ಟ್ರಂಪ್ ಭಾರತದ ಚುನಾವಣೆಗೆ 21 ಮಿಲಿಯನ್ ಡಾಲರ್ ಹಣ ನೀಡಿಲ್ಲ ಎಂದ ಅಮೆರಿಕ ರಾಯಭಾರ ಕಚೇರಿ!
ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಭಾರತದ ಚುನಾವಣೆಗೆ 21 ಮಿಲಿಯನ್ ಅಮೆರಿಕನ್ ಡಾಲರ್ ನಿಧಿ ನೀಡಿದ್ದಾರೆ ಎಂಬ ಹೇಳಿಕೆಯನ್ನು ಅಮೆರಿಕ ರಾಯಭಾರ ಕಚೇರಿ ನಿರಾಕರಿಸಿದೆ ಎಂದು ಭಾರತೀಯ ವಿದೇಶಾಂಗ ಸಚಿವಾಲಯ ಹೇಳಿದೆ. ಭಾರತದೊಂದಿಗಿನ ಎಲ್ಲಾ ಯುಎಸ್‌ಎಐಡಿ ಒಪ್ಪಂದಗಳು ಆಗಸ್ಟ್ 15ರಂದು ಕೊನೆಗೊಂಡಿವೆ ಎಂದು ಅದು ಹೇಳಿದೆ.

ನವದೆಹಲಿ, ಆಗಸ್ಟ್ 21: 2014–2024ರ ಅವಧಿಯಲ್ಲಿ ಭಾರತದಲ್ಲಿ ಮತದಾನ ಯೋಜನೆಗಳಿಗೆ USAID ಎಂದಿಗೂ ಹಣಕಾಸು ಒದಗಿಸಿಲ್ಲ ಎಂದು ದೆಹಲಿಯಲ್ಲಿರುವ ಅಮೆರಿಕದ ರಾಯಭಾರ ಕಚೇರಿ ಸ್ಪಷ್ಟಪಡಿಸಿದೆ. DOGE ಘೋಷಣೆ ಮತ್ತು ಈ ಕುರಿತಾದ ಟ್ರಂಪ್ (trump) ಅವರ ಪುನರಾವರ್ತಿತ ಆರೋಪಗಳಿಂದ ವಿವಾದ ಉಂಟಾಗಿತ್ತು. ಆ ವಿವಾದಕ್ಕೆ ಅಮೆರಿಕದ ರಾಯಭಾರ ಕಚೇರಿಯೇ ಅಂತ್ಯ ಹಾಡಿದೆ. ಭಾರತದಲ್ಲಿ ಮತದಾನದ ಪ್ರಮಾಣವನ್ನು ಹೆಚ್ಚಿಸಲು USAID 21 ಮಿಲಿಯನ್ ಡಾಲರ್ ಮೀಸಲಿಟ್ಟಿದೆ ಎಂಬ ಹೇಳಿಕೆಗಳನ್ನು ನವದೆಹಲಿಯಲ್ಲಿರುವ ಅಮೆರಿಕ ರಾಯಭಾರ ಕಚೇರಿ ಸ್ಪಷ್ಟವಾಗಿ ನಿರಾಕರಿಸಿದೆ.
ಯುಎಸ್‌ಎಐಡಿ ಭಾರತದ ಪ್ರಧಾನಿ ನರೇಂದ್ರ ಮೋದಿಗೆ ಮತದಾನಕ್ಕಾಗಿ 21 ಮಿಲಿಯನ್ ಡಾಲರ್‌ಗಳನ್ನು ಪಾವತಿಸಿದೆ ಎಂದು ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಹೇಳಿಕೊಂಡ 6 ತಿಂಗಳ ನಂತರ ರಾಯಭಾರ ಕಚೇರಿ ಈ ಸ್ಪಷ್ಟನೆ ನೀಡಿದೆ. ವಿದೇಶಾಂಗ ವ್ಯವಹಾರಗಳ ಸಚಿವಾಲಯ (ಎಂಇಎ) ಸಂಸತ್ತಿಗೆ ಈ ಬಗ್ಗೆ ತಿಳಿಸಿದ್ದು, 2014 ಮತ್ತು 2024ರ ನಡುವೆ ಭಾರತ ಅಥವಾ ಯುಎಸ್‌ಎಐಡಿ ಅಂತಹ ಯಾವುದೇ ಹಣವನ್ನು ಸ್ವೀಕರಿಸಿಲ್ಲ ಅಥವಾ ನೀಡಿಲ್ಲ ಎಂದು ಯುಎಸ್ ರಾಯಭಾರ ಕಚೇರಿ ಹೇಳಿದೆ. ಯುಎಸ್‌ಎಐಡಿ ಭಾರತ ಸರ್ಕಾರದೊಂದಿಗೆ ಸಹಿ ಹಾಕಿದ್ದ ಎಲ್ಲಾ 7 ಪಾಲುದಾರಿಕೆ ಒಪ್ಪಂದಗಳು ಆಗಸ್ಟ್ 15ಕ್ಕೆ ಕೊನೆಯಾಗಿವೆ ಎಂದು ವಿದೇಶಾಂಗ ಸಚಿವಾಲಯ ಹೇಳಿದೆ.
ಇದನ್ನೂ ಓದಿ: ಭಾರತದ ಉತ್ಪನ್ನಗಳಿಗೆ ಹೆಚ್ಚುವರಿ ಸುಂಕ ವಾಪಸ್ ಪಡೆಯುತ್ತಾರಾ ಟ್ರಂಪ್? ಪರಿಶೀಲನೆಯ ಸುಳಿವು ನೀಡಿದ ಅಮೆರಿಕ ಅಧ್ಯಕ್ಷ
2014 ಮತ್ತು 2024ರ ನಡುವೆ ಭಾರತದಲ್ಲಿ USAIDಯ ಯೋಜನೆಗಳನ್ನು ಒಳಗೊಂಡ ವಿವರವಾದ ಡೇಟಾವನ್ನು ಅಮೆರಿಕದ ರಾಯಭಾರ ಕಚೇರಿ ಹಂಚಿಕೊಂಡಿದೆ. ಇದರಲ್ಲಿ ಯಾವುದೇ ಮತದಾರರಿಗೆ ಸಂಬಂಧಿಸಿದ ನಿಧಿ ಅಥವಾ ಕಾರ್ಯಕ್ರಮಗಳನ್ನು ಎಂದಿಗೂ ಕೈಗೊಳ್ಳಲಾಗಿಲ್ಲ ಎಂದು ತಿಳಿಸಲಾಗಿದೆ.
ಫೆಬ್ರವರಿ 16, 2025ರಂದು ಎಲಾನ್ ಮಸ್ಕ್ ನೇತೃತ್ವದ ಅಮೆರಿಕನ್ ಸರ್ಕಾರಿ ದಕ್ಷತೆ ಇಲಾಖೆ (DOGE) ವಿಶ್ವಾದ್ಯಂತ USAID ನಿಧಿಯಲ್ಲಿ 486 ಮಿಲಿಯನ್ ಡಾಲರ್ ಅನ್ನು ರದ್ದುಗೊಳಿಸುವುದಾಗಿ ಘೋಷಿಸಿದ ನಂತರ ಈ ಸ್ಪಷ್ಟೀಕರಣ ಬಂದಿದೆ. ಅದರಲ್ಲಿ ಪಟ್ಟಿ ಮಾಡಲಾದ ಯೋಜನೆಗಳಲ್ಲಿ ‘ಭಾರತದಲ್ಲಿ ಮತದಾರರ ಮತದಾನ’ಕ್ಕಾಗಿ 21 ಮಿಲಿಯನ್ ಡಾಲರ್ ಹಂಚಿಕೆಯ ಬಗ್ಗೆಯೂ ಉಲ್ಲೇಖಿಸಲಾಗಿತ್ತು. ಈ ಪ್ರಕಟಣೆಯಿಂದ ಎಚ್ಚೆತ್ತ ವಿದೇಶಾಂಗ ಸಚಿವಾಲಯವು ಫೆಬ್ರವರಿ 28ರಂದು ರಾಯಭಾರ ಕಚೇರಿಗೆ ಕಳೆದ ದಶಕದಲ್ಲಿ ಭಾರತದಲ್ಲಿ USAID ನಡೆಸಿದ ಚಟುವಟಿಕೆಗಳ ಸಂಪೂರ್ಣ ವಿವರದ ಪಟ್ಟಿಯನ್ನು ನೀಡುವಂತೆ ವಿನಂತಿಸಿತ್ತು.
ಇದನ್ನೂ ಓದಿ: ಭಾರತ, ಚೀನಾ ಏಷ್ಯಾದ ಡಬಲ್ ಎಂಜಿನ್‌ಗಳು; ಟ್ರಂಪ್ ಸುಂಕದ ವಿರುದ್ಧ ಭಾರತಕ್ಕೆ ಬೀಜಿಂಗ್ ಬೆಂಬಲ
ಅಮೆರಿಕದ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ತಮ್ಮ ಭಾಷಣಗಳಲ್ಲಿ DOGE ಪೋಸ್ಟ್ ಅನ್ನು ಪದೇ ಪದೇ ಉಲ್ಲೇಖಿಸುತ್ತಾ, ಅಮೆರಿಕದ ತೆರಿಗೆದಾರರ ಡಾಲರ್‌ಗಳನ್ನು ವಿದೇಶಿ ಚುನಾವಣೆಗಳಿಗೆ ಏಕೆ ಖರ್ಚು ಮಾಡಬೇಕು? ಎಂದು ಪ್ರಶ್ನಿಸಿದ್ದರು. “ಭಾರತದಲ್ಲಿ ಮತದಾನಕ್ಕೆ 21 ಮಿಲಿಯನ್ ಡಾಲರ್ ನೀಡಿದ್ದೇವೆ. ಭಾರತದ ಮತದಾನದ ಬಗ್ಗೆ ನಾವು ಏಕೆ ಕಾಳಜಿ ವಹಿಸಬೇಕು? ನಮಗೆ ನಮ್ಮದೇ ಆದ ಸಾಕಷ್ಟು ಸಮಸ್ಯೆಗಳಿವೆ” ಎಂದು ಡೊನಾಲ್ಡ್ ಟ್ರಂಪ್ ಹೇಳಿದ ಬಳಿಕ ಭಾರತ ಮುಜುಗರಕ್ಕೊಳಗಾಗಿತ್ತು.
ಇನ್ನಷ್ಟು ರಾಷ್ಟ್ರೀಯ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ




