ನಾಪತ್ತೆಯಾಗಿದ್ದ ಐವರು ಬಾಲಕಿಯರು ಪತ್ತೆ: ವಾರ್ಡನ್ ಅಸಲಿ ಮುಖ ಬಿಚ್ಚಿಟ್ಟ ಮಕ್ಕಳು
ಚಿಕ್ಕಬಳ್ಳಾಪುರ ತಾಲ್ಲೂಕಿನ ತಿಪ್ಪೇನಹಳ್ಳಿಯ ಮಕ್ಕಳ ಆಸರೆ ಬಾಲಮಂದಿರದಿಂದ ನಾಪತ್ತೆಯಾಗಿದ್ದ ಐದು ಬಾಲಕಿಯರು ಪತ್ತೆಯಾಗಿದ್ದಾರೆ. ಹಾಸ್ಟೆಲ್ ವಾರ್ಡನ್‌ನ ಕಿರುಕುಳದಿಂದಾಗಿ ತಪ್ಪಿಸಿಕೊಂಡಿದ್ದಾಗಿ ಹೇಳಿದ್ದಾರೆ. ವಾರ್ಡನ್ ಅವರ ಕಿರುಕುಳದಿಂದ ಬೇಸತ್ತು ನಮ್ಮ ಸಂಬಂಧಿಕರ ಮನೆಗೆ ಹೋಗಲು ಹಾಸ್ಟೆಲ್‌ನಿಂದ ತಪ್ಪಿಸಿಕೊಂಡಿದ್ದೇವು ಎಂದು ಬಾಲಕಿಯರು ಪೊಲೀಸರ ಮುಂದೆ ಹೇಳಿದ್ದಾರೆ. ಮದರ್ ತೆರೇಸಾ ಚಾರಿಟೇಬಲ್ ಟ್ರಸ್ಟ್ ನಡೆಸುವ ಈ ಬಾಲಮಂದಿರ ಅನಾಥ ಹಾಗೂ ಸಿಂಗಲ್ ಪೇರೆಂಟ್ ಮಕ್ಕಳಿಗೆ ಆಶ್ರಯ ಪಡೆದಿದ್ದಾರೆ.

ಚಿಕ್ಕಬಳ್ಳಾಪುರ, ಮೇ 30: ಚಿಕ್ಕಬಳ್ಳಾಪುರ (Chikkaballapur) ತಾಲೂಕಿನ ತಿಪ್ಪೇನಹಳ್ಳಿ ಬಳಿಯಿರುವ ಮಕ್ಕಳ ಆಸರೆ ಬಾಲಮಂದಿರ (ವಸತಿ ನಿಲಯ) ದಿಂದ ನಾಪತ್ತೆಯಾಗಿದ್ದ ಐವರು ಬಾಲಕಿಯರು ಪತ್ತೆಯಾಗಿದ್ದಾರೆ. ಹಾಸ್ಟೆಲ್ ವಾರ್ಡನ್ ಕಿರುಕುಳದಿಂದ ಬೇಸತ್ತು ತಪ್ಪಿಸಿಕೊಂಡಿದ್ದಾಗಿ ಬಾಲಕಿಯರು ಹೇಳಿದ್ದಾರೆ. ಸುಖ ಸುಮ್ಮನೆ ವಾರ್ಡನ್ ಶ್ವೇತಾ ಅವರು ನಮ್ಮನ್ನು ಹೊಡೆಯುವುದು, ರೂಮಿನಲ್ಲಿ ಕೂಡಿ ಹಾಕುವುದು, ಬೆದರಿಸುತ್ತಾರೆ. ಹಾಸ್ಟೆಲ್ನಲ್ಲಿ ಇರಲು ಇಷ್ಟವಿಲ್ಲದೆ ಸಂಬಂಧಿಕರ ಮನೆಗೆ ಹೋಗಲು, ವಸತಿ ನಿಲಯದಿಂದ ತಪ್ಪಿಸಿಕೊಂಡಿದ್ದೇವು ಎಂದು ಚಿಕ್ಕಬಳ್ಳಾಪುರ ಗ್ರಾಮಾಂತರ ಠಾಣೆ ಪೊಲೀಸರ ಮುಂದೆ ಬಾಲಕಿಯರು ಹೇಳಿದ್ದಾರೆ. ಅಲ್ಲದೆ, ನಮ್ಮನ್ನು ನಮ್ಮ ತಂದೆ-ತಾಯಿ, ಸಂಬಂಧಿಕರ ಮನೆಗೆ ಕಳುಹಿಸುವಂತೆ ಪೊಲೀಸರ ಬಳಿ ಮನವಿ ಮಾಡಿದ್ದಾರೆ.
ಮಕ್ಕಳ ಆಸರೆ ಬಾಲಮಂದಿರವನ್ನು ಮದರ್ ತೆರೇಸಾ ಚಾರಿಟೇಬಲ್ ಟ್ರಸ್ಟ್ ನಡೆಸುತ್ತಿದೆ. ಈ ವಸತಿ ನಿಲಯದಲ್ಲಿ ಅನಾಥ ಹೆಣ್ಣುಮಕ್ಕಳು, ಸಿಂಗಲ್ ಪೇರೆಂಟ್ ಮಕ್ಕಳಿಗೆ ಆಶ್ರಯ ನೀಡಲಾಗಿದೆ. ಈ ವಸತಿ ನಿಲಯದಿಂದ ಐವರು ಬಾಲಕಿಯರು ನಾಪತ್ತೆಯಾಗಿದ್ದರು. ಬಾಲಕಿಯರು ನಾಪತ್ತೆಯಾಗುತ್ತಿದ್ದಂತೆ, ಟ್ರಸ್ಟ್ ಚಿಕ್ಕಬಳ್ಳಾಪುರ ಗ್ರಾಮಾಂತರ ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಿತ್ತು. ದೂರು ಆಧರಿಸಿ ಪೊಲೀಸರು ಹುಡುಕಾಟ ನಡೆಸಿದಾಗ ಬಾಲಕಿಯರು ಪತ್ತೆಯಾಗಿದ್ದಾರೆ.
ಕರ್ನಾಟಕದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ
Published On - 3:30 pm, Fri, 30 May 25








