ಸರ್ಕಾರಿ ಸ್ವಾಮ್ಯದ ಪ್ರತಿಷ್ಠಿತ ಬ್ಯಾಂಕ್ ವೊಂದರಲ್ಲಿ ಮ್ಯಾನೇಜರ್ ಆಗಿದ್ದ ಯುವ ಮ್ಯಾನೇಜರ್ ಒಬ್ಬ ಆನ್ ಲೈನ್ ಕ್ಯಾಸಿನೊ ಬೆಟ್ಟಿಂಗ್ (Online Casino) ಹುಚ್ಚಿಗಾಗಿ ಬ್ಯಾಂಕ್ ಗ್ರಾಹಕರ ಅಕೌಂಟ್ ನಲ್ಲಿದ್ದ 1 ಕೋಟಿ 53 ಲಕ್ಷ 83 ಸಾವಿರ ರೂಪಾಯಿ ಹಣವನ್ನು ದುರುಪಯೋಗ ಮಾಡಿಕೊಂಡು, ನಂಬಿದ್ದ ಬ್ಯಾಂಕ್ ಹಾಗೂ ಗ್ರಾಹಕರಿಗೆ ಪಂಗನಾಮ ಹಾಕಿರುವ ಘಟನೆ ನಡೆದಿದೆ. ಅದೇಲ್ಲಿ ಅಂತೀರಾ, ಈ ವರದಿ ನೋಡಿ. ಈತನ ಹೆಸರು ಎಸ್. ಮಣೀಂದ್ರ ರೆಡ್ಡಿ. ಚಿಕ್ಕಬಳ್ಳಾಪುರ (chikkaballapur) ಜಿಲ್ಲೆ ಗೌರಿಬಿದನೂರು ತಾಲೂಕಿನ (Gauribidanur taluk) ಜಿ ಬೊಮ್ಮಸಂದ್ರ ನಿವಾಸಿ ಹಾಗೂ ಗೌರಿಬಿದನೂರು ನಗರದ ಕಲ್ಲೂಡಿ ಶಾಖೆಯ ಕರ್ನಾಟಕ ಗ್ರಾಮೀಣ ಬ್ಯಾಂಕ್ ನ ಮ್ಯಾನೇಜರ್. ಇನ್ನೂ ಮದುವೆಯಾಗಿ ನಾಲ್ಕು ತಿಂಗಳು, ಮನೆಯಲ್ಲಿ ಯಾವುದಕ್ಕೂ ಕೊರತೆಯಿರಲಿಲ್ಲ. ಕೈತುಂಬ ಸಂಬಳ ಇತ್ತು. ಆದ್ರೆ ಆನ್ ಲೈನ್ ಕ್ಯಾಸಿನೊ ಬೆಟ್ಟಿಂಗ್ ಹುಚ್ಚು ಅಂಟಿಸಿಕೊಂಡಿದ್ದ ಈ ಭೂಪ, ಮನೆಯಲ್ಲಿ ಇದ್ದಾಗಲೂ ಬ್ಯಾಂಕ್ ನಲ್ಲಿಯೇ ಇದ್ರೂ ಸಿಕ್ ಬೊ ಅನ್ನೊ ಕ್ಯಾಸಿನೊ ಗೇಮ್ ಆಡುತ್ತಾ… ಕೇಕೆ ಹಾಕುತ್ತಾ… ಬೆಟ್ಟಿಂಗ್ ಕಟ್ತಿದ್ದ (addict). ಹೀಗೆ… ಬರೊಬ್ಬರಿ 1 ಕೋಟಿ 53 ಲಕ್ಷ 83 ಸಾವಿರ ರೂಪಾಯಿ ಹಣವನ್ನು ಕಾಸಿನೊ ಆನ್ ಲೈನ್ ಗೇಮ್ ನಲ್ಲಿ ಕಳೆದುಕೊಂಡಿದ್ದಾನೆ.
ಕಾಸಿನೊ ಆನ್ ಲೈನ್ ಗೇಮ್ ನಲ್ಲಿ ಹಣ ಹಾಕಲು, ಬ್ಯಾಂಕ್ ನ 12 ಜನ ಗ್ರಾಹಕರ ಅಕೌಂಟ್ ನಲ್ಲಿದ್ದ ಹಣ ಹಾಗೂ ಗ್ರಾಹಕರ ಹೆಸರಿನಲ್ಲಿ ತಾನೆ ನಕಲಿ ದಾಖಲೆಗಳನ್ನು ಸೃಷ್ಟಿಸಿ ಸಾಲದ ರೂಪದಲ್ಲಿ ಹಣ ಡ್ರಾ ಮಾಡಿದ್ದಾನೆ. ಸಾಲದು ಅಂತ… ಕಷ್ಟಕ್ಕೆ ಅಂತ ಬ್ಯಾಂಕ್ ನಲ್ಲಿ ಫಿಕ್ಸಡ್ ಡಿಪಾಸಿಟ್ ಮಾಡಿದ್ದ ಇಬ್ಬರು ಗ್ರಾಹಕರ ಹಣವನ್ನೂ ಆನ್ ಲೈನ್ ಗೇಮ್ ನಲ್ಲಿ ತೊಡಗಿಸಿ, ಗ್ರಾಹಕರ ಅಕೌಂಟ್ ಗಳನ್ನು ಖಾಲಿ ಖಾಲಿ ಮಾಡಿದ್ದಾನೆ.
ಕೊನೆಗೆ ಕಲ್ಲೊಡಿ ಶಾಖೆಯ ಕರ್ನಾಟಕ ಗ್ರಾಮೀಣ ಬ್ಯಾಂಕ್ ನ ಬ್ಯಾಂಕ್ ಮ್ಯಾನೇಜರ್ ಮಣೀಂದ್ರ ರೆಡ್ಡಿ ವಿರುದ್ದ, ಕರ್ನಾಟಕ ಗ್ರಾಮೀಣ ಬ್ಯಾಂಕ್ ನ ಪ್ರಾದೇಶಿಕ ವ್ಯವಸ್ಥಾಪಕ ಟಿ. ದೇವದಾಸ್, ಗೌರಿಬಿದನೂರು ನಗರ ಪೊಲೀಸ್ ಠಾಣೆಯಲ್ಲಿ ದೂರು ದಾಖಲು ಮಾಡಿದರು. ಕೊನೆಗೆ ಚಿಕ್ಕಬಳ್ಳಾಪುರ ಸೈಬರ್ ಪೊಲೀಸ್ ಠಾಣೆಯ ಪೊಲೀಸರು, ನಾಪತ್ತೆಯಾಗಿದ್ದ ಮಣೀಂದ್ರ ರೆಡ್ಡಿನನ್ನ ಬಂಧಿಸಿ ಜೈಲಿಗೆ ತಳ್ಳಿದ್ದು, ವರ್ಗಾವಣೆ ಆಗಿದ್ದ ಬ್ಯಾಂಕ್ ನ ಹಣದಲ್ಲಿ 84 ಲಕ್ಷ ರೂಪಾಯಿ ಹಣವನ್ನು ಫ್ರೀಜ್ ಮಾಡಿಸಿದ್ದಾರೆ.
ಇದೇ ಅಸಾಮಿ ಗುಡಿಬಂಡೆಯ ಉಲ್ಲೋಡು ಕರ್ನಾಟಕ ಗ್ರಾಮೀಣ ಬ್ಯಾಂಕ್ ಶಾಖೆಯಲ್ಲಿ ಅಸಿಸ್ಟಂಟ್ ಬ್ಯಾಂಕ್ ಮ್ಯಾನೇಜರ್ ಆಗಿ ಕೆಲಸ ಮಾಡ್ತಿದ್ದಾಗ… ಅಲ್ಲಿಯ ಕ್ಯಾಶಿಯರ್ ಸುನಿಲ್ ಖಾತೆಯಲ್ಲಿ ಲಾಗ್ ಇನ್ ಆಗಿ ಗ್ರಾಹಕರ ಹಣ ಡ್ರಾ ಮಾಡಿದ್ದ. ಪೊಲೀಸ್ ಠಾಣೆಯಲ್ಲಿ ದೂರು ದಾಖಲು ಆಗ್ತಿದ್ದಂತೆ ಆಗ ಕ್ಯಾಶಿಯರ್ ಸುನಿಲ್, ಪ್ರಕರಣ ಎಲ್ಲಿ ತನ್ನ ಮೈ ಮೇಲೆ ಬರುತ್ತೆ ಅಂತಾ ಲೆಕ್ಕಾಚಾರ ಹಾಕಿ, ಮರಕ್ಕೆ ನೇಣು ಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡಿದ್ದ.
ಆದ್ರೆ ಈಗ ತಡವಾಗಿಯಾದರೂ ಬ್ಯಾಂಕ್ ಮ್ಯಾನೇಜರ್ ಮಣೀಂದ್ರ ರೆಡ್ಡಿಯನ್ನು ಪೊಲೀಸರು ಬಂಧಿಸಿ ಚಿಕ್ಕಬಳ್ಳಾಪುರ ಜಿಲ್ಲಾ ಕಾರಾಗೃಹಕ್ಕೆ ತಳ್ಳಿದ್ದಾರೆ. ಮಣೀಂದ್ರ ರೆಡ್ಡಿ ಮಾಡಿದ ಕೆಲಸಕ್ಕೆ ಬ್ಯಾಂಕ್ ನ ಮಾನ ಮರ್ಯಾದೆ ಹೋಗುತ್ತೆ ಅಂತಾ, ಬ್ಯಾಂಕ್ ಆಡಳಿತ ಮಂಡಳಿ… ಗ್ರಾಹಕರ ಹಣವನ್ನು ವಾಪಸ್ ಅವರ ಖಾತೆಗೆ ತುಂಬಿದ್ದಾರೆ. ಆದ್ರೆ ಬ್ಯಾಂಕ್ ಗೆ ಆದ ನಷ್ಟ ಸರಿದೂಗಿಸಲು, ಬ್ಯಾಂಕ್ ಆಡಳಿತ ಮಂಡಳಿ, ಚಿಕ್ಕಬಳ್ಳಾಪುರ ಆರ್ಥಿಕ ಅಪರಾಧ ಪೊಲೀಸರ ಮೊರೆ ಹೋಗಿದ್ದಾರೆ.
ವರದಿ: ಭೀಮಪ್ಪ ಪಾಟೀಲ, ಟಿವಿ 9, ಚಿಕ್ಕಬಳ್ಳಾಪುರ