ಶಾಸಕ ಪ್ರದೀಪ್ ಈಶ್ವರ್ ಚಿಲ್ಲರೆ ರಾಜಕಾರಣ ಮಾಡ್ತಿದ್ದಾರೆ, ಬಿಜೆಪಿ ಕಾರ್ಯಕರ್ತರ ಮೇಲೆ ಹಲ್ಲೆಗೆ ಯತ್ನಿಸಿದ್ದಾರೆ -ಡಾ ಕೆ ಸುಧಾಕರ್

| Updated By: ಆಯೇಷಾ ಬಾನು

Updated on: Jul 29, 2023 | 9:30 AM

ಬಿಜೆಪಿ ಕಾರ್ಯಕರ್ತರ ಮೇಲೆ ಹಲ್ಲೆಗೆ ಯತ್ನಿಸಿ ದೌರ್ಜನ್ಯ ನಡೆಸಿದ್ದಾರೆ. ಕಾಂಗ್ರೆಸ್ ಮುಖಂಡರು ಕ್ಷೇತ್ರದಲ್ಲಿ ಗುಂಡಾಗಿರಿ ರಾಜಕಾರಣಕ್ಕೆ ಮುಂದಾಗಿದ್ದಾರೆ ಎಂದು ಹಾಲಿ ಶಾಸಕ ಪ್ರದೀಪ್ ಈಶ್ವರ್ ವಿರುದ್ದ ಮಾಜಿ ಶಾಸಕ ಡಾ ಕೆ ಸುಧಾಕರ್ ವಾಗ್ದಾಳಿ ನಡೆಸಿದ್ದಾರೆ.

ಶಾಸಕ ಪ್ರದೀಪ್ ಈಶ್ವರ್ ಚಿಲ್ಲರೆ ರಾಜಕಾರಣ ಮಾಡ್ತಿದ್ದಾರೆ, ಬಿಜೆಪಿ ಕಾರ್ಯಕರ್ತರ ಮೇಲೆ ಹಲ್ಲೆಗೆ ಯತ್ನಿಸಿದ್ದಾರೆ -ಡಾ ಕೆ ಸುಧಾಕರ್
ಶಾಸಕ ಪ್ರದೀಪ್ ಈಶ್ವರ್, ಮಾಜಿ ಸಚಿವ ಡಾ ಕೆ ಸುಧಾಕರ್
Follow us on

ಚಿಕ್ಕಬಳ್ಳಾಪುರ, ಜುಲೈ 29: ಧೈರ್ಯ ಇದ್ರೆ ಪ್ರದೀಪ್ ಈಶ್ವರ್(Pradeep Eshwar)​​​ ಶಾಸಕ ಸ್ಥಾನಕ್ಕೆ ರಾಜೀನಾಮೆ ನೀಡಿ ಸ್ವತಂತ್ರವಾಗಿ ಗೆಲ್ಲಲಿ ಎಂದು ಶಾಸಕ ಪ್ರದೀಪ್ ಈಶ್ವರ್​ಗೆ ಮಾಜಿ ಸಚಿವ ಡಾ.ಸುಧಾಕರ್(Dr K Sudhakar)​ ಸವಾಲು ಹಾಕಿದ್ದಾರೆ. ಶಾಸಕ ಪ್ರದೀಪ್ ಈಶ್ವರ್ ಕ್ಷೇತ್ರದಲ್ಲಿ ಚಿಲ್ಲರೆ ರಾಜಕಾರಣ ಮಾಡುತ್ತಿದ್ದಾರೆ. ಕ್ಷೇತ್ರದಲ್ಲಿ ರೌಡಿ ರಾಜಕಾರಣ ಬೆಳೆಸುತ್ತಿದ್ದಾರೆ. ಕಳೆದ 15 ವರ್ಷಗಳಿಂದ ಚಿಕ್ಕಬಳ್ಳಾಪುರ ಕ್ಷೇತ್ರ ಶಾಂತಿಯುತವಾಗಿತ್ತು. ಕ್ಷೇತ್ರದ ಬಿಜೆಪಿ ಮುಖಂಡರ ಮೇಲೆ ದ್ವೇಷದ ರಾಜಕಾರಣ ಮಾಡುತ್ತಿದ್ದಾರೆ. ಬಿಜೆಪಿ ಕಾರ್ಯಕರ್ತರ ಮೇಲೆ ಹಲ್ಲೆಗೆ ಯತ್ನಿಸಿ ದೌರ್ಜನ್ಯ ನಡೆಸಿದ್ದಾರೆ. ಕಾಂಗ್ರೆಸ್ ಮುಖಂಡರು ಕ್ಷೇತ್ರದಲ್ಲಿ ಗುಂಡಾಗಿರಿ ರಾಜಕಾರಣಕ್ಕೆ ಮುಂದಾಗಿದ್ದಾರೆ ಎಂದು ಹಾಲಿ ಶಾಸಕ ಪ್ರದೀಪ್ ಈಶ್ವರ್ ವಿರುದ್ದ ಮಾಜಿ ಶಾಸಕ ಡಾ ಕೆ ಸುಧಾಕರ್ ವಾಗ್ದಾಳಿ ನಡೆಸಿದ್ದಾರೆ.

ಚಿಕ್ಕಬಳ್ಳಾಪುರದಲ್ಲಿ ಮಾಧ್ಯಮಗಳಿಗೆ ಪ್ರತಿಕ್ರಿಯೆ ನೀಡಿದ ಮಾಜಿ ಸಚಿವ ಡಾ.ಕೆ.ಸುಧಾಕರ್​, ಧೈರ್ಯ ಇದ್ರೆ ಪ್ರದೀಪ್ ಈಶ್ವರ್​​​ ಶಾಸಕ ಸ್ಥಾನಕ್ಕೆ ರಾಜೀನಾಮೆ ನೀಡಿ ಸ್ವತಂತ್ರವಾಗಿ ಸ್ಪರ್ಧಿಸಲಿ. ನಾನು ಕೂಡ ಬಿಜೆಪಿಯಿಂದ ಹೊರಬಂದು ಸ್ವತಂತ್ರವಾಗಿ ಸ್ಪರ್ಧೆಸುತ್ತೇನೆ. ನಿನಗೆ ಎಷ್ಟು ವೋಟ್ ಬರುತ್ತೆ? ನನಗೆ ಎಷ್ಟು ವೋಟ್ ಬರುತ್ತೆ ನೋಡೋಣ. ಇಬ್ಬರಲ್ಲಿ ಯಾರು ಗೆಲ್ಲುತ್ತಾರೋ ನೋಡೋಣ. ಹಿಂದೆ ನಾನು ಒಂದೇ ವರ್ಷದಲ್ಲಿ ಕಾಂಗ್ರೆಸ್​ಗೆ ರಾಜೀನಾಮೆ ನೀಡಿದ್ದೆ. ರಾಜೀನಾಮೆ ನೀಡಿ ಬಿಜೆಪಿ ಇಲ್ಲದ ಕಡೆ ಗೆದ್ದು ನನ್ನ ಶಕ್ತಿ ತೋರಿಸಿದ್ದೇನೆ. ನೀನು ಕಾಂಗ್ರೆಸ್ ಪಕ್ಷದ ಬದಲು ಸ್ವತಂತ್ರವಾಗಿ ಸ್ಪರ್ಧಿಸಿ ತೋರಿಸು. ಪ್ರದೀಶ್​ ಈಶ್ವರ್​​ ಮುಖ ನೋಡಿದರೆ 5 ಸಾವಿರ ವೋಟು ಬರಲ್ಲ ಎಂದು ಕಿಡಿಕಾರಿದ್ದಾರೆ.

ರಾಜ್ಯದಲ್ಲಿ ಅಶಾಂತಿ, ಅತ್ಯಾಚಾರ, ಹತ್ಯೆ ಪ್ರಕರಣಗಳು ಹೆಚ್ಚಾಗಿವೆ. ದೇಶದಲ್ಲಿ ಯಾವತ್ತೂ ಕೂಡ ಜೈನಮುನಿ ಹತ್ಯೆ ಆಗಿರಲಿಲ್ಲ. ಜೈನ ಮುನಿ ಹತ್ಯೆಗೆ ರಾಜ್ಯ ಖ್ಯಾತಿಯಾಗಿದೆ. ರಾಜ್ಯದಲ್ಲಿ ಐಟಿ ಕಂಪನಿಯ ಮುಖ್ಯಸ್ಥರ ಕೊಲೆಯಾಗಿದೆ. ರಾಜ್ಯದಲ್ಲಿ ಶಾಂತಿ ಸುವ್ಯವಸ್ಥೆ ಹಾಳಾಗಿದೆ ಎಂಬುದಕ್ಕೆ ಇದೇ ಸಾಕ್ಷಿ ಎಂದು ರಾಜ್ಯ ಸರ್ಕಾರದ ವಿರುದ್ಧ ಮಾಜಿ ಸಚಿವ ಡಾ.ಸುಧಾಕರ್ ಆಕ್ರೋಶ ಹೊರ ಹಾಕಿದರು.

ಇದನ್ನೂ ಓದಿ: ಬೆಂಗಳೂರಿನಲ್ಲಿ ಚಾಕುವಿನಿಂದ ಇರಿದು ಅಡುಗೆ ಭಟ್ಟನ ಹತ್ಯೆ; ಕಾರಣವೇನು ಗೊತ್ತಾ?
ಮಾನವೀಯತೆ ಇದ್ದರೆ ಸರ್ಕಾರಿ ಮೆಡಿಕಲ್ ಕಾಲೇಜಿಗೆ ಹಣ ನೀಡಿ. ನಿರ್ಮಾಣ ಹಂತದ ಮೆಡಿಕಲ್ ಕಾಲೇಜುಗಳಿಗೆ ಮೊದಲು ಹಣ ನೀಡಿ. ಗುತ್ತಿಗೆದಾರರಿಂದ ಕಾಲೇಜುಗಳನ್ನು ಪಡೆದು ವಿದ್ಯಾರ್ಥಿಗಳಿಗೆ ನೆರವಾಗಿ. ಸಿಎಂ ಸಿದ್ದರಾಮಯ್ಯಗೆ ಮಾನವೀಯತೆ ಇದ್ದರೆ ಈ ಕೆಲಸ ಮಾಡಲಿ ಎಂದರು. ಇದೇ ವೇಳೆ ಮೆಡಿಕಲ್​ ಕಾಲೇಜುಗಳ ಬಗ್ಗೆ ತನಿಖೆಗೆ ಸರ್ಕಾರ ಚಿಂತನೆ ವಿಚಾರಕ್ಕೆ ಸಂಬಂಧಿಸಿ ಪ್ರತಿಕ್ರಿಯೆ ನೀಡಿದ ಮಾಜಿ ಸಚಿವ ಸುಧಾಕರ್, ನಾನು ಅವ್ಯವಹಾರ, ಹಗರಣ ಮಾಡಿದ್ರೆ ನನಗೆ ಕಠಿಣ ಶಿಕ್ಷೆ ವಿಧಿಸಿ. ನನ್ನ ಮೇಲಿನ ಸೇಡಿಗೆ ಮೆಡಿಕಲ್​​ ವಿದ್ಯಾರ್ಥಿಗಳಿಗೆ ಶಿಕ್ಷೆ ನೀಡಬೇಡಿ ಎಂದರು.

ಮಾಜಿ ಗುರುವಿಗೆ ಮಾಜಿ ಶಿಷ್ಯನ ರಾಜಕೀಯ ಪಾಠ

ಮುಖ್ಯಮಂತ್ರಿಗಳೇ ದ್ವೇಷದ ರಾಜಕಾರಣ ಮಾಡಬೇಡಿ. ನೀವೇ ಏನಾದರೂ ಶಾಶ್ವತವಾಗಿ ಮುಖ್ಯಮಂತ್ರಿಯಾಗಿ ಇರುತ್ತೀರಾ? ಕಳೆದ 4 ವರ್ಷದಲ್ಲಿ ನಾವು ದ್ವೇಷದ ರಾಜಕಾರಣ ಮಾಡಲಿಲ್ಲ. ಮಾಜಿ ಸಿಎಂಗಳಾದ ಬಿಎಸ್​​ವೈ, ಬೊಮ್ಮಾಯಿ ಒಳ್ಳೆಯ ನಾಯಕರು. ಎಷ್ಟೇ ಒತ್ತಡಗಳಿದ್ದರೂ ದ್ವೇಷದ ರಾಜಕಾರಣ ಮಾಡಲಿಲ್ಲ ಎಂದು ಮಾಜಿ ಗುರುವಿಗೆ ಮಾಜಿ ಶಿಷ್ಯ ರಾಜಕೀಯ ಪಾಠ ಮಾಡಿದರು.

ರಾಜ್ಯದ ಪ್ರಮುಖ ಸುದ್ದಿಗಳನ್ನು ಓದಲು ಇದರ ಮೇಲೆ ಕ್ಲಿಕ್ ಮಾಡಿ