ಚಿಕ್ಕಬಳ್ಳಾಪುರ: ಸೂಸೆಪಾಳ್ಯ ಗ್ರಾಮದಲ್ಲಿ ಕಿಡಿಗೇಡಿಗಳಿಂದ ಯೇಸು ಪ್ರತಿಮೆ ಭಗ್ನ, ದೂರು
ವಿಷಯ ತಿಳಿಯುತ್ತಿದ್ದಂತೆ ಕ್ರೈಸ್ತ ಮುಖಂಡರು ಸ್ಥಳಕ್ಕೆ ಭೇಟಿ ನೀಡಿದ್ದಾರೆ. ಬಳಿಕ ಚಿಕ್ಕಬಳ್ಳಾಪುರ ಗ್ರಾಮಾಂತರ ಠಾಣೆ ಪೊಲೀಸರಿಗೆ ದೂರು ನೀಡಿದ್ದಾರೆ. ಕಿಡಿಗೇಡಿಗಳ ವಿರುದ್ದ ಕ್ರಮಕ್ಕೆ ಆಗ್ರಹಿಸಿ, ಅಥೋನಿ ಡ್ಯಾನಿಯಲ್ ಎಂಬುವವರು ದೂರು ನೀಡಿದ್ದಾರೆ.
ಚಿಕ್ಕಬಳ್ಳಾಪುರ: ಚಿಕ್ಕಬಳ್ಳಾಪುರ ತಾಲೂಕಿನ ಸೂಸೆಪಾಳ್ಯ ಗ್ರಾಮದ ಬಳಿ ಕಿಡಿಗೇಡಿಗಳು ಯೇಸು ಪ್ರತಿಮೆಯನ್ನು ಭಗ್ನಗೊಳಿಸಿದ್ದಾರೆ. ಕಿಡಿಗೇಡಿಗಳ ವಿರುದ್ಧ ಕ್ರಮಕ್ಕೆ ಆಗ್ರಹಿಸಿ ಕ್ರೈಸ್ತ ಮುಖಂಡರು ಚಿಕ್ಕಬಳ್ಳಾಪುರ ಗ್ರಾಮಾಂತರ ಠಾಣೆಗೆ ದೂರು ನೀಡಿದ್ದಾರೆ. ತಾಲೂಕಿನ ಸೂಸೆಪಾಳ್ಯ ಸಮೀಪ ರಂಗಧಾಮ ಕೆರೆ ಕಟ್ಟೆಯ ಬಳಿ ಯೇಸು ಮೂರ್ತಿ ನಿರ್ಮಿಸಲಾಗಿತ್ತು. ಸ್ಥಳೀಯರು ಅಕ್ರಮವಾಗಿ ಯೇಸು ಮೂರ್ತಿ ನಿರ್ಮಾಣ ಮಾಡಿದ್ದರು. ಇದೀಗ ದುಷ್ಕರ್ಮಿಗಳು ಮೂರ್ತಿಯನ್ನು ಒಡೆದು ವಿರೂಪಗೊಳಿಸಿದ್ದಾರೆ.
ವಿಷಯ ತಿಳಿಯುತ್ತಿದ್ದಂತೆ ಕ್ರೈಸ್ತ ಮುಖಂಡರು ಸ್ಥಳಕ್ಕೆ ಭೇಟಿ ನೀಡಿದ್ದಾರೆ. ಬಳಿಕ ಚಿಕ್ಕಬಳ್ಳಾಪುರ ಗ್ರಾಮಾಂತರ ಠಾಣೆ ಪೊಲೀಸರಿಗೆ ದೂರು ನೀಡಿದ್ದಾರೆ. ಕಿಡಿಗೇಡಿಗಳ ವಿರುದ್ದ ಕ್ರಮಕ್ಕೆ ಆಗ್ರಹಿಸಿ, ಅಥೋನಿ ಡ್ಯಾನಿಯಲ್ ಎಂಬುವವರು ದೂರು ನೀಡಿದ್ದಾರೆ. ಚಿಕ್ಕಬಳ್ಳಾಪುರ ಗ್ರಾಮಾಂತರ ಠಾಣೆಯಲ್ಲಿ IPC section 427 ಅಡಿ ದೂರು ದಾಖಲಾಗಿದೆ.
ರಾಜ್ಯದ್ಯಾಂತ ಕ್ರೈಸ್ತ ಸಮುದಾಯದವರು ಬೀದಿಗಿಳಿದು ಧರಣಿ ನಡೆಸುತ್ತಿರುವಾಗಲೇ… ಮತಾಂತರ ಕಾಯ್ದೆ ಜಾರಿ ವಿರೋಧಿಸಿ ರಾಜ್ಯದ್ಯಾಂತ ಕ್ರೈಸ್ತ ಸಮುದಾಯದವರು ಬೀದಿಗಿಳಿದು ಹೋರಾಟ ಪ್ರತಿಭಟನೆ ಧರಣಿ ನಡೆಸುತ್ತಿರುವಾಗಲೇ… ಕ್ರೈಸ್ತ ಸಮುದಾಯದವರನ್ನು ಕೆರಳಿಸಲು ಮುಂದಾಗಿರುವ ದುಷ್ಕರ್ಮಿಗಳು ಚಿಕ್ಕಬಳ್ಳಾಫುರ ತಾಲೂಕಿನ ಸೂಸೆಪಾಳ್ಯಾ ಗ್ರಾಮದ ಬಳಿ ರಂಗಧಾಮ ಕೆರೆ ಕಟ್ಟೆಯ ಬಳಿ ಪ್ರತಿಷ್ಠಾಪಿಸಿದ್ದ ಯೇಸು ವಿಗ್ರಹವನ್ನು ಧ್ವಂಸಗೊಳಿಸಿದ್ದಾರೆ. ನಿನ್ನೆ ತಡರಾತ್ರಿ ಈ ಕೃತ್ಯ ಮಾಡಿರುವ ಶಂಕೆ ವ್ಯಕ್ತವಾಗಿದೆ. ಸೆಪಾಳ್ಯಾ ಗ್ರಾಮಸ್ಥರು ಇಂದು ಬೆಳಗಿನ ಜಾವ ಕೆರೆ ಕಟ್ಟೆ ಬಳಿ ವಾಕಿಂಗ್ ಹೋದಾಗ ಪ್ರಕರಣ ಬೆಳೆಕಿಗೆ ಬಂದಿದೆ. ಸೂಸೆಪಾಳ್ಯಾ ಗ್ರಾಮದಲ್ಲಿರುವ ಸೇಂಟ್ ಜೋಸೆಫ್ ಚರ್ಚ್ನ ಫಾದರ್ ಅಂಥೋನಿ ಡೇನಿಯಲ್ ಗೆ ವಿಷಯ ತಿಳಿದು, ಸ್ಥಳಕ್ಕೆ ಭೇಟಿ ನೀಡಿದರು.
ಚರ್ಚ್ ಫಾದರ್ ಚಿಕ್ಕಬಳ್ಳಾಪುರ ಗ್ರಾಮಾಂತರ ಪೊಲೀಸರಿಗೆ ದೂರು ನೀಡಿದ್ದಾರೆ. ತಕ್ಷಣ ಎಚ್ಚೆತ್ತ ಪೊಲೀಸರು ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ. ಚರ್ಚ್ ಫಾದರ್ ಅಂಥೋನಿ ಡೇನಿಯಲ್ ನೀಡಿದ ದೂರಿನ ಮೇರೆಗೆ ಚಿಕ್ಕಬಳ್ಳಾಫುರ ಗ್ರಾಮಾಂತರ ಠಾಣೆ ಪೊಲೀಸರು 427, 295, 153ಎ ಹಾಗೂ 120 ಐ.ಪಿ.ಸಿ ಸೇಕ್ಷನ್ ಗಳಡಿ ಪ್ರಕರಣ ದಾಖಲಿಸಿಕೊಂಡು ತನಿಖೆ ಕೈಗೊಂಡಿದ್ದಾರೆ.
ಮತ್ತೊಂದೆಡೆ ಘಟನಾ ಸ್ಥಳದಲ್ಲಿ ಸೇರಿದ ಸೂಸೆಪಾಳ್ಯ ಗ್ರಾಮದ ಕ್ರೈಸ್ತ ಸಮುದಾಯದವರು ಮತ್ತೊಂದು ಯೇಸು ವಿಗ್ರಹವನ್ನು ತಂದು ಪ್ರತಿಷ್ಠಾಪನೆ ಮಾಡಿದರು. ಕಿಡಿಗೇಡಿಗಳ ವಿರುದ್ದ ಸೂಕ್ತ ಕ್ರಮ ಕೈಗೊಳ್ಳುವಂತೆ ಆಗ್ರಹಿಸಿ ಕ್ರೈಸ್ತರು ಸ್ಥಳದಲ್ಲಿ ಮೌನ ಪ್ರತಿಭಟನೆ ನಡೆಸಿ ಪ್ರಾರ್ಥನೆ ಮಾಡಿದರು.
ವಿಧಾನಸಭೆಯಲ್ಲಿ ಮತಾಂತರ ನಿಷೇಧ ವಿಧೇಯಕ ಚರ್ಚೆ:
ವಿಧಾನಸಭೆಯಲ್ಲಿ ಮತಾಂತರ ನಿಷೇಧ ವಿಧೇಯಕದ ಬಗ್ಗೆ ನಡೆಯುತ್ತಿರುವ ಚರ್ಚೆಯಲ್ಲಿ ಮಾತನಾಡಿದ ರಾಜ್ಯದ ಗೃಹ ಸಚಿವ ಆರಗ ಜ್ಞಾನೇಂದ್ರ ಮಾಹಿತಿ ಅವರು ಈ ವಿಧೇಯಕವನ್ನು ಯಾವ ಧರ್ಮದ ವಿರುದ್ಧ ತಂದಿಲ್ಲ. ಯಾವ ಧರ್ಮಕ್ಕೂ ತೊಂದರೆ ಕೊಡುವ ಉದ್ದೇಶವಿಲ್ಲ. ಮತಾಂತರ ಹಿನ್ನೆಲೆಯಲ್ಲಿ ಉಡುಪಿಯಲ್ಲಿ ಒಬ್ಬರ ಆತ್ಮಹತ್ಯೆ, ಮಂಗಳೂರಿನಲ್ಲಿ ಒಂದೇ ಕುಟುಂಬದ ನಾಲ್ವರ ಆತ್ಮಹತ್ಯೆಯಂತಹ ಪ್ರಕರಣಗಳು ನಡೆದಿವೆ. ಹೀಗಾಗಿ ಮತಾಂತರ ನಿಷೇಧ ಕಾಯ್ದೆ ಜಾರಿ ಮಾಡುತ್ತಿದ್ದೇವೆ ಎಂದು ಗುರುವಾರ ಸದನದಲ್ಲಿ ಹೇಳಿದರು.
ಮತ ಪ್ರಚಾರಕ್ಕೆ ಸಂವಿಧಾನದಲ್ಲಿ ಎಲ್ಲರಿಗೂ ಅವಕಾಶವಿದೆ. ಮತ ಪ್ರಚಾರಕ್ಕೆ ನಮ್ಮ ದೇಶದಲ್ಲಿ ಯಾವುದೇ ವಿರೋಧವಿಲ್ಲ. ಮತಾಂತರದಿಂದ ಹಲವರ ಶಾಂತಿ, ನೆಮ್ಮದಿ ಹಾಳಾಗುತ್ತಿದೆ. ಹೀಗಾಗಿ ಮತಾಂತರ ನಿಷೇಧ ಕಾಯ್ದೆ ಜಾರಿ ಮಾಡುತ್ತಿದ್ದೇವೆ ಎಂದರು.
ಸ್ವಇಚ್ಛೆಯಿಂದ ಮತಾಂತರವಾಗುವುದುಕ್ಕೆ ಅವಕಾಶವಿದೆ. ಆದರೆ 3 ತಿಂಗಳ ಮುಂಚಿತವಾಗಿ ಜಿಲ್ಲಾಧಿಕಾರಿಗೆ ತಿಳಿಸಬೇಕು. ಮತಾಂತರ ಮಾಡುವವರು 30 ದಿನ ಮುಂಚಿತವಾಗಿ ತಿಳಿಸಬೇಕು. ಜಿಲ್ಲಾಧಿಕಾರಿಗೆ ಇಬ್ಬರೂ ಅರ್ಜಿಯನ್ನು ಸಲ್ಲಿಸಬೇಕು. ಅರ್ಜಿ ಸಲ್ಲಿಕೆ ಬಳಿಕ ಈ ಬಗ್ಗೆ ಆಕ್ಷೇಪಣೆ ಇದ್ದರೆ ಸಲ್ಲಿಸಬಹುದು. ಆಕ್ಷೇಪಣೆಗಳು ಇದ್ದರೆ ಆ ಬಗ್ಗೆ ವಿಚಾರಣೆ ನಡೆಸಬಹುದಾಗಿದೆ. ವಿಚಾರಣೆಯಲ್ಲಿ ಬಲವಂತ, ಆಮಿಷ ಒಡ್ಡಿರುವುದು ಬಯಲಾದರೆ 3 ರಿಂದ 5 ವರ್ಷ ಜೈಲು ಶಿಕ್ಷೆ, 25 ಸಾವಿರ ರೂಪಾಯಿ ದಂಡ ವಿಧಿಸುವುದಕ್ಕೆ ಅವಕಾಶವಿದೆ ಎಂದರು.
ಅಪ್ರಾಪ್ತರು, ಎಸ್‌ಸಿ, ಎಸ್‌ಟಿ ಸಮುದಾಯವರ ಮತಾಂತರಕ್ಕೆ ಶಿಕ್ಷೆಯಾಗಲಿದೆ. ಬಲವಂತವಾಗಿ ಮತಾಂತರ ಮಾಡಿದರೆ ಶಿಕ್ಷೆ ಜೊತೆಗೆ ದಂಡವಿದೆ. 3 ರಿಂದ 10 ವರ್ಷ ಜೈಲುಶಿಕ್ಷೆ, 50 ಸಾವಿರ ರೂಪಾಯಿ ದಂಡ ಹಾಕಲಾಗುವುದು. ಸಾಮೂಹಿಕವಾಗಿ ಮತಾಂತರ ಮಾಡಿದರೂ ಶಿಕ್ಷೆಯಾಗಲಿದೆ. ಇದಕ್ಕೆ 3 ರಿಂದ 10 ವರ್ಷ ಜೈಲು ಶಿಕ್ಷೆ, 1 ಲಕ್ಷ ರೂಪಾಯಿ ದಂಡ ವಿಧಿಸಲಾಗುವುದು ಎಂದು ಗೃಹ ಸಚಿವ ಆರಗ ಜ್ಞಾನೇಂದ್ರ ಹೇಳಿದರು.
ಇದನ್ನು ಓದಿ: ಪಿಎಸಿಎಲ್ 49,100 ಕೋಟಿ ರೂಪಾಯಿ ಚಿಟ್ ಫಂಡ್ ಹಗರಣ; 11 ಜನರನ್ನು ಬಂಧಿಸಿದ ಸಿಬಿಐ
Published On - 10:39 am, Thu, 23 December 21