ಫ್ರಾನ್ಸ್ ಅಧ್ಯಕ್ಷರ ಜೊತೆ ಪ್ರಧಾನಿ ಮೋದಿ ಮಾತುಕತೆ; ಉಕ್ರೇನ್ ಯುದ್ಧ ಕೊನೆಗೊಳಿಸುವ ಬಗ್ಗೆ ಚರ್ಚೆ
ಫ್ರೆಂಚ್ ಅಧ್ಯಕ್ಷ ಎಮ್ಯಾನುಯೆಲ್ ಮ್ಯಾಕ್ರನ್ ಜೊತೆ ಇಂದು ಸಂಜೆ ಭಾರತದ ಪ್ರಧಾನಿ ನರೇಂದ್ರ ಮೋದಿ ದೂರವಾಣಿಯಲ್ಲಿ ಮಾತುಕತೆ ನಡೆಸಿದ್ದಾರೆ, ಈ ವೇಳೆ ಉಕ್ರೇನ್ ಮತ್ತು ಪಶ್ಚಿಮ ಏಷ್ಯಾದಲ್ಲಿ ಘರ್ಷಣೆಗಳನ್ನು ಕೊನೆಗೊಳಿಸಿ, ಶಾಂತಿ ಸ್ಥಾಪನೆಯ ಪ್ರಯತ್ನಗಳನ್ನು ಮಾಡುವ ಕುರಿತು ಪ್ರಧಾನಿ ಮೋದಿ ಚರ್ಚಿಸಿದ್ದಾರೆ.

ನವದೆಹಲಿ, ಆಗಸ್ಟ್ 21: ಪ್ರಧಾನಿ ನರೇಂದ್ರ ಮೋದಿ (PM Narendra Modi) ಇಂದು (ಆಗಸ್ಟ್ 21) ಫ್ರಾನ್ಸ್ ಅಧ್ಯಕ್ಷ ಎಮ್ಯಾನುಯೆಲ್ ಮ್ಯಾಕ್ರನ್ (Emmanuel Macron) ಅವರೊಂದಿಗೆ ಜಾಗತಿಕ ಶಾಂತಿ ಮತ್ತು ದ್ವಿಪಕ್ಷೀಯ ಸಂಬಂಧಗಳನ್ನು ಬಲಪಡಿಸುವ ಬಗ್ಗೆ ಮಾತುಕತೆ ನಡೆಸಿದ್ದಾರೆ. ಎಕ್ಸ್ ಪೋಸ್ಟ್ನಲ್ಲಿ ತಮ್ಮಿಬ್ಬರ ಸಂವಾದದ ವಿವರಗಳನ್ನು ಹಂಚಿಕೊಂಡ ಪ್ರಧಾನಿ ಮೋದಿ, “ನನ್ನ ಸ್ನೇಹಿತರಾದ ಫ್ರೆಂಚ್ ಅಧ್ಯಕ್ಷ ಮ್ಯಾಕ್ರನ್ ಅವರೊಂದಿಗೆ ಉತ್ತಮ ಮಾತುಕತೆ ನಡೆಸಿದ್ದೇನೆ. ಉಕ್ರೇನ್ ಮತ್ತು ಪಶ್ಚಿಮ ಏಷ್ಯಾದಲ್ಲಿನ ಸಂಘರ್ಷಗಳ ಶಾಂತಿಯುತ ಪರಿಹಾರಕ್ಕಾಗಿ ಪ್ರಯತ್ನಗಳ ಕುರಿತು ನಾವು ಅಭಿಪ್ರಾಯಗಳನ್ನು ವಿನಿಮಯ ಮಾಡಿಕೊಂಡಿದ್ದೇವೆ” ಎಂದು ಹೇಳಿದ್ದಾರೆ.
ಉಕ್ರೇನ್‌ನಲ್ಲಿನ ಸಂಘರ್ಷ ಮತ್ತು ಪಶ್ಚಿಮ ಏಷ್ಯಾದಲ್ಲಿ ಹೆಚ್ಚುತ್ತಿರುವ ಉದ್ವಿಗ್ನತೆಗಳು ಅಂತಾರಾಷ್ಟ್ರೀಯ ಸ್ಥಿರತೆಗೆ ಬೆದರಿಕೆಯನ್ನುಂಟುಮಾಡುತ್ತಿರುವುದರಿಂದ, ಶಾಶ್ವತ ಶಾಂತಿಯನ್ನು ಸಾಧಿಸಲು ಸಂವಾದ ಮತ್ತು ರಾಜತಾಂತ್ರಿಕತೆ ಅತ್ಯಗತ್ಯ ಎಂದು ಪ್ರಧಾನಿ ಮೋದಿ ಮತ್ತು ಫ್ರೆಂಚ್ ಅಧ್ಯಕ್ಷ ಮ್ಯಾಕ್ರನ್ ಇಬ್ಬರೂ ಅಭಿಪ್ರಾಯಪಟ್ಟಿದ್ದಾರೆ. ಜಗತ್ತಿನಲ್ಲಿ ನಡೆಯುತ್ತಿರುವ ಭೌಗೋಳಿಕ ರಾಜಕೀಯ ಬಿಕ್ಕಟ್ಟುಗಳ ಬಗ್ಗೆ ಇಬ್ಬರೂ ನಾಯಕರ ಕಳವಳಗಳನ್ನು ವ್ಯಕ್ತಪಡಿಸಿದ್ದಾರೆ.
Had a very good conversation with my friend President Macron. Exchanged views on efforts for peaceful resolution of conflicts in Ukraine and in West Asia. Reaffirmed our commitment to further strengthen the India-France strategic partnership.@EmmanuelMacron
— Narendra Modi (@narendramodi) August 21, 2025
ಇದನ್ನೂ ಓದಿ: ಕಾಂಗ್ರೆಸ್ನ ಪ್ರತಿಭಾವಂತರಿಗೆ ರಾಹುಲ್ ಗಾಂಧಿಯಿಂದ ಅವಕಾಶ ಸಿಗುತ್ತಿಲ್ಲ; ಎನ್‌ಡಿಎ ಸಭೆಯಲ್ಲಿ ಪ್ರಧಾನಿ ಮೋದಿ
ತಮ್ಮ ದೀರ್ಘಕಾಲದ ಸಂಬಂಧಗಳನ್ನು ಪುನರುಚ್ಚರಿಸುತ್ತಾ, ಇಬ್ಬರೂ ನಾಯಕರು ಭಾರತ-ಫ್ರಾನ್ಸ್ ಕಾರ್ಯತಂತ್ರದ ಪಾಲುದಾರಿಕೆಯನ್ನು ಗಾಢಗೊಳಿಸುವ ಬದ್ಧತೆಯನ್ನು ಪುನರುಚ್ಚರಿಸಿದರು. ರಕ್ಷಣೆ, ಬಾಹ್ಯಾಕಾಶ, ಇಂಧನ ಪರಿವರ್ತನೆ ಮತ್ತು ಜಾಗತಿಕ ಆಡಳಿತದಲ್ಲಿ ಸಹಕಾರವು ಈ ಸಂಬಂಧದ ಬೆನ್ನೆಲುಬಾಗಿ ಮುಂದುವರೆದಿದೆ. ಇದನ್ನು ಭಾರತ ಮತ್ತು ಫ್ರಾನ್ಸ್ ಎರಡೂ ದೇಶಗಳು ಮತ್ತಷ್ಟು ವಿಸ್ತರಿಸಲು ಸಿದ್ಧತೆಯನ್ನು ವ್ಯಕ್ತಪಡಿಸಿದ್ದಾರೆ.
French President Emmanuel Macron tweets, “I have just spoken with Prime Minister Narendra Modi. We coordinated our positions on the war in Ukraine in order to move towards a just and lasting peace, with strong guarantees for Ukraine and Europe’s security. On trade issues, we… https://t.co/yS2jeT2ftX pic.twitter.com/Yms7rBnIG0
— ANI (@ANI) August 21, 2025
ಉಕ್ರೇನ್‌ನಲ್ಲಿನ ಯುದ್ಧ ಮತ್ತು ಪಶ್ಚಿಮ ಏಷ್ಯಾದಲ್ಲಿನ ಹೊಸ ಉದ್ವಿಗ್ನತೆಗಳು ಜಾಗತಿಕ ಸ್ಥಿರತೆಯ ಮೇಲೆ ಪರಿಣಾಮ ಬೀರುತ್ತಿರುವುದರಿಂದ, ಮೋದಿ ಮತ್ತು ಮ್ಯಾಕ್ರನ್ ಶಾಂತಿಯನ್ನು ಪುನಃಸ್ಥಾಪಿಸಲು ರಾಜತಾಂತ್ರಿಕ ಪರಿಹಾರಗಳು ಮತ್ತು ಸಂಭಾಷಣೆಯ ಮಹತ್ವವನ್ನು ಒತ್ತಿ ಹೇಳಿದರು.
ಇದನ್ನೂ ಓದಿ: ರಷ್ಯಾ-ಉಕ್ರೇನ್ ಯುದ್ಧ: ಶಾಂತಿ ಮಾತುಕತೆಗೆ ಪುಟಿನ್-ಝೆಲೆನ್ಸ್ಕಿ ಒಪ್ಪಿಗೆ
ಉಕ್ರೇನ್‌ನ ವಾಯುಪಡೆ ಇಂದು ತಿಳಿಸಿರುವ ಪ್ರಕಾರ, ರಷ್ಯಾ ಈ ವರ್ಷದ ಅತ್ಯಂತ ದೊಡ್ಡ ವೈಮಾನಿಕ ದಾಳಿಗಳಲ್ಲಿ ಒಂದನ್ನು ಪ್ರಾರಂಭಿಸಿದೆ. 574 ಡ್ರೋನ್‌ಗಳು ಮತ್ತು 40 ಬ್ಯಾಲಿಸ್ಟಿಕ್ ಮತ್ತು ಕ್ರೂಸ್ ಕ್ಷಿಪಣಿಗಳನ್ನು ಹಾರಿಸಿದೆ. ಇದು ದೇಶದ ಪಶ್ಚಿಮ ಪ್ರದೇಶಗಳನ್ನು ಹೆಚ್ಚಾಗಿ ಗುರಿಯಾಗಿಸಿಕೊಂಡಿದೆ. ಈ ದಾಳಿಯಲ್ಲಿ ಒಬ್ಬ ವ್ಯಕ್ತಿ ಸಾವನ್ನಪ್ಪಿದ್ದು, ಕನಿಷ್ಠ 15 ಜನರು ಗಾಯಗೊಂಡಿದ್ದಾರೆ. ಲಿವಿವ್‌ನಲ್ಲಿ ವಸತಿ ಪ್ರದೇಶಗಳು, ಶಾಲೆಗಳು ಮತ್ತು ಆಡಳಿತ ಕಟ್ಟಡಗಳು ಸೇರಿದಂತೆ ನಾಗರಿಕ ಮೂಲಸೌಕರ್ಯಗಳಿಗೆ ಹಾನಿಯಾಗಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.
ಇನ್ನಷ್ಟು ರಾಷ್ಟ್ರೀಯ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ




