Chikkaballapur: ಸದ್ಗುರು ಜಗ್ಗಿ ವಾಸುದೇವ್ ಇಶಾ ಫೌಂಡೇಶನ್ ಜಮೀನಿಗೆ ದಾರಿ ಯಾವುದಯ್ಯಾ? ಜಮೀನಿಗೆ ಹೋಗಲು ಖಾಸಗಿ ವ್ಯಕ್ತಿ ದಾರಿ ಬಿಡ್ತಿಲ್ಲವಂತೆ!
ಇಶಾ ಫೌಂಡೇಶನ್ ದಾರಿ ಬಿಟ್ಟುಕೊಡಲು ಗದ್ದಲ, ವಿವಾದ ಎದ್ದಿದ್ದು... ಹಾಲಿ ವಿಧಾನಪರಿಷತ್ ಸದಸ್ಯರೊಬ್ಬರ ಹತ್ತಿರದ ಸಂಬಂಧಿಯೂ ಹಾಗೂ ದಿವಂಗತ ನಟ ಪುನೀತ್ ರಾಜ್ ಕುಮಾರ್ ಅವರ ಆಪ್ತನೂ ಆಗಿರುವ ಸಕಲೇಶಕುಮಾರ್ ಅವರು ಅದೇನಾಗುತ್ತೊ ಆಗಲಿ, ನನ್ನ ಖಾಸಗಿ ಜಮೀನಿನಲ್ಲಿ ಇಶಾ ಫೌಂಡೇಶನ್ ಗೆ ದಾರಿ ಬಿಟ್ಟುಕೊಡಲ್ಲ ಎಂದಿದ್ದಾರೆ.
ಚಿಕ್ಕಬಳ್ಳಾಪುರ (Chikkaballapur) ತಾಲೂಕಿನ ಜಾಲಾರಿ ನರಸಿಂಹಸ್ವಾಮಿ ಕ್ಷೇತ್ರದ ಬಳಿ ಅಲವಗುರ್ಕಿ ಗ್ರಾಮದ ಸರ್ವೆ ನಂಬರ್ ನಲ್ಲಿ ಸದ್ಗುರು ಜಗ್ಗಿ ವಾಸುದೇವ್ (Sadhuguru Jaggi Vasudev) ನೂತನ ಆಶ್ರಮ ನಿರ್ಮಾಣ ಮಾಡಿ, ಆಶ್ರಮದಲ್ಲಿ 112 ಅಡಿಗಳ ಶಿವನ ಪ್ರತಿಷ್ಠಾಪನೆಗೆ ಅಡಿಗಲ್ಲು ಹಾಕಿದ್ದೆ ತಡ, ಆಶ್ರಮ ಸುತ್ತಮುತ್ತ ಇಂಚಿಂಚೂ ಜಮೀನಿಗೆ ಬಂಗಾರದ ಬೆಲೆ ಬಂದಿದೆ. ಆದ್ರೆ ಆಶ್ರಮದ ಒಂದು ಸರ್ವೆ ನಂಬರ್ ಜಮೀನಿನ ಸುತ್ತ, ಬೇರೊಬ್ಬ ವ್ಯಕ್ತಿಯ ಖಾಸಗಿ ಜಮೀನು ಇದೆ. ಆಶ್ರಮದ ಒಂದು ಜಮೀನಿಗೆ ಹೋಗಲು ಖಾಸಗಿ ವ್ಯಕ್ತಿ ದಾರಿ ಬಿಡ್ತಿಲ್ಲವಂತೆ! ಮತ್ತೊಂದೆಡೆ ಈಶಾ ಫೌಂಡೇಶನ್ (Isha Foundation) ಸಹ ಸುಮ್ಮನಾಗ್ತಿಲ್ಲ. ಇದ್ರಿಂದ ಇಬ್ಬರೂ ಪ್ರತಿಷ್ಠಿತರ ಮಧ್ಯೆ ಪ್ರತಿದಿನ ಗಲಾಟೆ ಗೊಂದಲ, ಕಾಪೌಂಡ್ ತಳ್ಳುತ್ತಿರುವುದು ನಡೆಯುತ್ತಿದೆ. ಈ ಕುರಿತು ಒಂದು ವರದಿ
ಇಶಾ ಫೌಂಡೇಶನ್ ಸಂಸ್ಥಾಪಕ, ಆಧ್ಯಾತ್ಮಿಕ ಗುರು, ಸದ್ಗುರು, ಯೋಗ ಗುರು, ಜಗ್ಗಿ ವಾಸುದೇವ್ ತಮಿಳುನಾಡಿನಂತೆ ತವರು ರಾಜ್ಯ ಕರ್ನಾಟಕದಲ್ಲೂ… ಬೃಹತ್ ಯೋಗ ಕೇಂದ್ರ ತೆರೆದು ಅದರಲ್ಲಿ 112 ಅಡಿಗಳ ಶಿವನ ವಿಗ್ರಹ ಪ್ರತಿಷ್ಠಾಪನೆಗೆ ಯೋಜನೆ ರೂಪಿಸಿ ಕಾಮಗಾರಿ ಮುಗಿಯುವ ಹಂತದಲ್ಲಿದೆ. ಚಿಕ್ಕಬಳ್ಳಾಪುರ ತಾಲೂಕಿನ ಜಾಲಾರಿ ನರಸಿಂಹಸ್ವಾಮಿ ಕ್ಷೇತ್ರದ ಬಳಿ ಅಲವಗುರ್ಕಿ ಗ್ರಾಮದ ಖಾಸಗಿ ರೈತರ ಸರ್ವೆ ನಲ್ಲಿ ಇನ್ನೂರು ಎಕರೆ ಖಾಸಗಿ ಭೂಮಿಯನ್ನು ಖರೀದಿ ಮಾಡಿದ್ದು, ಆಶ್ರಮ ನಿರ್ಮಾಣ ಕಾಮಗಾರಿ ಜೋರಾಗಿ ಸಾಗಿದೆ.
ಆದ್ರೆ ಇದೆ ಅಲವಗುರ್ಕಿ ಗ್ರಾಮದ ಸರ್ವೆ ನಂಬರ್ 184/1ರಲ್ಲಿ ತಮಿಳುನಾಡಿನ ಎ.ವಿ.ಎಂ. ಸ್ಟುಡಿಯೋಗೆ ಸೇರಿದ ಖಾಸಗಿ ಜಮೀನು 4 ಎಕರೆ 27 ಗುಂಟೆ ಜಾಗವನ್ನು ಖರೀದಿಸಿ ಪೇಚಿಗೆ ಸಿಲುಕಿದೆ. ಖರೀದಿಸಿದ ಜಮೀನಿಗೆ ದಾರಿಯಿಲ್ಲವಾಗಿದೆ. ಇದರಿಂದ ಜಮೀನಿನ ಸುತ್ತಲೂ ಸಕಲೇಶಕುಮಾರ್ ಎನ್ನುವವರ ಪತ್ನಿಯ ಹೆಸರಿನಲ್ಲಿ 20 ಎಕರೆ ಜಮೀನಿದ್ದು… ಸಕಲೇಶಕುಮಾರ್ ಇಶಾ ಫೌಂಡೇಶನ್ ಗೆ ದಾರಿ ಬಿಡ್ತಿಲ್ಲವಂತೆ. ಇದ್ರಿಂದ ಇಬ್ಬರ ಮಧ್ಯೆ ಪ್ರತಿದಿನ ಒಂದಿಲ್ಲೊಂದು ರೀತಿಯಲ್ಲಿ ವಾದ-ಪ್ರತಿವಾದ-ವಿವಾದ ಗದ್ದಲ ನಡೆಯುತ್ತಿದೆ.
ಇನ್ನು ತಮಿಳುನಾಡಿನ ಎ.ವಿ.ಎಂ. ಸ್ಟುಡಿಯೋಗೆ ಸೇರಿದ ಜಮೀನನ್ನು, ದಿವಗಂತ ನಟ ಪುನೀತ್ ರಾಜ್ ಕುಮಾರ್ ಗೆ ಮಾರಾಟ ಮಾಡಲು ಎ.ವಿ.ಎಂ ಸ್ಟುಡಿಯೋ ಬಯಸಿತ್ತು, ಪುನಿತ್ ರಾಜ್ ಕುಮಾರ್ ಸೂಚನೆ ಮೇರೆಗೆ ಸಕಲೇಶಕುಮಾರ್ ತನ್ನ ಪತ್ನಿಯ ಹೆಸರಿನಲ್ಲಿ ವಿವಿಧ 6 ಸರ್ವೆ ನಂಬರ್ ಗಳಲ್ಲಿದ್ದ 20 ಎಕರೆ ಜಮೀನನ್ನು ಖರೀದಿ ಮಾಡಿದ್ದಾರೆ. ಆದ್ರೆ ವಿವಾದಿತ 184/1, ಸರ್ವೆ ನಂಬರ್ ನ 4 ಎಕರೆ 27 ಗುಂಟೆ ಜಮೀನನನ್ನು ಜಿ.ಪಿ.ಎ ಹಾಗೂ ಅಗ್ರಿಮೆಂಟ್ ಮಾಡಿಕೊಂಡಿದ್ದಾರೆ.
ಇದನ್ನೂ ಓದಿ: Crime News: ಜೀವಂತ ಹಾವಿಗೆ ಹಿಂಸೆ, ಇಶಾ ಫೌಂಡೇಷನ್ ಸಂಸ್ಥಾಪಕ ಜಗ್ಗಿ ವಾಸುದೇವ್ ವಿರುದ್ಧ ದೂರು
ನಂತರ ಇದೆ ಜಮೀನಿನನ್ನು ತಮಿಳು ಚಿತ್ತನ್ ಎನ್ನುವವರು ಇಶಾ ಫೌಂಡೇಶನ್ ಗೆ ಮಾರಾಟ ಮಾಡಿದ್ದಾರಂತೆ, ಇದ್ರಿಂದ 184/1 ಸರ್ವೆ ನಂಬರ್ ಗೆ ಸಂಬಂಧಿಸಿದಂತೆ ಸದ್ಯ ಚಿಕ್ಕಬಳ್ಳಾಪುರ ಎ.ಸಿ. ನ್ಯಾಯಾಲಯದಲ್ಲಿ ಪ್ರಕರಣ ವಿಚಾರಣೆ ನಡೆಯುತ್ತಿದೆ. ಇಂಥ ಸಂದರ್ಭದಲ್ಲಿ ಬಲವಂತವಾಗಿ ತನ್ನ ಜಮೀನಿನ ಕಾಂಪೌಂಡ್ ಅನ್ನು ಹೊಡೆದು ಹಾಕಿ ಇಶಾ ಫೌಂಡೇಶನ್ ದಬ್ಬಾಳಿಕೆ ಮಾಡ್ತಿದೆ ಅಂತ ಸಕಲೇಶಕುಮಾರ್ ಆರೋಪ ಮಾಡಿದ್ದಾರೆ.
ನೋ ವೇ! ಛಾನ್ಸೇ ಇಲ್ಲ… ಅದೇನಾಗುತ್ತೊ ಆಗಲಿ: ಸಕಲೇಶಕುಮಾರ್
184/1 ಸರ್ವೆ ನಂಬರ್ ನ 4 ಎಕರೆ 27 ಗುಂಟೆ ಜಮೀನಿಗೆ, ಒಂದೆಡೆ ಇಶಾ ಫೌಂಡೇಶನ್ ದಾರಿ ಬಿಟ್ಟುಕೊಡಲು ಗದ್ದಲ ಎಬ್ಬಿಸಿದ್ರೆ… ಇತ್ತ ಹಾಲಿ ವಿಧಾನಪರಿಷತ್ ಸದಸ್ಯರೊಬ್ಬರ ಹತ್ತಿರದ ಸಂಬಂಧಿಯೂ ಹಾಗೂ ದಿವಂಗತ ನಟ ಪುನೀತ್ ರಾಜ್ ಕುಮಾರ್ ಅವರ ಆಪ್ತನೂ ಆಗಿರುವ ಸಕಲೇಶಕುಮಾರ್, ಅದೇನಾಗುತ್ತೊ ಆಗಲಿ, ನನ್ನ ಖಾಸಗಿ ಜಮೀನಿನಲ್ಲಿ ಇಶಾ ಫೌಂಡೇಶನ್ ಗೆ ದಾರಿ ಬಿಟ್ಟುಕೊಡಲ್ಲ, ವಿವಾದಿತ ಜಮೀನಿನ ವಿಚಾರಣೆ ನಡೆಯುತ್ತಿರುವಾಗ ಅದರ ಪಕ್ಕದ, ನನ್ನ ಸ್ವಂತ ಜಮೀನಿನಲ್ಲಿ ಯಾಕೆ ದಬ್ಬಾಳಿಕೆ ಮಾಡ್ತಿದ್ದೀರಿ ಎಂದು ಅವರು ಆಕ್ರೋಶ ವ್ಯಕ್ತಪಡಿಸಿದ್ದಾರೆ. (ವರದಿ: ಭೀಮಪ್ಪ ಪಾಟೀಲ್, ಟಿವಿ 9, ಚಿಕ್ಕಬಳ್ಳಾಪುರ)
Published On - 12:27 pm, Mon, 5 December 22