ಪಿಎಸಿಎಲ್ 49,100 ಕೋಟಿ ರೂಪಾಯಿ ಚಿಟ್ ಫಂಡ್ ಹಗರಣ; 11 ಜನರನ್ನು ಬಂಧಿಸಿದ ಸಿಬಿಐ
ಮಾರುಕಟ್ಟೆ ನಿಯಂತ್ರಕರ ಅನುಮತಿ ಇಲ್ಲದೆ ಈ ಪಿಎಸಿಎಲ್ ಸಾಮೂಹಿಕ ಹೂಡಿಕೆ ಸ್ಕೀಮ್ನ್ನು ಜನರಿಗೆ ನೀಡುತ್ತಿದ್ದ ಹಿನ್ನೆಲೆಯಲ್ಲಿ ಈ ಕಂಪನಿ 1997ರಲ್ಲಿ ಭಾರತೀಯ ಭದ್ರತೆ ಮತ್ತು ವಿನಿಮಯ ಮಂಡಳಿ (Securities and Exchange Board of India-SEBI) ಕಣ್ಗಾವಲಿನಡಿ ಬಂತು.
ಪರ್ಲ್ ಅಗ್ರೋಟೆಕ್ ಕಾರ್ಪೋರೇಶನ್ ಲಿಮಿಟೆಡ್ (ಪಿಎಸಿಎಲ್) ಚಿಟ್ಫಂಡ್ ಹಗರಣಕ್ಕೆ ಸಂಬಂಧಪಟ್ಟಂತೆ ಇಂದು ಸಿಬಿಐ 11 ಜನರನ್ನು ಬಂಧಿಸಿದೆ. ಈ ಪಿಎಸಿಎಲ್ ಲಿಮಿಟೆಡ್ನ ಚಿಟ್ ಫಂಡ್ ಪ್ರಕರಣ ಬಯಲಾಗಿದ್ದು 2014ರಲ್ಲಿ. ಇದು ದೇಶಕಂಡ ಅತ್ಯಂತ ದೊಡ್ಡ ಚಿಟ್ಫಂಡ್ ಪ್ರಕರಣಗಳಲ್ಲಿ ಒಂದಾಗಿದ್ದು, 2015ರಲ್ಲಿ ಈ ಕಂಪನಿಯನ್ನು ಮಾರುಕಟ್ಟೆ ನಿಯಂತ್ರಕರು ಬ್ಯಾನ್ ಮಾಡಿದ್ದಾರೆ. ಈ ಕಂಪನಿ 18 ವರ್ಷಗಳಲ್ಲಿ 58 ಮಿಲಿಯನ್ ಹೂಡಿಕೆದಾರರಿಂದ ಕನಿಷ್ಠ 49, 100 ಕೋಟಿ ರೂಪಾಯಿ ಸಂಗ್ರಹಿಸಿ, ವಂಚನೆ ಮಾಡಿತ್ತು.
Central Bureau of Investigation (CBI) arrested 11 people in connection with the PACL chit fund scam.
PACL was banned in 2015 by the Securities and Exchange Board of India (SEBI) for illegally collecting at least Rs 49,100 crores from 58 million investors over 18 years.
— ANI (@ANI) December 23, 2021
ಈ ಪಿಎಸಿಎಲ್ ಮತ್ತು ಪಿಜಿಎಫ್ (ಪರ್ಲ್ ಗೋಲ್ಡನ್ ಫಾರೆಸ್ಟ್ ಲಿಮಿಟೆಡ್) ಎಂಬ ಸಂಸ್ಥೆಗಳು 1982ರಲ್ಲಿ ಸ್ಥಾಪಿತಗೊಂಡಿದ್ದವು. ಆದರೆ ಅವರು ಮಾಡಿದ್ದು ದೊಡ್ಡ ಹಗರಣ. ಕೃಷಿ ಭೂಮಿ ಮಾರಾಟ ಮತ್ತು ಅಭಿವೃದ್ಧಿ ನೆಪದಲ್ಲಿ ಬಡಜನರಿಂದ ಹಣ ಸಂಗ್ರಹಿಸಿವೆ. 18 ವರ್ಷವಗಳಲ್ಲಿ ಕೋಟ್ಯಂತರ ಜನರಿಗೆ ವಂಚನೆ ಮಾಡಿದ್ದವು. ಹೂಡಿಕೆದಾರರು ಕಂಪನಿಯನ್ನು ನಂಬಿ ಹಣ ಕೊಟ್ಟಿದ್ದೇ ಬಂತು. ಆದರೆ ಅವರಿಗೆ ಪ್ರತಿಯಾಗಿ ಈ ಕಂಪನಿ ನೀಡಿದ್ದು ನಕಲಿ ಭೂ ಹಂಚಿಕೆ ಪತ್ರಗಳನ್ನು. ಇದು 2014ರಲ್ಲಿ ಬೆಳಕಿಗೆ ಬಂದ ಪ್ರಕರಣ.
ಮಾರುಕಟ್ಟೆ ನಿಯಂತ್ರಕರ ಅನುಮತಿ ಇಲ್ಲದೆ ಈ ಪಿಎಸಿಎಲ್ ಸಾಮೂಹಿಕ ಹೂಡಿಕೆ ಸ್ಕೀಮ್ನ್ನು ಜನರಿಗೆ ನೀಡುತ್ತಿದ್ದ ಹಿನ್ನೆಲೆಯಲ್ಲಿ ಈ ಕಂಪನಿ 1997ರಲ್ಲಿ ಭಾರತೀಯ ಭದ್ರತೆ ಮತ್ತು ವಿನಿಮಯ ಮಂಡಳಿ (Securities and Exchange Board of India-SEBI) ಕಣ್ಗಾವಲಿನಡಿ ಬಂತು. ಅದಾದ ಮೇಲೆ 2013ರಲ್ಲಿ ಸುಪ್ರೀಂಕೋರ್ಟ್ ಕೂಡ ಇದರಲ್ಲಿ ಹಸ್ತಕ್ಷೇಪ ಮಾಡಿತು. ಪಿಎಸಿಎಲ್ ವಿರುದ್ಧ ತನಿಖೆ ನಡೆಸುವಂತೆ SEBI ಗೆ ಸೂಚಿಸಿತು. ಅದರ ಅನ್ವಯ ತನಿಖೆ ನಡೆಸಿದ SEBI, ಈ ಪಿಎಸಿಎಲ್ ಕಂಪನಿಯ ವಂಚನೆಯನ್ನು ಕಂಡುಹಿಡಿಯಿತು. ಹಾಗೇ, 3 ತಿಂಗಳಲ್ಲಿ ಹೂಡಿಕೆದಾರರಿಗೆ ಹಣ ಹಿಂದಿರುಗಿಸಲು ಕಂಪನಿಗೆ ಸೂಚಿಸಿತು. ಆದರೆ ಪಿಎಸಿಎಲ್ ವಿಫಲವಾದ ಬೆನ್ನಲ್ಲೇ ಅದಕ್ಕೆ ನಿಷೇಧ ಹೇರಲಾಯಿತು. ತನಿಖೆಯನ್ನು ಸಿಬಿಐಗೆ ವಹಿಸಲಾಯಿತು.
ಹಾಗೇ, ಪಿಎಸಿಎಲ್ ಹೂಡಿಕೆದಾರರಿಗೆ ಹಣ ಹಿಂದಿರುಗಿಸುವ ಪ್ರಕ್ರಿಯೆ ನಡೆಸುವುದಕ್ಕೋಸ್ಕರ 2015ರಲ್ಲಿ ಸುಪ್ರೀಂಕೋರ್ಟ್ ನಿವೃತ್ತ ನ್ಯಾಯಮೂರ್ತಿ ಆರ್.ಎಂ.ಲೋಧಾ ನೇತೃತ್ವದಲ್ಲಿ ಸಮಿತಿಯನ್ನು ರಚಿಸಲಾಗಿದೆ. ಅದಾದ ಬಳಿಕ ಕಂಪನಿಯ ಆಸ್ತಿಯನ್ನು ಸಂಪೂರ್ಣವಾಗಿ ಮುಟ್ಟುಗೋಲು ಹಾಕಲಾಗಿದೆ. ಈ ಮಧ್ಯೆ 2021ರ ಮಾರ್ಚ್ ಹೊತ್ತಿಗೆ, ಪಿಎಸಿಎಲ್ನಲ್ಲಿ 10 ಸಾವಿರ ರೂಪಾಯಿವರೆಗೆ ಹೂಡಿಕೆ ಮಾಡಿದ್ದ 1, 270, 849 ಹೂಡಿಕೆದಾರರಿಗೆ ಹಣ (ಒಟ್ಟಾರೆ 438 ಕೋಟಿ ರೂ.) ಹಿಂದಿರುಗಿಸಲಾಗಿದೆ ಎಂದು SEBI ತಿಳಿಸಿದೆ. ಹಾಗೇ, ಮೋಸ ಹೋದ ಹೂಡಿಕೆದಾರರು ಮರುಪಾವತಿಗೆ ಆನ್ಲೈನ್ ಮೂಲಕ, ಅಗತ್ಯ ದಾಖಲೆಗಳೊಂದಿಗೆ ಅರ್ಜಿ ಸಲ್ಲಿಸಿ ಎಂದು ನಿವೃತ್ತ ನ್ಯಾಯಮೂರ್ತಿ ನೇತೃತ್ವದ ಸಮಿತಿ 2019ರಲ್ಲಿಯೇ ತಿಳಿಸಿದೆ. ಅಂದಹಾಗೆ ಈ ಕಂಪನಿ ದೆಹಲಿ ಮೂಲದ್ದಾಗಿದ್ದು, ಅದರಲ್ಲಿ ಹೂಡಿಕೆ ಮಾಡಿ ಮೋಸ ಹೋದವರಲ್ಲಿ ಕರ್ನಾಟಕದವರೂ ಇದ್ದಾರೆ ಎಂಬ ಮಾಹಿತಿಯೂ ಇದೆ.
ಇದನ್ನೂ ಓದಿ: ‘ಹೀಗೆ ಬಂದ್ ಮಾಡಿದ್ರೆ ನಾವು ಆತ್ಮಹತ್ಯೆ ಮಾಡ್ಕೋಬೇಕು ಅಷ್ಟೇ’: ಗುರು ದೇಶಪಾಂಡೆ ನೋವಿನ ಮಾತು
Published On - 9:51 am, Thu, 23 December 21