
ಚಿಕ್ಕಬಳ್ಳಾಪುರ, ಜೂನ್ 2: ಚಿಕ್ಕಬಳ್ಳಾಪುರ ಗೌರಿಬಿದನೂರಿನ (Gauribidanur) ಮುದುಗೆರೆಯ ನಿವಾಸಿಯಾದ ಗೋವಿಂದರಾಜು ಎಂಬಾತ ಮದುವೆಯಾಗಿ ಮಕ್ಕಳಿದ್ದರೂ ಮತ್ತೊಬ್ಬ ಯುವತಿ ಜತೆ ಅಕ್ರಮ ಸಂಬಂಧ ಇಟ್ಟುಕೊಂಡಿದ್ದಾನೆ. ಅಷ್ಟೇ ಅಲ್ಲದೆ, ಆಕೆ ಜತೆ ಅಕ್ರಮವಾಗಿ ಸಂಸಾರ ನಡೆಸುವುದಕ್ಕೆಂದು ಕಳ್ಳತನ (Theft) ಮಾಡಿದ್ದಾನೆ. ಕೊನೆಗೆ ಇಬ್ಬರೂ ಪೊಲೀಸರ ಅತಿಥಿಗಳಾಗಿದ್ದಾರೆ. ಗೋವಿಂದರಾಜು ಅಜ್ಜಿಯ ಆಸರೆಯಲ್ಲಿದ್ದ ಯುವತಿಯನ್ನು ಗರ್ಭಿಣಿ ಮಾಡಿದ್ದ. ಈ ವಿಷಯ ಊರಿಗೆಲ್ಲ ಗೊತ್ತಾಗುತ್ತಿದ್ದಂತೆಯೇ, ಇಬ್ಬರೂ ಊರು ಬಿಟ್ಟು ತೆರಳಿದ್ದರು. ಗಾರೆ ಕೆಲಸ ಮಾಡುವ ಗೋವಿಂದರಾಜುಗೆ ಬಾಡಿಗೆ ಮನೆ ಮಾಡಲು ಹಣವಿರಲಿಲ್ಲ. ಇದಕ್ಕಾಗಿ ಕಳ್ಳತನದ ಹಾದಿ ಹಿಡಿದಿದ್ದಾನೆ.
ಮೊದಲು ಗೋವಿಂದರಾಜು ಬೈಕ್‌ವೊಂದನ್ನ ಕದ್ದಿದ್ದ. ಅದೇ ಬೈಕ್‌ನಲ್ಲೇ ಇಬ್ಬರೂ, ಕಳವಾರ ಗ್ರಾಮದ ಬಳಿ ನಿರ್ಮಾಣ ಹಂತದ ಒಂಟಿ ತೋಟದ ಮನೆಗೆ ತೆರಳಿದ್ದರು. ಅಲ್ಲಿದ್ದ ಅಜ್ಜಿ ಅಂಜನಮ್ಮ ಎಂಬವರ ಬಾಯಿಗೆ ಬಟ್ಟೆ ತುರುಕಿ ಹಲ್ಲೆ ಮಾಡಿದ್ದರು. ಬಳಿಕ 50 ಗ್ರಾಂ ಚಿನ್ನದ ಮಾಂಗಲ್ಯ ಸರ ದೋಚಿದ್ದರು.
ಗೋವಿಂದರಾಜುವಿನಿಂದಾಗಿ ಯುವತಿ ಈಗ 8 ತಿಂಗಳ ಗರ್ಭಿಣಿ. ಊರಿನಿಂದ ಓಡಿಬಂದಿದ್ದ ಆತನಿಗೆ ಈಗ ಆಕೆ ಜತೆ ಬಾಡಿಗೆ ಮನೆ ಮಾಡಬೇಕಾದ ಅನಿವಾರ್ಯತೆ ಇತ್ತು. ಅದಕ್ಕೆ ಹಣಬೇಕಾಗಿತ್ತು. ಅದಕ್ಕೆ ಮೊದಲು ಸಂಚು ಹೂಡಿ ಬೈಕ್ ಕಳವು ಮಾಡಿದ್ದರು. ನಂತರ ಬೈಕ್ ನಂಬರ್ ಪ್ಲೇಟ್ ಕಿತ್ತು ಹಾಕಿದ್ದರು. ಬೈಕಿನಲ್ಲಿ ಊರೂರು ಅಲೆಯುವಾಗಲೇ, ಅಂಜನಮ್ಮ ಇವರ ಕಣ್ಣಿಗೆ ಬಿದ್ದಿದ್ದರು. ಆದರೆ, ಇವರ ನಸೀಬು ಕೆಟ್ಟಿತ್ತು. ಇವರ ಓಡಾಟ, ಕಳ್ಳಾಟ ಸಿಸಿ ಕ್ಯಾಮರಾದಲ್ಲಿ ಸೆರೆಯಾಗಿತ್ತು. ಇದರಿಂದಾಗಿ ಈಗ ಪೊಲೀಸರಿಗೆ ಸಿಕ್ಕಿಬಿದ್ದಿದ್ದಾರೆ.
ಇದನ್ನೂ ಓದಿ: ನಾಪತ್ತೆಯಾಗಿದ್ದ ಐವರು ಬಾಲಕಿಯರು ಪತ್ತೆ: ವಾರ್ಡನ್ ಅಸಲಿ ಮುಖ ಬಿಚ್ಚಿಟ್ಟ ಮಕ್ಕಳು
ಕಳ್ಳ ಪ್ರೇಮಿಗಳನ್ನು ನಂದಿಗಿರಿಧಾಮ ಪೊಲೀಸರು ಬಂಧಿಸಿದ್ದಾರೆ. ಬಾಡಿಗೆ ಮನೆಗಾಗಿ ಕಳ್ಳತನಕ್ಕಿಳಿದವರೀಗ ಜೈಲಿನಲ್ಲಿ ಮುದ್ದೆ ಮುರಿಯುವಂತಾಗಿದೆ.
ಕರ್ನಾಟಕದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ
Published On - 6:58 am, Mon, 2 June 25