರ ನೀರು ಸರಬರಾಜು ಅಧಿಕಾರಿಗಳು ಹಾಗೂ ಸಾರ್ವಜನಿಕರ ಆತಂಕಕ್ಕೆ ಕಾರಣವಾಗಿದೆ.
ಇನ್ನು ಜಕ್ಕಲಮಡಗು ಜಲಾಶಯದ ಕಟ್ಟೆಯ ಮೇಲ್ಮೈ 50 ಮೀಟರ್ನಷ್ಟು ದೂರ ಬಿರುಕು ಕಾಣಿಸಿಕೊಂಡಿರುವ ಕಾರಣ ಇಂದು(ಜೂ.12) ನಗರ ನೀರು ಸರಬರಾಜು ಇಲಾಖೆಯ ಹಿರಿಯ ಇಂಜಿನಿಯರ್ಗಳು , ನ್ಯಾಷನಲ್ ಇನ್‌ಸ್ಟಿಟ್ಯೂಟ್ ಆಫ್ ರಾಕ್ ಮೆಕ್ಯಾನಿಕ್ಸ್ ವಿಭಾಗದ ಜಿಯೋ ಪಿಜಿಕ್ಸ್ ವಿಭಾಗದ ವಿಜ್ಞಾನಿಗಳು ಸೇರಿದಂತೆ ನಗರಸಭೆ ಅಧಿಕಾರಿಗಳ ತಂಡ ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿದರು.
ಇದನ್ನೂ ಓದಿ:ಚಿಕ್ಕಬಳ್ಳಾಪುರದಲ್ಲಿ ಕರಗ ಹೊತ್ತ ಮಹಿಳೆ; ಪಂಚ ರಾಜ್ಯಗಳ ಜನಪದ ಕಲೆಗಳ ಸಮಾಗಮ!
ಬಳಿಕ ಮಾತನಾಡಿದ ವಿಜ್ಞಾನಿಗಳು, ‘ಜಕ್ಕಲಮಡಗು ಜಲಾಶಯದ ಸುತ್ತಮುತ್ತ 5 ಕಿ.ಮೀಟರ್ ವ್ಯಾಪ್ತಿಯಲ್ಲಿ ಕಲ್ಲು ಗಣಿಗಾರಿಕೆ ನಡೆಯುತ್ತಿದ್ದು, ಅದಕ್ಕೂ ಇದಕ್ಕೂ ಸಂಬಂಧ ಇಲ್ಲ. ಮಣ್ಣಿನ ಗುಣಮಟ್ಟ ಕಡಿಮೆ ಇದ್ದು, ಮಳೆಯ ನೀರು ಕಟ್ಟೆಯ ಮೇಲ್ಮೈ ಬಿದ್ದಾಗ ನೀರು ಕಟ್ಟೆಯಲ್ಲಿ ಇಂಗಿ ಬಿರುಕು ಉಂಟಾಗಿದೆ. ಸರಿಪಡಿಸಬಹುದು ಎಂದು ತಿಳಿಸಿದರು. ದೊಡ್ಡಬಳ್ಳಾಫುರ ಹಾಗೂ ಚಿಕ್ಕಬಳ್ಳಾಪುರ ಅವಳಿ ನಗರಗಳ ಜನರ ಕುಡಿಯುವ ನೀರಿ ಮೂಲವಾಗಿರುವ ಜಕ್ಕಲಮಡಗು ಜಲಾಶಯವನ್ನು ರಕ್ಷಣೆ ಮಾಡುವ ಜವಾಬ್ದಾರಿ ಎರಡು ನಗರಸಭೆ ಹಾಗೂ ಎರಡು ಜಿಲ್ಲಾಡಳಿತಗಳು ಹೊಣೆಯಾಗಿದ್ದು ತಕ್ಷಣ ಸೂಕ್ತ ಕ್ರಮ ಕೈಗೊಳ್ಳಬೇಕು ಎಂದು ಸ್ಥಳಿಯರು ಹೇಳುತ್ತಿದ್ದಾರೆ.
ರಾಜ್ಯದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ