ಉಪಚುನಾವಣೆ ಸೋಲಿಗೂ ತೈಲ ಬೆಲೆ ಇಳಿಗೂ ಸಂಬಂಧವಿಲ್ಲ: ಸಚಿವ ಡಾ ಕೆ ಸುಧಾಕರ

ದೇಶದಲ್ಲಿ ತೈಲೋತ್ಪನ್ನಗಳ ಬೆಲೆ ಕಡಿಮೆ ಮಾಡಬೇಕು ಎಂದು ಕಾಂಗ್ರೆಸ್ ಹಲವು ತಿಂಗಳುಗಳಿಂದ ಆಗ್ರಹಿಸುತ್ತಿತ್ತು. ಆದರೆ ಇಂದಿಗೂ ಏಕೆ ಅವರಿಗೆ ಇಂಧನ ದರ ಕಡಿಮೆ ಮಾಡಲು ಆಗಿಲ್ಲ ಎಂದು ಪ್ರಶ್ನಿಸಿದರು.

ಉಪಚುನಾವಣೆ ಸೋಲಿಗೂ ತೈಲ ಬೆಲೆ ಇಳಿಗೂ ಸಂಬಂಧವಿಲ್ಲ: ಸಚಿವ ಡಾ ಕೆ ಸುಧಾಕರ
ಆರೋಗ್ಯ ಸಚಿವ ಡಾ.ಕೆ.ಸುಧಾಕರ
Follow us
TV9 Web
| Updated By: Ghanashyam D M | ಡಿ.ಎಂ.ಘನಶ್ಯಾಮ

Updated on: Nov 06, 2021 | 10:23 PM

ಚಿಕ್ಕಬಳ್ಳಾಪುರ: ದೇಶದ ವಿವಿಧ ರಾಜ್ಯಗಳ ಉಪಚುನಾವಣೆಯಲ್ಲಿ ಬಿಜೆಪಿ ಸೋಲು ಅನುಭವಿಸಿದ ಹಿನ್ನೆಲೆಯಲ್ಲಿ ಇಂಧನದ ಬೆಲೆ ಕಡಿಮೆ ಮಾಡಿದ್ದಲ್ಲ. ದೇಶದಲ್ಲಿ ತೈಲೋತ್ಪನ್ನಗಳ ಬೆಲೆ ಕಡಿಮೆ ಮಾಡಲು ಎರಡು-ಮೂರು ತಿಂಗಳ ಹಿಂದೆಯೇ ಸರ್ಕಾರ ಚಿಂತನೆ ನಡೆಸಿತ್ತು. ಐದಾರು ಕ್ಷೇತ್ರಗಳಲ್ಲಿ ಸೋತ ಮಾತ್ರಕ್ಕೆ ಇಂಧನದ ದರವನ್ನು 20 ರೂಪಾಯಿ ಕಡಿಮೆ ಮಾಡಲು ಸಾಧ್ಯವೇ ಎಂದು ಆರೋಗ್ಯ ಸಚಿವ ಡಾ.ಕೆ.ಸುಧಾಕರ ಪ್ರಶ್ನಿಸಿದರು. ದೇಶದಲ್ಲಿ ತೈಲೋತ್ಪನ್ನಗಳ ಬೆಲೆ ಕಡಿಮೆ ಮಾಡಬೇಕು ಎಂದು ಕಾಂಗ್ರೆಸ್ ಹಲವು ತಿಂಗಳುಗಳಿಂದ ಆಗ್ರಹಿಸುತ್ತಿತ್ತು. ಆದರೆ ಇಂದಿಗೂ ಏಕೆ ಅವರಿಗೆ ಇಂಧನ ದರ ಕಡಿಮೆ ಮಾಡಲು ಆಗಿಲ್ಲ ಎಂದು ಪ್ರಶ್ನಿಸಿದರು.

ಜಿಲ್ಲೆಯ ಗೌರಿಬಿದನೂರಿನಲ್ಲಿ ಮಾಧ್ಯಮ ಪ್ರತಿನಿಧಿಗಳೊಂದಿಗೆ ಮಾತನಾಡಿದ ಅವರು, ರಾಹುಲ್ ಗಾಂಧಿ ಎಲ್ಲಿಗೆ ಹೋಗಿದ್ದಾರೆ? ನಾಪತ್ತೆಯಾಗಿದ್ದಾರಾ? ಈಗ ರಾಹುಲ್ ಗಾಂಧಿಗೆ ಆದೇಶ ಮಾಡುವುದಕ್ಕೆ ಆಗುವುದಿಲ್ಲವೇ? ಕಾಂಗ್ರೆಸ್‌ನವರಿಗೆ ನಿಜವಾದ ಜನಪರ ಕಾಳಜಿಯೇ ಇಲ್ಲ ಎಂದು ವಾಗ್ದಾಳಿ ನಡೆಸಿದರು. ರಾಜಕೀಯ ದುರುದ್ದೇಶ ಮತ್ತು ಡಂಬಾಚಾರಕ್ಕಾಗಿ ಕಾಂಗ್ರೆಸ್ ನಾಯಕರು ರೋಡ್ ಶೋ ನಡೆಸುತ್ತಿದ್ದಾರೆ. ಅವರಿಗೆ ನಿಜವಾದ ಜನಪರ ಕಾಳಜಿಯಿದ್ದರೆ ಈ ಹೊತ್ತಿಗೆ ಬೆಲೆ ಕಡಿಮೆ ಮಾಡುತ್ತಿದ್ದರು. ಕಾಂಗ್ರೆಸ್​ನವರಿಗೆ ರಾಜಕೀಯ ಬಿಟ್ಟರೆ ದೇಶದ ಅಭಿವೃದ್ಧಿ, ರಚನಾತ್ಮಕ ಗುರಿಯಿಲ್ಲ. ರಾಜಕೀಯವಾಗಿ ಅವರು ಈಗಾಗಲೇ ದಿವಾಳಿಯಾಗಿದ್ದಾರೆ ಎಂದು ಟೀಕಿಸಿದರು.

ಆಸ್ಪತ್ರೆ ಅವ್ಯವಸ್ಥೆ ಕಂಡು ಕೆಂಡಾಮಂಡಲ ಗೌರಿಬಿದನೂರು ತಾಲ್ಲೂಕು ಆಸ್ಪತ್ರೆಗೆ ಭೇಟಿ ನೀಡಿದ ಸಚಿವ ಸುಧಾಕರ ಅಲ್ಲಿನ ಅವ್ಯವಸ್ಥೆ ಕಂಡು ಕೆಂಡಾಮಂಡಲವಾದರು. ವೈದ್ಯಾಧಿಕಾರಿ ರತ್ನಮ್ಮ ಅವರನ್ನು ತರಾಟೆಗೆ ತೆಗೆದುಕೊಂಡರು. ರೋಗಿಗಳು, ಸ್ಥಳೀಯರಿಂದ ಹಲವು ದೂರು ಬಂದ ಹಿನ್ನೆಲೆಯಲ್ಲಿ ಆಸ್ಪತ್ರೆಗೆ ಸಚಿವರು ದಿಢೀರ್ ಭೇಟಿ ನೀಡಿ ಪರಿಶೀಲಿಸಿದರು. ಆಸ್ಪತ್ರೆಯಲ್ಲಿ ಸಕ್ಕರೆ ಕಾಯಿಲೆ ಹಾಗೂ ಬಿಪಿ ಸಂಬಂಧಿತ ಔಷಧಿಗಳು ಇಲ್ಲ ಎಂದು ತಿಳಿಸಿದ ಸಿಬ್ಬಂದಿ, ಅಗತ್ಯ ಔಷಧಿಗಳ ಪೂರೈಕೆಗೆ ಮನವಿ ಮಾಡಿದರು. ಹಿರಿಯ ಅಧಿಕಾರಿಗಳಿಗೆ ಕರೆ ಮಾಡಿದ ಸಚಿವರು ಯಾಕೆ ಮಾತ್ರೆಗಳ ಸರಬರಾಜು ಮಾಡುತ್ತಿಲ್ಲ ಎಂದು ಪ್ರಶ್ನಿಸಿದರು.

ಸಚಿವ, ಜಿಲ್ಲಾಧಿಕಾರಿ ಗ್ರಾಮ ವಾಸ್ತವ್ಯ ಗೌರಿಬಿದನೂರು ತಾಲ್ಲೂಕಿನ ಪುರ ಗ್ರಾಮದಲ್ಲಿ ಸಚಿವ ಕೆ.ಸುಧಾಕರ್ ಅವರೊಂದಿಗೆ ಜಿಲ್ಲಾಧಿಕಾರಿ ಆರ್.ಲತಾ ಸಹ ಗ್ರಾಮ ವಾಸ್ತವ್ಯ ಮಾಡುತ್ತಿದ್ದಾರೆ. ಶನಿವಾರ ಸಂಜೆಯಿಂದ ಭಾನುವಾರ ಮುಂಜಾನೆಯವರೆಗೆ ಗ್ರಾಮವಾಸ್ತವ್ಯ ಮುಂದುವರಿಯಲಿದ್ದು, ಸಚಿವರು ಮತ್ತು ಜಿಲ್ಲಾಧಿಕಾರಿ ಗ್ರಾಮಸ್ಥರ ದೂರು ಆಲಿಸಲಿದ್ದಾರೆ.

ಇದನ್ನೂ ಓದಿ: ಕರ್ನಾಟಕದ ಜಿಮ್​ಗಳಿಗೆ ಮಾರ್ಗಸೂಚಿ ನೀಡಲಾಗುವುದು: ಸಚಿವ ಕೆ ಸುಧಾಕರ್ ಹೇಳಿಕೆ ಇದನ್ನೂ ಓದಿ: No Lockdown: ಲಾಕ್​ಡೌನ್ ಚಿಂತನೆ ಸರ್ಕಾರದ ಮುಂದಿಲ್ಲ: ಆರೋಗ್ಯ ಸಚಿವ ಸುಧಾಕರ ಅಭಯ