23 ಕಂಪನಿಗಳ ಜತೆಗೆ ಒಪ್ಪಂದ; ರಾಜ್ಯದಲ್ಲಿ 28,000 ಕೋಟಿ ಬಂಡವಾಳ ಹೂಡಿಕೆ; 15,000 ಉದ್ಯೋಗ ಸೃಷ್ಟಿ: ಕರ್ನಾಟಕ ಸರ್ಕಾರದ ಭರವಸೆ

ಕೈಗಾರಿಕೆಗಳ ಸ್ಥಾಪನೆಗೆ ಎಲ್ಲ ರೀತಿಯ ಅನುಕೂಲ ಮಾಡಿಕೊಟ್ಟಿರುವ ರಾಜ್ಯದ ಬಗ್ಗೆ ಹೂಡಿಕೆದಾರರು ಅಚಲ ವಿಶ್ವಾಸ ಇರಿಸಿದ್ದಾರೆ. ಹೂಡಿಕೆದಾರರ ಹಿತದೃಷ್ಟಿಯನ್ನು ಗಮನದಲ್ಲಿಟ್ಟುಕೊಂಡು ಭೂ, ಕಾರ್ಮಿಕ ಸೇರಿದಂತೆ ಹಲವು ಸುಧಾರಣೆಗಳನ್ನು ತರಲಾಗಿದೆ ಎಂದು ಸಿಎಂ ಯಡಿಯೂರಪ್ಪ ತಿಳಿಸಿದರು.

23 ಕಂಪನಿಗಳ ಜತೆಗೆ ಒಪ್ಪಂದ; ರಾಜ್ಯದಲ್ಲಿ 28,000 ಕೋಟಿ ಬಂಡವಾಳ ಹೂಡಿಕೆ; 15,000 ಉದ್ಯೋಗ ಸೃಷ್ಟಿ: ಕರ್ನಾಟಕ ಸರ್ಕಾರದ ಭರವಸೆ
ಇನ್​ವೆಸ್ಟ್​ ಕರ್ನಾಟಕಕ್ಕೆ ಚಾಲನೆ ನೀಡಿದ ಸಿಎಂ ಯಡಿಯೂರಪ್ಪ

ಬೆಂಗಳೂರು: ಮುಂದಿನ ವರ್ಷ ಫೆಬ್ರವರಿ 9ರಿಂದ 11ರವರೆಗೆ ಬೆಂಗಳೂರಿನಲ್ಲಿ ಜಾಗತಿಕ ಹೂಡಿಕೆದಾರರ ಸಮಾವೇಶ ನಡೆಸಲು ಸಚಿವ ಸಂಪುಟ ಸಭೆಯಲ್ಲಿ ಇಂದು ನಿರ್ಧರಿಸಲಾಗಿದೆ. ಇನ್ವೆಸ್ಟ್ ಕರ್ನಾಟಕ ಒಂದು ದಿನದ ಬಂಡವಾಳ ಹೂಡಿಕೆ ಕಾನ್​ಕ್ಲೇವ್​ನಲ್ಲಿ ಇಲೆಕ್ಟ್ರಿಕ್‌ ವಾಹನ, ಡೇಟಾ ಸೇಂಟರ್‌, ಏರೋಸ್ಪೇಸ್‌ ಹಾಗೂ ರಕ್ಷಣಾ ಕಂಪನಿಗಳು ಸೇರಿದಂತೆ 23 ಕಂಪನಿಗಳಿಂದ 28,000 ಕೋಟಿ ಬಂಡವಾಳ ಹೂಡಿಕೆ ಮತ್ತು 15 ಸಾವಿರ ಉದ್ಯೋಗ ಸೃಷ್ಟಿ ಒಪ್ಪಂದಕ್ಕೆ ರಾಜ್ಯ ಸರ್ಕಾರ ಸಹಿ ಹಾಕಿದೆ ಎಂದು ಸಿಎಂ ಯಡಿಯೂರಪ್ಪ ತಿಳಿಸಿದರು.

ಒಂದು ದಿನದ ಇನ್​ವೆಸ್ಟ್ ಕರ್ನಾಟಕ ಕಾರ್ಯಕ್ರಮಕ್ಕೆ ಚಾಲನೆ ನೀಡಿದ ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ, ಕೊವಿಡ್‌ ಸಂಕಷ್ಟದ ನಡುವೆಯೂ ರಾಜ್ಯ ಹೂಡಿಕೆ ಮತ್ತು ಉದ್ಯೋಗ ಸೃಷ್ಟಿಗೆ ಒತ್ತು ನೀಡಿದೆ. ಅದರ ಫಲವಾಗಿಯೇ ವಿವಿಧ ಕಂಪನಿಗಳು ಹೂಡಿಕೆ ಮಾಡಲು ಬಂದಿವೆ. ಸರ್ಕಾರದ ಉದ್ಯಮ ಸ್ನೇಹಿ ನೀತಿಗಳಿಂದ ಇದು ಸಾಧ್ಯವಾಗಿದೆ ಎಂದರು. ಇನ್ವೆಸ್ಟ್‌ ಕರ್ನಾಟಕ ವೇದಿಕೆಯ ಸಹಯೋಗದೊಂದಿಗೆ ವಾಣಿಜ್ಯ ಮತ್ತು ಕೈಗಾರಿಕಾ ಇಲಾಖೆ ಆಯೋಜಿಸಿದ್ದ ಸಮಾರಂಭದಲ್ಲಿ ಈ ಒಪ್ಪಂದಗಳಿಗೆ ಸಹಿ ಹಾಕಲಾಗಿದ್ದು, ಕಾಲಮಿತಿಯಲ್ಲಿ ಯೋಜನೆಗಳನ್ನು ಜಾರಿಗೊಳಿಸಿ ಸ್ಥಳೀಯರಿಗೆ ಹೆಚ್ಚು ಉದ್ಯೋಗಾವಕಾಶ ಕಲ್ಪಿಸಲು ನಿರ್ಧರಿಸಲಾಗಿದೆ ಎಂದು ಅವರು ತಿಳಿಸಿದರು.

ಕೊವಿಡ್‌ ಸಂಕಷ್ಟದ ನಡುವೆಯೂ ಕಳೆದ ವರ್ಷದ ಮಾರ್ಚ್‌ನಿಂದ ಕರ್ನಾಟಕ ಸರ್ಕಾರ 77,000 ಕೋಟಿ ರೂ. ಹೂಡಿಕೆಯ 520ಕ್ಕೂ ಹೆಚ್ಚು ಯೋಜನೆಗಳಿಗೆ ಅನುಮೋದನೆ ನೀಡಿದೆ. ಇದಲ್ಲದೇ, ಹೆಚ್ಚುವರಿ ಪ್ರಸ್ತಾವನೆಗಳು ಹಾಗೂ 23,000 ಕೋಟಿ ರೂ. ಮೊತ್ತದ ಒಪ್ಪಂದವೂ ಸೇರಿ ಒಟ್ಟು 1 ಲಕ್ಷ ಕೋಟಿ ರೂ. ಹೂಡಿಕೆ ಆಗಿದೆ. ಕೈಗಾರಿಕೆಗಳ ಸ್ಥಾಪನೆಗೆ ಎಲ್ಲ ರೀತಿಯ ಅನುಕೂಲ ಮಾಡಿಕೊಟ್ಟಿರುವ ರಾಜ್ಯದ ಬಗ್ಗೆ ಹೂಡಿಕೆದಾರರು ಅಚಲ ವಿಶ್ವಾಸ ಇರಿಸಿದ್ದಾರೆ. ಹೂಡಿಕೆದಾರರ ಹಿತದೃಷ್ಟಿಯನ್ನು ಗಮನದಲ್ಲಿಟ್ಟುಕೊಂಡು ಭೂ, ಕಾರ್ಮಿಕ ಸೇರಿದಂತೆ ಹಲವು ಸುಧಾರಣೆಗಳನ್ನು ತರಲಾಗಿದೆ ಎಂದು ಸಿಎಂ ಯಡಿಯೂರಪ್ಪ ತಿಳಿಸಿದರು.

ಬೃಹತ್ ಮತ್ತು ಮಧ್ಯಮ ಕೈಗಾರಿಕಾ ಸಚಿವ ಜಗದೀಶ್ ಶೆಟ್ಟರ್‌, ಕರ್ನಾಟಕ ಹೂಡಿಕೆದಾರರ ನೆಚ್ಚಿನ ತಾಣವನ್ನಾಗಿಸುವ ನಿಟ್ಟಿನಲ್ಲಿ ವಾಣಿಜ್ಯ ಮತ್ತು ಕೈಗಾರಿಕಾ ಇಲಾಖೆ, ನಾನಾ ವಲಯಗಳಲ್ಲಿ ಬಂಡವಾಳ ಹೂಡಿಕೆ ಉತ್ತೇಜಿಸಲು ಹಲವು ಪೂರಕ ಕ್ರಮಗಳನ್ನು ಕೈಗೊಂಡಿದೆ. ಆನ್‌ಲೈನ್‌ ಮೂಲಕವೇ ಹೂಡಿಕೆ ಅನುಮೋದನೆಗಳು ಸಾಧ್ಯವಾದ್ದರಿಂದ ಕೊವಿಡ್ ಸಾಂಕ್ರಾಮಿಕದ ಮಧ್ಯೆಯೂ ಈ ಪ್ರಮಾಣದ ಹೂಡಿಕೆ ಸಾಧ್ಯವಾಗಿದೆ. ನೂತನ ಕೈಗಾರಿಕಾ ನೀತಿ 2020-2025 ಹಾಗೂ ಕೈಗಾರಿಕಾ ಸೌಲಭ್ಯ ತಿದ್ದುಪಡಿ ಅಧಿನಿಯಮದಲ್ಲಿನ ತಿದ್ದುಪಡಿಗಳಿಂದ ನಮ್ಮ ರಾಜ್ಯ ಉದ್ಯಮ ಸ್ನೇಹೀ ರಾಜ್ಯಗಳ ಪಟ್ಟಿಯಲ್ಲಿ ಅತ್ಯಂತ ಪ್ರಮುಖ ಸ್ಥಾನವನ್ನು ಪಡೆದುಕೊಂಡಿದೆ ಎಂದು ತಿಳಿಸಿದರು.

ಜಾಗತಿಕ ಹೂಡಿಕೆದಾರರ ಸಮಾವೇಶ
ಮುಂದಿನ ವರ್ಷ ಫೆಬ್ರವರಿ 9ರಿಂದ 11ರವರೆಗೆ ಬೆಂಗಳೂರಿನಲ್ಲಿ ಜಾಗತಿಕ ಹೂಡಿಕೆದಾರರ ಸಮಾವೇಶ ನಡೆಸಲು ಸಚಿವ ಸಂಪುಟ ಸಭೆಯಲ್ಲಿ ಇಂದು ನಿರ್ಧರಿಸಲಾಗಿದೆ. ಬಂಡವಾಳ ಆಕರ್ಷಿಸಲು ವಲಯ ನಿರ್ದಿಷ್ಟ ಕ್ಲಸ್ಟರ್‌ಗಳನ್ನು ರೂಪಿಸಿದ ಮೊದಲ ರಾಜ್ಯ ಕರ್ನಾಟಕವಾಗಿದ್ದು, ಆಟಿಕೆ, ಜವಳಿ ಮತ್ತು ಇಎಸ್‌ಡಿಎಂ ಕ್ಲಸ್ಟರ್‌ಗಳಿಗೆ ಈಗಾಗಲೇ ಪ್ರತ್ಯೇಕ ನೀತಿ ರೂಪಿಸಲಾಗಿದೆ. ಕರ್ನಾಟಕವನ್ನು ಜಾಗತಿಕ ಉತ್ಪಾದನಾ ಹಬ್‌ ಆಗಿ ರೂಪಿಸುವ ಗುರಿಯೊಂದಿಗೆ 2 ಮತ್ತು 3ನೇ ಹಂತದ ನಗರಗಳಲ್ಲಿ ನಿರ್ದಿಷ್ಟ ಕ್ಲಸ್ಟರ್‌ ಅಭಿವೃದ್ಧಿಗೆ ಹೆಚ್ಚು ಒತ್ತು ನೀಡಲಾಗುತ್ತಿದೆ. ಕೊಪ್ಪಳದಲ್ಲಿ ಆಟಿಕೆ ಕ್ಲಸ್ಟರ್‌, ಧಾರವಾಡದಲ್ಲಿ ಎಲೆಕ್ಟ್ರಾನಿಕ್‌ ಕ್ಲಸ್ಟರ್‌, ಯಾದಗಿರಿಯಲ್ಲಿ ಫಾರ್ಮಾ ಕ್ಲಸ್ಟರ್‌ ಇದೆ. ಇಂಥ ಹಲವು ಕ್ಲಸ್ಟರ್‌ಗಳ ನಿರ್ಮಾಣಕ್ಕೆ ನಮ್ಮ ಸರ್ಕಾರ ಆದ್ಯತೆ ನೀಡುವುದು ಎಂದು ಅವರು ತಿಳಿಸಿದರು.

ಲಿಥಿಯನ್‌ -ಅಯಾನ್‌ ಸೆಲ್‌ ಉತ್ಪಾದನಾ ಕ್ಷೇತ್ರದ ಪ್ರಮುಖ ಕಂಪನಿಯಾಗಿರುವ ಅಮೆರಿಕದ ಸಿ4ವಿ ಇಂದು ರಾಜ್ಯದಲ್ಲಿ 4015 ಕೋಟಿ ರೂಪಾಯಿಗಳ ಹೂಡಿಕೆ ಮಾಡಲು ಮುಂದಾಗಿದೆ. ಸಿಂಗಾಪುರ ಮೂಲದ ಎಲ್‌ಎನ್‌ಜಿ ಟರ್ಮಿನಲ್ ಆಪರೇಟರ್ ಎಲ್‌ಎನ್‌ಜಿ ಅಲೈಯನ್ಸ್‌ನೊಂದಿಗೆ 2250 ಕೋಟಿ ರೂ. ಒಪ್ಪಂದ, ಅದಾನಿ ಡೇಟಾ ಸೆಂಟರ್‌ ಸ್ಥಾಪನೆಗೆ 5000 ಕೋಟಿ ರೂ. ಒಪ್ಪಂದ ಸೇರಿದಂತೆ ಕೊವಿಡ್‌ ಸಂಕಷ್ಟದ ನಡುವೆಯೂ ಹೂಡಿಕೆ ಪ್ರಸ್ತಾವನೆಗಳು ಹಾಗೂ ಒಪ್ಪಂದಗಳ ಮೂಲಕ ಕರ್ನಾಟಕಕ್ಕೆ 28,000 ಕೋಟಿ ರೂ ಹೂಡಿಕೆ ಹರಿದು ಬರಲಿದೆ ಎಂದು ಅವರು ವಿವರಿಸಿದರು.

ಬೆಂಗಳೂರಿನ ಆಚೆಗೂ ಉದ್ಯಮಗಳನ್ನು ಸ್ಥಾಪಿಸಿ, ಸ್ಥಳೀಯರಿಗೆ ಉದ್ಯೋಗ ಕಲ್ಪಿಸುವುದು ನಮ್ಮ ಸರ್ಕಾರದ ಉದ್ದೇಶ. ಬಂಡವಾಳ ಆಕರ್ಷಣೆಯಲ್ಲಿ ಕರ್ನಾಟಕ ಮುಂಚೂಣಿಯಲ್ಲಿದೆ ಎಂಬುದು ನಮ್ಮೆಲ್ಲರಿಗೂ ಹೆಮ್ಮೆಯ ವಿಷಯ. ಉದ್ಯಮಗಳಿಗೆ ನುರಿತ ಕೆಲಸಗಾರರನ್ನು ಒದಗಿಸುವ ನಿಟ್ಟಿನಲ್ಲಿ ಕೌಶಲ ಅಭಿವೃದ್ಧಿಗೆ ಒತ್ತು ನೀಡಲಾಗುವುದು. ರಾಷ್ಟ್ರೀಯ ಶಿಕ್ಷಣ ನೀತಿ ಇದಕ್ಕೆ ಪೂರಕವಾಗಿರಲಿದೆ ಎಂದು ಕಾರ್ಯಕ್ರಮದಲ್ಲಿ ಭಾಗವಹಿಸಿದ್ದ ಉಪಮುಖ್ಯಮಂತ್ರಿ ಡಾ. ಸಿ.ಎನ್‌. ಅಶ್ವತ್ಥನಾರಾಯಣ ತಿಳಿಸಿದರು.

ಕಾರ್ಯಕ್ರಮದಲ್ಲಿ ವಾಣಿಜ್ಯ ಮತ್ತು ಕೈಗಾರಿಕಾ ಇಲಾಖೆಯ ಸರಕಾರದ ಅಪರ ಮುಖ್ಯ ಕಾರ್ಯದರ್ಶಿ ಡಾ. ರಾಜ್‌ ಕುಮಾರ್‌ ಖತ್ರಿ, ವಾಣಿಜ್ಯ ಮತ್ತು ಕೈಗಾರಿಕಾ ಇಲಾಖೆ ಆಯುಕ್ತೆ ಗುಂಜನ್ ಕೃಷ್ಣಾ, ವಾಣಿಜ್ಯ ಇಲಾಖೆಯ ಜಂಟಿ ನಿರ್ದೇಶಕ ಬಿ.ಕೆ.ಶಿವಕುಮಾರ್, ಕರ್ನಾಟಕ ಉದ್ಯೋಗ ಮಿತ್ರದ ವ್ಯವಸ್ಥಾಪಕ ನಿರ್ದೇಶಕ ಹೆಚ್‌. ಎಂ. ರೇವಣ್ಣಗೌಡ, ಹೂಡಿಕೆ ಒಪ್ಪಂದಕ್ಕೆ ಸಹಿ ಹಾಕಿದ ಸಂಸ್ಥೆಗಳ ಮುಖ್ಯಸ್ಥರು ಉಪಸ್ಥಿತರಿದ್ದರು.

ಇದನ್ನೂ ಓದಿ: 

Sedition Law: ಬ್ರಿಟಿಷರ ಕಾಲದ ದೇಶದ್ರೋಹ ಕಾಯ್ದೆ ಇನ್ನೂ ಅಗತ್ಯವಿದೆಯೇ?; ಕೇಂದ್ರ ಸರ್ಕಾರಕ್ಕೆ ಸುಪ್ರೀಂಕೋರ್ಟ್​ ಪ್ರಶ್ನೆ

ಕೊವಿಡ್ 3ನೇ ಅಲೆ ಆತಂಕ: ಕೊರೊನಾ ಮಾರ್ಗಸೂಚಿ ಪಾಲಿಸುವಂತೆ ರಾಜ್ಯ ಸರ್ಕಾರಗಳಿಗೆ ಕೇಂದ್ರದಿಂದ ಸಲಹೆ

(Karnataka state govt Agreement with 23 companies 28 thousand crore capital investment in the state 15 thousand job creation)

Click on your DTH Provider to Add TV9 Kannada