ಚಿಕ್ಕಬಳ್ಳಾಪುರ: ಪ್ರವಾಸಿಗರ ಸ್ವರ್ಗ, ಪ್ರೇಮಿಗಳ ಹಾಟ್ ಫೇವರೇಟ್ ನಂದಿ ಗಿರಿಧಾಮಕ್ಕೆ ಸಚಿವ ಸಿ.ಪಿ.ಯೋಗೇಶ್ವರ್ ಭೇಟಿ ನೀಡಿದ್ದಾರೆ. ರಾಜಧಾನಿ ಬೆಂಗಳೂರಿಗೆ ಹೊಂದಿಕೊಂಡಿರುವ ಚಿಕ್ಕಬಳ್ಳಾಪುರ ತಾಲೂಕಿನಲ್ಲಿರುವ ನಂದಿ ಗಿರಿಧಾಮದ ಪ್ರಕೃತಿ ಸೌಂದರ್ಯ ಸವಿಯಲು ಸಾವಿರಾರು ಮಂದಿ ಪ್ರವಾಸಿಗರು ಪ್ರತಿ ನಿತ್ಯ ಭೇಟಿ ಕೊಡ್ತಾರೆ. ಈ ಬಾರಿ ಪ್ರವಾಸೋದ್ಯಮ ಇಲಾಖೆ ಸಚಿವ ಸಿ.ಪಿ.ಯೋಗೇಶ್ವರ್ ಗಿರಿ ಧಾಮಕ್ಕೆ ಭೇಟಿ ನೀಡಿದ್ದು ರಾತ್ರಿ ನಂದಿ ಗಿರಿಧಾಮದಲ್ಲೇ ತಂಗಿದ್ದಾರೆ.
ಇನ್ನು ವಿಶ್ವವಿಖ್ಯಾತ ನಂದಿಗಿರಿಧಾಮಕ್ಕೆ ಸಚಿವ ಸಿ.ಪಿ.ಯೋಗೇಶ್ವರ್ ಭೇಟಿ ಹಿನ್ನೆಲೆಯಲ್ಲಿ ನಂದಿಗಿರಿಧಾಮಕ್ಕೆ ಪೊಲೀಸರ ಸರ್ಪಗಾವಲು ಹಾಕಲಾಗಿದೆ. ಓರ್ವ ಸಿಪಿಐ, 2 ಪಿ.ಎಸ್.ಐ ಸೇರಿದಂತೆ 50ಕ್ಕೂ ಹೆಚ್ಚು ಪೊಲೀಸ್ ಸಿಬ್ಬಂದಿ ನಿಯೋಜನೆ ಮಾಡಲಾಗಿದೆ. ನಂದಿಬೆಟ್ಟ ಗಿರಿಧಾಮಕ್ಕೆ ರೋಪ್ ವೇ ನಿರ್ಮಿಸಲು ಸಚಿವ ಸಿ.ಪಿ.ಯೋಗೇಶ್ವರ್ ಸ್ಥಳ ಪರಿಶೀಲನೆ ನಡೆಸಿದ್ದಾರೆ. ರೋಪ್ ವೇ ನಿರ್ಮಾಣ ಸ್ಥಳ, ವಿವಿಧ ಕಾಮಗಾರಿಗಳಿಗೆ ಸ್ಥಳ ಪರಿಶೀಲಿಸಲಿದ್ದಾರೆ.
ಕೆಲವು ವರ್ಷಗಳಿಂದ ನೆನೆಗುದಿಗೆ ಬಿದ್ದಿರುವ ನಂದಿ ಬೆಟ್ಟಕ್ಕೆ (Nandi Hills) ರೋಪ್ ವೇ ಯೋಜನೆಗೆ ತ್ವರಿತವಾಗಿ ಚಾಲನೆ ನೀಡಲು ಅಧಿಕಾರಿಗಳಿಗೆ ಸೂಚನೆ ನೀಡಲಾಗಿದೆ. ನಂದಿಬೆಟ್ಟ ಗಿರಿಧಾಮಕ್ಕೆ ರೋಪ್ ವೇಯನ್ನು ಖಾಸಗಿ ಸಂಸ್ಥೆಯೊಂದು ನಿರ್ಮಿಸಲಿದ್ದು, ದೇಶ ವಿದೇಶಗಳಲ್ಲಿ ರೋಪ್ ವೇಗಳನ್ನು ನಿರ್ಮಿಸಿದ ಅನುಭವವಿದೆ.
ಇನ್ನು ನಂದಿಗಿರಿಧಾಮದಲ್ಲಿ ಸಚಿವ ಸಿ.ಪಿ.ಯೋಗೇಶ್ವರ ಮಾತನಾಡಿದ್ದು ಇಷ್ಟು ದಿನ ನಂದಿಗಿರಿಧಾಮ ವಿವಿಧ ಇಲಾಖೆಯಡಿ ಹಂಚಿ ಹೋಗಿತ್ತು. ಇದ್ರಿಂದ ನಂದಿಗಿರಿಧಾಮದ ಅಭಿವೃದ್ಧಿಗೆ ಅಡ್ಡಿಯಾಗಿತ್ತು. ನಂದಿಗಿರಿಧಾಮದಲ್ಲಿ ಜನರ ನಿಯಂತ್ರಣ ಹಾಗೂ ಅಭಿವೃದ್ಧಿ ಎರಡು ಆಗಬೇಕಿದೆ. ಪರಿಸರಕ್ಕೆ ಧಕ್ಕೆಯಾಗದಂತೆ ಅಭಿವೃದ್ಧಿ ಕೈಗೊಳ್ಳುತ್ತೇವೆ. ಇನ್ನೊಂದು ವರ್ಷದಲ್ಲಿ ನಂದಿಗಿರಿಧಾಮ ಅಭಿವೃದ್ಧಿಯಾಗುತ್ತೆ.
ನಂದಿಗಿರಿಧಾಮಕ್ಕೆ ನಿಗದಿತ ಜನರ ಪ್ರವೇಶಕ್ಕೆ ಅವಕಾಶ ನೀಡಲಾಗುತ್ತೆ. ಒಂದೆ ಸಮಯದಲ್ಲಿ ಸಾವಿರಾರು ಜನ ಪ್ರವಾಸಿಗರು ಆಗಮಿಸುತ್ತಿದ್ದಾರೆ. ಅತ್ಯಾಧುನಿಕ ತಂತ್ರಜ್ಞಾನ ಬಳಸಿಕೊಂಡು ಪ್ರವಾಸಿಗರು ಬಂದು ಹೋಗಬೇಕು ಎಂದರು.
Published On - 8:06 am, Fri, 23 July 21