Nandi Hills: ವಿಶ್ವವಿಖ್ಯಾತ ನಂದಿಬೆಟ್ಟಕ್ಕೆ ತ್ವರಿತವಾಗಿ ರೋಪ್ ವೇ ನಿರ್ಮಿಸಲು ಸೂಚಿಸಿದ ಪ್ರವಾಸೋದ್ಯಮ ಸಚಿವ ಸಿ ಪಿ ಯೋಗೇಶ್ವರ್
ನಂದಿಬೆಟ್ಟ ಗಿರಿಧಾಮಕ್ಕೆ ರೋಪ್ ವೇಯನ್ನು ಖಾಸಗಿ ಸಂಸ್ಥೆಯೊಂದು ನಿರ್ಮಿಸಲಿದ್ದು, ಈ ಸಂಸ್ಥೆಗೆ ದೇಶ ವಿದೇಶಗಳಲ್ಲಿ ರೋಪ್ ವೇಗಳನ್ನು ನಿರ್ಮಿಸಿದ ಅನುಭವಿದೆ ಎಂದು ಅವರು ಇದೇ ಸಂದರ್ಭದಲ್ಲಿ ತಿಳಿಸಿದರು.
ಬೆಂಗಳೂರು: ನಂದಿಬೆಟ್ಟ ಗಿರಿಧಾಮಕ್ಕೆ ರೋಪ್ ವೇ ನಿರ್ಮಿಸಲು ಜುಲೈ 23ಕ್ಕೆ ಪ್ರವಾಸೋದ್ಯಮ ಸಚಿವ ಸಿ.ಪಿ.ಯೋಗೇಶ್ವರ್ ಸ್ಥಳ ಪರಿಶೀಲನೆ ನಡೆಸುವುದಾಗಿ ತಿಳಿಸಿದ್ದಾರೆ. ಕೆಲವು ವರ್ಷಗಳಿಂದ ನೆನೆಗುದಿಗೆ ಬಿದ್ದಿರುವ ನಂದಿ ಬೆಟ್ಟಕ್ಕೆ (Nandi Hills) ರೋಪ್ ವೇ ಯೋಜನೆಗೆ ತ್ವರಿತವಾಗಿ ಚಾಲನೆ ನೀಡಲು ಅವರು ಇದೇ ಸಂದರ್ಭದಲ್ಲಿ ಅಧಿಕಾರಿಗಳಿಗೆ ಸೂಚನೆ ನೀಡಿದರು. ಬೆಂಗಳೂರಿನ ಕುಮಾರಕೃಪಾ ಅತಿಥಿಗೃಹದಲ್ಲಿ ಇಂದು ನಡೆದ ಸಭೆಯಲ್ಲಿ ಈ ನಿರ್ಧಾರ ಕೈಗೊಳ್ಳಲಾಗಿದೆ. ಜತೆಗೆ, ಒಡಿಶಾದ ಕೋನಾರ್ಕ್ ಸೂರ್ಯ ದೇವಾಲಯದ ಮಾದರಿಯಲ್ಲಿ ಶ್ರವಣಬೆಳಗೊಳದಲ್ಲಿ ಬಾಹುಬಲಿ ಸಾಕ್ಷ್ಯಚಿತ್ರ ಪ್ರದರ್ಶನದ ವ್ಯವಸ್ಥೆ ಮಾಡಲಾಗುವುದು ಎಂದು ಅವರು ತಿಳಿಸಿದರು.
ನಂದಿಬೆಟ್ಟ ಗಿರಿಧಾಮಕ್ಕೆ ರೋಪ್ ವೇಯನ್ನು ಖಾಸಗಿ ಸಂಸ್ಥೆಯೊಂದು ನಿರ್ಮಿಸಲಿದ್ದು, ದೇಶ ವಿದೇಶಗಳಲ್ಲಿ ರೋಪ್ ವೇಗಳನ್ನು ನಿರ್ಮಿಸಿದ ಅನುಭವಿದೆ ಎಂದು ಅವರು ಇದೇ ಸಂದರ್ಭದಲ್ಲಿ ತಿಳಿಸಿದರು.
ಜೋಗ ಜಲಪಾತದ ಅಭಿವೃದ್ಧಿ ಬಗ್ಗೆಯೂ ಒತ್ತು ನೀಡಿರುವ ಸಚಿವ ಸಿ ಪಿ ಯೋಗೇಶ್ವರ್ 185 ಕೋಟಿ ಮೊತ್ತದ ಟೆಂಡರ್ ಕರೆದು ಜೋಗ ಜಲಪಾತದ ಅಭಿವೃದ್ಧಿ ಕೆಲಸ ಮಾಡುತ್ತಿದ್ದೇವೆ. ಜೋಗದಲ್ಲಿ 200-300 ಕ್ಯೂಸೆಕ್ಸ್ ನೀರು ಹರಿಸಿ ವರ್ಷಪೂರ್ತಿ ನೀರು ಹರಿಯುವಂತೆ ಮಾಡಲಿದ್ದೇವೆ. ಹೊನ್ನಾವರದಿಂದ ಜಲಮಾರ್ಗದ ಮೂಲಕ ಗೇರುಸೊಪ್ಪೆಗೆ ತರಲು ಸ್ಪೀಡ್ ಬೋಟ್ ವ್ಯವಸ್ಥೆ ಮಾಡಲಿದ್ದೇವೆ. ಕೇವಲ ವಿದ್ಯುತ್ ಗೆ ಮಾತ್ರ ಜೋಗದ ನೀರು ಬಳಕೆಯಾಗುತ್ತಿತ್ತು. ಮುಂದಿನ ದಿನಗಳಲ್ಲಿ ಅಭಿವೃದ್ಧಿ ಕೆಲಸಗಳನ್ನು ಮಾಡುವುದರಿಂದ ಜೋಗದಲ್ಲಿ ಪ್ರವಾಸೋದ್ಯಮ ಚಟುವಟಿಕೆ ಹೆಚ್ಚಾಗಲಿದೆ. ಕೇರಳದಿಂದ ಗೋವಾ ಹೋಗುವ ಪ್ರವಾಸಿಗರನ್ನು ಸೆಳೆಯಲು ಸಹ ಕೆಲಸ ನಡೆಯುತ್ತಿದೆ ಎಂದು ಪ್ರವಾಸೋದ್ಯಮ ಸಚಿವ ಸಿ.ಪಿ. ಯೋಗೇಶ್ವರ್ ತಿಳಿಸಿದರು.
ಪ್ರವಾಸೋದ್ಯಮ ಅಂದರೆ ಎಲ್ಲರೂ ನೆಗ್ಲೆಕ್ಟ್ ಖಾತೆ ಎಂದು ಹೇಳುತ್ತಿದ್ದರು. ಆದರೆ ನಾನು ಅದನ್ನು ಪಾಸಿಟಿವ್ ಆಗಿ ತೆಗೆದುಕೊಂಡಿದ್ದೇನೆ. 50ರಿಂದ 55 ಲಕ್ಷ ಉದ್ಯೋಗ ಪ್ರವಾಸೋದ್ಯಮದಿಂದ ಸೃಷ್ಟಿಯಾಗುತ್ತಿದೆ. ಬಜೆಟ್ ನಲ್ಲಿ ನಮಗೆ ಹಣದ ಕೊರತೆ ಇತ್ತು. ಹಣಕಾಸು ಇಲಾಖೆಯೊಂದಿಗೂ ಕೂಡ ಮಾತನಾಡಿದ್ದೇವೆ. ಆದ್ಯತೆ ಮೇರೆಗೆ ಹಣಕಾಸು ಇಲಾಖೆ ಹಣ ಬಿಡುಗಡೆ ಮಾಡ್ತೇವೆ ಅಂತ ಒಪ್ಪಿಗೆ ಕೊಟ್ಟಿದೆ ಎಂದು ಅವರು ಇದೇ ವೇಳೆ ಸ್ಪಷ್ಟಪಡಿಸಿದ್ದರು.
ಇದನ್ನೂ ಓದಿ:
ಚನ್ನಪಟ್ಟಣದಿಂದಲೇ ಬಿಜೆಪಿ ಪಕ್ಷದಿಂದಲೇ ಸ್ಪರ್ಧೆ ಮಾಡುತ್ತೇನೆ: ಸಚಿವ ಸಿ ಪಿ ಯೋಗೇಶ್ವರ್ ದೃಢ ನುಡಿ
ಮುಂದಿನ ವಾರದಿಂದಲೇ ಪ್ರವಾಸಿ ಸ್ಥಳಗಳು ಓಪನ್ : ಸಚಿವ ಸಿ ಪಿ ಯೋಗೇಶ್ವರ್ ಘೋಷಣೆ
(Tourism Minister CP Yogeshwar has suggested building a ropeway to the world famous Nandi Hills)